ವಿಶೇಷವಾಗಿ ಕೊಲೆ ಕೇಸಿನಲ್ಲಿ ಶಿಕ್ಷೆಯಾಗುವುದು ಶವ ಸಿಕ್ಕ ಮೇಲೆ. ಶವವೇ ಸಿಕ್ಕದಿದ್ದರೆ.. ಉಳಿದ ಸಾಕ್ಷಿಗಳೇನೇ ಇರಲಿ.. ಕೋರ್ಟಿನಲ್ಲಿ ನಿಲ್ಲುವುದಿಲ್ಲ. ಶವ ಸಿಕ್ಕರೂ.. ಅದೇನೇ ಹಲ್ಲೆ ನಡೆದಿದ್ದರೂ.. ಸಾವಿನ ಕಾರಣ ಬೇರೆಯೇ ಆಗಿದ್ದರೆ.. ಕೊಲೆಗಾರ ಬಚಾವ್ ಆಗಿಬಿಡುತ್ತಾನೆ.
ಉದಾಹರಣೆಗೆ.. ಎ ಹೆಸರಿನ ವ್ಯಕ್ತಿ, ಬಿ ಹೆಸರಿನ ವ್ಯಕ್ತಿಯನ್ನು ಹಿಗ್ಗಾಮುಗ್ಗಾ ಥಳಿಸಿ ಕೊಲ್ಲುತ್ತಾನೆ. ಆದರೆ.. ಪೋಸ್ಟ್ʻಮಾರ್ಟಂನಲ್ಲಿ ಹಲ್ಲೆಯ ಗುರುತು ಸಿಕ್ಕರೂ.. ಪ್ರಾಣ ಹೋಗಿದ್ದು ಹೃದಯಾಘಾತಕ್ಕೋ, ಮತ್ಯಾವುದಕ್ಕೋ ಎಂದು ಬಂದುಬಿಟ್ಟರೆ.. ಹೊಡೆದವನು ಬಚಾವ್. ದರ್ಶನ್ ಗ್ಯಾಂಗ್ ವಿರುದ್ಧದ ಕೇಸಿನಲ್ಲಿ ಇಂಥಾದ್ದೊಂದು ಘಟನೆ ನಡೆದಿದೆ ಎನ್ನಲಾಗ್ತಿದೆ.
ದರ್ಶನ್ & ಗ್ಯಾಂಗ್ ಅರೆಸ್ಟ್ ಆಗಿರುವ ರೇಣುಕಾಸ್ವಾಮಿ ಕೊಲೆ ಕೇಸಿನಲ್ಲಿ ದೊಡ್ಡದೊಂದು ಟ್ವಿಸ್ಟ್ ಬಂದಿದೆ. ಕೊಲೆ ಕೇಸ್ ಮುಚ್ಚಿ ಹಾಕಲು ಹಲವು ಪ್ರಯತ್ನಗಳು ನಡೆದಿದ್ದವು. ಶರಣಾಗತಿಯಿಂದ ಹಿಡಿದು ಸಾಕ್ಷ್ಯನಾಶದವರೆಗೆ ಹಲವು ಸಂಚುಗಳೇ ನಡೆದಿದ್ದವು. ಆದರೆ.. ಕೊಲೆಯನ್ನು ಹೃದಯಾಘಾತ ಎಂದು ತೋರಿಸಿ ಕೇಸ್ ಕ್ಲೋಸ್ ಮಾಡಲು ಸಂಚು ರೂಪಿಸಲಾಗಿತ್ತು ಎಂಬ ಮಾಹಿತಿ ಹೊರಬಂದಿದೆ.
ರೇಣುಕಾಸ್ವಾಮಿ ಅವರ ಮೃತದೇಹದ ಪೋಸ್ಟ್ ಮಾರ್ಟಂ ಮಾಡಿರೋದು ಬೇರೆ ಯಾರೂ ಅಲ್ಲ.. ಎ1 ಆರೋಪಿ ಪವಿತ್ರಾ ಗೌಡ ಅವರ ಆಪ್ತ ಸ್ನೇಹಿತೆ ಸಮತಾ ಅವರ ಪತಿ ಡಾ.ಸುರೇಶ್ ಎಂಬ ಮಾಹಿತಿ ಹೊರಬಿದ್ದಿದೆ. ಈಗಾಗಲೇ ಹಲವು ಮಾಧ್ಯಮಗಳಲ್ಲಿ ಪೋಸ್ಟ್ ಮಾರ್ಟಂ ರಿಪೋರ್ಟ್ ತಿರುಚಲು ವೈದ್ಯರಿಗೆ ದರ್ಶನ್ ಗ್ಯಾಂಗ್‌ನಿಂದ ಬರೋಬ್ಬರಿ 1 ಕೋಟಿ ರೂಪಾಯಿ ಆಫರ್ ಹೋಗಿದೆ ಎಂದು ಸುದ್ದಿಯಾಗಿತ್ತು.
ʻರೇಣುಕಾಸ್ವಾಮಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ’ ಎಂದು ಪೋರ್ಸ್ಟ್ ಮಾರ್ಟಂ ವರದಿ ನೀಡುವಂತೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರಿಗೆ ಪ್ರಭಾವಿ ರಾಜಕಾರಣಿಯೊಬ್ಬರು 1 ಕೋಟಿ ಆಫರ್ ಮುಂದಿಟ್ಟಿದ್ದರು ಎಂದು ಸುದ್ದಿಯಾಗಿತ್ತು.ಅದಕ್ಕೆ ಇದೂವರೆಗೆ ದಾಖಲೆಗಳು ಲಭ್ಯವಿಲ್ಲವಾದರೂ, ಸುದ್ದಿ ಇದ್ದದ್ದಂತೂ ನಿಜ. ರೇಣುಕಾಸ್ವಾಮಿ ಸತ್ತಿದ್ದು ಹೃದಯಾಘಾತದಿಂದ ಎಂದು ವರದಿ ಬಂದರೆ, ಇಡೀ ಕೇಸ್ ಬಿದ್ದು ಹೋಗಲಿದೆ. ಹಲ್ಲೆ ಮಾಡಿದ್ದಕ್ಕೆ ಶಿಕ್ಷೆಯಾಗಬಹುದೇ ಹೊರತು, ಕೊಲೆ ಮಾಡಿದ್ದಕ್ಕೆ ಅಲ್ಲ ಎಂಬ ಕಾರಣಕ್ಕಾಗಿ ಈ ರೀತಿ ಸಂಚು ಮಾಡಲಾಗಿತ್ತು.
ಆಗ ಮೃತದೇಹ ವಿಲೇವಾರಿ ಮಾಡಿದವರು ಸಿಕ್ಕಿಬೀಳ್ತಾರೆ, ದರ್ಶನ್ ಮತ್ತು ಪವಿತ್ರಾ ಗೌಡ ಪಾರಾಗಬಹುದು ಅಂತ ಪ್ಲಾನ್ ಆಗಿತ್ತು ಎಂದು ತಿಂಗಳ ಹಿಂದೆ ವರದಿಯಾಗಿತ್ತು. ಈಗ ನೋಡಿದ್ರೆ ಪೋಸ್ಟ್ ಮಾರ್ಟಂ ರಿಪೋರ್ಟ್‌ಗೆ ಸಂಬಂಧಿಸಿದಂತೆ ಸ್ಫೋಟಕ ಮಾಹಿತಿ ಹೊರಬಿದ್ದಿದೆ.
ಪವಿತ್ರಾ ಗೌಡರ ಪತಿಯೇ ಪೋಸ್ಟ್ ಮಾರ್ಟಂ ಡಾಕ್ಟರ್ : ಪೋಸ್ಟ್ ಮಾರ್ಟಂ ವರದಿ ಪೊಲೀಸರ ಕೈ ಸೇರುವ ಮುನ್ನವೇ ಜೈಲಿನಲ್ಲಿ ದರ್ಶನ್ ಹಾಗೂ ಪವಿತ್ರಾ ಗೌಡರನ್ನ ಸಮತಾ ಭೇಟಿ ಮಾಡಿದ್ದರು. ಹೀಗಾಗಿ, ಪೋಸ್ಟ್ ಮಾರ್ಟಂ ವರದಿ ತಿದ್ದುವ ಪ್ರಯತ್ನ ನಡೆದಿದ್ಯಾ ಎಂಬ ಅನುಮಾನ ಪೊಲೀಸರಿಗೆ ಕಾಡಿತ್ತು. ಏಕೆಂದರೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ಪವಿತ್ರಾ ಅವರನ್ನು ಭೇಟಿ ಮಾಡಿದ್ದ ಸಮತಾ ಅವರ ಪತಿಯೇ ಪೋಸ್ಟ್ ಮಾರ್ಟಂ ಡಾಕ್ಟರ್. ಹೆಸರು ಸುರೇಶ್. ಕಳೆದ 3 ವರ್ಷಗಳಿಂದ ಪವಿತ್ರಾ ಗೌಡಗೆ ಸಮತಾ ಜಿಮ್ ಟ್ರೇನರ್ ಆಗಿದ್ರಂತೆ. ಅಲ್ಲದೆ ಆರೋಪಿ ಧನರಾಜ್ʻಗೆ ಎಲೆಕ್ಟ್ರಿಕ್ ಶಾಕ್ ಕೊಡುವ ಮೆಷಿನ್ ತರುವುದಕ್ಕೆ ದುಡ್ಡು ಕೊಟ್ಟಿದ್ದು ಇದೇ ಸಮತಾ ಎನ್ನಲಾಗಿದೆ. ಅಲ್ಲದೆ ರೇಣುಕಾಸ್ವಾಮಿ ಪೋಸ್ಟ್ ಮಾರ್ಟಂ ದಿನ ರಜೆಯಲ್ಲಿದ್ದರೂ ಆಸ್ಪತ್ರೆಗೆ ಬಂದಿದ್ದ ಡಾ.ಸುರೇಶ್, ಖುದ್ದು ನಿಂತು ಪೋಸ್ಟ್ ಮಾರ್ಟಂ ಮಾಡಿಸಿದ್ದರಂತೆ.
ಇದೆಲ್ಲ ಗೊತ್ತಾಗುತ್ತಿದ್ದಂತೆಯೇ ರಣೋತ್ತರ ಪರೀಕ್ಷಾ ವರದಿಯನ್ನು ಪುನಃ ಪರಿಶೀಲನೆ ನಡೆಸಿ ವರದಿ ನೀಡುವಂತೆ ಪೋಸ್ಟ್ ಮಾರ್ಟಂ ನಡೆಸಿದ ತಂಡದಲ್ಲಿದ್ದ ಬೇರೆ ವೈದ್ಯರಿಗೆ ಪೊಲೀಸರು ಸೂಚಿಸಿದ್ದರು. ಮರು ಪರಿಶೀಲನೆ ನಡಸಿದ ಬಳಿಕ ಪೋಸ್ಟ್ ಮಾರ್ಟಂ ರಿಪೋರ್ಟ್ ಅನ್ನು ಪೊಲೀಸರಿಗೆ ಡಾ ಪ್ರದೀಪ್ ಸಲ್ಲಿಸಿದ್ದಾರೆ ಎಂದು ವರದಿಯಾಗಿದೆ.



