ವಿಶ್ವೇಶ್ವರ ಭಟ್. (Vishweshwara Bhat) ಕನ್ನಡದ ಸೀನಿಯರ್ ಪತ್ರಕರ್ತರಲ್ಲಿ ಒಬ್ಬರು. ಪ್ರಕಾಶ್ ರೈ (Prakash Raj) ಹಿರಿಯ ನಟ. ವಿಶ್ವವಾಣಿಯ (Vishwavani) ಸಂಪಾದಕರೂ ಆಗಿರುವ ಭಟ್ಟರು (Vishweshwara Bhat) ಒಂದು ಕಡೆಯಾದರೆ, ದೇಶಾದ್ಯಂತ ಅಭಿಮಾನಿಗಳನ್ನು ಹೊಂದಿರುವ, ಎಲ್ಲ ಭಾಷೆಗಳಲ್ಲಿಯೂ ಖ್ಯಾತಿ ಪಡೆದಿರುವ ರೈ (Prakash Raj) ಒಂದು ಕಡೆ. ವಿಶ್ವೇಶ್ವರ ಭಟ್ (Vishweshwara Bhat) ವಿಜಯ ಕರ್ನಾಟಕ (Vijay karnataka), ಕನ್ನಡ ಪ್ರಭ (Kannada Prabha), ಸುವರ್ಣ ನ್ಯೂಸ್ (Suvarna News)ಸಂಪಾದಕರೂ ಆಗಿದ್ದವರು. ಸಾಹಿತಿಯೂ ಹೌದು. ಒಂದಾನೊಂದು ಕಾಲದಲ್ಲಿ ಇದೇ ಪ್ರಕಾಶ್ ರೈ ಮತ್ತು ವಿಶ್ವೇಶ್ವರ ಭಟ್ ಗಳಸ್ಯ ಕಂಠಸ್ಯ ಮಿತ್ರರಾಗಿದ್ದವರು. . ಹಾಯ್ ಬೆಂಗಳೂರುನ ದಿ.ರವಿ ಬೆಳಗೆರೆ ಅವರ ಗ್ಯಾಂಗಿನಲ್ಲಿ ರೈ ಕೂಡಾ ಇದ್ದರು. ಆಗ ಭಟ್ಟರೂ ಇದ್ದರು. ಎಲ್ಲರೂ ಮಿತ್ರರಾಗಿದ್ದವರೇ.
ವಿಶ್ವೇಶ್ವರ್ ಭಟ್ ಪತ್ರಕರ್ತರಾಗಿದ್ದರೂ, ತಾವು ಎರಡೂ ದೃಷ್ಟಿಕೋನದಲ್ಲಿ ಪತ್ರಿಕೆ ಮಾಡುತ್ತೇನೆ ಎಂದು ಹೇಳಿಕೊಂಡರೂ ಮೊದಲಿನಿಂದಲೂ ಬಲಪಂಥೀಯರಿಗೆ ಅಚ್ಚುಮೆಚ್ಚು. ಎಡಪಂಥೀಯರಿಗೆ ಅಷ್ಟಕ್ಕಷ್ಟೆ ಪ್ರಕಾಶ್ ರೈ ಮತ್ತು ಭಟ್ಟರ ಗೆಳೆತನ ಚೆನ್ನಾಗಿದ್ದಾಗಲೂ ಹಾಗೆಯೇ ಇತ್ತು. ಆದರೆ ಪ್ರಕಾಶ್ ರೈ ಯಾವಾಗ ಎಡಪಂಥದಲ್ಲಿ ಗುರುತಿಸಿಕೊಳ್ಳಲಾರಂಭಿಸಿದರೋ.. ಪರಿಸ್ಥಿತಿಗಳು ತಿರುಗಾ ಮರುಗಾ ಆಗೋಕೆ ಶುರುವಾದವು.
ಆದರೆ ಅದೆಲ್ಲದಕ್ಕೂ ಮುನ್ನುಡಿ ಬಿದ್ದಿದ್ದು ಜನಶ್ರೀ ಚಾನೆಲ್ಲಿನ ಕಾರ್ಯಕ್ರಮದಲ್ಲಿ ಪ್ರಕಾಶ್ ರೈ ತಗ್ಲಾಕ್ಕೊಂಡಾಗ. ಆಗ ಕಾವೇರಿ ಗಲಾಟೆ ತೀವ್ರವಾಗಿದ್ದ ಸಮಯ. ಜನಶ್ರೀ ಚಾನೆಲ್ಲಿನಲ್ಲಿ ಆಂಕರ್ ಕಾವೇರಿ ವಿವಾದದಲ್ಲಿ ನೀವು ತಮಿಳುನಾಡು ಪರವೋ.. ಕರ್ನಾಟಕದ ಪರವೋ ಎಂಬ ಪ್ರಶ್ನೆ ಕೇಳಿಬಿಟ್ಟರು. ಪ್ರಕಾಶ್ ರೈ ರೊಚ್ಚಿಗೆದ್ದರು. ಆಂಕರ್`ನ್ನು ದಬಾಯಿಸಿ ಮೈಕ್ ಕಿತ್ತೆಸೆದು ಹೋದರು. ಆಗ ಭಟ್ಟರು ತಮ್ಮ ಪತ್ರಿಕೆಯಲ್ಲಿ ಪ್ರಕಾಶ್ ರೈ ವರ್ತನೆಯನ್ನು ಖಂಡಿಸಿ ಆರ್ಟಿಕಲ್ ಬರೆದರು. ಇದು ಆರಂಭ ಎನ್ನುತ್ತಿದ್ದರೂ, ಒಳಗಿನ ಕಥೆಗಳು ಬೇರೆಯೇ ಇರಬಹುದು. ಒಟ್ಟಿನಲ್ಲಿ ಆನಂತರ ಭಟ್ ಮತ್ತು ರೈ ಹಾವು ಮುಂಗುಸಿಗಳಂತಾಗಿದ್ದು ಸತ್ಯ.
ಅದಾದ ಮೇಲೆ ಪ್ರಕಾಶ್ ರೈ ಎಡಪಂಥದವರೂ ನಾಚುವಂತೆ ಮೋದಿ ವಿರುದ್ಧ ಟೀಕೆಗಿಳಿದರು. ಎಡಪಂಥದವರ, ಮೋದಿ ವಿರೋಧಿಗಳ ಡಾರ್ಲಿಂಗ್ ಆಗಿಬಿಟ್ಟರು. ರಾಜಕೀಯಕ್ಕೂ ಬಂದರು. ಸ್ಪರ್ಧಿಸಿ ಠೇವಣಿಯೂ ಸಿಗದಂತೆ ಸೋತರು. ಈ ಪ್ರತಿ ಹಂತದಲ್ಲೂ ವಿಶ್ವೇಶ್ವರ ಭಟ್, ಸಮಯ ಸಂದರ್ಭ ನೋಡಿಕೊಂಡು ಪ್ರಕಾಶ್ ರೈ ಅವರ ವಿರುದ್ಧ ಲೇಖನಿಯೆಂಬ ಖಡ್ಗ ಝಳಪಿಸಿದ್ದವರೇ. ಆದರೆ, ಭಟ್ಟರನ್ನು ಹತ್ತಿರದಿಂದ ನೋಡಿದವರಲ್ಲಿ ಯಾರೂ ಕೂಡಾ ಅವರನ್ನು ಜನ್ಮಪರ್ಯಂತ ದ್ವೇಷ ಮಾಡುವುದಿಲ್ಲ. ಪರ್ಸನಲ್ ಸಂಬಂಧಗಳನ್ನು ಹಾಗೆಯೇ ನಿಭಾಯಿಸುತ್ತಾರೆ ಕೂಡಾ. ಆದರೆ ಪ್ರಕಾಶ್ ರೈ ಹಾಗಲ್ಲ, ತಮ್ಮ ಸಿದ್ಧಾಂತಕ್ಕೆ ಒಪ್ಪಿಗೆಯಾಗದವರನ್ನು, ವಿರೋಧಿಗಳನ್ನು ಒಪ್ಪುವುದೇ ಇಲ್ಲ. ಇತ್ತೀಚೆಗೆ ಸುದೀಪ್ ಅವರು ಬಿಜೆಪಿ ಪರ ಪ್ರಚಾರಕ್ಕೆ ಬಂದಾಗಲೂ ಹಳೆಯ ಸ್ನೇಹವನ್ನು ಮರೆತು ಟೀಕೆ ಮಾಡಿದ್ದರು. ಕಥೆ ತುಂಬಾ ದೊಡ್ಡದು.
ವಿಷಯವೇನೆಂದರೆ ಇದೇ ಶನಿವಾರ ವಿಶ್ವೇಶ್ವರ್ ಭಟ್ ತಮ್ಮ ಪುಸ್ತಕಗಳನ್ನು ಬಿಡುಗಡೆ ಮಾಡುತ್ತಿದ್ದಾರೆ. ಆ ಕಾರ್ಯಕ್ರಮಕ್ಕೆ ಸಿಎಂ ಸಿದ್ದರಾಮಯ್ಯನವರೂ ಒಬ್ಬ ಅತಿಥಿ. ಬೊಮ್ಮಾಯಿಯೂ ಅತಿಥಿ. ಪ್ರದೀಪ್ ಈಶ್ವರ್ ಅವರೂ ಅತಿಥಿ. ಆ ಕಾರ್ಯಕ್ರಮಕ್ಕೆ ಸಿದ್ದರಾಮಯ್ಯ ಹೋಗಬಾರದು ಎಂದು ಧ್ವನಿಯೆತ್ತಿದ್ದ ಎಡಪಂಥದವರಲ್ಲಿ ಸ್ಟಾರ್ ಎನಿಸಬಹುದಾದ ಹೆಸರು ಪ್ರಕಾಶ್ ರೈ ಅವರದ್ದೇ. ರೈ ಹಾಗೆ ಪೋಸ್ಟ್ ಹಾಕಿದ್ದೇ ತಡ, ರೈ ಅವರು ತಮ್ಮ ಜೊತೆಯಲ್ಲಿದ್ದ ಒಳ್ಳೆಯ ಕಾಲದ ಫೋಟೋಗಳನ್ನು ಭಟ್ಟರು ಪೋಸ್ಟ್ ಮಾಡಿದರು. ಅದಕ್ಕಾಗಿ ನನಗೆ ಪಶ್ಚಾತ್ತಾಪವಿದೆ ಎಂದರು ರೈ. ಇದೆಲ್ಲವೂ ನಡೆದದ್ದು ಸೋಷಿಯಲ್ ಮೀಡಿಯಾದಲ್ಲಿ. ಆಗ ವಿಶ್ವೇಶ್ವರ ಭಟ್ ಅವರು ವೈಯಕ್ತಿಕ ವಿಷಯವನ್ನು ಕೆದಕಿ ತಂದರು.
ಪ್ರಕಾಶ್ ರೈ ಅವರು ಮೊದಲ ಪತ್ನಿಗೆ ಡೈವೋರ್ಸ್ ಕೊಟ್ಟ ನಂತರ ಪೋನಿ ವರ್ಮಾ ಅವರನ್ನು ಮದುವೆಯಾದರಷ್ಟೇ. ಆ ಪೋನಿ ವರ್ಮಾ ಅವರಿಗೆ ಮಕ್ಕಳಾಗಿರಲಿಲ್ಲವಂತೆ. ಆಗ ಪ್ರಕಾಶ್ ರೈ
ನನ್ನ ಎರಡನೇ ಪತ್ನಿಗೆ ಮಕ್ಕಳಾಗಿಲ್ಲ. ಸರ್ಪದೋಷವಿದೆಯೆಂದು ಪತ್ನಿಗೆ ಯಾರೋ ಹೇಳಿದ್ದಾರೆ. ಕುಕ್ಕೆಗೆ ಹೋಗಿ ಸರ್ಪದೋಷ ನಿವಾರಿಸಿಕೊಳ್ಳಲು ಅವಳು ಬಯಸಿದ್ದಾಳೆ. ಹಾಗೆ ಮಾಡಿಸಿಕೊಳ್ಳದ ವಿನಃ ಮಕ್ಕಳಾಗುವುದಿಲ್ಲ ಅಂತ ಅವಳಿಗೆ ಮನವರಿಕೆ ಆಗಿದೆ. ನಿಮಗೆ ಅಲ್ಲಿ ಯಾರಾದಾದರೂ ಪರಿಚಯದವರಿದ್ದರೆ ಕುಕ್ಕೆಯಲ್ಲಿ ಸರ್ಪದೋಷ ನಿವಾರಣೆ ಪೂಜೆ ಮಾಡಿಸಬೇಕಿತ್ತು. ಹೆಲ್ಪ್ ಮಾಡ್ತೀರಾ?’ ಎಂದು ಕೇಳಿದರು.
ನಾನು ನಮ್ಮ ಮಂಗಳೂರು ವರದಿಗಾರ ಜಿತೇಂದ್ರ ಕುಂದೇಶ್ವರಗೆ ಹೇಳಿದೆ. ಅವರು ಅಲ್ಲಿ ಎಲ್ಲ ವ್ಯವಸ್ಥೆ ಮಾಡಿದರು. ಆ ಪ್ರಕಾರ, ಪ್ರಕಾಶರಾಜ್ ಪತ್ನಿ ಕುಕ್ಕೆಗೆ ಬಂದು, ಪೂಜೆ ಸಲ್ಲಿಸಿ ಹೋದರು.
ಅದಾಗಿ ಒಂದು ವರ್ಷದ ಬಳಿಕ ಅವರ ಪತ್ನಿಗೆ ಮಗುವಾಯಿತು. ಈ ವಿಷಯವನ್ನು ನನಗೆ ಪ್ರಕಾಶ ರಾಜ್ ಮತ್ತು ಅವರ ಪತ್ನಿ ಖುದ್ದಾಗಿ ಫೋನ್ ಮಾಡಿ ತಿಳಿಸಿದರು.
ಪ್ರಕಾಶ ರಾಜ್ ಗೆ ಮಗುವಾಗಿದ್ದರೆ ಅದಕ್ಕೆ ‘ಕುಕ್ಕೆ ಮಹಾತ್ಮೆ’ಯೇ ಕಾರಣ!
ಇದನ್ನು ಅವರು ಅಲ್ಲ ಎಂದು ಹೇಳ್ತಾರಾ?
ಇದು ನಮ್ಮ ಎಡಬಿಡಂಗಿಗಳ ಕಥೆ. ಹೊರಗೊಂದು, ಒಳಗೊಂದು. ಹೊರಗೆ ಪ್ರಗತಿಪರ, ವಿಚಾರವಾದ, ಚಿಂತಕನ ಸೋಗು. ಒಳಗೆ ಬರೀ ಮಣ್ಣಂಗಟ್ಟೆ! ಈ ಪ್ರಕಾಶ್ ರಾಜ್ ನಾವೆಲ್ಲ ನಿರ್ಲಕ್ಷಿಸಬೇಕಾದ ಒಬ್ಬ ಅವಿವೇಕಿ ಮತ್ತು ಶುದ್ಧ ಹಿಪೊಕ್ರೇಟ್. ಡಬಲ್ ಸ್ಟ್ಯಾಂಡರ್ಡ್ ಮನುಷ್ಯ.
ಯಾರನ್ನು ‘ವಿಷ’ ಸರ್ಪ ಎಂದು ದೂಷಿಸುತ್ತಾರೋ, ಆ ‘ಸರ್ಪ’ ವೇ ಅವರಿಗೆ ವರವಾಗಿ ಬರಬೇಕಾಯ್ತು!
ಮೊನ್ನೆ ಇಸ್ರೋ ವಿಜ್ಞಾನಿಗಳು ತಿರುಪತಿಗೆ ಹೋದಾಗ ಪ್ರಗತಿಪರರು “ಸ್ವಂತ ಸಾಮರ್ಥ್ಯದಲ್ಲಿ ನಂಬಿಕೆ ಇಲ್ಲದವರು ದೇವರ ಮೊರೆ ಹೋಗುತ್ತಾರೆ” ಎಂದು ಕುಹಕವಾಡಿದ್ದಕ್ಕೂ, ಈ ಘಟನೆಗೂ ಸಂಬಂಧವಿಲ್ಲ ಬಿಡಿ.
ಇಂಥ ಖಾಸಗಿ ವಿಷಯಗಳನ್ನು ನಾನು ಸಾರ್ವಜನಿಕವಾಗಿ ಚರ್ಚಿಸಲು ಇಷ್ಟಪಡುವುದಿಲ್ಲ. ನನ್ನದೇ ಪತ್ರಿಕೆ, ಅಂಕಣಗಳಿದ್ದರೂ ಅಂಥ ವಿಷಯಗಳನ್ನು ಬರೆದು ಪುಟಗಳನ್ನು ಗಲೀಜು ಮಾಡುವುದಿಲ್ಲ. ಸಮಸ್ಯೆ ಏನಂದ್ರೆ, ಕೆಲವು ವಿಷಯಗಳನ್ನು ಹೇಳದಿದ್ದರೆ, ಕೆಲವರ ಅಸಲಿ ವ್ಯಕ್ತಿತ್ವ ಗೊತ್ತೇ ಆಗುವುದಿಲ್ಲ.
ಎಂದು ಪೋಸ್ಟ್ ಮಾಡಿದರು. ಅತ್ತ ಜರ್ನಲಿಸ್ಟುಗಳು, ಇತ್ತ ರಾಜಕಾರಣಿಗಳು, ಮತ್ತೊಂದೆಡೆ ರೈಟ್ ಮತ್ತು ಲೆಫ್ಟ್ ವಿಂಗಿನವರೂ ನೋಡೋಕೆ ಶುರು ಮಾಡಿದರು. ಇದು ಸತ್ಯ ಎಂದು ಅತ್ತ ಪತ್ರಕರ್ತ ಜಿತೇಂದ್ರ ಕುಂದೇಶ್ವರ ಸ್ಪಷ್ಟನೆ ಕೊಟ್ಟರು. ಈಗ ಪ್ರಕಾಶ್ ರೈ ನನ್ನ ಪ್ರೀತಿಯ ಮಡದಿ ದೈವಭಕ್ತೆ.. ಆಕೆಯ ನಂಬಿಕೆಯನ್ನು ಗೌರವಿಸಿ ದರ್ಶನಕ್ಕೆ ನಿಮ್ಮ ಸಹಾಯ ಕೋರಿದ್ದೆ.. ಧನ್ಯವಾದಗಳು ಅಣ್ಣ ಎಂದು ತಮಗೆ ತಿಳಿಸಿದ್ದಳು.. ಆಕೆಯ ಪ್ರೀತಿಗೆ .. ನಂಬಿಕೆಗೆ ..ವಿಷ ಬೆರಸಿ ಹೀಗೆ ತಿರುಚಿದ ನಿಮಗೆ ಹೇಗೆ ಪ್ರತಿಕ್ರಿಯಸಲಿ …. ಛೀ ..ಛೀ ಎಂದು ಉತ್ತರ ಕೊಟ್ಟಿದ್ದಾರೆ.
ಈಗ ಪ್ರಶ್ನೆ ಕೇಳುವ ಸರದಿ ಬಲಪಂಥೀಯರದ್ದು. ಕೆಲವೇ ವರ್ಷಗಳ ಹಿಂದೆ ಇದೇ ಪ್ರಕಾಶ್ ರೈ ರಾಮಲಲ್ಲಾ ಉತ್ಸವದಲ್ಲಿ ಮಕ್ಕಳು ರಾಮ ವೇಷಧಾರಿಗಳಾಗಿ ಬರುವುದನ್ನು ಪೋರ್ನ್ ದೃಶ್ಯಕ್ಕೆ ಹೋಲಿಕೆ ಮಾಡಿದ್ದರು. ರೈ ಅವರಿಗೆ ಇಷ್ಟವಿದೆಯೋ.. ಇಲ್ಲವೋ.. ಕೈಮುಗಿಯುತ್ತಾರೋ.. ಇಲ್ಲವೋ.. ನಂಬುತ್ತಾರೋ.. ನಂಬುವುದಿಲ್ಲವೋ.. ಬೇರೆಯ ಪ್ರಶ್ನೆ. ಆದರೆ ಅದನ್ನು ಟೀಕೆ ಮಾಡುವ ವಿಷಯದಲ್ಲಿ ಮರ್ಯಾದೆಯ ಮಿತಿಯನ್ನಂತೂ ಪ್ರಕಾಶ್ ರೈ ದಾಟಿದ್ದರು. ಈಗ ಹೆಂಡತಿಯಾದವರು ಸಂತಾನ ಭಾಗ್ಯಕ್ಕೆ ಕುಕ್ಕೆಯ ಮೊರೆ ಹೋಗಿದ್ದಾರೆ. ಬೇರೆಯವರ ನಂಬಿಕೆಯನ್ನು ಪೋರ್ನ್ ಎನ್ನುವುದಾದರೆ, ನಿಮ್ಮ ಪತ್ನಿಯ ನಂಬಿಕೆಯನ್ನು ಏನೆಂದು ಕರೆಯಬೇಕು ಎಂಬ ಪ್ರಶ್ನೆ ನೆಟ್ಟಿಗರದ್ದು.



