ಪವಿತ್ರಾ ಗೌಡ. ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಮೊದಲ ಆರೋಪಿ. ಆಕೆಯ ಆತ್ಮೀಯ ಗೆಳೆಯ ನಟ ದರ್ಶನ್, ಇದೇ ಕೇಸಿನಲ್ಲಿ ಆರೋಪಿ ನಂ.2. ಇಬ್ಬರೂ ಈಗ ಜೈಲಲ್ಲಿದ್ದಾರೆ. ಜೂನ್ 11 ರಂದು ಪವಿತ್ರಾ ಗೌಡ ಅವರನ್ನೂ ನಟ ದರ್ಶನ್ ಜೊತೆಯಲ್ಲಿಯೇ ಬಂಧಿಸಲಾಗಿತ್ತು. ಎರಡು ತಿಂಗಳ ನಂತರ ಪವಿತ್ರಾ ಗೌಡ ಪರ ವಕೀಲರು ಬೇಲ್ ಅಪ್ಲಿಕೇಷನ್ ಹಾಕಿದ್ದರು. ಹೆಣ್ಣು ಎಂಬ ಕಾರಣ ನೀಡಿಯೇ ಜಾಮೀನು ಅರ್ಜಿ ಸಲ್ಲಿಸಿದ್ದರು.
ಅಂದಹಾಗೆ ಕೊಲೆಯಾದ ರೇಣುಕಾಸ್ವಾಮಿ ಅಶ್ಲೀಲ ಮೆಸೇಜ್ ಮಾಡಿದ್ದು ಪವಿತ್ರಾ ಗೌಡ ಅವರಿಗೆ. ಹೀಗಾಗಿ ಆಕೆಯ ಪರಮಾಪ್ತ ಗೆಳೆಯರಾಗಿದ್ದ ದರ್ಶನ್, ರೇಣುಕಾಸ್ವಾಮಿ ಅವರನ್ನ ಕಿಡ್ನಾಪ್ ಮಾಡಿಸಿ, ಪಟ್ಟಣಗೆರೆ ಶೆಡ್ಡಿನಲ್ಲಿ ಹಲ್ಲೆ ಮಾಡಿ ಕೊಂದಿದ್ದಾನೆ. ಕೊಲೆಯಲ್ಲಿ ಎಲ್ಲರೂ ಭಾಗಿಯಾಗಿದ್ದಾರೆ ಎನ್ನುವುದು ಪೊಲೀಸರ ವಾದ. ಇಡೀ ಘಟನೆಯ ಕೇಂದ್ರ ಬಿಂದು ಪವಿತ್ರಾ ಗೌಡ ಅವರಾಗಿರುವ ಕಾರಣ, ಆಕೆಯನ್ನೇ ಆರೋಪಿ ನಂ.1 ಮಾಡಿದ್ದಾರೆ. ಆದರೆ, ಪವಿತ್ರಾ ಗೌಡ ಪರ ಜಾಮೀನು ಅರ್ಜಿ ವಾದ ಮಂಡಿಸಿದ ವಕೀಲರ ಪ್ರಕಾರ ಪವಿತ್ರಾ ಗೌಡ ಅವರಿಗೂ ಕೊಲೆಗೂ ಏನೇನೂ ಸಂಬಂಧ ಇಲ್ಲ. ಹೌದು, ಅಚ್ಚರಿಯ ವಾದ ಮಂಡನೆಯಂತೂ ಆಗಿದೆ. ಈ ಅರ್ಜಿಯ ವಿಚಾರಣೆ ನಡೆಸಿದ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ಜಾಮೀನು ಅರ್ಜಿಯ ಆದೇಶವನ್ನು ಆಗಸ್ಟ್ 31ಕ್ಕೆ ಕಾಯ್ದಿರಿಸಿದೆ.
ಪವಿತ್ರಾ ಗೌಡ ಅವರ ಪರ ಹಿರಿಯ ವಕೀಲ ಸೆಬಾಸ್ಟಿಯನ್ ವಾದ ಮಂಡಿಸಿದ್ದಾರೆ. ಸೆಬಾಸ್ಟಿಯನ್ ವಾದದ ಪ್ರಕಾರ ಪವಿತ್ರಾಗೌಡ ಗೂ ದರ್ಶನ್ಗೆ ಒಂದು ರೀತಿಯ ಸಂಬಂಧ ಇರಬಹುದು ನಿಜವಿರಬಹುದು. ಆದರೆ ರೇಣುಕಾ ಸ್ವಾಮಿ ಕೊಲೆಯಲ್ಲ ಪವಿತ್ರಾಗೌಡ ಯಾವುದೇ ಪಾತ್ರ ವಹಿಸಿಲ್ಲ. ರೇಣುಕಾ ಸ್ವಾಮಿ ಇನ್ ಸ್ಟಾಗ್ರಾಮ್ ನಲ್ಲಿ ಅಸಭ್ಯ ಫೋಟೋ ಕಳುಹಿಸಿದ್ದಾನೆ. ಸಹಜವಾಗೇ ಈ ವಿಷಯವನ್ನು ಸಹಾಯಕನಾಗಿರುವ ಎ 3 ಪವನ್ಗೆ ಪವಿತ್ರಾಗೌಡ ತಿಳಿಸಿದ್ದಾಳೆ. ಎ 3 ಪವನ್, ದರ್ಶನ್ ಗೆ ವಿಷಯ ತಿಳಿಸಿದ್ದಾನೆ. ರೇಣುಕಾ ಸ್ವಾಮಿ ಕೊಲೆ ಆದ ದಿನವೂ ಸಹ ದರ್ಶನ್ ಆಕೆಯನ್ನು ಷೆಡ್ ಕರೆದೊಯ್ದಿದ್ದಾನೆ. ಪವಿತ್ರಾಗೌಡ, ದರ್ಶನ್ ಜೊತೆಯಲ್ಲಿ ಹೋಗಿದ್ದರೂ ಸಹ ಕೊಲೆಯಲ್ಲಿ ಭಾಗಿಯಾಗಿಲ್ಲ. ಆಕೆ ಹಲ್ಲೆ ನಡೆಸಿದ್ದಾಳೆಂದೂ ಆರೋಪವಿಲ್ಲ. ಹೀಗಿರುವಾಗ ಕೊಲೆಯಲ್ಲಿ ಪವಿತ್ರಾಗೌಡ ಪಾತ್ರವೇ ಇಲ್ಲ. ಪವಿತ್ರಾಗೌಡ ಕಪಾಳಮೋಕ್ಷ ನಡೆಸಿದ್ದರೆಂದು ಹೇಳಿದ್ದಾರೆ. ಆದರೆ ಕಪಾಳಮೋಕ್ಷದಿಂದ ಸಾವಾಗಿದೆ ಎಂಬ ವರದಿಯಿಲ್ಲ. ಎದೆಗೂಡಿನ ಮೂಳೆ ಮುರಿದು ಅದು ಶ್ವಾಸಕೋಶಕ್ಕೆ ಚುಚ್ಚಿ ಸಾವಾಗಿದೆ. ಕಪಾಳಮೋಕ್ಷ ದಿಂದ ಸಾವಾಗಿರಲು ಸಾಧ್ಯವೇ ಇಲ್ಲ. ಎದೆಗೂಡಿನ ಮೂಳೆ ಮುರಿತಕ್ಕೂ ಪವಿತ್ರಾಗೌಡಗೂ ಯಾವುದೇ ಸಂಬಂಧ ಇಲ್ಲ. ಪವಿತ್ರಾಗೌಡ ಕೂಡಾ ಮಹಿಳೆಯಾಗಿದ್ದು ಅಪ್ರಾಪ್ತ ಮಗಳಿದ್ದಾಳೆ. ಆಕೆಗೆ ಕ್ರಿಮಿನಲ್ ಹಿನ್ನೆಲೆ ಇಲ್ಲದಿರುವುದನ್ನು ಪರಿಗಣಿಸಿ ಜಾಮೀನು ನೀಡಬೇಕು.
ಈ ವಾದಗಳನ್ನೆಲ್ಲ ನೋಡಿದರೆ ರೇಣುಕಾಸ್ವಾಮಿ ಕೊಲೆ ಕೇಸಿನಲ್ಲಿ ಪವಿತ್ರಾ ಗೌಡ ತಮ್ಮ ನೇರ ಪಾತ್ರವಿಲ್ಲ ಎಂದು ಪರೋಕ್ಷವಾಗಿ ಒಪ್ಪಿಕೊಂಡಂತೆ ಆಗಿದೆ. ಕಿಡ್ನಾಪ್ ಆಗಿದ್ದು, ತಾವು ದರ್ಶನ್ ಜೊತೆ ಶೆಡ್ಡಿಗೆ ಹೋಗಿದ್ದನ್ನು ಒಪ್ಪಿಕೊಂಡಂತೆ ಆಗಿದೆ. ಅಲ್ಲದೆ ದರ್ಶನ್ ಸೂಚನೆಯಂತೆ ಎಲ್ಲ ನಡೆದಿದೆ ಎಂದು ಕೂಡಾ ಹೇಳಿದ್ದಾರೆ. ಈ ಮೂಲಕ ಪವಿತ್ರಾ ಗೌಡ ತಾವು ಜಾಮೀನು ಪಡೆದು ಆಚೆ ಬರುವುದಕ್ಕೆ ಪ್ರಯತ್ನಿಸುತ್ತಿದ್ದಾರೆ. ಆದರೆ, ಪವಿತ್ರಾ ಗೌಡ ಅವರ ಈ ವಾದದ ಪ್ರಕಾರ ಎಲ್ಲವನ್ನೂ ಮಾಡಿದ್ದು ದರ್ಶನ್ ಎಂಬಂತೆ ಬಿಂಬಿಸಲು ಯಶಸ್ವಿಯಾದರೆ, ದರ್ಶನ್ ಬುಡಕ್ಕೆ ಬೆಂಕಿ ಬಿತ್ತು ಎಂದೇ ಅರ್ಥ.
ಆದರೆ ವಿಶೇಷ ಅಭಿಯೋಜಕ ಪ್ರಸನ್ನ ಕುಮಾರ್, ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಕೆಲವು ವಿಷಯಗಳನ್ನು ತಿಳಿಸಿ, ಪ್ರಕರಣದಲ್ಲಿ ಪವಿತ್ರಾ ಗೌಡರ ಪಾತ್ರವನ್ನು ವಿವರಿಸಿದ್ದಾರೆ. ಆರೋಪಿ 3, ಪವನ್ ಮೊಬೈಲ್ ಮೂಲಕ ರೇಣುಕಾ ಸ್ವಾಮಿ ಜೊತೆಗೆ ಪವಿತ್ರಾ ಮಾತನಾಡಿದ್ದರು ಎಂಬ ಅಂಶವನ್ನು ನ್ಯಾಯಾಲಯಕ್ಕೆ ಹೇಳಿದ್ದಾರೆ. ಮುಂದುವರೆದು, ಮಹಿಳೆ ಎಂಬ ಕಾರಣಕ್ಕೆ ಪವಿತ್ರಾ ಗೌಡಗೆ ಜಾಮೀನು ನೀಡಬಾರದು ಎಂದು ಸುಪ್ರೀಂ ಕೋರ್ಟ್ನ ಕೆಲವು ಆದೇಶಗಳನ್ನು ಉದಾಹರಣೆಯಾಗಿ ನೀಡಿದ್ದಾರೆ. ಆಗಸ್ಟ್ ೩೧ರಂದು ಜಾಮೀನು ಸಿಗಲಿದೆಯೋ.. ಇಲ್ಲವೋ.. ನಿರ್ಧಾರವಾಗಲಿದೆ.
ಅಂದರೆ ಪವಿತ್ರಾ ಗೌಡ ಅವರು ಕೇಸಿನಲ್ಲಿ ತಮ್ಮ ಪಾತ್ರ ಇಲ್ಲ, ಮೆಸೇಜ್ ಬಗ್ಗೆ ಗೊತ್ತಾಗಿದ್ದಕ್ಕೆ.. ಆತ ರೊಚ್ಚಿಗೆದ್ದು ಕೊಲೆ ಮಾಡಿದರೆ ಅದಕ್ಕೆ ನಾನು ಹೇಗೆ ಹೊಣೆ.. ನಾನು ಹೋಗಿದ್ದೆನಾದರೂ ಕಪಾಳಕ್ಕೆ ಹೊಡೆದಿದ್ದೇನೆ ಅಷ್ಟೆ, ಅದರಿಂದ ರೇಣುಕಾಸ್ವಾಮಿ ಸತ್ತಿಲ್ಲವಲ್ಲ.. ಎಂದು ವಾದಿಸಲು ಶುರು ಮಾಡಿದರೆ.. ದರ್ಶನ್ ಮತ್ತಿತರರ ಗ್ಯಾಂಗಿನವರಿಗೆ ಜೈಲು ಖಾಯಂ ಆದಂತೆಯೇ ಎನ್ನುವುದು ಅನುಭವಿ ವಕೀಲರ ವಾದ.



