ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಇಂಡಿಯಾ ಒಕ್ಕೂಟ ಮಲ್ಲಿಕಾರ್ಜುನ ಖರ್ಗೆ ಅವರ ನೇತೃತ್ವದಲ್ಲಿ ಹೋರಾಟ ನಡೆಸುತ್ತವೆ ಎಂಬ ಮಾತಿನ ಜೊತೆಗೆ ಖರ್ಗೆ ಅವರೀಗ ಅಭ್ಯರ್ಥಿಯಾಗಿಯೂ ಹೆಸರು ಕೇಳಿ ಬರುವಂತೆ ನೋಡಿಕೊಂಡಿದ್ದಾರೆ. ವಿರೋಧಪಕ್ಷಗಳ ಒಕ್ಕೂಟ ಇಂಡಿಯಾ ಬ್ಲಾಕ್‌ನ ನಡೆಯುತ್ತಿರುವ ಸಭೆಯಲ್ಲಿ ಬ್ಯಾನರ್ಜಿ ಈ ಪ್ರಸ್ತಾಪವನ್ನು ಮಾಡಿದ್ದು, ಅರವಿಂದ ಕೇಜ್ರಿವಾಲ್ ಸೇರಿದಂತೆ ಕೆಲವರು ಬೆಂಬಲವನ್ನೂ ಸೂಚಿಸಿದ್ಧಾರೆ. ಒಟ್ಟಾರೆ 12 ಪಕ್ಷಗಳು ಖರ್ಗೆ ಪರ ನಿಂತಿವೆ ಎನ್ನಲಾಗಿದೆ. ಖರ್ಗೆಯವರು ವಿರೋಧ ಪಕ್ಷದ ಪ್ರಮುಖ ದಲಿತ ಮುಖವಾಗಿರುವುದರಿಂದ ಯೋಜನೆಗೆ ವ್ಯಾಪಕ ಅನುಮೋದನೆ ಸಿಕ್ಕಿದೆ.
ಆದಾಗ್ಯೂ, ಖರ್ಗೆ ಅವರು ಈ ಪ್ರಸ್ತಾಪವನ್ನು ನಯವಾಗಿ ತಿರಸ್ಕರಿಸಿದ್ದು ತಾನು ದೀನದಲಿತರಿಗಾಗಿ ಮಾತ್ರ ಕೆಲಸ ಮಾಡಲು ಬಯಸುವುದಾಗಿ ಹೇಳಿದ್ದಾರೆ. “ನಾವು ಮೊದಲು ಗೆಲ್ಲಬೇಕು, ಪ್ರಧಾನಿ ನಿರ್ಧಾರವನ್ನು ನಂತರ ತೆಗೆದುಕೊಳ್ಳಬಹುದು” ಎಂದು ಖರ್ಗೆ ಅಭಿಪ್ರಾಯ ಪಟ್ಟಿದ್ದಾರೆ. ಖರ್ಗೆಯವರ ವ್ಯಾಪಕ ಅನುಮೋದನೆಯು ವಿರೋಧ ಪಕ್ಷಗಳಲ್ಲಿ ಅವರ ಸ್ಥಾನಮಾನದ ಸೂಚನೆಯಾಗಿದೆ. ಮತ್ತೊಂದೆಡೆ, ಇದು ರಾಹುಲ್ ಗಾಂಧಿಗೆ ಹಿನ್ನಡೆಯೂ ಹೌದು. ಏಕೆಂದರೆ ಬೆಂಗಳೂರಿನಲ್ಲಿ ನಡೆದ ಇಂಡಿಯಾ ಒಕ್ಕೂಟದ ಸಮಾವೇಶದಲ್ಲಿ ರಾಹುಲ್ ಗಾಂಧಿ ಫೋಟೋವನ್ನು ದೊಡ್ಡದಾಗಿ ಹಾಕಿಕೊಂಡಿದ್ದನ್ನೇ ಪಕ್ಷಗಳು ಒಪ್ಪಿರಲಿಲ್ಲ. ಆದರೆ ಅದೇ ಪಕ್ಷಗಳು ಈಗ ಖರ್ಗೆ ಹೆಸರನ್ನು ಒಪ್ಪಿವೆ ಎನ್ನುವುದೇ ಕುತೂಹಲಕಾರಿ.
ಮಲ್ಲಿಕಾರ್ಜುನ ಖರ್ಗೆ ದಲಿತ ನಾಯಕ. ಆಡಳಿತದ ಅನುಭವವೂ ಇದೆ. ಜೊತೆಗೆ ಹಿಂದಿ ರಾಜ್ಯಗಳಲ್ಲಿ ಖರ್ಗೆಯವರ ಭಾಷಣ ಎಂದರೆ ಜನ ಸೇರುತ್ತಾರೆ. ಕನ್ನಡದಲ್ಲಿ ಆಕರ್ಷಕವಾಗಿ ಮಾತನಾಡಲು ಬರುವುದಿಲ್ಲ. (ಕನ್ನಡವೇನೋ ಅದ್ಭುತವಾಗಿದೆ. ಆದರೆ ಆಕರ್ಷಕವಾಗಿ ಮಾತನಾಡಲು ಬರುವುದಿಲ್ಲ) ಆದರೆ ಹಿಂದಿಯಲ್ಲಿ ಹಾಗಲ್ಲ. ಹಿಂದಿಯಲ್ಲಿ ಖರ್ಗೆಯವರ ಹಿಡಿತ ಅದ್ಭುತ. ಘಜಲು, ಗಾದೆ, ನುಡಿಗಟ್ಟುಗಳನ್ನೆಲ್ಲ ಸೇರಿಸಿ ಮಾತನಾಡುವ ಖರ್ಗೆಯವರ ಶೈಲಿ ಹಿಂದಿ ಭಾಷಿಕ ರಾಜ್ಯಗಳಲ್ಲಿ ಇಷ್ಟವಾಗಿದೆ.
ಹೀಗಿದ್ದರೂ ಖರ್ಗೆಯವರೇ ಪ್ರಧಾನಿಯಾಗಬೇಕು ಎಂದರೆ ಮೊದಲು ಮೋದಿ ವಿರುದ್ಧ ಗೆಲ್ಲಬೇಕು. ಮೋದಿ ವಿರೋಧಿ ಒಕ್ಕೂಟ 273 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಬೇಕು. ಆ ಗೆಲುವಿನಲ್ಲಿ ಕಾಂಗ್ರೆಸ್ ದೊಡ್ಡ ಸ್ಥಾನಗಳಿಸಬೇಕು. ಇನ್ನು ಕಾಂಗ್ರೆಸ್ಸಿನಲ್ಲಿಯೇ.. ಗಾಂಧಿ ಕುಟುಂಬವನ್ನು ಧಿಕ್ಕರಿಸಿ ಖರ್ಗೆಗೆ ವೋಟು ಹಾಕ್ತಾರಾ ಅನ್ನೋದು ಪ್ರಶ್ನೆ. ಆದರೆ..ಎಲ್ಲದಕ್ಕೂ ಮೊದಲು ಖರ್ಗೆಯವರೇ ಹೇಳಿದಂತೆ ಮೊದಲು ಗೆಲ್ಲಬೇಕು.
ಮೈತ್ರಿ ಸಭೆಗೂ ಮುನ್ನ ಮಮತಾ ಬ್ಯಾನರ್ಜಿ ಮತ್ತು ಕೇಜ್ರಿವಾಲ್ ನಡುವೆ ನಡೆದ ಆಪ್ತ ಸಭೆಯಲ್ಲಿ ಈ ಪ್ರಸ್ತಾವನೆಯ ಬಗ್ಗೆ ಮಾತನಾಡಿ ನಿರ್ಧಾರಕ್ಕೆ ಬರಲಾಗಿದೆ. ಆ ಬಳಿಕವೇ ಇಂಡಿಯಾ ಸಭೆಯಲ್ಲಿ ಈ ಪ್ರಸ್ತಾಪವನ್ನು ಮಂಡಿಸಿದ್ದಾರೆ ಎಂದು ತಿಳಿದು ಬಂದಿದೆ. ಜೊತೆಗೆ, ವಿಧಾನಸಭಾ ಚುನಾವಣೆಯ ಫಲಿತಾಂಶಗಳು ಕಾಂಗ್ರೆಸ್ ನಿರೀಕ್ಷೆಯಂತೆ ಇಲ್ಲದಿರುವುದು ರಾಹುಲ್ ಗಾಂಧಿ ಹೆಸರನ್ನು ಪ್ರಧಾನಿ ಅಭ್ಯರ್ಥಿಗೆ ಸೂಚಿಸದಿರಲು ಪ್ರಮುಖ ಕಾರಣ ಎಂದು ಹೇಳಲಾಗಿದೆ. ಮಲ್ಲಿಕಾರ್ಜುನ ಖರ್ಗೆ ಅವರ ಹೆಸರನ್ನು ಮುಂದಿಡುವ ಹಿಂದೆ ತಂತ್ರಗಾರಿಕೆಯೂ ಇದೆ ಎಂದು ಹೇಳಲಾಗ್ತಿದ್ದು, ವಾಸ್ತವವಾಗಿ, ಕಾಂಗ್ರೆಸ್ ನಾಯಕತ್ವದಲ್ಲಿ ಎಂದಾದರೂ ಸರ್ಕಾರ ರಚನೆಯಾದರೆ, ಅದನ್ನು ರಾಹುಲ್ ಗಾಂಧಿ ಮುನ್ನಡೆಸಬೇಕು ಎಂದು ಪ್ರತಿಯೊಬ್ಬ ಕಾಂಗ್ರೆಸ್ ನಾಯಕರು ಬಯಸುತ್ತಾರೆ. ಹೀಗಾಗಿ ಚುನಾವಣೆಗೂ ಮುನ್ನವೇ ಮಲ್ಲಿಕಾರ್ಜುನ ಖರ್ಗೆ ಅವರ ಹೆಸರನ್ನು ಪ್ರಧಾನಿ ಅಭ್ಯರ್ಥಿಯಾಗಿ ಮುಂದಿಟ್ಟರೆ ತಮಗೆ ಹೆಚ್ಚು ಅನುಕೂಲವಾಗಲಿದೆ ಎಂಬುದು ಮಮತಾ, ಕೇಜ್ರಿವಾಲ್ ಹಾಗೂ ಕೆಲ ನಾಯಕರ ಅಭಿಪ್ರಾಯ.


