ಪ್ರತಾಪ್ ಸಿಂಹ ರಾಜ್ಯ ರಾಜಕೀಯಕ್ಕೆ ಬರುತ್ತೇನೆ ಎಂದು ಘೋಷಿಸಿಬಿಟ್ಟಿದ್ದಾರೆ. ಪ್ರತಾಪ್ ಸಿಂಹ ಜರ್ನಲಿಸ್ಟ್ ಆಗಿದ್ದವರು. ಸಡನ್ ಆಗಿ ರಾಜಕೀಯಕ್ಕೆ ಬಂದು ಎಂಪಿಯಾಗಿದ್ದವರು. ಎರಡು ಬಾರಿ ಗೆದ್ದಿದ್ದ ಪ್ರತಾಪ್ ಸಿಂಹ ಅವರಿಗೆ 2024ರಲ್ಲಿ ಬಿಜೆಪಿ ಟಿಕೆಟ್ ಕೊಡಲಿಲ್ಲ. ಈಗ ನೋಡಿದರೆ ತಾವು ರಾಜ್ಯ ರಾಜಕೀಯಕ್ಕೆ ಬರುವುದಾಗಿ ಘೋಷಿಸಿದ್ದಾರೆ. ಆದರೆ, ಪ್ರತಾಪ್ ಸಿಂಹ ಮತ್ತದೇ ತಪ್ಪು ಮಾಡಿದ್ದಾರೆ. ಏಕಾಂಗಿಯಾಗಿ ಘೋಷಿಸಿದ್ದಾರೆ. ಪ್ರತಾಪ್ ಸಿಂಹ ಅವರ ಈ ಹೇಳಿಕೆ ಅವರ ಪಕ್ಷದ ಅಧ್ಯಕ್ಷರು, ಚಾಮರಾಜ ಕ್ಷೇತ್ರದ ನಾಯಕರೂ ಸೇರಿದಂತೆ ಎಲ್ಲರಿಗೂ ಶಾಕ್. ಇಷ್ಟಕ್ಕೂ ಚಾಮರಾಜ ಕ್ಷೇತ್ರವೇ ಯಾಕೆ.. ಅನ್ನೋದಕ್ಕೆ ಕಾರಣಗಳೂ ಇವೆ.
ಮೊದಲನೆಯದಾಗಿ ಪ್ರತಾಪ್ ಸಿಂಹ ಅವರು ಸಂಸದರಾಗಿ ಏನು ಮಾಡಿದ್ದಾರೋ.. ಅದು ಬೇರೆ ಪ್ರಶ್ನೆ. ಪಕ್ಷದೊಳಗೆ ಅವರು ಒಬ್ಬ ನಾಯಕನಾಗಿ ಬೆಳೆಯಲಿಲ್ಲ ಎನ್ನುವುದಂತೂ ನಿಜ. ಮಾಧ್ಯಮಗಳಲ್ಲಿ ಹೀರೋ ಆಗೋದು ಸುಲಭ. ಆದರೆ, ಕಾರ್ಯಕರ್ತರ ಮಧ್ಯೆ ನಾಯಕರಾಗಿ ಬೆಳೆಯೋದು ಅಷ್ಟು ಸುಲಭ ಅಲ್ಲ. ಇನ್ನು ನಾಯಕರಾಗಿ ಪ್ರತಾಪ್ ಸಿಂಹ ಅವರನ್ನು ಕಂಡರೆ ಆಗದವರು ಅವರ ಪಕ್ಷದಲ್ಲೇ, ಅವರ ಜಿಲ್ಲೆಯಲ್ಲೇ ಸಾಕಷ್ಟು ಜನ ಇದ್ದಾರೆ. ಅವರಿಗೂ ಗೊತ್ತಿಲ್ಲದಂತೆ ಪ್ರತಾಪ್ ಸಿಂಹ ಘೋಷಿಸಿರುವ ರೀತಿ ನೋಡಿದರೆ ಪ್ರತಾಪ್ ಸಿಂಹ ಚೇಂಜ್ ಆಗಿಲ್ಲ ಎನ್ನುವುದು ಸುಸ್ಪಷ್ಟ.
ಅಲ್ಲದೆ ಬಿಜೆಪಿ ಅಧ್ಯಕ್ಷರ ಜೊತೆಯಲ್ಲೂ ಪ್ರತಾಪ್ ಸಿಂಹ ಅಷ್ಟಕ್ಕಷ್ಟೇ. ವಿಜಯೇಂದ್ರ ಬಗ್ಗೆ ತಮಗೆ ಒಲವಿಲ್ಲ ಎನ್ನುವುದನ್ನು ಬಹಿರಂಗವಾಗಿ ತೋಡಿಕೊಂಡಿರುವ ಪ್ರತಾಪ್ ಸಿಂಹ, ಯಡಿಯೂರಪ್ಪ ಅವರ ಬಗ್ಗೆಯೂ ಸಮಾಧಾನದಿಂದ ಇದ್ದವರಲ್ಲ. ಅದನ್ನೂ ಬಹಿರಂಗವಾಗಿ ಹೇಳಿಕೊಂಡಿರುವ ಪ್ರತಾಪ್ ಸಿಂಹ ಅವರ ಆತ್ಮೀಯರು ಯಾರು ಎಂದರೆ ಅದು ಯತ್ನಾಳ್. ಉಳಿದಂತೆ ವಿ ಸೋಮಣ್ಣ ಸೇರಿದಂತೆ ಕೆಲವರಿದ್ದಾರೆ.
ಇನ್ನು ತಾನು ಈ ಕ್ಷೇತ್ರದಲ್ಲಿಯೇ ಸ್ಪರ್ಧೆ ಮಾಡುತ್ತೇನೆ ಎಂದು ಚಾಮರಾಜ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡಿದ್ದಾರೆ ಪ್ರತಾಪ್ ಸಿಂಹ. ಅದು ಸಹಜವಾಗಿಯೇ ಎದುರಾಳಿಗಳಿಗೆ ಆಹಾರ ಕೊಟ್ಟಿದೆ. ಏಕೆಂದರೆ ಚಾಮರಾಜ ಕ್ಷೇತ್ರದಲ್ಲಿ ಹೆಚ್ಚಿರುವುದು ಒಕ್ಕಲಿಗರು. ಚಾಮರಾಜ ಕ್ಷೇತ್ರ ಹಣದ ಪ್ಯಾಕೇಟ್ ಕೊಟ್ಟು ಗೆಲ್ಲುವ ಕ್ಷೇತ್ರ ಅಲ್ಲ. ಇಲ್ಲಿಯ ಮತದಾರರು ಕೆಲಸ ನೋಡಿ ಪ್ರೀತಿ ತೋರಿಸುವ ಜನ. ಒಕ್ಕಲಿಗ ಲೆಕ್ಕದಲ್ಲೇ ಈ ಕ್ಷೇತ್ರ ನೋಡುತ್ತಿಲ್ಲ. ಇಲ್ಲಿ ಎಲ್ಲ ರೀತಿಯ ವರ್ಗದ ಜನರಿದ್ದಾರೆ. ಪ್ರಜ್ಞಾವಂತ ಬುದ್ಧಿವಂತರಿದ್ದಾರೆ. ಹೀಗಾಗಿ ಸಹಜವಾಗಿ ನನ್ನ ಆಯ್ಕೆಯಾಗಿದೆ ಅಂತೆಲ್ಲ ಹೇಳಿಕೊಂಡಿದ್ದಾರ ಪ್ರತಾಪ್ ಸಿಂಹ.
ಚಾಮರಾಜ ಕ್ಷೇತ್ರ ಬಿಜೆಪಿಯ ಶಂಕರಲಿಂಗೇ ಗೌಡ ಎಂಬ ನಾಯಕರನ್ನು ಸತತವಾಗಿ 4 ಬಾರಿ ಗೆಲ್ಲಿಸಿದ್ದ ಕ್ಷೇತ್ರ. 2023ರ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧೆ ಮಾಡಿದ್ದ ಎಲ್ ನಾಗೇಂದ್ರ ಅವರು ಕಾಂಗ್ರೆಸ್ನ ಕೆ, ಹರೀಶ್ ಗೌಡ ಎದುರು ಕೇವಲ 4094 ಮತಗಳ ಅಂತರದಿಂದ ಸೋಲು ಕಂಡಿದ್ದರು. ಹರೀಶ್ ಗೌಡ 72,931 ಮತಗಳು ಪಡೆದುಕೊಂಡಿದ್ದರೆ, ನಾಗೇಂದ್ರ 68,837 ಮತ ಪಡೆದಿದ್ದರು. 2023ರಲ್ಲಿ ಬಿಜೆಪಿ ವಿರೋಧಿ ಅಲೆ ಎಷ್ಟಿತ್ತು ಎಂದು ಅರಿವಾದರೆ, ಆ ಸಮಯದಲ್ಲಿಯೂ ನಾಗೇಂದ್ರ ಕೊಟ್ಟ ಪೈಪೋಟಿಯೂ ಅರ್ಥವಾಗುತ್ತದೆ.
2018ರಲ್ಲಿ ನಾಗೇಂದ್ರ ಅವರು ಗೆದ್ದಿದ್ದ ಕ್ಷೇತ್ರ ಇದು. 2013ರಲ್ಲಿ 3ನೇ ಸ್ಥಾನ ಪಡೆದು, 2018ರಲ್ಲಿ ಗೆದ್ದು, 2023ರಲ್ಲಿ ಸೋತಿರುವ ನಾಗೇಂದ್ರ, ಈಗಲೂ ಬಿಜೆಪಿಯಲ್ಲೇ ಇದ್ದಾರೆ. ಒಮ್ಮೆ ಗೆದ್ದಿರುವ, ಮತ್ತೊಮ್ಮೆ ಪೈಪೋಟಿ ನೀಡಿರುವ, ಪಕ್ಷವನ್ನು ಸಂಘಟಿಸಿರುವ ನಾಗೇಂದ್ರ ಅವರನ್ನು ಪ್ರತಾಪ್ ಸಿಂಹಗೆ ಟಿಕೆಟ್ ಕೊಡ್ತಾರಾ..?
ಪ್ರತಾಪ್ ಸಿಂಹ ಮತ್ತೊಮ್ಮೆ ಆತುರಕ್ಕೆ ಬಿದ್ದು ಆಟ ಕೆಡಿಸಿಕೊಂಡರಾ.. ಪ್ರಶ್ನೆ ಮೂಡೋದು ಸಹಜಾನೇ ಬಿಡಿ.



