ಆತ ಹೀರೋ ಆಗಬೇಕೆಂದು ಕನಸು ಕಂಡಿದ್ದ ಹುಡುಗ. ದೊಡ್ಡಮನೆಯ ಸದಸ್ಯನೂ ಹೌದು. ಪಾರ್ವತಮ್ಮ ರಾಜಕುಮಾರ್ ಅವರ ತಮ್ಮ ಶ್ರೀನಿವಾಸ್ ಅವರ ಮಗನಾಗಿದ್ದ ಸೂರಜ್, ಚಿತ್ರರಂಗದಲ್ಲೇ ಬದುಕುಬೇಕೆಂದು ಗುರಿ ಇಟ್ಟುಕೊಂಡಿದ್ದ ಹುಡುಗ. ಒಂದು ಕಡೆ ಟ್ರೈನಿಂಗ್ ಪಡೆಯುತ್ತಲೇ ಮತ್ತೊಂದು ಕಡೆ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ದುಡಿಯುತ್ತಿದ್ದ. ಅಂತಹ ಹುಡುಗನ ನಾಯಕನಾಗುವ ಕನಸನ್ನು ಒಂದು ಆಕ್ಸಿಡೆಂಟ್ ಬಲಿ ಪಡೆದುಕೊಂಡು ಬಿಟ್ಟಿದೆ. ಬೈಕ್`ನಲ್ಲಿ ಮೈಸೂರಿನಿಂದ ಊಟಿಗೆ ಹೋಗುತ್ತಿದ್ದ ಸೂರಜ್ ಅವರಿಗೆ ಅಪಘಾತದಲ್ಲಿ ಕಾಲನ್ನೇ ಕಟ್ ಮಾಡಲಾಗಿದೆ. ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಆಪರೇಷನ್ ಮೂಲಕ ಬಲಗಾಲು ಕತ್ತರಿಸಲಾಗಿದೆ.
ನಂಜನಗೂಡು ದಾಟಿದ ಬಳಿಕ ಟ್ರಾಕ್ಟರ್ ಓವರ್ಟೇಕ್ ಮಾಡುವ ಸಂದರ್ಭದಲ್ಲಿ ಎದುರಿಗೆ ಬಂದ ಟಿಪ್ಪರ್ ಲಾರಿ ಸೂರಜ್ಗೆ ಡಿಕ್ಕಿಯಾಗಿದೆ. ಡಿಕ್ಕಿಯಾದ ರಭಸಕ್ಕೆ ಸೂರಜ್ ಬಲಗಾಲಿಗೆ ಭಾರಿ ಪ್ರಮಾಣದ ಪೆಟ್ಟಾಗಿದೆ. ತಕ್ಷಣವೇ ಅವರನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಶಸ್ತ್ರ ಚಿಕಿತ್ಸೆ ಮಾಡಿ ಬಲಗಾಲನ್ನು ಕತ್ತರಿಸಲಾಗಿದೆ. ಟಿಪ್ಪರ್ ಲಾರಿ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಸೂರಜ್, ಶ್ರೀನಿವಾಸ್ ಅವರ ಮಗ. ಪಾರ್ವತಮ್ಮ ರಾಜಕುಮಾರ್ ಅವರಿಗೆ ತಮ್ಮನಾಗಬೇಕು. ಡಾ.ರಾಜ್, ಶಿವರಾಜ್ ಕುಮಾರ್ ಚಿತ್ರಗಳನ್ನು ನಿರ್ಮಾಣ ಮಾಡಿದ್ದ ಶ್ರೀನಿವಾಸ್ ಅವರ ಮಗ ಈ ಸೂರಜ್. ಸದ್ಯ ಅವರ ಕುಟುಂಬ ಮೈಸೂರಿನಲ್ಲೇ ನೆಲೆಸಿದೆ. ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆಯೇ, ನಟ ಶಿವರಾಜ್ಕುಮಾರ್ ಮತ್ತು ಗೀತಾ ಶಿವರಾಜ್ಕುಮಾರ್ ಅವರು ಮೈಸೂರಿಗೆ ತೆರಳಿ ಸೂರಜ್ ಆರೋಗ್ಯ ವಿಚಾರಿಸಿದ್ದಾರೆ. ತಮ್ಮ ಸೋದರ ಮಾವನ ಕುಟುಂಬಕ್ಕೆ ಸಮಾಧಾನ ಹೇಳಿದ್ದಾರೆ.
ನಟನಾಗಿ ಎಂಟ್ರಿ ಕೊಡುವ ಪ್ಲಾನ್ ಇಟ್ಟುಕೊಂಡಿದ್ದ ಸೂರಜ್, ಅದಕ್ಕೂ ಮುನ್ನ ಐರಾವತ, ತಾರಕ್ ಚಿತ್ರಗಳಿಗೆ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಕೆಲಸ ಮಾಡಿದ್ದರು. ತಮ್ಮ ಹೆಸರನ್ನು ಧ್ರುವನ್ ಎಂದು ಬದಲಿಸಿಕೊಂಡಿದ್ದರು. ಆನಂತರ ‘ಭಗವಾನ್ ಶ್ರೀ ಕೃಷ್ಣ ಪರಮಾತ್ಮ’ ಎಂಬ ಸಿನಿಮಾವನ್ನು ಆರಂಭಿಸಿದ್ದರು. ಭರತ್ ವಿಷ್ಣುಕಾಂತ್ ನಿರ್ಮಾಣದ ಈ ಸಿನಿಮಾಗೆ ಅನೂಪ್ ಆಂಟನಿ ನಿರ್ದೇಶನ ಮಾಡುತ್ತಿದ್ದರು. ಆದರೆ ಮೊದಲ ಸಿನಿಮಾ ಮುಕ್ತಾಯವಾಗಿ ತೆರೆಗೆ ಬರುವ ಮುನ್ನವೇ ಸೂರಜ್ಗೆ ಈ ಅಪಘಾತ ಸಂಭವಿಸಿದೆ.



