ದಾವಣಗೆರೆ ಒಂದು ಐತಿಹಾಸಿಕ ಸಮಾವೇಶಕ್ಕೆ ಮುನ್ನುಡಿ ಬರೆದಿದೆ. ಐತಿಹಾಸಿಕ ವೀರಶೈವ ಪೀಠಾಚಾರ್ಯರ ಹಾಗೂ ಶಿವಾಚಾರ್ಯರ ಶೃಂಗ ಸಮ್ಮೇಳನಕ್ಕೆ ಸಾಕ್ಷಿಯಾಗಿದೆ. ಇದು 16 ವರ್ಷಗಳ ಬಳಿಕ ಎಂಬುದು ಈ ವಿಶೇಷತೆಗೆ ಕಾರಣ. ಕೇದಾರ, ಕಾಶಿ, ಉಜ್ಜಯಿನಿ, ಬಾಳೆಹೊನ್ನೂರು ಹಾಗೂ ಶ್ರೀಶೈಲ ಪೀಠಗಳ ಪೀಠಾಚಾರ್ಯರ ಜತೆಗೆ ರಾಜ್ಯದ ಉದ್ದಗಲಕ್ಕೂ ಇರುವ ಗುರು, ವಿರಕ್ತ ಪರಂಪರೆಯ ಮಠಗಳ ಮಠಾಧೀಶರು ಈ ಐತಿಹಾಸಿಕ ಸಮಾರಂಭಕ್ಕೆ ಸಾಕ್ಷಿಯಾಗಿದ್ದಾರೆ. ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ, ಈ ಹೋರಾಟದ ಮುಂಚೂಣಿಯಲ್ಲಿ ನಿಂತು, ಸಮಾವೇಶ ಮಾಡಿಸಿದವರು. 94ರ ವಯಸ್ಸಿನಲ್ಲಿ ಶಾಮನೂರು ಅವರ ಈ ಉತ್ಸಾಹವನ್ನು ಮೆಚ್ಚಬೇಕಾದದ್ದೇ. ಆದರೆ.. ಇಲ್ಲಿಯೂ ಒಂದು ಸಮಸ್ಯೆ ಇದೆ.
ವೀರಶೈವ ಪಂಚಾಚಾರ್ಯರು ದೂರವಾಗಿದ್ದಕ್ಕೆ ಕಾರಣ ಬೇರೇನಲ್ಲ. ವೈಯಕ್ತಿಕ ಪ್ರತಿಷ್ಠೆಗಳೇ. ವ್ಯಕ್ತಿಗಳಿಗಿಂತ ಪೀಠ ದೊಡ್ಡದು ಎಂಬ ಪಂಚಾಚಾರ್ಯರ ಮಾತೇನೋ ಸರಿ. ಆದರೆ.. ತಮಾಷೆ ಎನ್ನಿಸಬಹುದಾದ ಕಾರಣಕ್ಕೆ ಈ ಸ್ವಾಮಿಗಳಲ್ಲಿ ಒಗ್ಗಟ್ಟು ಇರಲಿಲ್ಲ ಎನ್ನುವುದು ಸ್ಪಷ್ಟ. ಅವರ ಪೀಠಕ್ಕಿಂತ ತಮ್ಮ ಪೀಠ ಒಂದು ಇಂಚಾದರೂ ಹೆಚ್ಚು ಎತ್ತರ ಇರಬೇಕು. ಸ್ವಾಗತ ಭಾಷಣದಲ್ಲಿ ಅವರಿಗಿಂತ ಮೊದಲು ತಮ್ಮ ಹೆಸರು ಹೇಳಬೇಕು. ಫೋಟೋಗಳಲ್ಲಿ ತಮ್ಮ ಫೋಟೋ ದೊಡ್ಡದಾಗಿರಬೇಕು.. ಎಂಬ ವಿಚಿತ್ರ ಹಠಗಳು.. ಪಂಚಾಚಾರ್ಯರನ್ನು ಒಟ್ಟಿಗೇ ಬರುವುದಕ್ಕೆ ಅಡ್ಡಿಯಾಗಿದ್ದವು ಎಂದರೆ ನಗು ಬರುವುದು ಸಹಜ. ಆದರೆ.. ದೊಡ್ಡ ದೊಡ್ಡ ನಾಯಕರೂ ಕೂಡಾ ಈ ವಿಷಯವನ್ನು ಗುಟ್ಟು ಗುಟ್ಟಾಗಿ ಒಪ್ಪಿಕೊಳ್ಳುತ್ತಾರೆ ಎನ್ನುವುದೂ ನಿಜ.
ಇನ್ನೊಂದು ವಿಷಯ ಏನೆಂದರೆ.. ರಾಜ್ಯದಲ್ಲಿ ಸುಮಾರು 4 ಸಾವಿರ ಲಿಂಗಾಯತ ಮಠಗಳಿವೆ. ವಿರಕ್ತ ಮಠಗಳಿವೆ. ಪಂಚಪೀಠಗಳೇನೋ ದೊಡ್ಡ ಮಠಗಳು. ಶ್ರೀಮಂತ ಮಠಗಳೂ ಹೌದು. ಆದರೆ.. ರಾಜ್ಯದಲ್ಲಿರುವ ಎಷ್ಟೋ ಮಠಗಳು ಸೇವೆಯನ್ನೇ ನಂಬಿ ಬದುಕುತ್ತಿವೆ. ಬಡ ಮಠಗಳು. ಬಡವರಿಗೆ ಸ್ವಾಭಿಮಾನ ಹೆಚ್ಚು. ಅದು ಮಠಗಳವರಿಗೂ ಅಷ್ಟೇ. ಅವರನ್ನು ಗೌರವದಿಂದ ನಡೆಸಿಕೊಳ್ಳಬೇಕು. ಇದು ಪಂಚಪೀಠಗಳು ಪಾಲಿಸಬೇಕಿರುವ ಇನ್ನೊಂದು ವಿಚಾರ.
ಏಕೆಂದರೆ ಬಡವರ ಮನೆಗೆ ಶಿವ ಪೂಜೆಗೆ ಕರೆದರೆ ಈ ಪಂಚಪೀಠದ ಸ್ವಾಮಿಗಳು ಹೋಗುವುದೇ ಇಲ್ಲ. ಅದು ದುಡ್ಡಿದ್ದವರಿಗೆ ಮಾತ್ರ ಎಂಬಂತಾಗಿ ಹೋಗಿದೆ. ಇಂತಹವುಗಳನ್ನು ತಿದ್ದಿಕೊಳ್ಳದೆ ಒಂದು ಸಮಾವೇಶದಲ್ಲಿ ಒಂದು ದಿನ ವೇದಿಕೆಯಲ್ಲಿ ಅಕ್ಕಪಕ್ಕ ಕುಳಿತರೆ ಒಗ್ಗಟ್ಟು ಮೂಡುತ್ತದೆಯೇ.. ಇದು ಸಾಮಾನ್ಯ ವೀರಶೈವ ಲಿಂಗಾಯತರ ಪ್ರಶ್ನೆ. ಅದನ್ನು ತಿದ್ದಿಕೊಳ್ಳದೇ ಹೋದರೆ.. ಲಿಂಗಾಯತರು ಬೇರೆ. ವೀರಶೈವರು ಬೇರೆ.. ಎಂಬ ವಾದಕ್ಕೆ ಬಲ ಬರುತ್ತದೆ. ಲಿಂಗಾಯತರಲ್ಲಿಯೇ ಪಂಚಮಸಾಲಿಗಳೇ ಬೇರೆ ಎಂಬ ವಾದಕ್ಕೂ ಶಕ್ತಿ ಬರುತ್ತದೆ. ಮುಂದಿನ ದಿನಗಳಲ್ಲಿ ಅದು ಇನ್ನಷ್ಟು ಮತ್ತಷ್ಟು ವಿಭಜನೆಗೆ ಕಾರಣವಾಗಬಹುದು. ಇಂತಹ ಎಚ್ಚರಿಕೆಗಳನ್ನು ಪಂಚಪೀಠಗಳಾದಿಯಾಗಿ ಎಲ್ಲರೂ ಪಾಲಿಸಬೇಕಾಗಿದೆ.
ಇದೆಲ್ಲದರ ನಡುವೆ ಪಕ್ಷಭೇದ ಮರೆತು ಶಾಮನೂರು ಶಿವಶಂಕರಪ್ಪ, ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಮಹಾಸಭಾ ಉಪಾಧ್ಯಕ್ಷ ಅಣಬೇರು ರಾಜಣ್ಣ, ರಾಜ್ಯಾಧ್ಯಕ್ಷ ಶಂಕರ ಬಿದರಿ, ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ, ಡಾ.ಎ.ಎಚ್. ಶಿವಯೋಗಿಸ್ವಾಮಿ, ಬಿ.ಎಂ. ವಾಗೀಶ ಸ್ವಾಮಿ, ಮುರುಗೇಶ ಆರಾಧ್ಯ, ಆರ್.ಟಿ. ಪ್ರಶಾಂತ್, ಚಂದ್ರಶೇಖರ ಪೂಜಾರ್, ಕೆ.ಎಂ. ಸುರೇಶ್, ಮಾಡಾಳು ಮಲ್ಲಿಕಾರ್ಜುನ.. ಎಲ್ಲರೂ ಇದ್ದರು ಎನ್ನುವುದೇ ಸಮಾಧಾನ.



