ಪರಪ್ಪನ ಅಗ್ರಹಾರದಲ್ಲಿ ಬಹಿರಂಗವಾದ ವಿಡಿಯೋಗಳ ಹಿಂದಿನ ಅಸಲಿ ಕಥೆ ಬಹಿರಂಗ ಮಾಡಲು ಪೊಲೀಸರು ಹೊರಟಿದ್ದಾರೆ. ತಮ್ಮದೇ ಪೊಲೀಸರ ವಿರುದ್ಧ.. ಪೊಲೀಸರು ತನಿಖೆ ಮಾಡುತ್ತಾರೆ ಎನ್ನುವುದು ತಮಾಷೆ ಎನ್ನಬಹುದಾದರೂ.. ಬೇರೆ ಮಾರ್ಗ ಇಲ್ಲ. ನ್ಯಾಯಾಂಗ ತನಿಖೆ ಸೇರಿದಂತೆ ಪ್ರತ್ಯೇಕ ತನಿಖೆಗೆ ಸರ್ಕಾರವೂ ಮನಸ್ಸು ಮಾಡಿಲ್ಲ. ನಿರೀಕ್ಷೆಯಂತೆ ಸಭೆ ಕರೆದು.. ಒಂದಷ್ಟು ಅಧಿಕಾರಿಗಳ ಮೇಲೆ ಕೂಗಾಡಿದೆವು ಎಂದು ಸುದ್ದಿ ಮಾಡಿಸಿ ಗೃಹಸಚಿವ ಪರಮೇಶ್ವರ್ ತಣ್ಣಗಾಗಿದ್ದಾರೆ. ಇಬ್ಬರು ಸಸ್ಪೆಂಡ್ ಆಗಿದ್ದಾರೆ. ಒಂದಷ್ಟು ದಿನಗಳ ನಂತರ ಸಸ್ಪೆಂಡ್ ತೆಗೆದ ಮೇಲೆ ಮತ್ತೆ ಡ್ಯೂಟಿಗೆ ವಾಪಸ್ ಆಗ್ತಾರೆ. ಇದು ಸಿಸ್ಟಂ. ಉತ್ತರನ ಪೌರುಷದಂತೆ ಕಾಣಿಸುತ್ತಿದೆ. ಇದರ ಮಧ್ಯೆ ಬಂದಿರೋ ತನಿಖಾ ವರದಿಯ ಮೊದಲ ರಿಪೋರ್ಟ್ ಕುತೂಹಲ ಮೂಡಿಸಿದೆ. ರಿಪೋರ್ಟ್ ಪ್ರಕಾರ..
ಉಮೇಶ್ ರೆಡ್ಡಿ ವಿಡಿಯೋ : 2023ರ ಜೂನ್ ಅಥವಾ ಜುಲೈ ತಿಂಗಳಲ್ಲಿ ಮೊಬೈಲ್‌ನಲ್ಲಿ ಮಾತನಾಡಿರುವ ವಿಡಿಯೋ. ಭದ್ರತಾ ವಿಭಾಗದ ಭಾಗ-2ರ ಕೊಠಡಿ ಸಂಖ್ಯೆ 10ರಲ್ಲಿದ್ದ ಉಮೇಶ್ ರೆಡ್ಡಿ ತಾನು ಮಾತನಾಡಿದ್ದ ಸ್ಥಳವನ್ನೂ ತೋರಿಸಿದ್ದಾನೆ ಎಂದು ರಿಪೋರ್ಟ್ ಬಂದಿದೆ. ಜೈಲಿನಲ್ಲಿ ರೆಡ್ಡಿಗೆ ಮೊಬೈಲ್ ಅನ್ನು ರೌಡಿ ವಡ್ಡ ನಾಗ ನೀಡಿದ್ದಾನೆ ಎನ್ನಲಾಗಿದೆ. ತನ್ನ ತಾಯಿ ಹಾಗೂ ವಕೀಲರ ಜತೆ ಮಾತನಾಡುವಂತೆ ಒತ್ತಾಯಿಸಿ ನಾಗ ಮೊಬೈಲ್ ಕೊಟ್ಟಿದ್ದ. ಬಳಿಕ ಆತನೇ ಮೊಬೈಲ್‌ನಲ್ಲಿ ವಿಡಿಯೋ ಚಿತ್ರೀಕರಿಸಿಕೊಂಡಿದ್ದ ಎಂದು ರೆಡ್ಡಿ ಹೇಳಿದ್ದಾನೆ. 2024ರಲ್ಲಿ ವಡ್ಡ ನಾಗ ಜಾಮೀನು ಪಡೆದು ಜೈಲಿನಿಂದ ಬಿಡುಗಡೆಯಾಗಿದ್ದಾನೆ.
ಶಾಹೀದ್ ಉಗ್ರನಲ್ಲ. ಮೊಬೈಲ್ ಬಳಸಿಲ್ಲ :
ಜೈಲಿನ ಬ್ಯಾರಕ್ʻನಲ್ಲಿ ಮೊಬೈಲ್‌ನಲ್ಲಿ ಸಂಭಾಷಣೆ ನಡೆಸುತ್ತಿರುವ ಶಾಹೀದ್ ಖಾನ್ ಅಲಿಯಾಸ್ ಚೋರ್ ಶಾಹೀದ್‌ನ ವಿಡಿಯೋ ಬಹಿರಂಗವಾಗಿತ್ತು. ಶಾಹೀದ್ ಪ್ರಕಾರ ಅವನು ಉಗ್ರನೇ ಅಲ್ಲ. ನು ಹಲವು ಬಾರಿ ಅಪರಾಧ ಪ್ರಕರಣದಲ್ಲಿ ಬಂಧಿತನಾಗಿ ಜೈಲಿಗೆ ಬಂದು ಹೋಗಿದ್ದೇನೆ. ಆದರೆ ನನಗೆ ಯಾವುದೇ ಉಗ್ರ ಸಂಘಟನೆ ಜತೆ ನಂಟಿಲ್ಲ. ಮಾಧ್ಯಮಗಳಲ್ಲಿ ತಪ್ಪು ಮಾಹಿತಿ ಪ್ರಸಾರವಾಗಿದೆ. 2024ರಲ್ಲಿ ಡ್ರಗ್ಸ್ ಪ್ರಕರಣದಲ್ಲಿ ಬಂಧಿತನಾಗಿ ಜೈಲು ಸೇರಿದ್ದೇನೆ. ಪ್ರಸುತ್ತ 8ನೇ ಬ್ಯಾರಕ್‌ನ 4ನೇ ಕೊಠಡಿಯಲ್ಲಿ ದಾಖಲಾಗಿದ್ದೇನೆ. ನಾನು ಯಾವುದೇ ಮೊಬೈಲ್ ಬಳಸಿಲ್ಲ. ನಾನು ಕೂತಿರುವ ದೃಶ್ಯವನ್ನು ಯಾರೋ ಚಿತ್ರೀಕರಿಸಿ ಹರಿಬಿಟ್ಟಿದ್ದಾರೆ ಎಂದು ಹೇಳಿಕೆ ಕೊಟ್ಟಿದ್ದಾನಂತೆ. 2023ರಲ್ಲಿ 8ನೇ ಬ್ಯಾರಕ್‌ನ 4 ಕೊಠಡಿಯ ಗೋಡೆಯಲ್ಲಿ ಮೂರು ಸ್ಟಾರ್ ಗುರುತುಗಳಿದ್ದವು. ಆದರೆ ತಾನು 2024ರ ನವೆಂಬರ್‌ನಲ್ಲಿ ಮತ್ತೆ ಜೈಲು ಸೇರಿದಾಗ ಆ ಗುರುತುಗಳಿರಲಿಲ್ಲ. ಈ ವಿಡಿಯೋ ಸಹ ಹಳೆಯದ್ದು ಎಂದು ಶಾಹೀದ್ ವಾದಿಸಿದ್ದಾನೆ.
ಮೊಬೈಲ್ ಬಳಸಿಲ್ಲ ಶಂಕಿತ ಉಗ್ರ ಶಕೀಲ್ :
ಎರಡು ವರ್ಷಗಳ ಹಿಂದೆ ತನಗೆ ಬಂಧಿಯೋರ್ವ ಕೊಟ್ಟ ಮೊಬೈಲ್ ಅನ್ನು ಕೈಯಲ್ಲಿ ಹಿಡಿದು ಆತನಿಗೆ ಮರಳಿಸಿದೆ. ಆ ಮೊಬೈಲ್‌ನಿಂದ ನಾನು ಯಾರಿಗೂ ಕರೆ ಮಾಡಿ ಮಾತನಾಡಿಲ್ಲ. ನಾನು ಈವರೆಗೆ ಮೊಬೈಲ್ ಬಳಸಿಲ್ಲ. ಇದು ಶಂಕಿತ ಐಸಿಸ್ ಉಗ್ರ ಜುಹಾಬ್ ಹಮೀದ್ ಶಕೀಲ್ ಸ್ಪಷ್ಟನೆ. ಮೊಬೈಲ್ ಕೊಟ್ಟವನು ಯಾರು ಎಂದು ನೆನಪಿಲ್ಲವಂತೆ. ಈಗ ಶಕೀಲ್ ಸಣ್ಣದಾಗಿ ಕೂದಲು ಬಿಟ್ಟಿದ್ದಾನಂತೆ. ಬೇರೆ ಕನ್ನಡಕ ಬಳಸ್ತಾನಂತೆ. ಇದು ಹಳೆ ವಿಡಿಯೋ ಅಂತೆ.
ಇನ್ನು ಅತ್ಯಂತ ಮುಖ್ಯವಾಗಿ ತರುಣ್ ರಾಜ್ ಕಥೆ ಇಂಟ್ರೆಸ್ಟಿಂಗ್ ಆಗಿದೆ. ಎಲ್ಲರದ್ದೂ ಹಳೆ ವಿಡಿಯೋ ಎಂದು ವಾದಿಸಬಹುದಾದರೂ ಈತನದ್ದನ್ನು ಹಾಗೆ ಹೇಳೋಕ್ ಆಗಲ್ಲ. ಅದರೆ ತರುಣ್ ಪ್ರಕಾರ ಮೊಹಮ್ಮದ್ ಷಾಜಿಲ್ ಖಾನ್ ಎಂಬಾತ ಮೊಬೈಲ್ ಕೊಟ್ಟಿದ್ದ. ತನ್ನ ಮೊಬೈಲ್‌ನಲ್ಲಿ ಸರಿಯಾಗಿ ನೆಟ್‌ವರ್ಕ್ ಸಿಗುತ್ತಿಲ್ಲ. ಅದನ್ನು ಸರಿಪಡಿಸಿಕೊಡುವಂತೆ ಖಾನ್ ಹೇಳಿದ್ದ. ತರುಣ್ ಅದನ್ನು ಸರಿ ಮಾಡಿ ಷಾಜಿಲ್ʻಗೆ ವಾಪಸ್ ಕೊಟ್ಟ. ಅಷ್ಟೇ. ತರುಣ್‌ಗೆ ವಿಡಿಯೋ ಮಾಡಿದ್ದು ಯಾರು ಎನ್ನುವುದೂ ಗೊತ್ತಿಲ್ಲವಂತೆ.
ಡ್ಯಾನ್ಸ್ ವಿಡಿಯೋ :
ಕಾರಾಗೃಹದ 8ನೇ ಬ್ಯಾರಕ್‌ನ 7ನೇ ಕೊಠಡಿಯಲ್ಲಿ ಬಂಧಿಗಳಾಗಿದ್ದ ಮಂಜುನಾಥ ಅಲಿಯಾಸ್ ಕೋಳಿ ಮಂಜ, ಚರಣ್ ರಾವ್, ಧನಂಜಯ ಅಲಿಯಾಸ್ ರೇಣುಕಾ ಪ್ರಸಾದ್ ಹಾಗೂ ಕಾರ್ತಿಕ್ ಅಲಿಯಾಸ್ ಚಿಟ್ಟೆ ನೃತ್ಯ ಮಾಡಿದ್ದರು. 2018ರಲ್ಲಿ ವಿವಿಧ ಅಪರಾಧ ಪ್ರಕರಣಗಳಲ್ಲಿ ಬಂಧಿತರಾಗಿ ನಾಲ್ವರು ಜೈಲು ಸೇರಿದ್ದರು ವರದಿಯಲ್ಲಿ ಖಚಿತಪಡಿಸಿದ್ದಾರೆ. 2018ರಲ್ಲಿ ಕಾರ್ತಿಕ್ ಅಲಿಯಾಸ್ ಚಿಟ್ಟೆ, 2022ರ ಜೂನ್‌ನಲ್ಲಿ ಕೋಳಿ ಮಂಜ, 2024ರಲ್ಲಿ ಚರಣ್ ಜೈಲಿನಿಂದ ಬಂಧ ಮುಕ್ತರಾಗಿದ್ದರು. ಈ ವಿಡಿಯೋ ಬಹಿರಂಗಕ್ಕೂ ಎರಡು ದಿನಗಳ ಮುನ್ನ ಧನಂಜಯ ಹೊರ ಬಂದಿದ್ದ. ಹೀಗಾಗಿ ಈ ನೃತ್ಯದ ದೃಶ್ಯಾವಳಿ ನಾಲ್ಕು ವರ್ಷಗಳ ಹಳೆಯ ವಿಡಿಯೋ ಎಂದು ವರದಿಯಲ್ಲಿ ಸ್ಪಷ್ಟಪಡಿಸಿದ್ದಾರೆ.
ಒಟ್ಟಿನಲ್ಲಿ ಉತ್ತರನ ಪೌರುಷ ಒಲೆ ಮುಂದೆ.. ನನ್ನ ಪೌರುಷ ಮೀಡಿಯಾ ಮುಂದೆ ಎನ್ನುವಂತೆ ಸರ್ಕಾರ ವರ್ತಿಸುತ್ತಿದೆ.



