ಹಾಸನ ಲೋಕಸಭಾ ಕ್ಷೇತ್ರದ ಹಾಲಿ ಸಂಸದ ಪ್ರಜ್ವಲ್ ರೇವಣ್ಣ ಅವರ ವಿಡಿಯೋಗಳು ವೈರಲ್ ಆಗಿ, ಎಸ್ʻಐಟಿ ತನಿಖೆಯಾಗುತ್ತಿರುವಾಗಲೇ.. ಜೆಡಿಎಸ್ ಇಬ್ಭಾಗವಾಗಬಹುದು ಎಂಬ ಮಾತುಗಳು ಕೇಳಿ ಬರೋಕೆ ಶುರುವಾಗಿವೆ. ಏಕೆಂದರೆ.. ಯಾದಗರಿಯ ಗುರುಮಿಠ್ಕಲ್ ಶಾಸಕ ಬಹಿರಂಗವಾಗಿಯೇ ಪ್ರಜ್ವಲ್ ರೇವಣ್ಣ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದರು. ಉಚ್ಛಾಟನೆಗೆ ಒತ್ತಾಯಿಸಿದ್ದರು. ಇನ್ನೊಬ್ಬ ಶಾಸಕ ಮುಳಬಾಗಿಲಿನ ಪ್ರತಿನಿಧಿ ಸಮೃದ್ಧಿ ಮಂಜುನಾಥ್ ಕೂಡಾ ಬಹಿರಂಗವಾಗಿ ಸುದೀರ್ಘ ಪತ್ರವನ್ನೇ ಬರೆದಿದ್ದರು.
ಆ ವೇಳೆಗಾಗಲೇ ಕುಮಾರಸ್ವಾಮಿ ಬಹಿರಂಗವಾಗಿ ಉಪ್ಪು ತಿಂದವರು ನೀರು ಕುಡಿಯಲೇಬೇಕು. ಪ್ರಜ್ವಲ್ ರೇವಣ್ಣ ತಪ್ಪು ಮಾಡಿದ್ದರೆ.. ಅವರ ಜೊತೆ ನಾವಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದರು. ಇದಕ್ಕೂ.. ತಮ್ಮ ಪಕ್ಷಕ್ಕೂ ಸಂಬಂಧ ಇಲ್ಲ ಎಂದಿದ್ದರು. ಪ್ರಜ್ವಲ್ʻಗೂ ತಮಗೂ ವೈಯಕ್ತಿಕ ಸಂಬಂಧವನ್ನೇ ಕಡಿದುಕೊಂಡಿದ್ದರು. ಆದರೇ.. ಆ ಇಬ್ಬರು ಶಾಸಕರು ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದರು.
ಮೂಲಗಳ ಪ್ರಕಾರ ಪ್ರಜ್ವಲ್ ರೇವಣ್ಣ ಪ್ರಕರಣ ಜೆಡಿಎಸ್ʻನ್ನೇ ಇಬ್ಭಾಗ ಮಾಡಲಿದೆ ಎಂದು ಹೇಳಲಾಗುತ್ತಿದೆ. ಜೆಡಿಎಸ್ʻನಲ್ಲಿರುವುದು 19 ಶಾಸಕರು. ಆ 19ರಲ್ಲಿ ಕುಮಾರಸ್ವಾಮಿಯೂ ಒಬ್ಬರು. ಅವರೇನಾದರೂ.. ಗೆದ್ದು ಲೋಕಸಭೆಗೆ ಹೋದರೆ.. 18ಕ್ಕೆ ಇಳಿಯಲಿದೆ. ಪಕ್ಷಾಂತರ ನಿಷೇಧ ಕಾಯ್ದೆ ಅನ್ವಯವಾಗಬಾರದು ಎಂದರೆ.. ಜೆಡಿಎಸ್ʻನ ಕನಿಷ್ಠ13 ಶಾಸಕರು (ಅಂದರೆ.. ಮೂರನೇ ಎರಡು ಭಾಗದಷ್ಟು ಶಾಸಕರು ) ಒಟ್ಟಿಗೇ ಕಾಂಗ್ರೆಸ್ ಸೇರಬೇಕು. ಆಗ.. ಶಾಸಕತ್ವ ಕಳೆದುಕೊಳ್ಳುವ, ಮರು ಚುನಾವಣೆ ಎದುರಿಸುವ ಸಮಸ್ಯೆ ಇರುವುದಿಲ್ಲ. ಹೀಗಾಗಿ.. ಜೆಡಿಎಸ್ʻನಲ್ಲಿ ಅಸಮಾಧಾನಗೊಂಡಿರುವ ಹಲವು ಶಾಸಕರು ಕಾಂಗ್ರೆಸ್ ಜೊತೆ ನೇರ ಸಂಪರ್ಕದಲ್ಲಿದ್ಧಾರೆ ಎಂದು ಹೇಳಲಾಗುತ್ತಿದೆ.
ಕಾಂಗ್ರೆಸ್ಸಿನವರು ಮೊದ ಮೊದಲು ಆಸಕ್ತಿ ತೋರಿಸಲಿಲ್ಲವಾದರೂ.. ಬಿಜೆಪಿ ಹಾಗೂ ಜೆಡಿಎಸ್ಸಿನ ಹಲವು ನಾಯಕರು ಚುನಾವಣೆ ನಂತರ ಈ ರಾಜ್ಯ ಸರ್ಕಾರ ಇರುವುದಿಲ್ಲ ಎಂದು ಹೇಳಿಕೆ ನೀಡಿದ ನಂತರ.. ಸೀರಿಯಸ್ ಆಗಿ ತಗೊಂಡಿದ್ಧಾರೆ. 136 ಶಾಸಕರ ಬಲಕ್ಕೆ ಇನ್ನಷ್ಟು ಶಕ್ತಿ ಬಂದರೆ.. ʻಸರ್ಕಾರದ ಪತನʼದ ಮಾತು ಆಡುವುದಕ್ಕೂ ಬಿಜೆಪಿ ಯೋಚನೆ ಮಾಡಲಿದೆ ಎನ್ನುವ ತೀರ್ಮಾನಕ್ಕೆ ಬಂದಿದೆ.
ಪ್ರಜ್ವಲ್ ವಿಡಿಯೋ ಲೀಕ್ ಆಗುವುದಕ್ಕೆ ಮುಂಚೆ ಎಂಎಲ್ʻಸಿ ಸೂರಜ್ ರೇವಣ್ಣ (ರೇವಣ್ಣನವರ ಎರಡನೇ ಮಗ, ಪ್ರಜ್ವಲ್ ತಮ್ಮ) ಡಿಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿರುವುದು ಇದಕ್ಕೆ ಇನ್ನಷ್ಟು ಪುಷ್ಠಿ ಕೊಟ್ಟಿದೆ. ಆದರೆ.. ಇಲ್ಲಿ ಸಮಸ್ಯೆ ಅಗಿರುವುದು ಬೇರೆ..
ಕಾಂಗ್ರೆಸ್, ಸಿದ್ದರಾಮಯ್ಯ ಜೊತೆ ಉತ್ತಮ ಬಾಂಧವ್ಯ ಹೊಂದಿರುವುದು ರೇವಣ್ಣನವರೇ ಹೊರತು, ಕುಮಾರಸ್ವಾಮಿ ಅಲ್ಲ. ಈಗ ರೇವಣ್ಣ ಮತ್ತವರ ಮಗನ ವಿಡಿಯೋ ಮುಂದಿಟ್ಟುಕೊಂಡು ಕಾಂಗ್ರೆಸ್ಸಿಗೆ ಹೋದರೆ.. ಭವಿಷ್ಯದಲ್ಲಿ ರೇವಣ್ಣ ಕೂಡಾ ಕಾಂಗ್ರೆಸ್ಸಿಗೆ ಬಂದರೆ.. ಆಗ ಸಮಸ್ಯೆ ಆಗುವುದು ತಮಗೇ ಹೊರತು, ಮತ್ಯಾರಿಗೂ ಅಲ್ಲ ಎನ್ನುವ ದೂರಾಲೋಚನೆ ಇದೆ.
ಜೊತೆಗೆ ಕಾಂಗ್ರೆಸ್ಸಿಗೆ ಹೋದರೂ.. ತಾವು ಕಾಂಗ್ರೆಸ್ಸಿಗೆ ಯೂಸ್ ಆಗುತ್ತೇವೆಯೇ ಹೊರತು.. ತಮಗೆ ಕಾಂಗ್ರೆಸ್ಸಿನಿಂದ ಉಪಯೋಗ ಇಲ್ಲ ಎನ್ನುವ ಲೆಕ್ಕಾಚಾರವೂ ಇದೆ. ಹೀಗಾಗಿಯೇ ಮೈಸೂರಿನ ಪ್ರಭಾವಿ ಲೀಡರ್ ಜಿಟಿ ದೇವೇಗೌಡ ಅಸಮಾಧಾನಗೊಂಡಿರುವ ಹಲವರನ್ನು ಹಿಡಿದಿಟ್ಟುಕೊಂಡಿದ್ದಾರೆ. ಆದರೆ.. ಎಷ್ಟು ದಿನಗಳವರೆಗೆ.. ಕಾದು ನೋಡಬೇಕು.



