ರಾಜ್ಯದಲ್ಲಿ UPI ಪೇಮೆಂಟ್ ಗದ್ದಲಕ್ಕೆ ಇನ್ನೂ ಬ್ರೇಕ್ ಬಿದ್ದಿಲ್ಲ. ಸಣ್ಣ ಸಣ್ಣ ವ್ಯಾಪಾರಿಗಳು UPI ಪೇಮೆಂಟ್ ಪಡೆಯುವುದಕ್ಕೆ ಹೆದರುತ್ತಿದ್ದಾರೆ. ಎಷ್ಟೋ ಜನ ಕ್ಯೂಆರ್ ಕೋಡ್ ಬೋರ್ಡ್ʻನ್ನೇ ತೆಗೆದಿಟ್ಟಿದ್ದಾರೆ. ಕಸ್ಟಮರುಗಳು ಕ್ಯಾಷ್ ಇಡುವುದನ್ನು ಬಿಡುತ್ತಿದ್ದಾರೆ. ಎಷ್ಟೋ ಜನ.. ಪರ್ಸಿನಲ್ಲಿ ಒಂದು ರೂ ಕೂಡಾ ಕ್ಯಾಷ್ ಇಟ್ಟುಕೊಳ್ಳದೆ ಓಡಾಡುತ್ತಾರೆ. ಮೊಬೈಲ್ ಇದ್ರೆ ಸಾಕು ಎನ್ನುತ್ತಿದ್ದಾರೆ. ಹೀಗಿರುವಾಗಲೇ.. UPI ಪೇಮೆಂಟ್ ಮಾಡಿದವರಿಗೂ ಟ್ಯಾಕ್ಸ್ ಬೀಳುವ ಬಗ್ಗೆ RBI ಸುಳಿವು ನೀಡಿದೆ.
ಸದ್ಯ ಉಚಿತವಾಗಿ ಲಭ್ಯವಿರುವ ಯುಪಿಐ ವ್ಯವಸ್ಥೆಗೂ ಶುಲ್ಕ ಜಾರಿ ಮಾಡಲಾಗುವುದು ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಸುಳಿವು ನೀಡಿದೆ.
ಕಾರ್ಯಕ್ರಮವೊಂದಲ್ಲಿ ಮಾತನಾಡಿರುವ ಆರ್‌ಬಿಐನ ಗವರ್ನರ್ ಸಂಜಯ್ ಮಲ್ಹೋತ್ರಾ ʻʻ ಸದ್ಯ ನಾವು ಯುಪಿಐ ಸೇವೆಗಳಿಗೆ ಯಾವುದೇ ಶುಲ್ಕ ವಿಧಿಸುತ್ತಿಲ್ಲ. ಇದಕ್ಕೆ ತಗಲುವ ವೆಚ್ಚವನ್ನು ನಾವು ಬ್ಯಾಂಕ್ ಮತ್ತು ವ್ಯವಸ್ಥೆಯ ಇತರೆ ಭಾಗೀದಾರ ಸಂಸ್ಥೆಗಳಿಗೆ ಸಬ್ಸಿಡಿ ನೀಡುವ ಮೂಲಕ ಭರಿಸುತ್ತಿದ್ದೇವೆ. ಯಾವುದೇ ಮಹತ್ವದ ಮೂಲಸೌಕರ್ಯ ಫಲಪ್ರದವಾಗಿರಬೇಕು. ಯಾವುದೇ ವ್ಯವಸ್ಥೆ ನಿಜವಾಗಿಯೂ ಸುಸ್ಥಿರವಾಗಿರಬೇಕಾದರೆ ಅದರ ವೆಚ್ಚವನ್ನು ಎಲ್ಲರೂ ಒಟ್ಟಾಗಿ ಇಲ್ಲವೇ ಬಳಕೆದಾರ ಪಾವತಿಬೇಕುʼʼ ಎಂದಿದ್ದಾರೆ.
ಇದರಲ್ಲಿ UPI ಪೇಮೆಂಟ್ ಶುಲ್ಕದ ಸುಳಿವು ಎಲ್ಲಿದೆ..?
ಇದು RBI ಗವರ್ನರ್ ಭಾಷಣದ ಆರಂಭ ಮಾತ್ರವೇ. ಮುಂದುವರೆಯುತ್ತಾ ಅವರು ಸರ್ಕಾರವು ಶೂನ್ಯ ಮರ್ಚೆಂಟ್ ಡಿಸ್ಕೌಂಟ್ ದರ ನೀತಿ ಪಾಲಿಸುತ್ತಿದೆ. ಅಂದರೆ ಯುಪಿಐ ವ್ಯವಸ್ಥೆಗೆ ಯಾವುದೇ ಆದಾಯ ಇಲ್ಲ. ಪರಿಣಾಮ ಹಾಲಿ ಜಾರಿಯಲ್ಲಿರುವ ಇಂಥ ವ್ಯವಸ್ಥೆ ದೀರ್ಘಕಾಲ ಆರ್ಥಿಕವಾಗಿ ಸುಸ್ಥಿರವಲ್ಲ ಎಂದು ಈ ಉದ್ಯಮ ವಲಯ ಪದೇ ಪದೇ ಹೇಳುತ್ತಲೇ ಬಂದಿದೆ ಎಂದೂ ಹೇಳಿದ್ದಾರೆ. ಅಂದರೆ.. ʻʻಝೀರೋ ಮರ್ಚೆಂಟ್ ಪಾಲಿಸಿʼʼಯನ್ನು ತೆಗೆಯುವ ಬಗ್ಗೆ ಸುಳಿವು ಕೊಟ್ಟಿದ್ದಾರೆ. ಬಳಕೆದಾರರ ಶುಲ್ಕ ವಿಧಿಸುವ ಕ್ಲೂ ಬಿಟ್ಟಿದ್ದಾರೆ.
ಏನಿದು ಬಳಕೆದಾರರ ಶುಲ್ಕ..?
ನಾವು ಯಾವುದೇ ಮಳಿಗೆಯಲ್ಲಿ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಬಳಸಿ ಹಣ ಪಾವತಿ ಮಾಡಿದರೆ ಅದಕ್ಕೆ ಬ್ಯಾಂಕ್‌ಗಳು ನಿಗದಿತ ಶುಲ್ಕ ವಿಧಿಸುತ್ತದೆ. 2019ರವರೆಗೂ ರುಪೇ ಡೆಬಿಟ್ ಕಾರ್ಡ್ ಮತ್ತು ಭೀಮ್-ಯುಪಿಐ ಪಾವತಿಗೆ ಶೇ.1ರಿಂದ ಶೇ.3ರಷ್ಟು ಮರ್ಚೆಂಟ್ ಡಿಸ್ಕೌಂಟ್ ಶುಲ್ಕ ವಿಧಿಸಲಾಗುತ್ತಿತ್ತು. ಆದರೆ 2019ರಲ್ಲಿ ಸರ್ಕಾರ ಇದನ್ನು ತೆಗೆದು ಹಾಕಿತ್ತು. ಹೀಗಾಗಿ ಯುಪಿಐ ಪಾವತಿ ಪೂರ್ಣ ಉಚಿತವಾಗಿತ್ತು. ಇದು ಪ್ರತಿ ಬಾರಿ ನಾವು ಯುಪಿಐ ಮೂಲಕ ಮಾಡಿದ ಪಾವತಿ ಅಥವಾ ಸ್ವೀಕಾರಕ್ಕೆ ಬಳಸುವ ಶುಲ್ಕ ಅಲ್ಲ. ಬದಲಾಗಿ ಮಾಸಿಕ, 3,6 ಅಥವಾ 12 ತಿಂಗಳಿಗೊಮ್ಮೆ ನಾವು ಯುಪಿಐ ವ್ಯವಸ್ಥೆ ಬಳಕೆ ಮಾಡುತ್ತಿರುವುದಕ್ಕೆ ವಿಧಿಸುವ ಬಳಕೆದಾರರ ಶುಲ್ಕ.
ಯಾವ ರೀತಿ ವಿಧಿಸಬಹುದು..?
ಈ ಲೆಕ್ಕದ ಪ್ರಕಾರ ನಾವು ಗೂಗಲ್ ಪೇ, ಫೋನ್ ಪೇ, ವಾಟ್ಸಪ್.. ಮತ್ತಿತರ ಯಾವುದೇ ಆಪ್ ಮೂಲಕ ದುಡ್ಡು ಟ್ರಾನ್ಸ್ʻಫರ್ ಮಾಡಿದರೂ.. ಕೇವಲ ದುಡ್ಡು ವರ್ಗಾವಣೆಯಾಗುತ್ತದೆಯೇ.. ಹೊರತು.. ಯಾವುದೇ ಫೀ ಕಟ್ಟುವುದಿಲ್ಲ. ಇನ್ನು ಮುಂದೆ ಕಟ್ಟಬೇಕಾಗಿ ಬರಬಹುದು.. ಬ್ಯಾಂಕಿನಲ್ಲಿ ಅಕೌಂಟ್ ಇರುವ ಕಾರಣಕ್ಕೆ ವರ್ಷಕ್ಕೆ ಇಷ್ಟು ಎಂದು ಹಣ ಕಟ್ ಆಗುತ್ತದಲ್ಲಾ.. ಅದೇ ಮಾದರಿಯಲ್ಲಿ UPI ಶುಲ್ಕವೂ ಬರಬಹುದು. ಜಾಸ್ತಿ ದಿನಗಳೇನೂ ಇಲ್ಲ. ಶೀಘ್ರದಲ್ಲೇ ಬರಲಿದೆ.



