ರೇಣುಕಾಸ್ವಾಮಿ ಮರ್ಡರ್ ಕೇಸಿನಲ್ಲಿ ಅರೆಸ್ಟ್ ಆಗಿರುವ ಎಲ್ಲರೂ ಈಗ ಪರಪ್ಪನ ಅಗ್ರಹಾಋ ಜೈಲಿನಲ್ಲಿದ್ದಾರೆ. ಚಿತ್ರದುರ್ಗ ಮೂಲದ ರೇಣುಕಾ ಸ್ವಾಮಿ ಬರ್ಬರ ಹತ್ಯೆ ಕೇಸ್‌ನ ಎಲ್ಲ 17 ಆರೋಪಿಗಳೂ ಜೈಲು ಸೇರಿದ್ದಾರೆ. ಈ ಸಂಖ್ಯೆ ಇನ್ನಷ್ಟು ಹೆಚ್ಚಲೂಬಹುದು. ಆದರೆ ಇದೀಗ ಇಡೀ ೧೭ ಮಂದಿಯಲ್ಲಿ ಒಬ್ಬ ಆರೋಪಿಯ ಪರ ವಕೀಲರು ಬಂಧನ ಪ್ರಶ್ನೆ ಮಾಡಿ ಅರ್ಜಿ ಸಲ್ಲಿಸಿದ್ದಾರೆ. ಆತ ರವಿ.
ರೇಣುಕಾ ಸ್ವಾಮಿ ಹತ್ಯೆ ಪ್ರಕರಣದ ಎ8 ಅಂದರೆ 8ನೇ ಆರೋಪಿ ರವಿ. ಈತ ಕ್ಯಾಬ್ ಡ್ರೈವರ್. ರೇಣುಕಾ ಸ್ವಾಮಿ ಅವರನ್ನ ಕಿಡ್ನ್ಯಾಪ್ ಮಾಡಿ ಚಿತ್ರದುರ್ಗದಿಂದ ಬೆಂಗಳೂರಿಗೆ ಕರೆತಂದ ಕಾರ್ʻನ ಡ್ರೈವರ್. ಇವರನ್ನೂ ಕೂಡಾ 17 ಆರೋಪಿಗಳಲ್ಲಿ ಪೊಲೀಸರು ಅರೆಸ್ಟ್ ಮಾಡಿ, ವಿಚಾರಣೆ ಮಾಡಿ ಜೈಲು ಸೇರಿಸಿದ್ದಾರೆ. ಇದನ್ನು ಪ್ರಶ್ನೆ ಮಾಡಿ ವಕೀಲರು ಹೈಕೋರ್ಟಿಗೆ ರಿಟ್ ಅರ್ಜಿ ಸಲ್ಲಿಸಿದ್ದಾರೆ.
8ನೇ ಆರೋಪಿಯ ಬಂಧನಕ್ಕೆ ಕಾರಣಗಳನ್ನು ತಿಳಿಸಿಲ್ಲ. ಬಂಧನದ ಬಗ್ಗೆ ಆರೋಪಿಗೆ ಮಾಹಿತಿ ನೀಡಿಲ್ಲ. ಬಂಧನದ ವೇಳೆ ತಾಂತ್ರಿಕ ದೋಷಗಳಿವೆ. ಹೀಗಾಗಿ, ಈ ಬಂಧನವನ್ನ ರದ್ದುಗೊಳಿಸಬೇಕೆಂದು ಮನವಿ ಮಾಡಿ ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಿದ್ದೇವೆ. ರಿಟ್ ಅರ್ಜಿಯನ್ನ ಹೈಕೋರ್ಟ್ ಮಾನ್ಯ ಮಾಡಿದರೆ ಅದರಿಂದ ಇತರೆ ಆರೋಪಿಗಳಿಗೂ ಒಳಿತಾಗಲಿದೆ ಎನ್ನುವುದು ವಕೀಲರ ವಾದ.
ರವಿ ಅವರ ಟೊಯೊಟಾ ಇಟಿಯೋಸ್ ಕಾರಿನಲ್ಲಿಯೇ ರೇಣುಕಾ ಸ್ವಾಮಿ ಅವರನ್ನ ಬೆಂಗಳೂರಿನ ಪಟ್ಟಣಗೆರೆ ಶೆಡ್‌ಗೆ ಕರೆತರಲಾಗಿತ್ತು. ಜೂನ್ 14 ರಂದು ಚಿತ್ರದುರ್ಗದ ರವಿ ಪೊಲೀಸರ ಮುಂದೆ ಶರಣಾಗಿದ್ದ.
ಬಂಧನದ ಸಮಯದಲ್ಲಿ ಕಾನೂನು, ಸಾಂವಿಧಾನಿಕ ನಿಯಮ ಪಾಲಿಸದಿದ್ದರೆ ಆ ಬಂಧನವನ್ನ ನ್ಯಾಯಾಲಯ ರದ್ದು ಮಾಡಬಹುದು. ಈ ಕೇಸ್‌ನಲ್ಲೂ ಸಾಂವಿಧಾನಿಕ ನಿಯಮಗಳನ್ನ
ಪಾಲಿಸದಿರುವುದು ಕಂಡುಬಂದಿದೆ ಎನ್ನುವುದು ವಕೀಲ ರಂಗನಾಥ್ ವಾದ.
ವಕೀಲರು ಹಾಗೂ ರವಿಯನ್ನು ಪೊಲೀಸರ ಎದುರು ಸರೆಂಡರ್ ಮಾಡಿಸಿದ ಗೆಳೆಯರು, ಚಾಲಕರ ಸಂಘದ ಸದಸ್ಯರ ಪ್ರಕಾರ ರವಿ ಮಾಡಿರುವುದು ಕೇವಲ ತನ್ನ ವೃತ್ತಿ. ಕ್ಯಾಬ್ ಬಾಡಿಗೆಗೆ ಕೇಳಿದರು, ಬಾಡಿಗೆಗೆ ತೆಗೆದುಕೊಂಡು ಹೋದ.. ಹಣ ಪಡೆದುಕೊಂಡು ಬಂದ, ಅಷ್ಟೇ ಹೊರತಾಗಿ.. ಯಾವುದೇ ರೀತಿಯಲ್ಲಿ ರವಿಗೂ, ರೇಣುಕಾಸ್ವಾಮಿ ಕೊಲೆಗೂ ಸಂಬಂದ ಇಲ್ಲ ಎಂದು ವಾದಿಸುತ್ತಾರೆ.
ರವಿಯವರ ಕುಟುಂಬವೂ ಈಗ ಬೀದಿಗೆ ಬಂದಿದೆ. ಎರಡು ಮಕ್ಕಳ ಜೊತೆ ಆತನ ಪತ್ನಿ ಪರದಾಡುತ್ತಿದ್ದಾರೆ. ಈಗ ಇದನ್ನೇ ಆಧಾರವಾಗಿಟ್ಟುಕೊಂಡು ಜಾಮೀನು ಪಡೆಯುವುದು ವಕೀಲರ ಯೋಚನೆ. ಅಕಸ್ಮಾತ್, ಒಬ್ಬ ಆರೋಪಿಗೆ ಜಾಮೀನು ಸಿಕ್ಕರೆ, ಉಳಿದವರ ಜಾಮೀನಿಗೂ ಯತ್ನಿಸಬಹುದು ಎಂಬ ಆಲೋಚನೆ ಇರಬಹುದು. ಆದರೆ, ಅದು ಕೋರ್ಟು. ಊಹೆ ಮಾಡಬಹುದೇ ಹೊರತು, ನಿರ್ಧಾರ ಮಾಡುವುದಕ್ಕೆ ಆಗುವುದಿಲ್ಲ.
ಪೊಲೀಸರು ಇನ್ನೂ ಏನೇನು ಸಾಕ್ಷಿ ಸಂಗ್ರಹ ಮಾಡಿದ್ದಾರೆಯೋ.. ಏನೋ.. ಏಕೆಂದರೆ ರಿಮ್ಯಾಂಡ್ ಕಾಪಿಯಲ್ಲಿ ಹಲವು ಅಂಶಗಳನ್ನು ಸಾರ್ವಜನಿಕವಾಗಿ ಹೇಳಿಲ್ಲ. ರಿಮ್ಯಾಂಡ್ ಕಾಪಿಯನ್ನು ಸಾರ್ವಜನಿಕರಿಗೆ ಸುಲಭವಾಗಿ ತರಲಾಗುತ್ತದೆ. ಆದರೆ, ರೇಣುಕಾಸ್ವಾಮಿ ಕೊಲೆ ಕೇಸಿನಲ್ಲಿ ಕೋರ್ಟಿಗೆ ಮಾತ್ರವೇ ಹೇಳಿದ್ದು, ಹಲವು ಅಂಶಗಳನ್ನು ರಿಮ್ಯಾಂಡ್ ಕಾಪಿಯಲ್ಲಿ ಹೇಳಿಲ್ಲ ಆದರೆ ಪ್ರಸ್ತಾಪ ಮಾಡಿದ್ದಾರೆ.



