ತೆಲುಗು ನಟರಲ್ಲಿ ಬಹುತೇಕರಿಗೆ ಕನ್ನಡ ಅರ್ಥವಾಗುತ್ತದೆ. ಮಾತನಾಡುವುದಕ್ಕೆ ಬರಲ್ಲ, ಅಷ್ಟೇ. ಪವನ್ ಕಲ್ಯಾಣ್ ಕೂಡಾ ಅದಕ್ಕೆ ಹೊರತಲ್ಲ. ತೆಲುಗು ಪವರ್ ಸ್ಟಾರ್, ಈಗ ಆಂಧ್ರ ಪ್ರದೇಶದ ಉಪ ಮುಖ್ಯ ಮಂತ್ರಿಯೂ ಆಗಿರುವ ಪವನ್ ಕಲ್ಯಾಣ್ ಬೆಂಗಳೂರಿನಲ್ಲಿ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಬಳಿಕ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರೊಟ್ಟಿಗೆ ವಿಧಾನಸೌಧದಲ್ಲಿ ಜಂಟಿ ಪತ್ರಿಕಾಗೋಷ್ಠಿಯನ್ನು ಸಹ ನಡೆಸಿದ ಪವನ್ ಕಲ್ಯಾಣ್ ಕುವೆಂಪು ಮತ್ತು ಡಾ.ರಾಜ್ ಅವರನ್ನು ನೆನಪಿಸಿಕೊಂಡಿದ್ದಾರೆ.
ವಿಶೇಷ ಅಂದ್ರೆ ಕುವೆಂಪು ಅವರ ಒಂದು ಕವಿತೆಯನ್ನು ಓದಿದ ಪವನ್ ಕಲ್ಯಾಣ್, ಡಾ. ರಾಜ್ ಅವರ ಗಂಧದ ಗುಡಿ ಸಿನಿಮಾ ನೆನಪಿಸಿಕೊಂಡಿದ್ದಾರೆ. ಗಂಧದ ಗುಡಿ ಹೆಸರು ಹೇಳಿ ತಮ್ಮ ಸೋದರಳಿಯ ಅಲ್ಲು ಅರ್ಜುನ್ ಅವರಿಗೆ ಟಾಂಟ್ ಕೊಟ್ಟಿದ್ದಾರೆ. ಅವರ ಮಾತುಗಳು ಇಲ್ಲಿವೆ.
‘ಕರ್ನಾಟಕ ಮತ್ತು ಆಂಧ್ರ ಇಷ್ಟು ಹತ್ತಿರವಿದ್ದು, ಗಡಿಗಳನ್ನು ಹಂಚಿಕೊಂಡಿರುವ ರಾಜ್ಯಗಳು. ನಾವು ಇಷ್ಟು ಹತ್ತಿರವಿದ್ದರೂ ಸಹ ನಾನು ಇಂದು ಇಲ್ಲಿ ಕನ್ನಡದಲ್ಲಿ ಮಾತನಾಡಲು ಆಗುತ್ತಿಲ್ಲ. ಅದಕ್ಕೆ ಬೇಸರವಾಗುತ್ತಿದೆ. ನಾನು ಕನ್ನಡ ಕಲಿಯಬಹುದಿತ್ತು ಆದರೆ ನಾನು ಇನ್ನೂ ಕಲಿತಿಲ್ಲ ಎಂಬುದಕ್ಕೆ ಬೇಸರವಿದೆ. ನನಗೆ ಕನ್ನಡ ಭಾಷೆಯ ಬಗ್ಗೆ ಅಪಾರ ಗೌರವವಿದೆ, ಆದರೆ ಇಂಗ್ಲೀಷ್ ನಲ್ಲಿ ಮಾತನಾಡುತ್ತಿರುವಕ್ಕೆ ಬೇಸರವಿದೆ, ನಾನು ಕನ್ನಡ ಕಲಿತಿದ್ದರೆ, ಇವತ್ತು ನನ್ನ ಹೃದಯದಿಂದ ಮಾತನಾಡಬಹುದಿತ್ತು’ ಎಂದಿದ್ದಾರೆ ಪವನ್ ಕಲ್ಯಾಣ್.
ಇದೇ ವೇಳೆ ಕುವೆಂಪು ಅವರ ಕವನವನ್ನು ನೆನಪಿಸಿಕೊಂಡ ಪವನ್ ಕಲ್ಯಾಣ್ ‘ನಾನು ಈ ಸಭೆಗಾಗಿ ತಯಾರಾಗುತ್ತಿರುವಾಗ ನನ್ನ ಕಚೇರಿ ಸಿಬ್ಬಂದಿ ಕುವೆಂಪು ಅವರ ಕವನವೊಂದನ್ನು ನನಗೆ ನೀಡಿದರು. ಅದರ ಕೆಲವು ಸಾಲು ಓದಿದೊಡನೆ ನನಗೆ ಅದ್ಭುತವೆನಿಸಿತು. ‘ಅರಣ್ಯಕ್ಕೆ ಹಾಡು ಹಾಡುವ ಮುನ್ನ ನಾನು ನನ್ನ ಮನದ ಮುಂದೆ…’ ಎನ್ನುತ್ತಾ ಎರಡು ಸಾಲು ಹೇಳಿದ ಪವನ್ ಕಲ್ಯಾಣ್, ನಂತರ ಅದರ ಅರ್ಥವನ್ನು ಇಂಗ್ಲೀಷ್ನಲ್ಲಿ ಹೇಳಿದರು. ಕುವೆಂಪು ಅವರಿಗೆ ತಲೆಬಾಗಿದರು. ‘ಕುವೆಂಪು ಅವರ ಈ ಸಾಲುಗಳನ್ನು ಓದಿದಾಗ ನಾನು ಕನ್ನಡ ಕಲಿತಿದ್ದಿದ್ದರೆ ಎಷ್ಟು ಒಳ್ಳೆಯದಿತ್ತು ಎನಿಸಿತು. ಇಂದು ನಾನು ಹಾಜರಾಗಿರುವ ಈ ಸಭೆ, ನಾನು ಕನ್ನಡ ಕಲಿಯಲು ನನಗೆ ಸ್ಪೂರ್ತಿ ನೀಡಿದೆ. ನನ್ನನ್ನು ಕನ್ನಡ ಕಲಿಯುವತ್ತ ಸೆಳೆದಿದೆ’ ಎಂದರು.
ಅಷ್ಟೇ ಅಲ್ಲ, ತಮ್ಮ ಚಿತ್ರಗಳಿಗೆ ಕರ್ನಾಟಕದಲ್ಲಿ ಸಿಗುವ ಯಶಸ್ಸು, ಅಭಿಮಾನಿಗಳ ಪ್ರೀತಿಯನ್ನು ಕೂಡಾ ಸ್ಮರಿಸಿದರು ಪವನ್ ಕಲ್ಯಾಣ್. ಪವನ್ ಕಲ್ಯಾಣ್ ಅವರ ಅಟ್ಟರ್ ಫ್ಲಾಪ್ ಚಿತ್ರ ಕರ್ನಾಟಕದಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತದೆ. ಕರ್ನಾಟಕದ ಜನ ನನಗೆ ತುಂಬಾ ಪ್ರೀತಿ ತೋರಿಸಿದ್ದಾರೆ. ಅವರ ಭಾಷೆಯನ್ನು ಕಲಿಯುವ ಮೂಲಕ ಅವರಿಗೆ ನನ್ನ ಪ್ರೀತಿಯನ್ನು ಮರಳಿ ತಿಳಿಸಬೇಕಿದೆ ಎಂದ ಪವನ್ ಕಲ್ಯಾಣ್ ನಾನು ಅರಣ್ಯವನ್ನು ಗಮನಿಸಲು ಪ್ರಾರಂಭಿಸಿದ್ದು, ಕನ್ನಡ ಕಂಠೀರವ ಡಾ ರಾಜ್ಕುಮಾರ್ ಅವರ ‘ಗಂಧದ ಗುಡಿ’ ಸಿನಿಮಾ ನೋಡಿದ ಮೇಲೆ. 40 ವರ್ಷದ ಹಿಂದೆ ಅರಣ್ಯವನ್ನು ರಕ್ಷಿಸುವವ ಹೀರೋ ಆದರೆ ಈಗ ಅರಣ್ಯವನ್ನು ದೋಚುವವನು ಹೀರೋ ಎಂದು ಪುಷ್ಪ ಚಿತ್ರದ ಬಗ್ಗೆ ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದರು.
ಅಲ್ಲು ಅರ್ಜುನ್, ಒಂದು ರೀತಿಯಲ್ಲಿ ಮೆಗಾ ಫ್ಯಾಮಿಲಿಯ ಸದಸ್ಯರೇ. ಚಿರಂಜೀವಿ ಅವರ ತಮ್ಮ ಪವನ್ ಕಲ್ಯಾಣ್. ಆದರೆ ಇತ್ತೀಚೆಗೆ ಯಶಸ್ವಿಯಾಗಿರುವ, ಭಾಗ 2 ರೂಪದಲ್ಲಿಯೂ ಬರುತ್ತಿರುವ ಪುಷ್ಪ ಚಿತ್ರದ ಹೀರೋ ರಕ್ತಚಂದನದ ಕಳ್ಳ. ಆ ಪಾತ್ರದಲ್ಲಿ ನಟಿಸಿ ನ್ಯಾಷನಲ್ ಅವಾರ್ಡ್ ಕೂಡಾ ಪಡೆದಿದ್ದಾರೆ ಅಲ್ಲು ಅರ್ಜುನ್. ಸಹಜವಾಗಿಯೇ ರಕ್ತಚಂದನದ ಮರಗಳ ಕಳ್ಳಸಾಗಣೆ ನಿರ್ಬಂಧಕ್ಕೆ ಏನೇನು ಕ್ರಮ ಕೈಗೊಳ್ಳಬೇಕು ಎಂಬ ಕುರಿತೇ ರಾಜ್ಯ ಸರ್ಕಾರದೊಂದಿಗೆ ಸಭೆ ನಡೆಸಿದ್ದ ಪವನ್ ಕಲ್ಯಾಣ್ ಅವರಿಗೆ ಪುಷ್ಪ ಚಿತ್ರವನ್ನು ಟೀಕೆ ಮಾಡುವುದು ಅನಿವಾರ್ಯವೂ ಆಗಿತ್ತು.
ಕರ್ನಾಟಕದ ಅರಣ್ಯ ಇಲಾಖೆ ಜೊತೆಗೆ ಆನೆ ಹಿಡಿಯುವ ಹಾಗೂ ಪಳಗಿಸುವ ಹಾಗೂ ಇನ್ನೂ ಏಳು ವಿಷಯಗಳಿಗೆ ಸಂಬಂಧಿಸಿದಂತೆ ತಿಳುವಳಿಕೆ ಒಪ್ಪಂದಕ್ಕೆ ಪವನ್ ಕಲ್ಯಾಣ್ ಹಾಗೂ ಈಶ್ವರ್ ಖಂಡ್ರೆ ಸಹಿ ಮಾಡಿದ್ದಾರೆ. ಆನೆ ಪಳಗಿಸುವ ತರಬೇತಿ, ಗಡಿ ಭಾಗದ ಅರಣ್ಯ ರಕ್ಷಣೆ, ರಕ್ತ ಚಂದನ ಕಳ್ಳಸಾಗಣೆ ತಡೆ, ಅರಣ್ಯ ರಕ್ಷಣೆಗೆ ಐಟಿ ಬಳಕೆ, ಇಕೊ ಟೂರಿಸಮ್, ವನ್ಯ ಜೀವಿಗಳ ಕಳ್ಳಸಾಗಣೆ ವಿಷಯಗಳ ಬಗ್ಗೆ ಆಂಧ್ರ ಹಾಗೂ ಕರ್ನಾಟಕ ಒಪ್ಪಂದ ಮಾಡಿಕೊಂಡಿದೆ. ಆನೆಗಳನ್ನು ಪಳಗಿಸಲು ಕರ್ನಾಟಕದಿಂದ ತರಬೇತಿ ಪಡೆದ ಆನೆಗಳನ್ನು ಕಳುಹಿಸುವುದಕ್ಕೆ ಸಚಿವ ಈಶ್ವರ್ ಖಂಡ್ರೆ ಒಪ್ಪಿಗೆ ಸೂಚಿಸಿದ್ದಾರೆ.



