ಪ್ರತಿ ಹೋರಾಟಗಳು ತೀವ್ರ ಸ್ವರೂಪಕ್ಕೆ ತಿರುಗುವುದು ಚುನಾವಣೆ ಹೊತ್ತಿನಲ್ಲೇ. ಬೇಡಿಕೆಗಳನ್ನು ಈಡೇರಿಸಿಕೊಳ್ಳುವುದಕ್ಕೆ ಸದನ ನಡೆಯುವಾಗಲೇ ಪ್ರತಿಭಟನೆ ನಡೆಸುವುದು ಒಂದು ಸಂಪ್ರದಾಯವಾದರೆ, ಮೀಸಲಾತಿ ಮೊದಲಾದ ರಾಜಕೀಯ ನಿರ್ಧಾರಗಳ ಕಿಚ್ಚು ಹೊತ್ತಿಕೊಳ್ಳೋದು ಚುನಾವಣೆ ಹೊತ್ತಿನಲ್ಲೇ. ಕಳೆದ ವಿಧಾನಸಭೆ ಚುನಾವಣೆ ವೇಳೆ ತಾರಕಕ್ಕೇರಿದ್ದ ಪಂಚಮಸಾಲಿ ಮೀಸಲು ಹೋರಾಟ ಇದೀಗ ಲೋಕಸಭೆ ಚುನಾವಣೆ ವೇಳೆಯೂ ಭುಗಿಲೇಳುವ ಲಕ್ಷಣ ಗೋಚರಿಸುತ್ತಿದೆ. ಪಂಚಮಸಾಲಿ ಮುಖಂಡರು, ಮಠಾಧೀಶರು ಮಂಗಳವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮೀಸಲಾತಿಗೆ ಆಗ್ರಹಿಸಿ, ಹೋರಾಟದ ಕಹಳೆ ಊದಿದ್ದಾರೆ.
ಪಂಚಮಸಾಲಿ ಸಮುದಾಯದಕ್ಕೆ 2ಎ ಮೀಸಲಾತಿ ಕಲ್ಪಿಸುವ ಕುರಿತು ಅಧಿವೇಶನ ಮುಗಿದ ಕೂಡಲೇ ಕಾನೂನು ತಜ್ಞರು, ರಾಜ್ಯ ಶಾಶ್ವತ ಹಿಂದುಳಿದ ವರ್ಗಗಳ ಆಯೋಗ ಮತ್ತು ಅಡ್ವೊಕೇಟ್ ಜನರಲ್ ಜೊತೆ ಸಭೆ ನಡೆಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ಕೊಟ್ಟಿದ್ದಾರೆ. ಮುಖ್ಯಮಂತ್ರಿಗಳ ಭರವಸೆಯಂತೆ ಅಧಿವೇಶನ ಮುಗಿಯುವವರೆಗೆ ಕಾಯಬೇಕೇ ಅಥವಾ ನಿಗದಿಯಂತೆ ಬುಧವಾರದಿಂದ ಪ್ರತಿಭಟನೆ ಹೋರಾಟ ಆರಂಭಿಸಬೇಕೇ ಎಂಬ ಬಗ್ಗೆ ಸಮುದಾಯದ ಮುಖಂಡರಲ್ಲಿ ಗೊಂದಲ ಮೂಡಿದ್ದು, ಈ ದಿನ ಅದು ನಿರ್ಧಾರವಾಗಲಿದೆ.
ಮೀಸಲು ಹೋರಾಟದ ನೇತೃತ್ವದ ವಹಿಸಿರುವ ಕೂಡಲಸಂಗಮದ ಜಯಮೃತ್ಯುಂಜಯ ಸ್ವಾಮೀಜಿ ಸ್ವಾಮೀಜಿ ಪ್ರಕಾರ ʻʻಕಳೆದ ಮೂರು ವರ್ಷಗಳಿಂದ ಪಕ್ಷಾತೀತವಾಗಿ ಹೋರಾಟ ಮಾಡಿಕೊಂಡು ಬಂದಿದ್ದೇವೆ. ಸಮುದಾಯದ ಹಿತದೃಷ್ಟಿಯಿಂದ ಮುಂದೆಯೂ ಅದೇ ರೀತಿ ಎಲ್ಲರೂ ಒಟ್ಟಾಗಿ ಹೋರಾಟ ನಡೆಸುವುದು ಉತ್ತಮ. ಗೌರವ. ಈಗ ಸರ್ಕಾರದ ಭರವಸೆಯಂತೆ ಅಧಿವೇಶನ ಮುಗಿಯುವವರೆಗೆ ಕಾಯಬೇಕೇ ಇಲ್ಲವೇ ಪ್ರತಿಭಟನೆ ನಡೆಸಬೇಕೆ ಎಂಬ ಬಗ್ಗೆಬುಧವಾರದ ಸಭೆಯಲ್ಲಿ ನಿರ್ಧಾರ ಮಾಡುವುದು ಉತ್ತಮʼʼ
ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ ಮುಖಂಡರಲ್ಲಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, ಶಾಸಕರಾದ ವಿಜಯಾನಂದ ಕಾಶಪ್ಪನವರ್, ಅರವಿಂದ ಬೆಲ್ಲದ್, ಬಿ.ಆರ್.ಪಾಟೀಲ್, ಬಸನಗೌಡ ಪಾಟೀಲ್ ಯತ್ನಾಳ್, ವಿನಯ್ ಕುಲಕರ್ಣಿ, ಸಿ.ಸಿ.ಪಾಟೀಲ್ ಮತ್ತಿತರರು ಇದ್ದರು.
ಲಿಂಗಾಯಿತರಿಗೆ ಶೇ.7 ಮತ್ತು ಒಕ್ಕಲಿಗರಿಗೆ ಶೇ.6ರಷ್ಟು ಮೀಸಲಾತಿ ಘೋಷಿಸಿತ್ತು. ಅದರ ಅನುಸಾರ ಪಂಚಮಸಾಲಿಗಳು ಸೇರಿದಂತೆ ಲಿಂಗಾಯತರಿಗೆ 2ಸಿ ಮತ್ತು 2ಡಿ ಮೀಸಲಾತಿ ಜಾರಿ ಮಾಡಲು ಕೋರಿದ್ದೇವೆ. ಆದರೆ ಮುಖ್ಯಮಂತ್ರಿಗಳ ಸಭೆಯಲ್ಲಿ ಯಾವ ವಿಚಾರವೂ ಇತ್ಯರ್ಥ ಆಗಿಲ್ಲ. ಹಾಗಾಗಿ ಸ್ವಾಮೀಜಿ ಅವರ ನೇತೃತ್ವದಲ್ಲಿ ಬುಧವಾರ ಪ್ರತಿಭಟನೆ ನಡೆಸುತ್ತೇವೆ ಎಂದಿದ್ದಾರೆ ಬೆಲ್ಲದ್.
ಇನ್ನು ಸಮುದಾಯದಲ್ಲಿನ ಪ್ರಮುಖ ನಾಯಕರಲ್ಲಿ ಕಾಂಗ್ರೆಸ್ ನಾಯರು ಪ್ರತಿಭಟನೆ ನಡೆಸುವುದು ಬೇಡ ಎಂದಿದ್ದರೆ, ಕೆಲವು ನಾಯಕರು ಪ್ರತಿಭಟನೆ ಬೇಕು ಎಂದು ಒತ್ತಾಯಿಸಿದ್ಧಾರೆ. ಒಟ್ಟಿನಲ್ಲಿ ಈಗ ಪಂಚಮಸಾಲಿ ಮುಖಂಡರಲ್ಲಿ ಮೊದಲಿನ ಒಗ್ಗಟ್ಟೂ ಕಂಡು ಬರುತ್ತಿಲ್ಲ. ಹಾಗೂ ಕೆಲವು ನಾಯಕರು ತಮ್ಮ ತಮ್ಮ ಎದುರಾಳಿಗಳನ್ನು ಮೀರಿ ತಾವು ಸಮುದಾದಯ ದೊಡ್ಡ ನಾಯಕರಾಗುವ ಹಂಬಲ ತೋರಿಸುತ್ತಿದ್ದಾರೆ. ನಾಯಕತ್ವ ಎನ್ನುವುದು ಅಷ್ಟು ಸುಲಭವಾಗಿ ಬರುವುದಿಲ್ಲ.



