ಪಂಚಮಸಾಲಿ ಪೀಠದ ಗಲಾಟೆ ಲೋ-ಲೆವೆಲ್ಲಿಗೆ ಇಳಿದಿದೆ. ತಪ್ಪು ಯಾರದ್ದು.. ಗೊತ್ತಿಲ್ಲ. ಸತ್ಯ ಹೇಳ್ತಿರೋದು ಯಾರು.. ಗೊತ್ತಿಲ್ಲ. ಸುಳ್ಳು ಹೇಳ್ತಿರೋದು ಯಾರು.. ಗೊತ್ತಿಲ್ಲ. ಆದರೆ.. ಬಸವಜಯ ಮೃತ್ಯುಂಜಯ ಸ್ವಾಮೀಮಿ V/S ವಿಜಯಾನಂದ ಕಾಶಪ್ಪನವರ್ ಗಲಾಟೆಯಲ್ಲಿ ಒಂದು ಸಮುದಾಯ, ಒಂದು ಪೀಠದ ಗೌರವ ಹಾಳಾಗುತ್ತಿರುವುದಂತೂ ಸತ್ಯ.
ಇತ್ತೀಚೆಗೆ ಪಂಚಮಸಾಲಿ ಸ್ವಾಮೀಜಿಗಳ ಮಠಕ್ಕೆ ಬೀಗ ಹಾಕಲಾಗಿತ್ತು. ಸ್ವಾಮೀಜಿಗೇ ಗೊತ್ತಿಲ್ಲದಂತೆ ನಡೆದಿದ್ದ ಘಟನೆ ಅದು. ಆದರೆ.. ವಿಜಯಾನಂದ ಕಾಶಪ್ಪನವರ್ ಸೂಚನೆ ಮೇರೆಗೇ ನಡೆದಿತ್ತು. ಅದಾದ ಮೇಲೆ ಕೇಸ್ ಆಗಿ, ಎಫ್‌ಐಆರ್ ಆಗಿ.. ರಂಪರಾಮಾಯಣ ಆಗಿ.. ಸಂಧಾನವಾಗಿ.. ಕೊನೆಗೆ ಸ್ವಾಮೀಜಿಗಳು ಮಠದಲ್ಲಿಯೇ ಉಳಿಯುವಂತಾಗಿತ್ತು. ಅದಾದ ಮೇಲೆ ಈಗ ಸ್ವಾಮೀಜಿ ಆಸ್ಪತ್ರೆ ಸೇರಿದ್ದಾರೆ.
ಕೂಡಲಸಂಗಮ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಅವರ ಆರೋಗ್ಯದಲ್ಲಿ ಏರುಪೇರು ಕಂಡ ಹಿನ್ನೆಲೆ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ತಲೆನೋವು, ವಾಂತಿ ಮತ್ತು ಎದೆನೋವು ಕಾಣಿಸಿಕೊಂಡ ಹಿನ್ನೆಲೆ, ಭಕ್ತರೇ.. ಆಸ್ಪತ್ರೆಗೆ ಕರೆತಂದಿದ್ದಾರೆ. ಕೆರೂಡಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆದರೆ.. ವಿಜಯಾನಂದ ಕಾಶಪ್ಪನವರ್ ಪ್ರಕಾರ.. ಸ್ವಾಮೀಜಿಯದ್ದು ನಾಟಕ.
ಒಂದು ಮೂಲದ ಪ್ರಕಾರ ಮಠಕ್ಕೆ ಬೀಗ ಹಾಕಿದ್ದು, ಬಹಿರಂಗವಾಗಿ ತಮ್ಮನ್ನು ಬೈದಿದ್ದು, ಭಕ್ತರ ವಿರುದ್ಧ ಕೇಸು ಹಾಕಿಸಿದ್ದು.. ಇದೆಲ್ಲದರಿಂದ ಜಯಮೃತ್ಯುಂಜಯ ಸ್ವಾಮೀಜಿ ನೊಂದಿದ್ದರು. ಖಿನ್ನತೆಗೆ ಗುರಿಯಾಗಿದ್ದರು. ಹೀಗಾಗಿ ತಲೆನೋವು, ವಾಂತಿ, ಎದೆನೋವು ಬಂದಿದೆ ಎನ್ನುತ್ತಾರೆ. ಇದು ಭಕ್ತರ ಒಂದು ಗಣದ ವಾದ.
ಮಧ್ಯಾಹ್ನ ಸ್ವಾಮೀಜಿಗೆ ಫುಡ್ ಫಾಯಿಸನ್ ಆಗಿತ್ತು. ಡಾಕ್ಟರ್ಗೆ ಕೇಳಿ ಮಾತ್ರೆ ತೆಗೆದುಕೊಂಡಿದ್ರು ಬಳಿಕ ರಾತ್ರಿ ಸ್ವಲ್ಪ ಚೇತರಿಸಿಕೊಂಡಿದ್ರು. ಆದ್ರೆ ಬೆಳಿಗ್ಗೆ ತಲೆನೋವು, ವಾಂತಿ, ಎದೆ ನೋವು ಕಾಣಿಸಿಕೊಂಡಿತ್ತು. ಇದು ಕಲಬುರಗಿ ಪಂಚಮಸಾಲಿ ಟ್ರಸ್ಟ್ ಅಧ್ಯಕ್ಷ ಮಲ್ಲನಗೌಡ ಅವರ ಹೇಳಿಕೆ. ಅಂದಹಾಗೆ ಇವರ ವಿರುದ್ಧವೂ ದೂರು ದಾಖಲಾಗಿದೆ. ಎಫ್‌ಐಆರ್ ಆಗಿದೆ.
ಆದರೆ.. ಕಾಶಪ್ಪನವರ್ ತಣ್ಣಗಾಗಿಲ್ಲ. ಜಯಮೃತ್ಯುಂಜಯ ಸ್ವಾಮೀಜಿ ನಾಟಕ ಮಾಡ್ತಿದ್ಧಾರೆ. ಯಾವ ಸಮಸ್ಯೆಯೂ ಇಲ್ಲ ಎನ್ನುತ್ತಿದ್ದಾರೆ. ಮಠಕ್ಕೆ ಹೊಸ ಸ್ವಾಮೀಜಿ ಹುಡುಕಿಕೊಳ್ಳುತ್ತೇವೆ. ಈಗಿರುವ ಸ್ವಾಮೀಜಿ ಗೌರವದಿಂದ ಪೀಠ ಬಿಟ್ಟು ಹೋಗುವುದು ಒಳ್ಳೆಯದು ಎಂದಿದ್ದಾರೆ.
ಜಯಮೃತ್ಯುಂಜಯ ಸ್ವಾಮೀಜಿ ಆಸ್ಪತ್ರೆ ಸೇರಿರೋದು ಪ್ರಚಾರದ ಒಂದು ಭಾಗ ಸ್ವಾಮೀಜಿಗಳಿಗೆ ಇರಲು ಅಷ್ಟೇ ಜಾಗ ಕೊಟ್ಟಿದ್ದೇವೆ, ಆಚಾರ ವಿಚಾರ ಪ್ರಚಾರ ಮಾಡುವಂತೆ ಹೇಳಿದ್ದೇವೆ. ಊರೂರು ಸಂಚಾರ ಮಾಡು ಎಂದು ಹೇಳಿಲ್ಲ. ಅವರು ಬೆಳಗಾವಿ, ಬೆಂಗಳೂರು, ಹುಬ್ಬಳ್ಳಿಗಳಲ್ಲಿ ಮನೆ ಮಾಡಿಕೊಂಡಿದ್ದಾರೆ. ಮಠ ಮುನ್ನಡೆಸಬೇಕಾದ ಶ್ರೀಗಳು ಒಂದು ಪಕ್ಷದ ವೇದಿಕೆಯ ಮೇಲೆ ಕೂತಿದ್ದಾರೆ. ಅಗ್ರ ನಾಯಕರು ಸ್ವಾಮೀಜಿಗಳಿಗೆ ಹುಬ್ಬಳ್ಳಿ- ಬೆಳಗಾವಿ ನಡುವೆ ಮಠ ಕಟ್ಟುವುದಾಗಿ ಹೇಳಿದ್ದಾರೆ. ಶ್ರೀಗಳು ಖುದ್ದು ಮಲಪ್ರಭಾ ನದಿ ದಂಡೆ ಮೇಲೆ ಮಠ ಕಟ್ಟಿಕೊಳ್ಳುವುದಾಗಿ ಹೇಳಿದ್ದಾರೆ. ಅವರನ್ನ ಹೊರಗೆ ಹೋಗಿ ಎಂದು ಹೇಳಲು ನಮಗೆ ಸಾಧ್ಯವಿಲ್ಲ; ಪೀಠ ತ್ಯಾಗ ಮಾಡುವಂತೆ ಹೇಳುವಷ್ಟು ದೊಡ್ಡವರಲ್ಲ. ಅವರೇ ಸ್ವತಃ ಮಠ ಬಿಟ್ಟು ಹೋಗುತ್ತಾರೆ ಎಂದು ವಿಜಯೇಂದ್ರ ಕಾಶಪ್ಪನವರ್ ಹೇಳಿದ್ದಾರೆ.
ಈ ಮಧ್ಯೆ ಲಕ್ಷ್ಮೀ ಹೆಬ್ಬಾಳ್ಕರ್ ಪ್ರತಿಕ್ರಿಯೆ ನೀಡಿದ್ದಾರೆ. ವಿಜಯಾನಂದ ಕಾಶಪ್ಪನವರ್ ಅವರು ಮಠಕ್ಕೆ ಬೀಗ ಹಾಕಿಸಿದ್ದನ್ನು ಖಂಡಿಸಿದ್ದಾರೆ. ನಾನು ಕಾಂಗ್ರೆಸ್-ಬಿಜೆಪಿ ಅಂತ ಸಮಾಜವನ್ನು ತೆಗೆದುಕೊಳ್ಳೊಲ್ಲ, ಆ ರೀತಿ ಬೀಗ ಹಾಕೋದು ಸಭ್ಯತೆ ಅಲ್ಲಾ. ಇದನ್ನು ಖಂಡಿಸುತ್ತೆನೆ. ಎರಡು ಮೂರು ದಿನಗಳಿಂದ ಗುರುಗಳ ಸಂಪರ್ಕದಲ್ಲಿದ್ದೇನೆ ಎಂದಿದ್ದಾರೆ. ಲಕ್ಷ್ಮೀ ಹೆಬ್ಬಾಳ್ಕರ್ ಕೂಡಾ ಪಂಚಮಸಾಲಿ ಸಮುದಾಯದ ನಾಯಕಿ. ಸಚಿವೆಯೂ ಹೌದು. ಒಟ್ಟಿನಲ್ಲಿ ಪಂಚಮಸಾಲಿ ಸಮುದಾಯ ಇಬ್ಭಾಗವಾಗಿರುವುದು ಸತ್ಯ.



