ಲೋಕಸಭೆ ಚುನಾವಣೆಯಲ್ಲಿ 14ರಲ್ಲಿ ಗೆಲ್ಲುತ್ತೇವೆ ಎಂಬ ವಿಶ್ವಾಸದಲ್ಲಿದ್ದ ಕಾಂಗ್ರೆಸ್ಸಿಗರಿಗೆ ಅಂತಿಮ ಫಲಿತಾಂಶ ಶಾಕ್ ಕೊಟ್ಟಿದೆ. ಡಿಸಿಎಂ ಡಿಕೆ ಶಿವಕುಮಾರ್ ತಮ್ಮ ಡಿಕೆ ಸುರೇಶ್, ಸಿದ್ದರಾಮಯ್ಯ ಅವರ ತವರು ಮೈಸೂರಿನಲ್ಲೂ ಸೋಲಾಗಿದೆ. ಮಂಡ್ಯದಲ್ಲಿ ಹಠಕ್ಕೆ ಬಿದ್ದು ಹೋರಾಟ ಮಾಡಿದ್ದ ಚೆಲುವರಾಯ ಸ್ವಾಮಿ ಅವರಿಗೂ ಕ್ಯಾಂಡಿಡೇಟ್ ಗೆಲ್ಲಿಸಿಕೊಳ್ಳೋಕೆ ಆಗಿಲ್ಲ. ತುಮಕೂರಿನಲ್ಲಿ ಹೋರಾಡಿ ಹಾರಾಡಿದ್ದೇ ಬಂತು, ಕಾಂಗ್ರೆಸ್ಸಿಗೆ ಗೆಲುವು ಸಿಕ್ಕಿಲ್ಲ. ಅಡ್ರೆಸ್ ಕೇಳಿದ್ದ ಲಕ್ಷ್ಮೀ ಜಾರಕಿಹೊಳಿಗೆ ಅವರದ್ಧೇ ಕ್ಷೇತ್ರದಲ್ಲಿ ಜಗದೀಶ್ ಶೆಟ್ಟರ್ ಠಕ್ಕರ್ ಕೊಟ್ಟಿದ್ದಾರೆ. ಗೆದ್ದಿರುವ ಕ್ಷೇತ್ರಗಳಲ್ಲೂ ಅಷ್ಟೆ, ಸತೀಶ್ ಜಾರಕಿಹೊಳಿ ಪುತ್ರಿ ಪ್ರಿಯಾಂಕಾ ಅವರನ್ನು ಬಿಟ್ಟರೆ.. ಉಳಿದವರದ್ದು ಸಾಧಾರಣ ಗೆಲುವು. ಉಳಿದ ಕ್ಷೇತ್ರಗಳಲ್ಲಿ ಹಾಸನ ಗೆಲುವು ಪೆನ್ ಡ್ರೈವ್ ಕೃಪೆಯಾದರೆ, ಖರ್ಗೆ ಅಳಿಯನ ಗೆಲುವು.. ʻಕೇವಲ ಗೆಲುವುʼ ಅಷ್ಟೆ. ಉಳಿದವೂ ಅಷ್ಟೆ, ಬಿಜೆಪಿಯವರು ಮಾಡಿಕೊಂಡ ಸ್ವಯಂ ಎಡವಟ್ಟುಗಳ ಪರಿಣಾಮ. ಹೀಗೆ ವಿಶ್ಲೇಷಣೆ ನಡೆಯುತ್ತಿರುವಾಗಲೇ ಗ್ಯಾರಂಟಿಗಳ ಮರುಪರಿಶೀಲನೆಗೆ ಒತ್ತಡೆ ಕೇಳಿ ಬರುತ್ತಿದೆ. ಕಾಂಗ್ರೆಸ್ಸಿನಲ್ಲೇ.
ಗ್ಯಾರಂಟಿ ಹೊರೆಯಿಂದಾಗಿ ಕ್ಷೇತ್ರ ಅಭಿವೃದ್ಧಿಗೆ ಅನುದಾನ ಸಿಗುತ್ತಿಲ್ಲ ಎಂದು ಅಸಮಾಧಾನಗೊಂಡಿದ್ದ ಆಡಳಿತ ಪಕ್ಷದ ಶಾಸಕರಿಂದಲೇ ಈ ಚರ್ಚೆ ಚಾಲನೆ ಪಡೆದುಕೊಂಡಿದ್ದು, ಗ್ಯಾರಂಟಿಗಳನ್ನು ಮುಂದುವರಿಸಬೇಕೇ ಅಥವಾ ಬೇಡವೇ ಎಂಬ ಕುರಿತು ಮರುಪರಿಶೀಲಿಸುವಂತೆ ರಾಜ್ಯ ನಾಯಕತ್ವದ ಮೇಲೆ ಒತ್ತಡ ತರಲಾರಂಭಿಸಿದ್ದಾರೆ.
ಅಭಿವೃದ್ಧಿ ಕೆಲಸಗಳಿಗೆ ಬ್ರೇಕ್ ಹಾಕಿ, ಗ್ಯಾರಂಟಿಗಳಿಗೆ ದೊಡ್ಡ ಮಟ್ಟದಲ್ಲಿ ಹಣ ವ್ಯಯಿಸಲಾಗುತ್ತಿದೆ. ಇದರಿಂದ ರಾಜಕೀಯ ಲಾಭವಾಗಲಿದ್ದು, ಕನಿಷ್ಠ 14 ರಿಂದ 20 ಲೋಕಸಭಾ ಸೀಟುಗಳಲ್ಲಿ ಪಕ್ಷದ ಅಭ್ಯರ್ಥಿಗಳು ಗೆಲ್ಲಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ, ಫಲಿತಾಂಶವು ಈ ನಿರೀಕ್ಷೆಯನ್ನು ಹುಸಿಯಾಗಿಸಿದೆ. ಹಾಗಾಗಿ, ಅಭಿವೃದ್ಧಿ ವಿಚಾರದಲ್ಲಿ ರಾಜಿ ಮಾಡಿಕೊಳ್ಳಲು ಕಾರಣವಾಗಿರುವ ಗ್ಯಾರಂಟಿ ಯೋಜನೆಗಳನ್ನು ಮರುಪರಿಶೀಲಿಸಬೇಕು ಎಂಬ ವಾದವನ್ನು ಕೆಲವು ಕಾಂಗ್ರೆಸ್ ಶಾಸಕರು ವ್ಯಕ್ತಮಾಡುತ್ತಿದ್ದಾರೆ ಎನ್ನಲಾಗಿದೆ.
ಸಚಿವರಾದ ಡಿಕೆ ಶಿವಕುಮಾರ್, ಚೆಲುವರಾಯ ಸ್ವಾಮಿ, ಮಹದೇವಪ್ಪ, ಜಮೀರ್ ಅಹ್ಮದ್, ಶಾಸಕರಾದ ಎಸ್.ಆರ್. ಶ್ರೀನಿವಾಸ್, ಕೆಎನ್ ರಾಜಣ್ಣ ಮೊದಲಾದವರೆಲ್ಲ ಬಹಿರಂಗವಾಗಿಯೇ ಹೇಳಿದ್ದಾರೆ. ಅವರಿನ್ನೂ ಆಘಾತದಲ್ಲೇ ಇದ್ಧಾರೆ.
ಜನಸಾಮಾನ್ಯರ ಅನುಕೂಲಕ್ಕಾಗಿ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದ್ದೆವು. ಎಲ್ಲ ಗ್ಯಾರಂಟಿಗಳು ಅನುಷ್ಠಾನಗೊಂಡಿವೆ. ಜನರನ್ನು ರೀಚ್ ಆಗಿವೆ. . ಆದರೆ, ಅದರಿಂದ ರಾಜಕೀಯವಾಗಿ ಲಾಭದ ನಿರೀಕ್ಷೆ ಈಡೇರಿಲ್ಲ. ಈ ಕುರಿತು ಸಿಎಂ, ಡಿಸಿಎಂ ಜತೆ ಚರ್ಚೆ ಮಾಡಿದ್ದೇನೆ ಎನ್ನುವ ಪರಮೇಶ್ವರ್, ಗ್ಯಾರಂಟಿ ರದ್ದು ಮಾಡುತ್ತೇವೆ ಎಂದೇನೂ ಹೇಳಿಲ್ಲ.
ಆದರೆ.. ಇವುಗಳಿಗೆಲ್ಲ ಸಿದ್ದರಾಮಯ್ಯ ಉತ್ತರ ನೋ. ಯಾವುದೇ ಕಾರಣಕ್ಕೂ ಗ್ಯಾರಂಟಿ ರದ್ದು ಮಾಡುವುದಿಲ್ಲ ಎಂದಿರುವ ಸಿದ್ದರಾಮಯ್ಯ, ಈಗ ಗೆದ್ದಿರುವ ೯ ಕ್ಷೇತ್ರಗಳಲ್ಲಿ ಗ್ಯಾರಂಟಿ ಕೆಲಸ ಮಾಡಿದೆ ಎಂದು ವಾದಿಸಿದ್ಧಾರೆ. ಗ್ಯಾರಂಟಿಗಳು ಜಾರಿಯಾಗದೆ ಹೋಗಿದ್ದರೆ, ಕಾಂಗ್ರೆಸ್ ಪರಿಸ್ಥಿತಿ ಇನ್ನೂ ಕಷ್ಟದಾಯಕವಾಗಿರುತ್ತಿತ್ತು. ಅಲ್ಲದೆ ಗ್ಯಾರಂಟಿ ವಾಪಸ್ ತೆಗೆದುಕೊಂಡರೆ ತಮ್ಮ ಪಕ್ಷವನ್ನು ಜನ ಹೇಗೆ ನಂಬ್ತಾರೆ ಅನ್ನೋ ಪ್ರಶ್ನೆ ಮುಂದಿಟ್ಟಿದ್ದಾರೆ ಸಿಎಂ ಸಿದ್ದರಾಮಯ್ಯ.
ತಕ್ಷಣಕ್ಕಂತೂ ಗ್ಯಾರಂಟಿ ರದ್ದಾಗುವ ಪ್ರಶ್ನೆ ಇಲ್ಲ. ಆದರೆ.. ಕಾಂಗ್ರೆಸ್ಸಿನಲ್ಲೇ ಅಸಮಾಧಾನಗಳು ಶುರುವಾಗಿವೆ ಅನ್ನೋದು ಸುಳ್ಳಲ್ಲ.



