ಕೆಎಂಎಫ್ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ ಮಾಡುತ್ತಿದ್ದಂತೆಯೇ ಗ್ರಾಹಕರಿಗೆ ಶಾಕ್ ಕೊಟ್ಟಿದ್ದಾರೆ ಕೆಎಂಎಫ್ ನೂತನ ಅಧ್ಯಕ್ಷ ಭೀಮಾನಾಯ್ಕ. ಶೀಘ್ರದಲ್ಲೇ ನಂದಿನಿ ಹಾಲಿನ ದರ ಲೀಟರ್ ಹಾಲಿಗೆ 5 ರೂಪಾಯಿ ಏರಿಕೆಯಾಗಲಿದೆ ಎಂದಿದ್ದಾರೆ. ಈ ಕುರಿತು ಈಗಾಗಲೇ ಪ್ರಪೋಸಲ್ ಕೊಟ್ಟಿರುವ ಕೆಎಂಎಫ್, ಶೀಘ್ರದಲ್ಲೇ ತೀರ್ಮಾನ ತೆಗೆದುಕೊಳ್ಳಲಿದೆ.
ರಾಜ್ಯದ ಕರ್ನಾಟಕ ಹಾಲು ಒಕ್ಕೂಟದ ನಂದಿನಿ ಹಾಲಿನ ದರವನ್ನು 5 ರೂಪಾಯಿ ಹೆಚ್ಚಳ ಮಾಡುವಂತೆ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಈ ಮೂಲಕ ರೈತರಿಗೆ ನೀಡಲಾಗುವ ಪ್ರೋತ್ಸಾಹಧನವನ್ನು ಹೆಚ್ಚಳ ಮಾಡಲು ನಿರ್ಧರಿಸಲಾಗಿದೆ ಎಂದಿದ್ದಾರೆ ನೂತನ ಕೆಎಂಎಫ್ ಅಧ್ಯಕ್ಷ ಭೀಮಾನಾಯ್ಕ್.
ಸಹಕಾರ ಸಚಿವ ಕೆ.ಎನ್.ರಾಜಣ್ಣ ಕೂಡಾ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ನಡೆಸುವ ಸಭೆಯಲ್ಲಿ ರೈತರ ಹಿತ ಕಾಯುವ ನಿಟ್ಟಿನಲ್ಲಿ ಚರ್ಚೆ ಮಾಡಲಾಗುವುದು. ಜೊತೆಗೆ, ಆ ಸಭೆಯಲ್ಲಿ ಹಾಲು ಹಾಕುವಂತಹ ರೈತರಿಗೆ ಹೆಚ್ಚಿನ ಲಾಭ ಸಿಗಲು ತೀರ್ಮಾನ ಕೈಗೊಳ್ಳಲಾಗುವುದು. ರೈತರಿಂದ ಹಾಲು ಖರೀದಿ ದರ ಹೆಚ್ಚಳ ಮಾಡಬೇಕಾಗಿದೆ. ಗ್ರಾಹಕರಿಗೂ ನೀಡುವ ಹಾಲಿನ ದರದಲ್ಲೂ ಹೆಚ್ಚಳ ಮಾಡಬೇಕಾಗಿದೆ ಎಂದಿದ್ದಾರೆ.



