ವಿನಯ್ ರಾಜ್ ಕುಮಾರ್ ಹಲವು ವರ್ಷಗಳಿಂದ ಸಿನಿಮಾ ಇಂಡಸ್ಟ್ರಿಯಲ್ಲಿದ್ದರೂ.. ದೊಡ್ಡ ಗೆಲುವು ಸಿಕ್ಕಿಲ್ಲ. ಇತ್ತೀಚೆಗೆ ತೆರೆ ಕಂಡ ಒಂದು ಸರಳ ಪ್ರೇಮಕಥೆಯೇ ವಿನಯ್ ಕಂಡ ಅತಿ ದೊಡ್ಡ ಹಿಟ್ ಎನ್ನಬಹುದು. ಇದೀಗ ವಿನಯ್ ರಾಜ್‌ಕುಮಾರ್ ನಟನೆಯ ‘ಪೆಪೆ’ ಸಿನಿಮಾ ಭಾರೀ ನಿರೀಕ್ಷೆ ಮೂಡಿಸಿದೆ. ಆಗಸ್ಟ್ 30ಕ್ಕೆ ಸಿನಿಮಾ ರಾಜ್ಯಾದ್ಯಂತ ಬಿಡುಗಡೆ ಆಗುತ್ತಿದೆ. ಇತ್ತೀಚೆಗೆ ರಿಲೀಸ್ ಆಗಿದ್ದ ಟ್ರೇಲರ್ ಭಯಂಕರ ನಿರೀಕ್ಷೆ ಹುಟ್ಟು ಹಾಕಿತ್ತು. ಟ್ರೇಲರ್ ರಿಲೀಸ್ ಮಾಡಿದ್ದ ಕಿಚ್ಚ ಸುದೀಪ್ ಅವರಂತೂ.. ಇಂತಹ ಚಿತ್ರಗಳನ್ನೇ ಮಾಡು ಎಂದು ಹೇಳಿದ್ದರು. ಚಿತ್ರದ ಬಿಡುಗಡೆ ಹತ್ತಿರವಾಗಿದ್ದು ಅಡ್ವಾನ್ಸ್ ಬುಕಿಂಗ್ ಶುರುವಾಗಿದೆ.
ಇದೇ ಮೊದಲ ಬಾರಿಗೆ ನಟ ವಿನಯ್ ರಾಜ್‌ಕುಮಾರ್ ರಗಡ್ ಲುಕ್‌ನಲ್ಲಿ ಎಂಟ್ರಿ ಕೊಡುತ್ತಿದ್ದಾರೆ. ಇದುವರೆಗೆ ಹೋಮ್ಲಿ ಮತ್ತು ಲವರ್ ಬಾಯ್ ಪಾತ್ರಗಳಲ್ಲಿಯೇ ಹೆಚ್ಚು ಕಾಣಿಸಿಕೊಂಡಿದ್ದ ವಿನಯ್ ಅವರಿಗೆ ʻಪೆಪೆʼಯಲ್ಲಿ ಬೇರೆಯದೇ ಶೇಡ್ ಇರುವ ಪಾತ್ರ. ಮಲೆನಾಡ ಭಾಗದಲ್ಲಿ ನಡೆಯುವ ರಿವೇಂಜ್ ಸ್ಟೋರಿ ಚಿತ್ರದಲ್ಲಿದೆ. ವಿನಯ್ ಇಲ್ಲಿ ಪೆಪೆ ಅಲಿಯಾಸ್ ಪ್ರದೀಪ ಆಗಿ ನಟಿಸುತ್ತಿದ್ದಾರೆ. 90ರ ದಶಕದ ಮಲೆನಾಡ ಭಾಗದ ರಕ್ತಿಸಿಕ್ತ ಅಧ್ಯಾಯವನ್ನು ಚಿತ್ರದಲ್ಲಿ ಕಟ್ಟಿಕೊಡಲಾಗಿದೆ. ಶ್ರೀಲೇಶ್ ನಾಯರ್ ನಿರ್ದೇಶನದ ಆಕ್ಷನ್ ಎಂಟರ್‌ಟ್ರೈನರ್ ಸಿನಿಮಾ ‘ಪೆಪೆ’.ಮಯೂರ್ ಪಟೇಲ್ , ನವೀನ್ ಡಿ ಪಡೀಲ್, ಯಶ್ ಶೆಟ್ಟಿ, ಕಾಜಲ್ ಕುಂದರ್, ಮೇದಿನಿ ಚಿತ್ರದ ತಾರಾಗಣದಲ್ಲಿದ್ದಾರೆ. ಪೂರ್ಣಚಂದ್ರ ತೇಜಸ್ವಿ ಸಂಗೀತ ಚಿತ್ರಕ್ಕಿದೆ.
ಕೆಆರ್‌ಜಿ ಸ್ಟುಡಿಯೋಸ್ ಸಂಸ್ಥೆ ‘ಪೆಪೆ’ ಸಿನಿಮಾ ವಿತರಣೆ ಹಕ್ಕು ಕೊಂಡುಕೊಂಡಿದೆ. ಕೆ. ಜಿ ರಸ್ತೆಯ ಸಂತೋಷ್ ಸೇರಿ ನಾಲ್ಕೈದು ಚಿತ್ರಮಂದಿರಗಳಲ್ಲಿ ‘ಪೆಪೆ’ ಅಡ್ವಾನ್ಸ್ ಬುಕ್ಕಿಂಗ್ ಶುರುವಾಗಿದೆ. ಪ್ರೇಕ್ಷಕರು ಈಗಾಗಲೇ ಟಿಕೆಟ್ ಕಾಯ್ದಿರಿಸುತ್ತಿದ್ದಾರೆ.
ವಿನಯ್ ಅವರ ಪೆಪೆಗೆ ಪೈಪೋಟಿ ಕೊಡ್ತಿರೋದು ದರ್ಶನ್ ಅಭಿನಯದ ಕರಿಯಾ ಸಿನಿಮಾ. ಹೌದು, ಕರಿಯಾ ಮತ್ತೊಮ್ಮೆ ರಿರಿಲೀಸ್ ಆಗುತ್ತಿದೆ. ದರ್ಶನ್ ಅವರ ಇತ್ತೀಚೆಗೆ ವೈರಲ್ ಆದ ಫೋಟೋಗಳಲ್ಲಿ ದರ್ಶನ್ ಕರಿಯಾ ಚಿತ್ರದ ಲುಕ್ʻನಲ್ಲೇ ಇದ್ದರು. ಅಂದ ಹಾಗೆ ಕರಿಯಾ ಮೊದಲನೇ ಸಲ ರಿಲೀಸ್ ಆಗಿ ಅಟ್ಟರ್ ಫ್ಲಾಪ್ ಆಗಿದ್ದ ಸಿನಿಮಾ. ಆದರೆ, ಕೆಲವೇ ತಿಂಗಳ ನಂತರ ರಿ-ರಿಲೀಸ್ ಆದಾಗ ಸೂಪರ್ ಡ್ಯೂಪರ್ ಹಿಟ್ ಆಗಿತ್ತು.
ಜೋಗಿ ಪ್ರೇಮ್ ಎಂದೇ ಖ್ಯಾತರಾಗಿರುವ ಪ್ರೇಮ್ ಅವರ ನಿರ್ದೇಶನದ ಮೊದಲ ಚಿತ್ರ ಕರಿಯಾ. ಚಿತ್ರದ ಹಾಡುಗಳಂತೂ ಗಲ್ಲಿ ಗಲ್ಲಿಯಲ್ಲೂ ಕೇಳುತ್ತಿದ್ದವು. ಕೆಂಚಾಲೋ.. ಮಂಚಾಲೋ.. ಮೂಲಕ ಹಿನ್ನೆಲೆ ಗಾಯಕ ಅಶ್ವತ್ಥ್, ಇಂತಹ ಹಾಡುಗಳನ್ನೂ ಹಾಡುತ್ತಾರೆ ಎಂಬ ರೀತಿ ಖ್ಯಾತರಾಗಿದ್ದರು.
ಅದಾದ ಮೇಲೆ ರೌಡಿಗಳು ಅಶ್ವತ್ಥ್ ಅವರನ್ನು ಅಭಿಮಾನದಿಂದ ಕರೆದುಕೊಂಡು ಹೋಗಿ ಆರ್ಕೆಸ್ಟ್ರಾದಲ್ಲಿ ಬೆಳಕು ಹರಿಯುವವರೆಗೂ ಅದೇ ಹಾಡನ್ನು ಹಾಡಿಸಿದ್ದು ಬೇರೆ ಕಥೆ. ಖುಷಿ ಖುಷಿಯಾಗಿ ಹೋಗಿದ್ದ ಅಶ್ವತ್ಥ್ ಅವರು, ಒನ್ಸ್ ಮೋರ್ ಎನ್ನುತ್ತಿದ್ದ ರೌಡಿಗಳಿಗೆ ಇಲ್ಲ ಎನ್ನಲಾಗದೆ.. ಅವರ ಕೈಲಿದ್ದ ಆಯುಧಗಳನ್ನು ನೋಡಿ ಹಾಡುತ್ತಲೇ ಇದ್ದರಂತೆ. ಅಷ್ಟೆಲ್ಲ ಕ್ರೇಜ್ ಹುಟ್ಟುಹಾಕಿದ್ದ ಕರಿಯಾ ಈಗ ಮತ್ತೊಮ್ಮೆ ರಿಲೀಸ್ ಆಗುತ್ತಿದೆ.
21 ವರ್ಷಗಳ ಹಿಂದೆ ತೆರೆಗೆ ಬಂದು ಸದ್ದು ಮಾಡಿತ್ತು. ಮುನಿಸ್ವಾಮಿ ಎಂಬ ವಿತರಕರು ‘ಕರಿಯ’ ಚಿತ್ರವನ್ನು ಹೊಸ ರೂಪದಲ್ಲಿ ಬಿಡುಗಡೆ ಮಾಡುತ್ತಿದ್ದಾರೆ. 4k ಡಿಜಿಟಲ್ ವರ್ಷನ್‌ನಲ್ಲಿ ಸಿನಿಮಾ ಪ್ರೇಕ್ಷಕರ ಮುಂದೆ ಬರಲಿದೆ. ಜೆ.ಪಿ ನಗರದ ಸಿದ್ದೇಶ್ವರ, ಮಾಗಡಿ ರಸ್ತೆಯ ಪ್ರಸನ್ನ, ತಾವರೆಕೆರೆ ಬಾಲಾಜಿ ಸೇರಿದಂತೆ ಕೆಲವೆಡೆ ಅಡ್ವಾನ್ಸ್ ಬುಕ್ಕಿಂಗ್ ನಡೆಯುತ್ತಿದೆ. ಪ್ರಸನ್ನ ಚಿತ್ರಮಂದಿರದ ಬೆಳಗ್ಗೆ 7.30ರ ಶೋ ಟಿಕೆಟ್ ಬಹುತೇಕ ಸೋಲ್ಡೌಟ್ ಆಗಿದೆ. ‘ದ ರೂಲರ್ಸ್’, ‘ಟೇಕ್ವಾಂಡೋ ಗರ್ಲ್’ ಎನ್ನುವ ಮತ್ತೆರಡು ಕನ್ನಡ ಸಿನಿಮಾ ಈ ವಾರ ಪ್ರೇಕ್ಷಕರ ಮುಂದೆ ಬರಲಿದೆ. ಇನ್ನು ದುನಿಯಾ ವಿಜಯ್ ನಿರ್ದೇಶಿಸಿ ನಟಿಸಿರುವ ‘ಭೀಮ’ ಹಾಗೂ ಗಣೇಶ್ ನಟನೆಯ ‘ಕೃಷ್ಣಂ ಪ್ರಣಯ ಸಖಿ’ ಚಿತ್ರಗಳು ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿವೆ.



