ಧರ್ಮಸ್ಥಳದಲ್ಲಿ ಸೌಜನ್ಯ ಪ್ರಕರಣ ತಣ್ಣಗಾಗುತ್ತಿದ್ದಂತೆಯೇ ಸಡನ್ ಆಗಿ ಎದ್ದಿರುವುದು ಸಾವಿರಾರು ಹೆಣಗಳನ್ನು ಹೂತು ಹಾಕಲಾಗಿದೆ ಎಂಬ ಆರೋಪ. ಸುಜಾತಾ ಭಟ್ ಎಂಬುವವರು 23 ವರ್ಷಗಳ ಹಿಂದೆ ಧರ್ಮಸ್ಥಳದಲ್ಲಿ ತಮ್ಮ ಮಗಳು ನಾಪತ್ತೆಯಾಗಿದ್ದಳು ಎಂದು ದೂರು ನೀಡಿರುವುದೇ ಮೊದಲ ದೂರು. ಆದರೆ.. ಹೂತು ಹಾಕಿರುವ ವ್ಯಕ್ತಿ ಹೇಳಿರೋ ಪ್ರಕಾರ.. ಆತನೇ ಸಾವಿರಾರು ಹೆಣಗಳನ್ನು ಹೂತಿದ್ದಾನೆ. ಈ ಎಲ್ಲದರ ನಡುವೆ ನಟ ಪ್ರಕಾಶ್ ರಾಜ್, ಹೋರಾಟಕ್ಕೆ ಧುಮುಕುವುದರೊಂದಿಗೆ ಹೋರಾಟ ತಿರುವು ಪಡೆದುಕೊಳ್ಳುತ್ತಿದೆ.
ಪ್ರಕಾಶ್ ರೈ ಹೋರಾಟ ಏನು..?
ಪ್ರಕಾಶ್ ರಾಜ್ ಅವರು ನಾನು ಈಗ ತಾನೇ ಜಸ್ಟಿಸ್ ಫಾರ್ ಸೌಜನ್ಯ ಕೇಸಿನಲ್ಲಿ ಎಸ್‌ಐಟಿ ರಚನೆ ಮಾಡುವ ಆಗ್ರಹ ಪತ್ರಕ್ಕೆ ಸಹಿ ಹಾಕಿದೆ. ಇದು ಕೇವಲ ಒಂದು ಕೇಸ್ ಅಲ್ಲ. ಧರ್ಮಸ್ಥಳ ಸುತ್ತ ಮುತ್ತ ಸೀರಿಯಲ್ ಕಿಲ್ಲಿಂಗ್ಸ್ ಆಗಿವೆ. ಹಲವರಿಗೆ ಸಮಾಧಿ ಕಟ್ಟಲಾಗಿದೆ. ಅರ್ಥಾತ್ ಹೂತು ಹಾಕಲಾಗಿದೆ. ಇದಕ್ಕೆಲ್ಲ ಒಂದು ಸ್ಪೆಷಲ್ ಇನ್ವೆಸ್ಟಿಗೇಷನ್ ಟೀಂ ರಚನೆ ಮಾಡಿ ತನಿಖೆ ಮಾಡಬೇಕು ಎನ್ನುವುದು ಪ್ರಕಾಶ್ ರೈ ವಾದ.
ಅಷ್ಟೇ ಅಲ್ಲ, ಅದಕ್ಕಾಗಿ ಒಂದು ಲಕ್ಷ ಸಹಿ ಸಂಗ್ರಹ ಅಭಿಯಾನವನ್ನೂ ಕೈಗೆತ್ತಿಕೊಳ್ಳಲಾಗಿದೆ. ಸುಪ್ರೀಂಕೋರ್ಟ್ ಹಾಲಿ ಅಥವಾ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲೇ ತನಿಖೆ ನಡೆಯಬೇಕು ಎನ್ನುವುದು ಪ್ರಕಾಶ್ ರೈ ಆಗ್ರಹ.
ಎಸ್‌ಐಟಿ ರಚನೆ ಆಗುತ್ತಾ..?
ಎಸ್‌ಐಟಿ ರಚನೆಗೆ ಒತ್ತಾಯಿಸಿ ಸಿಎಸ್ ದ್ವಾರಕಾನಾಥ್, ಎಸ್.ಬಾಲನ್ ಅವರು ಸಿಎಂ ಸಿದ್ಧರಾಮಯ್ಯ ಅವರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ. ಧರ್ಮಸ್ಥಳದಲ್ಲಿ ಹೂತಿಟ್ಟಿರುವ ಮೃತದೇಹಗಳನ್ನು ಹೊರತೆಗೆಯುವ ವೇಳೆ ವಿಡಿಯೋ ಚಿತ್ರೀಕರಣ ಮಾಡಬೇಕು. ಎಫ್‌ಎಸ್‌ಎಲ್ ತಂಡ ಕಡ್ಡಾಯವಾಗಿ ಇರಬೇಕು. ಪ್ರಕರಣದ ಪರ ವಾದಿಸಲು ತಜ್ಞ ಅನುಭವಿ ವಕೀಲರನ್ನೇ ನೇಮಕ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ಕೇರಳ ಸರ್ಕಾರಕ್ಕೆ ಪತ್ರ..!
ವಿಚಿತ್ರ ಎಂದರೆ.. ಧರ್ಮಸ್ಥಳದ ಈ ಮೃತದೇಹ ಹೊರತೆಗೆಯುವ ಪ್ರಕ್ರಿಯೆಯಲ್ಲಿ ಕೇರಳ ಸರ್ಕಾರಕ್ಕೆ ಪತ್ರ ಬರೆದಿರುವುದು. ಕರ್ನಾಟಕದಲ್ಲಿ ನಡೆದಿರುವ ಕೇಸಿನಲ್ಲಿ ಕೇರಳ ಸರ್ಕಾರ ಅದು ಹೇಗೆ ತನಿಖೆ ಮಾಡುವುದಕ್ಕೆ ಸಾಧ್ಯ..? ಈ ಪ್ರಶ್ನೆಗೆ ಹೋರಾಟಗಾರರು ಉತ್ತರ ನೀಡುತ್ತಿಲ್ಲ. ಇಡೀ ಪ್ರಕರಣದ ಹೋರಾಟದಲ್ಲಿ ಕಮ್ಯುನಿಸ್ಟರೇ ಹೆಚ್ಚಿರುವ ಕಾರಣ, ಕೇರಳ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ ಎನ್ನಲಾಗುತ್ತಿದೆ. ಹೋರಾಟಗಾರರು ಸುಪ್ರೀಂಕೋರ್ಟಿಗೋ, ಕೇಂದ್ರ ಸರ್ಕಾರಕ್ಕೋ ಪತ್ರ ಬರೆದಿದ್ದರೆ.. ಅರ್ಥವಾದರೂ ಇರುತ್ತಿತ್ತು. ಹೀಗಾಗಿ.. ಈ ಪತ್ರವೇ ಹೋರಾಟಗಾರರ ಮೇಲೆ ಸಂಶಯವನ್ನೂ ಹುಟ್ಟುಹಾಕಿದೆ.
ಪ್ರಮುಖ ಸಾಕ್ಷಿಯ ಬ್ರೈನ್ ಮ್ಯಾಪಿಂಗ್ʻಗೆ ಪೊಲೀಸರ ಮನವಿ..!
ಧರ್ಮಸ್ಥಳದಲ್ಲಿ ರಹಸ್ಯವಾಗಿ ಹಲವಾರು ಶವಗಳ ಅಂತ್ಯಕ್ರಿಯೆ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರು, ಪ್ರಮುಖ ಸಾಕ್ಷಿಯ ಬ್ರೈನ್ ಮ್ಯಾಪಿಂಗ್, ಫಿಂಗರ್‌ಪ್ರಿಂಟ್ ಮತ್ತು ನಾರ್ಕೊ ಅನಾಲಿಸಿಸ್ ಪರೀಕ್ಷೆ ನಡೆಸಲು ಅನುಮತಿ ಕೋರಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಕೆಯಾಗಿರುವ ಬಗ್ಗೆ ತನಿಖಾಧಿಕಾರಿಗಳಿಗೆ ಇತ್ತೀಚೆಗೆ ಮಾಹಿತಿ ಲಭ್ಯವಾಗಿದೆ. ಆದರೆ ಪ್ರಾಥಮಿಕ ಸಾಕ್ಷಿ ಅಥವಾ ಅವರ ಕಾನೂನು ಪ್ರತಿನಿಧಿಗಳು ಈ ವಿಚಾರವನ್ನು ತನಿಖಾ ತಂಡಕ್ಕೆ ಬಹಿರಂಗಪಡಿಸಿಲ್ಲ ಎಂದು ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಕರಣದ ತನಿಖೆಯನ್ನು ಇನ್ನಷ್ಟು ಆಳವಾಗಿಸಲು, ತನಿಖಾಧಿಕಾರಿಗಳು ಮಾನ್ಯ ನ್ಯಾಯಾಲಯಕ್ಕೆ ವರದಿಯನ್ನು ಸಲ್ಲಿಸಿದ್ದಾರೆ. ದೂರುದಾರರ ಸಮ್ಮತಿ ಇದ್ದರೆ, ಅವರ ಬ್ರೈನ್ ಮ್ಯಾಪಿಂಗ್, ಫಿಂಗರ್‌ಪ್ರಿಂಟ್ ಮತ್ತು ನಾರ್ಕೋ ಅನಾಲಿಸಿಸ್ ಪರೀಕ್ಷೆಗಳನ್ನು ನಡೆಸಲು ಅನುಮತಿ ನೀಡುವಂತೆ ಕೋರಲಾಗಿದೆ. ಈ ಪರೀಕ್ಷೆಗಳು ಪ್ರಕರಣದ ತನಿಖೆಯಲ್ಲಿ ಹೊಸ ಆಯಾಮ ನೀಡುವ ಸಾಧ್ಯತೆಯಿದೆ ಎಂದು ಪೊಲೀಸರು ತಿಳಿಸಿದ್ದಾರೆ.



