ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಸಮಾಜದ ಟ್ರಸ್ಟಿನ ಸರ್ವ ಸದಸ್ಯರುಗಳ ಸಭೆಯಲ್ಲಿ ನೂತನ ಅಧ್ಯಕ್ಷರನ್ನಾಗಿ ಶಾಸಕ ವಿಜಯಾನಂದ ಕಾಶಪ್ಪನವರ್ ಅವರನ್ನು ಆಯ್ಕೆ ಮಾಡಲಾಗಿದೆ. ಪ್ರಧಾನ ಕಾರ್ಯದರ್ಶಿಯಾಗಿ ನೀಲಕಂಠ ಅಸೂಟಿ, ಕಾರ್ಯಧ್ಯಕ್ಷರಾಗಿ ರಾಜಶೇಖರ ಮೆಣಸಿನಕಾಯಿ ಹಾಗೂ ಗೌರವ ಅಧ್ಯಕ್ಷರನ್ನಾಗಿ ಪ್ರಬಣ್ಣ ಹುಣಸಿಕಟ್ಟಿ ನೂತನ ಪದಾಧಿಕಾರಿಗಳಾಗಿ ಆಯ್ಕೆಯಾಗಿದ್ದಾರೆ. ಈ ಹಿಂದೆ ನೇಮಕಗೊಳಿಸಿದ ರಾಷ್ಟ್ರೀಯ ಘಟಕ, ರಾಜ್ಯ ಯುವ ಘಟಕ, ಮಹಿಳಾ ಘಟಕ ಸೇರಿದಂತೆ ಜಿಲ್ಲಾ ತಾಲೂಕ ಘಟಕಗಳ ಅಧ್ಯಕ್ಷ ಪದಾಧಿಕಾರಿಗಳನ್ನು ತಕ್ಷಣ ಜಾರಿಗೆ ಬರುವಂತೆ ವಿಸರ್ಜಿಸಲಾಗಿದೆ. ರಾಷ್ಟ್ರೀಯ ಘಟಕದ ಅಧ್ಯಕ್ಷ ಸ್ಥಾನಕ್ಕೆ ಪ್ರಬಣ್ಣ ಹುಣಸಿಕಟ್ಟಿ ರಾಜೀನಾಮೆ ಸಲ್ಲಿಸಿದ್ದು, ಅದೇ ಸಭೆಯಲ್ಲಿ ವಿಜಯಾನಂದ ಕಾಶಪ್ಪನವರ್ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ. ಇದು ಜಯಮೃತ್ಯುಂಜಯ ಸ್ವಾಮೀಜಿ ಅವರ ಪದಚ್ಯುತಿ ಸಮಯ ಹತ್ತಿರವಾಗಿದೆಯೇ ಎಂಬ ಕುತೂಹಲಕ್ಕೆ ಕಾರಣವಾಗಿದೆ.
ಏಪ್ರಿಲ್ 19ರಂದು ಪಂಚಮಸಾಲಿ ಟ್ರಸ್ಟ್ ಸಭೆ ಇದೆ. ಆ ಸಭೆಯಲ್ಲಿ ಕೂಡಲಸಂಗಮ ಪೀಠದ ಜಯಮೃತ್ಯುಂಜಯ ಸ್ವಾಮೀಜಿ ಅವರನ್ನು ಪದಚ್ಯುತಿಗೊಳಿಸುವ ಬಗ್ಗೆ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ. ವಿಶೇಷ ಎಂದರೆ ಈ ಸಭೆ ಇದ್ದದ್ದು ಏಪ್ರಿಲ್ 22ಕ್ಕೆ. ಆದರೆ ಯಾವಾಗ ಜಯಮೃತ್ಯುಂಜಯ ಸ್ವಾಮೀಜಿ, ಏಪ್ರಿಲ್ 20ಕ್ಕೇ ಸಭೆ ಕರೆದರೋ.. ಆಗ ದಿಢೀರನೆ ವಿಜಯಾನಂದ ಕಾಶಪ್ಪನವರ್ ಏಪ್ರಿಲ್ 19ಕ್ಕೆ ಸಭೆ ಕರೆದರು. ಈ ಮೂಲಕ ಏಪ್ರಿಲ್ 20ರ ಸಭೆ ನಡೆಸುವುದಕ್ಕೆ ಬಸಜ ಜಯಮೃತ್ಯುಂಜಯ ಸ್ವಾಮೀಜಿಗೆ ಅಧಿಕಾರವೇ ಇರಬಾರದು, ಅಷ್ಟರೊಳಗೆ ಸ್ವಾಮೀಜಿಗಳನ್ನು ಪೀಠದಿಂದ ಕೆಳಗೆ ಇಳಿಸಬೇಕು ಎನ್ನುವ ನಿರ್ಧಾರಕ್ಕೆ ಕಾಶಪ್ಪನವರ್ ಬಂದಿದ್ದಾರಂತೆ. ಇದೀಗ ಟ್ರಸ್ಟ್ ಅಧ್ಯಕ್ಷರಾಗಿ ಕಾಶಪ್ಪನವರ್ ನೇಮಕಗೊಂಡಿರುವುದರ ಹಿಂದೆ ಇದೇ ಉದ್ದೇಶ ಇದೆ ಎನ್ನಲಾಗಿದೆ.
ಪಂಚಮಸಾಲಿಗಳಲ್ಲೇ ಗೊಂದಲ..!
ವಿಜಯಾನಂದ ಕಾಶಪ್ಪನವರ್ ಅವರೇನೋ ಸ್ವಾಮೀಜಿಗಿಂತ ಟ್ರಸ್ಟ್ ದೊಡ್ಡದು. ಸಮಾಜ ದೊಡ್ಡದು. ಸಮುದಾಯ ದೊಡ್ಡದು. ನಮ್ಮಿಂದ ಸ್ವಾಮೀಜಿ. ಸ್ವಾಮೀಜಿಯಿಂದ ನಾವಲ್ಲ ಎನ್ನುತ್ತಿದ್ದಾರೆ. ಯತ್ನಾಳ್ ಜೊತೆ ನಿಂತ ಕಾರಣಕ್ಕೇ ರೊಚ್ಚಿಗೆದ್ದಿರುವ ಕಾಶಪ್ಪನವರ್, ಸ್ವಾಮೀಜಿಗಳನ್ನು ಪೀಠದಿಂದ ಕೆಳಗಿಳಿಸಿಯೇ ಸಿದ್ಧ ಎಂದು ಹೂಂಕರಿಸುತ್ತಿದ್ದಾರೆ. ಹಾಗಂತ ಅವರ ವಾದಕ್ಕೆ ವಿರೋಧ ವ್ಯಕ್ತವಾಗಿಲ್ಲ ಎಂದಲ್ಲ.
ಪಂಚಮಸಾಲಿ ಶ್ರೀಗಳ ಕುರಿತು ಅಸಂಬದ್ಧ ಹೇಳಿಕೆ ನೀಡಿದರೆ ಪರಿಣಾಮ ನೆಟ್ಟಗಿರಲ್ಲ ಎಂದು ಪಂಚಮಸಾಲಿ ಸಮಾಜದ ವಿಜಯಪುರ ಜಿಲ್ಲಾ ಅಧ್ಯಕ್ಷ ಬಿ.ಎಂ. ಪಾಟೀಲ (ದೇವರ ಹಿಪ್ಪರಗಿ) ಎಚ್ಚರಿಕೆ ನೀಡಿದ್ದಾರೆ. ಸಮಾಜದ ಕೆಲ ಧುರೀಣರು ಎಂದು ಹೇಳಿಕೊಂಡು ತಮಗೆ ತಾವೇ ಅನಧಿಕೃತ ಟ್ರಸ್ಟ್ ರಚಿಸಿಕೊಂಡು ಶ್ರೀಗಳನ್ನು ಪೀಠದಿಂದ ಉಚ್ಚಾಟಿಸುವುದಾಗಿ ಪತ್ರಿಕಾ ಗೋಷ್ಠಿಯಲ್ಲಿ ಹೇಳಿಕೆ ನೀಡಿದ್ದಾರೆ. ಇದು ತಿರುಕನ ಕನಸಾಗಿದ್ದು, ಶ್ರೀಗಳು ಕೋಟ್ಯಂತರ ಭಕ್ತರ ಹೃದಯದಲ್ಲಿ ವಿರಾಜಮಾನರಾಗಿದ್ದಾರೆ. ಅವರನ್ನು ಉಚ್ಛಾಟನೆ ಮಾಡುತ್ತೇವೆ ಎಂದು ಹೇಳಿಕೊಂಡು ತಿರುಗಾಡುವವರನ್ನೇ ಜನರು ಉಚ್ಛಾಟನೆ ಮಾಡುವದಲ್ಲದೆ. ಸಮಯ ನೋಡಿಕೊಂಡು ತಕ್ಕ ಉತ್ತರ ನೀಡಲು ಸಿದ್ಧರಾಗಿದ್ದಾರೆ. ಸಮಾಜದ ನಾಯಕರೆಂದು ಹೇಳಿಕೊಂಡು ತಿರುಗಾಡುವ ವಿಜಯಾನಂದ ಕಾಶಪ್ಪನವರ ಬೆಳಗಾವಿಯಲ್ಲಿ ಸಮಾಜ ಬಾಂಧವರ ಮೇಲೆ ಸರಕಾರ ಅಮಾನುಷ ಲಾಠಿ ಚಾರ್ಜ್ ಮಾಡಿದಾಗ ಎಲ್ಲಿ ಕುಳಿತಿದ್ದರು. ಕನಿಷ್ಠ ಗಾಯಗೊಂಡ ಸಮಾಜ ಬಾಂಧವರಿಗೆ ಸಾಂತ್ವನ ಹೇಳದೆ ಸಮಾಜದ ಕುರಿತು ಸರ್ಕಾರಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ. ಇಂಥವರನ್ನು ಎಲ್ಲ ಸಮಾಜ ಬಾಂಧವರು ಒಮ್ಮತದಿಂದ ಮೌಖಿಕವಾಗಿ ಕಿತ್ತು ಹಾಕಿದ್ದಾರೆ. ಶ್ರೀಗಳನ್ನು ಪೀಠದಿಂದ ಉಚ್ಚಾಟಿಸುವ ನೈತಿಕ ಹಕ್ಕು ಕಾಶಪ್ಪನವರಿಗಾಗಲಿ, ಅವರ ಅನಧಿಕೃತ ಟ್ರಸ್ಟಗಾಗಲಿ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದೆಲ್ಲದರ ನಡುವೆ ಏಪ್ರಿಲ್ 19ರಂದು ಟ್ರಸ್ಟ್ ಮೀಟಿಂಗ್ ಫಿಕ್ಸ್ ಆಗಿದೆ. ಅತ್ತ ಏಪ್ರಿಲ್ 20ರಂದು ಸ್ವಾಮೀಜಿ ಮೀಟಿಂಗ್ ಕೂಡಾ ಫಿಕ್ಸ್ ಆಗಿದೆ.
ಕಾಶಪ್ಪನವರ್ ಬೆಂಬಲಕ್ಕೆ ಶೇಖರಪ್ಪ ಬಾದವಾಡಗಿ, ಗಂಗಣ್ಣ ಬಾಗೇವಾಡಿ, ಕಲ್ಲಪ್ಪ ಎಲಿವಾಳ, ಕುಮಾರ ಕುಂದನಹಳ್ಳಿ , ಶಿವಾನಂದ ಕಂಠಿ, ಚಂದ್ರಶೇಖರ್ ಹುಣಸಿಕಟ್ಟಿ, ಮುತ್ತಣ್ಣ ಬಾಡಿನ, ಭರತ್ ಅಸೂಟಿ, ಎಂ.ಎಸ್.ಪಾಟೀಲ್, ಎಂ.ಎಸ್. ಮಲ್ಲಾಪುರ, ಲಕ್ಷ್ಮಣ ನರಸಾಪುರ್, ಮಹದೇವಪ್ಪ ದಾಟನಾಳ ಮುಂತಾದವರಿದ್ದರೆ, ಸ್ವಾಮೀಜಿ ಪರ ಶ್ರೀಶೈಲ ಬುಕ್ಕಣ್ಣಿ, ಜಿಲ್ಲಾ ಯುವ ಘಟಕ ಕಾರ್ಯದರ್ಶಿ ನಿಂಗನಗೌಡ ಸೊಲ್ಲಾಪುರ. ನಗರ ಘಟಕ ಉಪಾಧ್ಯಕ್ಷ ಸಿದ್ದು ಹಳ್ಳೂರ, ಯುವ ಮುಖಂಡ ಮಂಜುನಾಥ ನಿಡೋಣಿ, ಬಸಲಿಂಗಪ್ಪ ಜಂಗಮಶಟ್ಟಿ (ಬಬಲೇಶ್ವರ), ಪಂಚಸೇನೆ ನಗರ ಘಟಕ ಅಧ್ಯಕ್ಷ ಸಂತೋಷ ಮುಂಜಣ್ಣಿ, ಸಂತೋಷ ಬಿರಾದಾರ ಮುಂತಾದವರಿದ್ದಾರೆ.