ಆಗಾಗ್ಗೆ ಇಂತಹ ಸಮೀಕ್ಷೆಗಳು ನಡೆಯುತ್ತಲೇ ಇರುತ್ತವೆ. ಇದೀಗ ಪೀಪಲ್ ಪಲ್ಸ್ ಎಂಬ ಸಂಸ್ಥೆ ಒಂದು ಸಮೀಕ್ಷೆ ಮಾಡಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ 2 ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ನಡೆದಿರುವ ಈ ಸಮೀಕ್ಷೆಯಲ್ಲಿ ಬಂದಿರುವ ಫಲಿತಾಂಶ, ಕಾಂಗ್ರೆಸ್ಸಿಗೆ ಶಾಕ್ ಕೊಟ್ಟಿದೆ. ಈಗ ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ನಡೆದರೆ ಫಲಿತಾಂಶ ಏನು ಬರಬಹುದು ಎಂಬುದು ಸಮೀಕ್ಷೆಯಲ್ಲಿ ಕೇಳಲಾಗಿರುವ ಮೂಲ ಪ್ರಶ್ನೆ.
ಹೈದರಾಬಾದ್ ಮೂಲದ ಪೀಪಲ್ಸ್ ಪಲ್ಸ್ ಆರ್ಗನೈಸೇಷನ್ ಎಂಬ ಸರ್ಕಾರೇತರ ಸಂಸ್ಥೆಯೊಂದು, ಕೊಮೆಡೊ ಟೆಕ್ನಾಲಜೀಸ್ ಎಂಬ ಸಂಸ್ಥೆಯೊಂದಿಗೆ ಸೇರಿ ಕರ್ನಾಟಕದ ಜಿಲ್ಲೆಗಳಲ್ಲಿ ಸಮೀಕ್ಷೆ ನಡೆಸಿದೆ. ಹಲವಾರು ಜಿಲ್ಲೆಗಳ 10,481 ಮತದಾರರ ಅಭಿಪ್ರಾಯಗಳನ್ನು ಸಂಗ್ರಹಿಸಿ, ಸಿದ್ಧಪಡಿಸಲಾಗಿರುವ ಈ ಸಮೀಕ್ಷಾ ವರದಿ ಪ್ರಕಾರ 2023ರ ರಿಸಲ್ಟ್, ಈಗ ಬಿಜೆಪಿ ಪರ ಬರಲಿದೆ.
ಯಡಿಯೂರಪ್ಪ ಇದ್ದಾಗಲೂ ಸಿಕ್ಕಿಲ್ಲ ಸರಳ ಬಹುಮತ :
ಕಳೆದ 20 ವರ್ಷಗಳಿಂದ ಕರ್ನಾಟಕ ರಾಜಕೀಯದಲ್ಲಿ ಪ್ರಧಾನ ಪಕ್ಷವಾಗಿರುವ ಬಿಜೆಪಿ, ಮೂರು ಬಾರಿ (2004, 2008 ಹಾಗೂ 2018) ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಮೂರೂ ಬಾರಿ ಪಕ್ಷದ ನೇತೃತ್ವ ವಹಿಸಿದ್ದವರು ಯಡಿಯೂರಪ್ಪ. ಆದರೆ, ಆ ಮೂರೂ ಸಂದರ್ಭಗಳಲ್ಲಿ ತನ್ನ ಸ್ವಂತ ಬಲದಲ್ಲಿ ಅಧಿಕಾರ ಪಡೆದಿಲ್ಲ. ಅಂದರೆ, 224 ಸೀಟುಗಳಲ್ಲಿ ಅಧಿಕಾರ ಹಿಡಿಯಲು ಬೇಕಾದ 113 ಸ್ಥಾನಗಳನ್ನು ಅದು ಗಳಿಸಿಲ್ಲ. ಆದರೆ, ಈಗ ಚುನಾವಣೆ ನಡೆದರೆ 136ರಿಂದ 159 ಸೀಟುಗಳು ಬಿಜೆಪಿಗೆ ಬಂದು ಇತಿಹಾಸದಲ್ಲೇ ಮೊದಲ ಬಾರಿಗೆ ಬಿಜೆಪಿ ಸ್ವಂತ ಬಲದ ಮೇಲೆ ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದಂತಾಗುತ್ತದೆ ಎಂದು ಸಮೀಕ್ಷೆ ತಿಳಿಸಿದೆ. ಅಂದರೆ ಯಡಿಯೂರಪ್ಪ ನಾಯಕತ್ವದಲ್ಲಿ ಮಾಡಲಾಗದ ಸಾಧನೆಯೊಂದನ್ನು, ವಿಜಯೇಂದ್ರ ನೇತೃತ್ವದಲ್ಲಿ ಮಾಡಲಿದೆ ಎಂಬುದು ಈ ಸಮೀಕ್ಷೆಯಲ್ಲಿ ಸಿಕ್ಕಿರುವ ಉತ್ತರ.
ಸಿದ್ದರಾಮಯ್ಯ ನಂ.1 ಆದರೆ.. ಕಾಂಗ್ರೆಸ್ ಕಥೆ..
ಈಗ ಅಧಿಕಾರದಲ್ಲಿರುವ ಕಾಂಗ್ರೆಸ್, 62ರಿಂದ 82 ಸ್ಥಾನಗಳನ್ನು ಗಳಿಸಬಹುದಷ್ಟೇ. ಅಲ್ಲದೆ, 2023ರ ಕರ್ನಾಟಕ ವಿಧಾನಸಭಾ ಚುನಾವಣೆಗೆ ಹೋಲಿಸಿದರೆ, ಆ ಪಕ್ಷದ ವೋಟ್ ಶೇರ್ ಶೇ. 40.3ಕ್ಕೆ ಇಳಿಯಲಿದೆ ಎಂದು ಹೇಳಲಾಗಿದೆ. 2023ರ ಚುನಾವಣೆಯಲ್ಲಿ ಕಾಂಗ್ರೆಸ್ಸಿಗೆ ಶೇ. 42.33 ವೋಟ್ ಶೇರ್ ಸಿಕ್ಕಿತ್ತು. ಇಂದು ಚುನಾವಣೆ ನಡೆದರೆ ಆಡಳಿತಾರೂಢ ಕಾಂಗ್ರೆಸ್ಸಿಗೆ ಈ ಮಟ್ಟದಲ್ಲಿ ಹಿನ್ನೆಡೆಯಾಗಲು, ರಾಜ್ಯಾದ್ಯಂತ ಎದ್ದಿರುವ ಆಡಳಿತ ವಿರೋಧಿ ಅಲೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಆದರೆ ಜನಪ್ರಿಯ ಸಿಎಂ ಸಿದ್ದರಾಮಯ್ಯ ಅವರೇ ಮುಂಚೂಣಿಯಲ್ಲಿದ್ದಾರೆ. ಸಮೀಕ್ಷೆ ಪ್ರಕಾರ ಹಾಲಿ ಸಿಎಂ ಸಿದ್ದರಾಮಯ್ಯನವರು ಎಂದೆಂದಿಗೂ ಕಾಂಗ್ರೆಸ್ ಪಕ್ಷದ ಮಾಸ್ ಲೀಡರ್ ಆಗಿಯೇ ಮುಂದುವರಿಯಲಿದ್ದಾರೆ. ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಿದರೆ ಮಾತ್ರ ಒಂದಿಷ್ಟು ಸೀಟುಗಳು ಕಾಂಗ್ರೆಸ್ಸಿಗೆ ಬರುತ್ತವೆ ಎಂದು ಹೇಳಿದೆ. ಒಂದು ವೇಳೆ, ಚುನಾವಣೆಯಾದರೆ ಕಾಂಗ್ರೆಸ್ಸಿನಲ್ಲಿ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಯಾರನ್ನು ನೋಡಲು ಬಯಸುತ್ತೀರಿ ಎಂದು ಸಮೀಕ್ಷೆಯಲ್ಲಿ ಕೇಳಲಾಗಿರುವ ಪ್ರಶ್ನೆಗೆ, ಶೇ. 29.2ರಷ್ಟು ಜನರು ಸಿದ್ದರಾಮಯ್ಯ ಎಂದು ಹೇಳಿದ್ದರೆ, ಶೇ. 10.7ರಷ್ಟು ಜನರು ಹಾಲಿ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೆಸರು ಹೇಳಿದ್ದಾರೆ. ಆದರೆ ಇದು ವಿಜಯೇಂದ್ರ ಅವರಿಗೆ ಕೇವಲ ಶೇ.5.2 ರಷ್ಟು ಮಾತ್ರವೇ ವೋಟ್ ಹಾಕಿದ್ಧಾರೆ. ಈಗಲೂ ಜನಾಭಿಪ್ರಾಯದ ಹೆಚ್ಚು ಪಾಲು ಯಡಿಯೂರಪ್ಪ ಅವರಿಗೆ ಇದೆ. ಯಡಿಯೂರಪ್ಪ ಅವರಿಗೆ ಶೇ.5.5 ರಷ್ಟು ಜನ ಬೆಂಬಲಿಸಿದ್ದಾರೆ. ಬೊಮ್ಮಾಯಿ ಪರ ಶೇ.3ರಷ್ಟು ಬೆಂಬಲ ಕಂಡಿದೆ. ಯಡಿಯೂರಪ್ಪ ಅವರ ಶೆ.5.5 ಹಾಗೂ ವಿಜಯೇಂದ್ರ ಅವರ ಶೆ.5.2ರಷ್ಟು ಬೆಂಬಲವನ್ನು ಒಗ್ಗೂಡಿಸಿದರೆ ಅದು ಸಿದ್ದರಾಮಯ್ಯ ಅವರಿಗೆ ಸರಿಯಾಗುತ್ತದೆ.
ಹಾಗಂತ ಜನರ ಕಣ್ಣಲ್ಲಿ ಸರ್ಕಾರ ತೀರಾ ಕಳಪೆ ಏನಲ್ಲ. ಶೇ.48ರಷ್ಟು ಜನ ಸರ್ಕಾರಕ್ಕೆ ಉತ್ತಮ, ಅತ್ಯುತ್ತಮ ಎಂದು ಮತ ನೀಡಿದ್ದಾರೆ. ಕಳಪೆ ಎಂದಿರುವುದು ಶೇ.51ರಷ್ಟು ಜನ ಮಾತ್ರ. ಎರಡೂ ಮತಗಳ ನಡುವಿನ ಅಂತರ ಕೇವಲ ಶೇ.3ರಷ್ಟು.
ಇನ್ನು ಜೆಡಿಎಸ್ ಕೇವಲ 6-8 ಸ್ಥಾನ ಮಾತ್ರ ಗೆಲ್ಲಲಿದೆ.
ಇನ್ನು ಗ್ಯಾರಂಟಿ ಯೋಜನೆಗಳಲ್ಲಿ ಗೃಹಲಕ್ಷ್ಮಿಗೆ ನಂ.1 ಸ್ಥಾನ ಸಿಕ್ಕಿದ್ದರೆ, ನಂತರ ಕ್ರಮವಾಗಿ ಶಕ್ತಿ, ಅನ್ನಭಾಗ್ಯ, ಗೃಹ ಜ್ಯೋತಿ ಹಾಗೂ ಯುವನಿಧಿ ಇವೆ. ಶೇ.3ರಷ್ಟು ಜನರಿಗೆ ಗ್ಯಾರಂಟಿ ಯೋಜನೆಗಳ ಬಗ್ಗೆ ಮಾಹಿತಿಯೇ ಇಲ್ಲ.
ಆದರೆ ಪೀಪಲ್ ಪಲ್ಸ್ ಸಮೀಕ್ಷೆ 2023ರಲ್ಲಿ ಚುನಾವಣೆಯಲ್ಲಿ ಕಾಂಗ್ರೆಸ್ 99-105 ಸ್ಥಾನ ಗೆಲ್ಲಲಿದೆ ಎಂದು ಹೇಳಿತ್ತು. ಬಿಜೆಪಿ ಆಗ 90-100 ಸ್ಥಾನ ಗೆಲ್ಲುವ ಸುಳಿವು ನೀಡಿತ್ತು. ಜೆಡಿಎಸ್ ಪಕ್ಷಕ್ಕೆ 27 ಸ್ಥಾನ ಕೊಟ್ಟಿತ್ತು. ಅಂತಿಮವಾಗಿ ಕಾಂಗ್ರೆಸ್ 135 ಸೀಟು ಗೆದ್ದಿತ್ತು. ಈಗ ಇದನ್ನು ನಂಬಬಹುದೇ ಎಂಬ ಪ್ರಶ್ನೆಯೂ ಇದೆ.



