ರಾಜ್ಯದಲ್ಲಿ ಸಿಎಂ ಕುರ್ಚಿ ಬದಲಾವಣೆ ವಿಷಯ ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿದ್ದರೆ, ಡಿಕೆ ಶಿವಕುಮಾರ್ ತಾಳ್ಮೆ, ಶಿಸ್ತಿನ ಪ್ರತೀಕದಂತೆ ನಿಂತುಬಿಟ್ಟಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರದಲ್ಲಿ ನಾನು ಮಂತ್ರಿ. ಶಾಸಕನಾಗಿ ನನ್ನ ಬೆಂಬಲ ಅವರಿಗೆ ಇದೆ ಎನ್ನುವ ಡಿಕೆ ಶಿವಕುಮಾರ್ ʻʻಕೆಪಿಸಿಸಿ ಅಧ್ಯಕ್ಷನಾಗಿರುವ ನನ್ನ ಮಾತನ್ನು ಸಿಎಂ ಸಿದ್ದರಾಮಯ್ಯ ಅವರೂ ಕೇಳಬೇಕುʼʼ ಎಂಬರ್ಥದ ಮಾತುಗಳನ್ನೂ ಹೇಳುತ್ತಾರೆ. ಮಾರ್ಮಿಕ ಪೋಸ್ಟುಗಳನ್ನು ಹಾಕುವುದು.. ನಾನು ಹಾಕಿದ್ದು ಹಾಗಲ್ಲ.. ನೀವೇ ಮಿಸ್ ಗೈಡ್ ಮಾಡ್ತೀರಿ ಎಂದು ಮೀಡಿಯಾಗಳ ಮೇಲೆ ಎಗರಾಡುವುದು ಇದ್ದೇ ಇದೆ. ಇದರ ನಡುವೆ ಡಿಕೆ ಸುರೇಶ್ ʻʻರಾಜಕೀಯದಲ್ಲಿ ಅಧಿಕಾರ, ತಾಳ್ಮೆ ಎರಡೂ ಶಾಶ್ವತವಲ್ಲ. ದೇವರ ಇಚ್ಛೆ, ಏನೇನು ತೀರ್ಮಾನವಾಗುತ್ತದೋ ಕಾದು ನೋಡಬೇಕು. ಎಲ್ಲದಕ್ಕೂ ಅಂತ್ಯ ಇದ್ದೇ ಇರುತ್ತದೆʼʼ ಎಂದಿದ್ದಾರೆ. ಅದು ಸೃಷ್ಟಿಸಿರುವ ರಾಜಕೀಯ ಸಂಚಲನ ದೊಡ್ಡದು. ಅಣ್ಣನದ್ದು ಡಿಫೆನ್ಸಿವ್ ಗೇಮ್ ಆದರೆ, ತಮ್ಮನದ್ದು ಅಟ್ಯಾಕಿಂಗ್ ಮೋಡ್ ಡಿಫೆನ್ಸಿವ್ ಗೇಮ್.
ʻʻಮುಖ್ಯಮಂತ್ರಿ ಹುದ್ದೆ ಅಷ್ಟು ಸುಲಭವಾಗಿ ಸಿಗುವಂಥದ್ದಲ್ಲ. ಪಂಚಾಯತಿ ಚೇರ್ಮನ್‌ಗಳೇ ಅಧಿಕಾರ ಬಿಟ್ಟುಕೊಡಲ್ಲ. ಹೀಗಾಗಿ, ಮಾತು ಕೊಟ್ಟಿದ್ದಾರೆ ಅಂತ ಅಧಿಕಾರ ಬಿಟ್ಟುಕೊಡಿ ಎನ್ನಲು ಆಗುವುದಿಲ್ಲ. ನನ್ನ ಅಣ್ಣನಿಗೆ ಹಣೆಬರಹದಲ್ಲಿ ಬರೆದಿದ್ದರೆ ಅವರು ಮುಖ್ಯಮಂತ್ರಿಯಾಗುತ್ತಾರೆ. ಆದರೆ, ರಾಜಕಾರಣದಲ್ಲಿ ಅಧಿಕಾರ ಹಾಗೂ ತಾಳ್ಮೆ ಎರಡೂ ಶಾಶ್ವತವಲ್ಲ ಎಂದಿದ್ದಾರೆ ಡಿಕೆ ಸುರೇಶ್. ಸದಾಶಿವನಗರದ ತಮ್ಮ ನಿವಾಸದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಡಿಕೆ ಸುರೇಶ್ ʻʻರಾಹುಲ್ ಗಾಂಧಿ ಅವರು ಸೂಕ್ತ ಕಾಲದಲ್ಲಿ ಸೂಕ್ತ ತೀರ್ಮಾನ ಕೈಗೊಳ್ಳುವುದಾಗಿ ಹೇಳಿದ್ದಾರೆ. ನಮ್ಮ ಅಣ್ಣ (ಡಿ.ಕೆ.ಶಿವಕುಮಾರ್)ನ ಹಣೆಯಲ್ಲಿ ಬರೆದಿದ್ದರೆ ಮುಖ್ಯಮಂತ್ರಿ ಆಗುತ್ತಾರೆ. ಇದನ್ನು ಹಿಂದೆಯೂ ಹೇಳಿದ್ದೆ, ಈಗಲೂ ಹೇಳುತ್ತಿದ್ದೇನೆ. ಮುಖ್ಯಮಂತ್ರಿ ಹುದ್ದೆ ಸುಲಭವಾಗಿ ಸಿಗುವಂಥದ್ದಲ್ಲ. ಎಲ್ಲರೂ ಅದರಲ್ಲಿ ಭಾಗಿಯಾಗಬೇಕುʼʼ ಎಂದಿದ್ದಾರೆ.
ಇಷ್ಟು ನೇರವಾಗಿ ಡಿಕೆ ಸುರೇಶ್ ಎಂದೂ ಮಾತನಾಡಿರಲಿಲ್ಲ. ಅದರ ಜೊತೆಗೆ ʻʻಡಿ.ಕೆ.ಶಿವಕುಮಾರ್ ಪಕ್ಷದ ಅಧ್ಯಕ್ಷ. ಮೊದಲು ಅವರಲ್ಲಿ ಶಿಸ್ತು ಇರಬೇಕು. ಹೀಗಾಗಿ ಶಿಸ್ತು ಪಾಲಿಸುತ್ತಿದ್ದಾರೆʼʼ ಎಂದಿದ್ದಾರೆ. ಡಿ.ಕೆ.ಶಿವಕುಮಾರ್ ಬೆಂಬಲಿಗ ಶಾಸಕರು ಎಷ್ಟು ದಿನ ತಾಳ್ಮೆಯಿಂದ ಇರಬೇಕು ಎಂಬ ಪ್ರಶ್ನೆಗೆ ಅನಿವಾರ್ಯವಾಗಿ ವಿಧಾನಮಂಡಲ ವಿಶೇಷ ಅಧಿವೇಶನ ಕರೆಯಲಾಗಿದೆ. ಇದೆಲ್ಲಾ ಆದ ಬಳಿಕ ಏನು ತೀರ್ಮಾನವಾಗುತ್ತದೋ ಕಾದು ನೋಡಬೇಕು. ಪಕ್ಷ ತಾಳ್ಮೆಯಿಂದ ಇರಲು ಹೇಳಿದೆ. ರಾಹುಲ್ ಗಾಂಧಿ ಅವರು ಮೈಸೂರಿನಲ್ಲಿ ಭೇಟಿಯಾದಾಗ ಸೂಕ್ತ ಸಮಯದಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳುತ್ತೇವೆ ಎಂದಿದ್ದಾರೆ ಎಂದು ಉತ್ತರ ಕೊಟ್ಟಿದ್ದಾರೆ.
ʻʻಅಧಿಕಾರ ಬಿಟ್ಟು ಕೊಡಿ ಎಂದು ಕೇಳೋಕೆ ಆಗಲ್ಲʼʼ
ಪಂಚಾಯತಿ ಅಧ್ಯಕ್ಷರೇ ತಮ್ಮ ಸ್ಥಾನ ಬಿಟ್ಟು ಕೊಡಲ್ಲ. ಆಹ್ವಾನ ಪತ್ರಿಕೆಯಲ್ಲಿ ಹೆಸರು ಹಾಕಿಸಿಕೊಳ್ಳುತ್ತೇನೆ, ಮಾರ್ಚ್ ಎಂಡ್ ಆಗಲಿಲ ಅಂತೆಲ್ಲ ಕುಂಟು ನೆಪ ಹೇಳುತ್ತಾರೆ. ಆದರೆ, ಅಧ್ಯಕ್ಷ ಸ್ಥಾನ ಪಡೆಯುವಾಗ ನನಗೆ ಮೂರು ದಿನ ಅಧಿಕಾರ ಸಾಕು, ಮಾಜಿ ಎಂದು ಕರೆಸಿಕೊಳ್ಳುವುದಷ್ಟೇ ಸಾಕು ಎಂದು ಹೇಳಿರುತ್ತಾರೆ. ಈ ರೀತಿ ಆದಾಗ ಏನೂ ಮಾಡೋಕ್ ಆಗಲ್ಲ. ರಾಜಕಾರಣದಲ್ಲಿ ನಂಬಿಕೆ ಮುಖ್ಯ. ಡಿ.ಕೆ.ಶಿವಕುಮಾರ್ ಚಿಕ್ಕ ವಯಸ್ಸಿನಿಂದಲೂ ಇವೆಲ್ಲವನ್ನು ನೋಡಿದ್ದಾರೆ ಎಂದಿದ್ದಾರೆ ಡಿಕೆ ಸುರೇಶ್.
ಮಾರ್ಚ್ ಅಂತ್ಯಕ್ಕೆ ಬದಲಾವಣೆ ಆಗಬಹುದೇ ಎಂಬ ಪ್ರಶ್ನೆಗೆ ʻʻನಾನು ಮುಖ್ಯಮಂತ್ರಿ ಸ್ಥಾನದ ವಿಚಾರವಾಗಿ ಹೇಳುತ್ತಿಲ್ಲ. ಹಳ್ಳಿಗಳಲ್ಲಿ ಹೇಳುವ ನೆಪ ಹೇಳಿದ್ದೇನೆ. ನಾನು ಅಧಿಕಾರ ಹಂಚಿಕೆ ವಿಚಾರವಾಗಿ ಮಾತನಾಡಿಲ್ಲ. ನಮ್ಮ ಊರಿನಲ್ಲಿ ನಡೆಯುವ ಪ್ರಕ್ರಿಯೆ ಬಗ್ಗೆ ಹೇಳಿದೆ ಅಷ್ಟೇ. ಮಾತು ಕೊಟ್ಟಿದ್ದೀರಿ ಅಧಿಕಾರ ಬಿಟ್ಟುಕೊಡಿ ಎಂದು ಹೇಳುವುದು ಬಹಳ ಕಷ್ಟʼʼ ಎಂದು ಉತ್ತರ ಕೊಟ್ಟು ಜಾರಿಕೊಂಡಿದ್ದಾರೆ.
ಇದರಿಂದ ಅರ್ಥವಾಗುವುದು ಏನೆಂದರೆ.. ಡಿಕೆ ಬ್ರದರ್ಸ್ ಪಟ್ಟು ಹಾಕುತ್ತಿದ್ದಾರೆ. ಅಣ್ಣನದ್ದು ಮಾರ್ಮಿಕ ಪೆಟ್ಟುಗಳು. ಏಕೆಂದರೆ ಅವರ್ ಅಧ್ಯಕ್ಷರು. ಆದರೆ ತಮ್ಮನದ್ದು ಲೆಕ್ಕಾಚಾರ ಪಟ್ಟುಗಳು. ಹಾಗೆಂದು ಬಹಿರಂಗವಾಗಿ ಹೇಳಿ ವಿವಾದ ಆದರೆ.. ನಿಮ್ಮ ತಮ್ಮನಿಗೆ ಬುದ್ದಿ ಹೇಳೋಕ್ ಆಗಲ್ವಾ.. ಎಂದು ಅಣ್ಣನನ್ನು ತರಾಟೆಗೆ ತೆಗೆದುಕೊಂಡರೆ.. ಅದಕ್ಕೂ ಅಸ್ತ್ರ ಇದೆ. ಮ್ಯಾನೇಜ್ ಮಾಡುವುದಕ್ಕೆ ಇರಲಿ ಎಂಬ ಮಾತುಗಳು. ಒಟ್ಟಿನಲ್ಲಿ ಜಸ್ಟ್ ಮಾತ್ ಮಾತಲ್ಲಿ ಕಾಂಟ್ರವರ್ಸಿ ಕಂಟಿನ್ಯೂ ಆಗಿದೆ.
ನಾನು ಕೇವಲ ಶಿವಕುಮಾರ್ ಅವರ ದೃಷ್ಟಿಕೋನದಿಂದ ನೋಡಬಹುದು. ಆದರೆ, ರಾಹುಲ್ ಗಾಂಧಿ ದೇಶದ ಎಲ್ಲ ಬೆಳವಣಿಗೆಗಳ ದೃಷ್ಟಿಯಿಂದ ನೋಡಬೇಕು. ಹೀಗಾಗಿ ಎಲ್ಲರನ್ನೂ ವಿಶ್ವಾಸಕ್ಕೆ ಪಡೆದು ತೀರ್ಮಾನ ಮಾಡಬೇಕು ಎಂದು ನಿರ್ಧರಿಸಿದ್ದಾರೆ ಎಂದೂ ಹೇಳಿದ್ದಾರೆ.



