ಮುಡಾ ಹಗರಣ ಎಲ್ಲಿಂದ ಎಲ್ಲೆಲ್ಲಿಗೋ ಹೋಗುತ್ತಿದೆ. ಪ್ರಕರಣ ಈಗ ಕೇವಲ ಸಿದ್ಧರಾಮಯ್ಯ ಅವರ ಪತ್ನಿ ಕೊಟ್ಟ ಜಮೀನು, ಅದಕ್ಕೆ ಪರಿಹಾರವಾಗಿ ಮೈಸೂರಿನಲ್ಲಿ ಪಡೆದ 14 ಸೈಟುಗಳ ಹಗರಣವಾಗಿಯಷ್ಟೇ ಉಳಿದಿಲ್ಲ. ಅದು ರಾಜ್ಯಪಾಲರು, ಕೇಂದ್ರ ಸರ್ಕಾರ, ರಾಜ್ಯ ಬಿಜೆಪಿಯ ನಾಯಕರ ವಿರುದ್ಧ ಕೇಸು, ಕೇಂದ್ರ ಸಚಿವರ ವಿರುದ್ಧ ಕೇಸು ಅಷ್ಟೇ ಏಕೆ, ಸಿಬಿಐ ರಾಜ್ಯ ಪ್ರವೇಶಕ್ಕೆ ನಿರ್ಬಂಧದವರೆಗೂ ಬಂದು ನಿಂತಿದೆ. ಇದು ರಾಜ್ಯ ರಾಜಕೀಯಕ್ಕೆ ಹೊಸದು. ಕೇರಳ ಮತ್ತು ಪ.ಬಂಗಾಳದಲ್ಲಿ ಕಾಣುತ್ತಿದ್ದ ಅತಿರೇಕದ ರಾಜಕೀಯ ಈಗ ಕರ್ನಾಟಕಕ್ಕೂ ಕಾಲಿಟ್ಟಿದೆ. ಅದೀಗ ಕೇಂದ್ರ ಸಚಿವ ಕುಮಾರಸ್ವಾಮಿ ಅವರನ್ನು ಐಪಿಎಸ್ ಅಧಿಕಾರಿಯೊಬ್ಬರು ಹಂದಿ ಎಂದು ಪರೋಕ್ಷವಾಗಿ ಹೇಳುವ ಮಟ್ಟಕ್ಕೆ ಹೋಗಿ ನಿಂತಿದೆ.
ಎಸ್‌ಐಟಿ ಮುಖ್ಯಸ್ಥ ಎಡಿಜಿಪಿ ಚಂದ್ರಶೇಖರ್ ‘ಹಂದಿಗಳ ಜೊತೆ ಜಗಳ ಮಾಡಿದರೆ ನಾವು ಕೊಳಕಾಗುತ್ತೇವೆ’ ಎಂದು ಪ್ರೆಸ್ ನೋಟ್ ಕಳಿಸಿದ್ದರು. ಅವರು ಉಲ್ಲೇಖಿಸಿದ್ದು ಜಾರ್ಜ್ ಬರ್ನಾಡ್ ಶಾ ಎಂಬ ಇಂಗ್ಲಿಷ್ ಲೇಖಕನ ಹೇಳಿಕೆಯನ್ನಾದರೂ, ಅದರ ಅರ್ಥ ಏನು, ಅದರ ಸಂದೇಶ ಏನು ಎನ್ನುವುದು ಎಲ್ಲರಿಗೂ ಅರ್ಥವಾಗಿತ್ತು. ಎಡಿಜಿಪಿ ಚಂದ್ರಶೇಖರ್ ಮಾನ್ಯತಾ ಟೆಕ್ ಪಾರ್ಕ್ ಬಳಿ 38 ಫ್ಲೋರ್ ಮನೆ ಕಟ್ಟುತ್ತಿದ್ದಾರೆ. ಈ ಹಿಂದೆ ಚಂದ್ರಶೇಖರ್ ಮೇಲೆ ಎಫ್‌ಐಆರ್ ಆಗಿದೆ. ತನಿಖೆ ಮಾಡಬೇಕು ಈ ಸಂಬಂಧ ಕೇಂದ್ರದ ಗೃಹ ಕಾರ್ಯದರ್ಶಿಗೂ ದೂರು ನೀಡುವುದಾಗಿ ಕುಮಾರಸ್ವಾಮಿ ಎಚ್ಚರಿಕೆ ನೀಡಿದ ನಂತರ ಚಂದ್ರಶೇಖರ್ ಇಂಥಾದ್ದೊಂದು ಎದಿರೇಟು ಕೊಟ್ಟಿದ್ದರು.
ವಿಚಿತ್ರವೆಂದರೆ ಅದು ರಾಜಕೀಯವಾಗಿ ಈಗ ಕುಮಾರಸ್ವಾಮಿ ಕೈ ಬಲಪಡಿಸುತ್ತಿದೆ. ಹೌದು, ಕುಮಾರಸ್ವಾಮಿ ಪರ ಜೆಡಿಎಸ್ ನಾಯಕರಷ್ಟೇ ಅಲ್ಲ, ಬಿಜೆಪಿ ನಾಯಕರೂ ನಿಂತಿದ್ದಾರೆ. ಕೇಂದ್ರ ಸಚಿವ ಕುಮಾರಸ್ವಾಮಿ ವಿರುದ್ಧ “ಹಂದಿ” ಪದ ಬಳಸಿ ಅವಹೇಳನ ಮಾಡಿದ ಲೋಕಾಯುಕ್ತ ಎಡಿಜಿಪಿ ಎಂ.ಚಂದ್ರಶೇಖರ್ ವಿರುದ್ಧ ಕೇಡರ್ ಕಂಟ್ರೋಲ್ ಮೂಲಕ ಕ್ರಮ ಕೈಗೊಳ್ಳಲಾಗುತ್ತದೆ. ಲೋಕಾಯುಕ್ತ ಎಡಿಜಿಪಿಗೆ ಏನಾದರೂ ಸರ್ವೀಸ್ ಕಂಡಕ್ಟ್ ರೂಲ್ ಬಗ್ಗೆ ಜ್ಞಾನವಿದ್ದರೆ ತಕ್ಷಣ ಕ್ಷಮಾಪಣೆ ಕೇಳಲಿ ಎಂದಿದ್ದಾರೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಈ ಸರ್ಕಾರವೇ ಶಾಶ್ವತವಲ್ಲ, ಎಚ್ಚರದಿಂದಿರಿ, ಮಾತಿನಲ್ಲಿ ಸ್ವಲ್ಪ ಎಚ್ಚರಿಕೆ ಇರಲಿ ಎಂದು ಲೋಕಾಯುಕ್ತ ಎಡಿಜಿಪಿ ಚಂದ್ರಶೇಖರ್ ಗೆ ಕೇಂದ್ರ ಸಚಿವ ಜೋಶಿ ಚಾಟಿ ಬೀಸಿದ್ದಾರೆ.
ಇದಕ್ಕೆ ಕುಮಾರಸ್ವಾಮಿಯೂ ತಿರುಗೇಟು ನೀಡಿದ್ದಾರೆ. ಅಂತಹ ಪತ್ರ ಬರೆದವರು ಯಾರು, ಆ ಪತ್ರಕ್ಕೆ ಎಡಿಜಿಪಿ ಸಹಿ ಹಾಕಿಸಿದ್ದು ಯಾರು ಅನ್ನೋದು ಗೊತ್ತು ಎಂದಿದ್ದಾರೆ ನಿಖಿಲ್ ಮತ್ತು ಕುಮಾರಸ್ವಾಮಿ.
ಆದರೆ ಎಡಿಜಿಪಿ ಚಂದ್ರಶೇಖರ್ ಅವರನ್ನು ಸಮರ್ಥನೆ ಮಾಡಿಕೊಂಡಿರುವುದು ಸಿಎಂ ಸಿದ್ಧರಾಮಯ್ಯ. ಅವರ ಪ್ರಕಾರ ಎಡಿಜಿಪಿ ಚಂದ್ರಶೇಖರ್ ಕುಮಾರಸ್ವಾಮಿ ಅವರಿಗೆ ಹಂದಿ ಎಂದಿಲ್ಲ. ಇನ್ನು ಈ ಪತ್ರದ ಹಿಂದೆ ತಮ್ಮ ಕೈವಾಡ ಇಲ್ಲ ಎಂದು ಖುದ್ದು ಡಿಸಿಎಂ ಡಿಕೆ ಶಿವಕುಮಾರ್ ಬಹಿರಂಗವಾಗಿ ಹೇಳಿದ್ದಾರೆ.



