ರೇಣುಕಾಸ್ವಾಮಿ ಪ್ರಕರಣ ನಡೆದಿದ್ದೇ ಪವಿತ್ರಾ ಗೌಡ ಅವರಿಗಾಗಿ. ಆದರೆ, ರೇಣುಕಾಸ್ವಾಮಿ ಕೊಲೆ ಕೇಸ್ ನಡೆಯುವುದಕ್ಕೆ ಮೊದಲು ಪವಿತ್ರಾ ಗೌಡ ಮತ್ತು ದರ್ಶನ್ ದೂರವಾಗಿದ್ದರು ಎಂಬ ವಿಷಯ ಆರೋಪಪಟ್ಟಿಯಲ್ಲಿ ಬಹಿರಂಗವಾಗಿದೆ. 8 ಪುಟಗಳ ಸ್ವ-ಇಚ್ಚಾ ಹೇಳಿಕೆಯಲ್ಲಿ ಆರೋಪಿ ನಂಬರ್ 1 ಆಗಿರುವ ಪವಿತ್ರಾ ಗೌಡ ಸ್ವ-ಇಚ್ಚಾ ಹೇಳಿಕೆ ನೀಡಿದ್ದಾರೆ. 3849 ರಿಂದ 3851 ಪುಟದವರೆಗೆ ತಾವು ರೇಣುಕಾಸ್ವಾಮಿಯ ಕೊಲೆ ನಡೆದ ದಿನ ನಡೆದ ಎಲ್ಲ ವಿವರವನ್ನೂ ಬಾಯ್ಬಿಟ್ಟಿದ್ದಾರೆ.
ಈ ಹೇಳಿಕೆ ಪ್ರಕಾರ ರೇಣುಕಾಸ್ವಾಮಿ ಪ್ರಕರಣಕ್ಕೆ ಮುನ್ನ ದರ್ಶನ್ ಮತ್ತು ಪವಿತ್ರಾ ಗೌಡ ದೂರವಾಗಿದ್ದರು. ವಿಷಯ ಏನೆಂದರೆ, ದರ್ಶನ್ ಮತ್ತು ಪವಿತ್ರಾ ಗೌಡ ಅವರು ದೂರವಾಗುವುದಕ್ಕೆ ಕಾರಣ ವಿಜಯಲಕ್ಷ್ಮಿ ದರ್ಶನ್. ಹೌದು, ದರ್ಶನ್ ಅವರ ಧರ್ಮಪತ್ನಿ ವಿಜಯಲಕ್ಷ್ಮಿ ಅವರ ಜೊತೆ ದುಬೈಗೆ ಹೋಗಿ ಮ್ಯಾರೇಜ್ ಆನಿವರ್ಸರಿ ಆಚರಿಸಿದ್ದಕ್ಕೆ, ಪವಿತ್ರಾ ಗೌಡ ಮುನಿಸಿಕೊಂಡಿದ್ದರು ಎಂಬ ಅಂಶ ಬಹಿರಂಗವಾಗಿದೆ. ರೇಣುಕಾಸ್ವಾಮಿ ಕೊಲೆ ಆಗುವುದಕ್ಕೂ ಮೊದಲು ಒಂದು ತಿಂಗಳಿಂದ ದರ್ಶನ್ ಮತ್ತು ಪವಿತ್ರಾ ಗೌಡ ದೂರವಾಗಿದ್ದರಂತೆ.
ಇದೇ ವರ್ಷ ಮೇ 19 ರಂದು ದರ್ಶನ್ ಪತ್ನಿ ವಿಜಯಲಕ್ಷ್ಮೀ ಜೊತೆ ತಮ್ಮ ಮದುವೆ ವಾರ್ಷಿಕೋತ್ಸವ ಆಚರಿಸಿಕೊಳ್ಳಲು ದುಬೈಗೆ ಹೋಗಿದ್ದರು. ಆದರೆ ಈ ವಿಷಯ ನನಗೆ ಗೊತ್ತಿರಲಿಲ್ಲ. ನನಗೆ ತಿಳಿಸದೇ ಪತ್ನಿಯೊಂದಿಗೆ ದುಬೈಗೆ ಹೋಗಿದ್ದರಿಂದ ನಾನು ಕೋಪಗೊಂಡಿದ್ದೆ. ದರ್ಶನ್ ಅವರೊಂದಿಗೆ ಮಾತನಾಡುವುದನ್ನೇ ನಿಲ್ಲಿಸಿದ್ದೆ ಎಂದು ತಮ್ಮ ಸ್ವಇಚ್ಛಾ ಹೇಳಿಕೆಯಲ್ಲಿ ದಾಖಲಿಸಿದ್ದಾರೆ ಪವಿತ್ರಾ ಗೌಡ.
ಇದರೊಂದಿಗೆ ಫೆಬ್ರವರಿಯಿಂದ ಗೌತಮ್ ಕೆ ಎಸ್ ಎಂಬ ಖಾತೆಯಿಂದ ನನಗೆ ನಿರಂತರವಾಗಿ ಅಶ್ಲೀಲ ಸಂದೇಶ, ಫೋಟೋಗಳು ಬರುತ್ತಿರುವ ಬಗ್ಗೆಯೂ ಪವಿತ್ರಾಗೌಡ ತಮ್ಮ ಹೇಳಿಕೆಯಲ್ಲಿ ಉಲ್ಲೇಖಿಸಿದ್ದಾರೆ.
ಅಷ್ಟೇ ಅಲ್ಲ, ದರ್ಶನ್ ಸ್ನೇಹ ಬೆಳೆಸೋದಕ್ಕೂ ಮೊದಲು ಪವಿತ್ರಾ ಗೌಡ ಅವರಿಗೆಗೆ ಮದುವೆಯಾಗಿತ್ತು. ವಿಚ್ಛೇದನವೂ ಆಗಿತ್ತು. ಒಬ್ಬ ಮಗಳಿದ್ದರು. ಈ ಬಗ್ಗೆಯೂ ಕೂಡ ಪವಿತ್ರ ಗೌಡ ತಮ್ಮ ಹೇಳಿಕೆ ನೀಡುವಾಗ ತಿಳಿಸಿದ್ದಾರೆ. ಮೊದಲ ಪತಿಯಿಂದ ದೂರವಾದ ಬಳಿಕ ನಟನೆಯತ್ತ ಹೊರಳಿದ್ದ ಪವಿತ್ರಾ ಗೌಡ ಬುಲ್ ಬುಲ್ ಚಿತ್ರದ ಅಡಿಷನ್ಗಾಗಿ ಹೋಗಿದ್ದರು. ಅಲ್ಲಿ ಅವಕಾಶ ಸಿಕ್ಕಿರಲಿಲ್ಲ. ರಚಿತಾ ರಾಮ್ ಆಯ್ಕೆಯಾಗಿದ್ದರು.
ಆದರೆ, ದರ್ಶನ್ ಅವರ ನಂಬರ್ ಸಿಕ್ಕಿತು. ಹೀಗೆ ಮಾತನಾಡುತ್ತಿದ್ದಾಗ ಸಲಿಗೆ ಬೆಳೆದು, ಇಬ್ಬರ ನಡುವೆ ಸಂಬಂಧವೂ ಬೆಳೆಯಿತು ಎಂದಿರುವ ಪವಿತ್ರಾ ಗೌಡ, ಅದಾದ ನಂತರ ವಿಜಯಲಕ್ಷ್ಮಿ ಅವರ ಮನೆಯಿಂದ ಒಂದೂವರೆ ಕಿಮೀ ದೂರದಲ್ಲಿ ನನಗೂ ಮನೆ ಮಾಡಿಕೊಟ್ಟಿದ್ದರು ದರ್ಶನ್ ಎಂದು ಹೇಳಿಕೆಯಲ್ಲಿ ಉಲ್ಲೇಖಿಸಿದ್ದಾರೆ. ಪವಿತ್ರಾ ಗೌಡ ಅವರ ಜೊತೆ ಲಿವ್ ಇನ್ ಸಂಬಂಧ ಇದ್ದದ್ದು ನಿಜ ಎಂದು ದರ್ಶನ್ ಕೂಡಾ ಒಪ್ಪಿಕೊಂಡಿದ್ದಾರೆ.
ದರ್ಶನ್ ಮತ್ತು ಪವಿತ್ರಾ ಗೌಡ ಅವರ ವಿಡಿಯೋ ವಾರ್ ಶುರುವಾಗಿದ್ದನ್ನು ನೆನಪಿಸಿಕೊಂಡಿದ್ದಾರೆ ದರ್ಶನ್ ಫ್ಯಾನ್ಸ್. ದರ್ಶನ್ ಜೊತೆಗಿದ್ದ ವಿಡಿಯೋಗೆ 10 ವರ್ಷದ ಸಂಬಂಧ ಎಂದು ಕ್ಯಾಪ್ಷನ್ ನೀಡಿದ್ದರು ಪವಿತ್ರಾ ಗೌಡ. ಅದಕ್ಕೆ ವಿಜಯಲಕ್ಷ್ಮಿ ಬಹಿರಂಗವಾಗಿಯೇ ಸಿಡಿದೆದ್ದಿದ್ದರು. ಸೋಷಿಯಲ್ ಮೀಡಿಯಾದಲ್ಲಿಯೇ ಬೈದಾಡಿಕೊಂಡಿದ್ದರು. ಅದಾದ ನಂತರವೇ ದರ್ಶನ್ ಮತ್ತು ವಿಜಯಲಕ್ಷ್ಮಿ, ದುಬೈನಲ್ಲಿ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದರು. ಆದರೆ, ಆ ವಿಡಿಯೋ ನೋಡಿ ಖುಷಿ ಪಟ್ಟಿದ್ದವರಿಗೆ, ಈಗ ಅದೇ ವಿಡಿಯೋ ಈಗ ದರ್ಶನ್ ಪಾಲಿಗೆ ಮುಳ್ಳಾಗಿದ್ದನ್ನು ಅರಗಿಸಿಕೊಳ್ಳಲು ಆಗುತ್ತಿಲ್ಲ.



