ತುಳುನಾಡಿನ ದೈವಗಳ ವಿಶೇಷತೆಯೇ ಅದು. ಸಾವಿರಾರು ದೈವಗಳನ್ನು ಜನ ನಂಬುತ್ತಾರೆ. ಆರಾಧಿಸುತ್ತಾರೆ. ಲಕ್ಷಾಂತರ ಜನ ಪೂಜಿಸುವ ದೈವಗಳಲ್ಲಿ ಒಂದು ಪಂಜುರ್ಲಿ ದೈವ. ಕಾಂತಾರದಲ್ಲಿ ಪ್ರಸ್ತಾಪವಾಗುವ ಅದೇ ಪಂಜುರ್ಲಿ ದೈವ. ಈ ದೈವದ ಮಹಿಮೆಗಳ ಬಗ್ಗೆ ನೂರಾರಲ್ಲ.. ಸಾವಿರಾರು ಕಥೆಗಳಿವೆ. ಆಗಾಗ್ಗೆ ದೈವ ತನ್ನ ಈ ಕೆಲಸಗಳ ಮೂಲಕವೇ ಇರುವಿಕೆ ತೋರಿಸುತ್ತಿರುತ್ತೆ. ಅಂತಾದ್ದೊಂದು ಘಟನೆ ಈಗ ಮತ್ತೊಮ್ಮೆ ಉಡುಪಿಯಲ್ಲಿಯೇ ನಡೆದಿದೆ.
ಒಂದೂವರೆ ವರ್ಷದ ಹಿಂದೆ ಅಂದ್ರೆ, ಫೆ.6, 2023ರಂದು ಕಾಪು ಪಾಂಗಾಳದಲ್ಲಿ ಕೋಲದಲ್ಲಿ ಒಂದು ಕೊಲೆ ನಡೆದಿತ್ತು. ಕೋಲ ನಡೆಯುತ್ತಿದ್ದ ಸ್ಥಳದಿಂದ ಕೇವಲ ನೂರಿನ್ನೂರು ಮೀಟರ್ ದೂರದಲ್ಲಿ ನಡೆದಿದ್ದ ಕೊಲೆ ಎಲ್ಲರನ್ನೂ ಬೆಚ್ಚಿಬೀಳಿಸಿತ್ತು. ಕೊಲೆಯಾದ ಯುವಕ ಶರತ್ ಶೆಟ್ಟಿ ವರ್ತೆ ಪಂಜುರ್ಲಿ ಭಕ್ತನಾಗಿದ್ದ. ಪಾತಕಿಗಳು ಶರತ್ ಶೆಟ್ಟಿಯನ್ನು ಚೂರಿಯಿಂದ ಇರಿದು ಇರಿದು ಕೊಂದಿದ್ದರು.
ಘಟನೆ ನಡೆದ ಸುಮಾರು ಒಂದೂ..ಒಂದೂವರೆ ತಿಂಗಳ ನಂತರ ಮತ್ತೊಮ್ಮೆ ಇಡೀ ಗ್ರಾಮಸ್ಥರೆಲ್ಲ ಸೇರಿ ದೈವಕೋಲ ಮಾಡಿದ್ದರು. ದೈವದ ನೇಮ ವೇಳೆ ಮಗನ ಕೊಲೆ ನಡೆಸಿದ ಆರೋಪಿ ಇನ್ನೂ ಪತ್ತೆಯಾಗದಿರುವ ಬಗ್ಗೆ ದೈವಕ್ಕೆ ದೂರು ನೀಡಿ ಅಳಲು ತೋಡಿಕೊಂಡಿತ್ತು ಶರತ್ ಶೆಟ್ಟಿ ಕುಟುಂಬ. ಆಗ ವರ್ತೆ ಪಂಜುರ್ಲಿ ಆರೋಪಿ ಎಲ್ಲೇ ಅಡಗಿದ್ದರೂ ಕಣ್ಣಮುಂದೆ ತಂದು ನ್ಯಾಯಸ್ಥಾನದ ಮುಂದೆ ನಿಲ್ಲಿಸುತ್ತೇನೆ ಎಂದು ಅಭಯ ನೀಡಿತ್ತು.
ವರ್ಷ ಕಳೆಯುವ ಹೊತ್ತಿಗೆ ಮುಖ ಆರೋಪಿ ಯೋಗೀಶ್ ಆಚಾರ್ಯ ಕೋರ್ಟ್ ಮುಂದೆ ಶರಣಾಗಿದ್ದಾನೆ. ತಾನೇ ತಾನಾಗಿ ಬಂದು ಕೋರ್ಟಿನ ಎದುರು ಶರಣಾಗಿರುವ ಯೋಗೀಶ್ ಆಚಾರ್ಯನನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
2023ರ ಫೆಬ್ರವರಿ 5ರಂದು ಉಡುಪಿಯಲ್ಲಿನ ಪಾಂಗಾಳ ಎಂಬಲ್ಲಿ ಬಬ್ಬು ಸ್ವಾಮಿ ದೈವಸ್ಥಾನದ ನೇಮದಲ್ಲಿ ಶರತ್ ಶೆಟ್ಟಿ ಭಾಗವಹಿಸಿದ್ದ. ಯಾವುದೋ ವಿಚಾರದ ಬಗ್ಗೆ ಮಾತನಾಡಬೇಕಿದೆ ಎಂದು ಕರೆಸಿಕೊಂಡಿದ್ದ ಯೋಗೀಶ್ ಆಚಾರ್ಯಹಾಗೂ ಆತನ ಸಂಗಡಿಗರು ಶರತ್ ಅವರನ್ನು ಕೊಂದು ಪರಾರಿಯಾಗಿದ್ದರು. ತನಿಖೆಯ ವೇಳೆ ಎಷ್ಟೇ ಹುಡುಕಾಡಿದರೂ ಆರೋಪಿಗಳು ಪತ್ತೆಯಾಗಿರಲಿಲ್ಲ.
ಆನಂತರದಲ್ಲಿ ಶರತ್ ಅವರ ಕುಟುಂಬಸ್ಥರು 2023ರ ಮಾ. 24ರಂದು ಪಾಂಗಾಳದ ತಮ್ಮ ಮನೆಯಲ್ಲಿ ವರ್ತೆ ಪಂಜುರ್ಲಿಗೆ ನೇಮೋತ್ಸವ ನಡೆಸಿದ್ದರು. ಆರೋಪಿಯನ್ನು ಪಾತಾಳದಲ್ಲಿದ್ದರೂ ಹುಡುಕಿ ಮುಂದೆ ನಿಲ್ಲಿಸುತ್ತೇನೆ ಎಂದು ದೈವ ಅಭಯ ನೀಡಿತ್ತು. ಒಂದು ವರ್ಷಕ್ಕೂ ಅಧಿಕ ಕಾಲದಿಂದ ತಲೆಮರೆಸಿಕೊಂಡಿದ್ದ ಆರೋಪಿ ಇದೀಗ ಕೋರ್ಟ್‌ಗೆ ಶರಣಾಗಿರುವುದರ ಹಿಂದೆ ಪಂಜುರ್ಲಿ ದೈವದ ಮಹಿಮೆ ಇದೆ ಎಂದು ಸ್ಥಳೀಯರು ನಂಬಿದ್ದಾರೆ. ದೈವದ ಕೋಲಗಳಲ್ಲಿ ಪ್ರಶ್ನೆಗಳನ್ನು ಸಾರ್ವಜನಿಕರು ಹಾಕುವುದು, ಆ ಪ್ರಶ್ನೆಗಳಿಗೆ ದೈವ ಉತ್ತರ ಕೊಡುವುದು ಹಾಗೂ ಆ ಉತ್ತರವು ಆನಂತರದಲ್ಲಿ ನಿಜವಾಗಿ ಪರಿಣಮಿಸುವುದು ತುಳು ದೈವರಾಧನೆಯಲ್ಲಿ ಅಪರೂಪವೇನಲ್ಲ. ಇದು ಇನ್ನೊಂದು ಘಟನೆಯಷ್ಟೇ.



