ಪಾಪ.. ಪಾಕಿಸ್ತಾನ.. ಪಾಕಿಸ್ತಾನದ ಹಣೆಬರಹವೇ ಚೆನ್ನಾಗಿಲ್ಲ. ಆದರೆ ಮಾಡಿದವರ ಪಾಪ ಆಡಿದವರ ಬಾಯಲ್ಲಿ ಅನ್ನೋ ಹಾಗೂ ಇಲ್ಲ. ಅವರು ಮಾಡಿದ್ದೆಲ್ಲವೂ ಅವರಿಗೇ ತಿರುಗುಬಾಣವಾಗಿ ಸುಡುತ್ತಿದೆ. ಅವರೇ ಸಾಕಿದ್ದ ಉಗ್ರರು ಅವರ ನಾಗರಿಕರಿಗೇ ಬಾಂಬಿಟ್ಟು ಕೊಲ್ಲುತ್ತಿದ್ದಾರೆ. ಉಗ್ರರನ್ನು ಸಾಕಿ ಸಾಕಿ ದೇಶವನ್ನೇ ಭಿಕಾರಿ ಸ್ಥಾನಕ್ಕೆ ತಂದು ನಿಲ್ಲಿಸಿದೆ ಪಾಕಿಸ್ತಾನ. ಅಲ್ಲೀಗ ಭಿಕ್ಷೆ ಬೇಡುವವರ ಸಂತಾನ ಬೆಳೆಯುತ್ತಿದೆ. ನಾವು ಮುಸ್ಲಿಮರು, ಮುಸ್ಲಿಮರ ದೇಶ ಎನ್ನುತ್ತಿದ್ದ ಪಾಕಿಸ್ತಾನಕ್ಕೆ ಈಗ ಮುಸ್ಲಿಮ್ ದೇಶಗಳೂ ಬೆನ್ನಿಗಿಲ್ಲ.
ದುಬೈ, ಯುಎಇಗಳು ಪಾಕಿಸ್ತಾನದ ಪ್ರವಾಸಿಗರನ್ನು ಸುಮ್ಮನೆ ಬಿಟ್ಟುಕೊಳ್ಳೋದಿಲ್ಲ. ಕುವೈತ್ʻನಲ್ಲೂ ಪಾಕ್ ನಾಗರಿಕರಿಗೆ ಮರ್ಯಾದೆ ಇಲ್ಲ. ತನ್ನದೇ ದೇಶದ ಭಾಗವಾಗಿರುವ ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲೂ ಪಾಕ್ ನಾಗರಿಕರಿಗೆ ಗೌರವ ಇಲ್ಲ. ಅಟ್ಟಾಡಿಸಿ ಹೊಡೆಯುತ್ತಿದ್ದಾರೆ. ಹಿಂದೊಮ್ಮೆ ತಮ್ಮದೇ ದೇಶದ ಭಾಗವಾಗಿದ್ದ ಬಾಂಗ್ಲಾದವರು ಹತ್ತಿರಕ್ಕೂ ಬಿಟ್ಟುಕೊಳ್ಳಲ್ಲ. ಅಫ್ಘಾನಿಸ್ತಾನದವರಂತೂ ಬಿಡಿ, ಗಡಿಯ ಹತ್ತಿರ ಬಂದರೆ ಸಾಕು, ಗಡಿಯೊಳಕ್ಕೆ ನುಗ್ಗಿ ಹೊಡೆದು ಹೋಗುತ್ತಿದ್ಧಾರೆ. ರಷ್ಯಾಗೆ ಹೋದರೆ, ಸ್ವಾಗತಕ್ಕೂ ಕೂಡಾ ಅಧಿಕಾರಿಗಳು ಬರಲ್ಲ. ಅಮೆರಿಕ ಕ್ಯಾರೇ ಅಂತಿಲ್ಲ. ಸೌದಿ ರಾಷ್ಟ್ರಗಳು ನೀವು ದೂರ ಇದ್ದರೇನೇ ನೆಮ್ಮದಿ ಅಂತಿವೆ. ಹೀಗಿರೋವಾಗ ಇರಾನ್ ಕೂಡಾ ಹೊಡೆದಿದೆ. ಪಾಕಿಸ್ತಾನ ಕುಯ್ಯೋ ಮರ್ರೋ ಅಂದ್ರೂ ಬಿಟ್ಟಿಲ್ಲ. ಇಷ್ಟಕ್ಕೂ ಆಗಿರೋದು ಇಷ್ಟು.
ಪಾಕಿಸ್ತಾನಕ್ಕೆ ಇರಾನ್ ದಾಳಿ ಮಾಡಿದ್ದು ಏಕೆ?
ಸುನ್ನಿ ಮುಸ್ಲಿಮ್ ಉಗ್ರರ ಬೇಟೆಗೆ ಕಾರಣ ಶಿಯಾ ಉಗ್ರರ ಹತ್ಯೆ ಎನ್ನಬಹುದು. ಏಕೆಂದರೆ ಪಾಕಿಸ್ತಾನದ ಸುನ್ನಿ ಮುಸ್ಲಿಂ ಉಗ್ರರು ಇರಾನ್‌ನ ಶಿಯಾ ಮುಸ್ಲಿಮರನ್ನು ಕೊಲ್ಲುತ್ತಿದ್ಧಾರೆ. ಪಾಕಿಸ್ತಾನದಲ್ಲಿ ನೆಲೆಯೂರಿರುವ ಸುನ್ನಿ ಉಗ್ರ ಸಂಘಟನೆ ಜೈಶ್ ಅಲ್ – ಅದಿ ವಿರುದ್ದ ಇರಾನ್ ಸಮರ ಸಾರಿದೆ. ಪಾಕಿಸ್ತಾನ – ಇರಾನ್ ಗಡಿಯಲ್ಲಿ ಸಕ್ರಿಯವಾಗಿರುವ ಈ ಉಗ್ರ ಸಂಘಟನೆ, ಪಾಕಿಸ್ತಾನದಲ್ಲಿ ತನ್ನ ನೆಲೆಗಳನ್ನು ಹೊಂದಿದೆ. ಇರಾನ್ ನಾಗರಿಕರನ್ನು ಕೊಲ್ಲುತ್ತಿದೆ. ಅತ್ಯಾಚಾರಗಳು ನಿರಂತರವಾಗಿ ನಡೆಯುತ್ತಿವೆ. ಈ ಹಿನ್ನೆಲೆಯಲ್ಲಿ ಸಿಟ್ಟಿಗೆದ್ದಿರುವ ಇರಾನ್ ಪಾಕಿಸ್ತಾನದ ನೆಲಕ್ಕೆ ನುಗ್ಗಿ ಹೊಡೆಯುತ್ತಿದೆ. ಈ ದಾಳಿಯಲ್ಲಿ ಜನ ಸಾಮಾನ್ಯರೂ ಹತರಾಗಿದ್ದಾರೆ. ಇಬ್ಬರು ಮಕ್ಕಳು ಹತ್ಯೆಗೀಡಾಗಿದ್ದು, ಮೂವರು ಗಾಯಗೊಂಡಿದ್ಧಾರೆ. ಪಾಕಿಸ್ತಾನದಲ್ಲಿ ಇರುವ ಜೈಶ್ ಅಲ್ ಅಲಿ ಉಗ್ರ ಸಂಘಟನೆಯ ಎರಡು ನೆಲೆಗಳ ಮೇಲೆ ಇರಾನ್ ದೇಶವು ಕ್ಷಿಪಣಿ ದಾಳಿ ನಡೆಸಿದೆ. ಪಾಕಿಸ್ತಾನ – ಇರಾನ್ ಗಡಿಯಲ್ಲಿ ನೆಲೆ ಹೊಂದಿರುವ ಜೈಶ್ ಅಲ್ ಅದಿ ಉಗ್ರ ಸಂಘಟನೆಯು ತನ್ನನ್ನು ತಾನು ನ್ಯಾಯಕ್ಕಾಗಿ ಹೋರಾಡುವ ಸೇನೆ ಎಂದು ಕರೆಸಿಕೊಂಡಿದೆ. ಸುನ್ನಿ ಮುಸ್ಲಿಮರ ಈ ಉಗ್ರಗಾಮಿ ಸಂಘಟನೆಯನ್ನು 2012ರಲ್ಲಿ ಸ್ಥಾಪನೆ ಮಾಡಲಾಗಿತ್ತು. ಪಾಕಿಸ್ತಾನದ ಹಲವೆಡೆ ಈ ಸಂಘಟನೆಯ ನೆಲೆಗಳು ಇವೆ. ಅದರಲ್ಲೂ ಇರಾನ್ ಗಡಿಯಲ್ಲಿ ಹಲವು ಬಾರಿ ಇರಾನ್ ಸೇನೆ ಜೊತೆ ಈ ಉಗ್ರ ಸಂಘಟನೆ ಘರ್ಷಣೆ ನಡೆಸಿದೆ. ಈ ಹಿನ್ನೆಲೆಯಲ್ಲಿ ಪಾಕಿಸ್ತಾನದ ನೆಲಕ್ಕೇ ನುಗ್ಗಿರುವ ಇರಾನ್ ಸೇನೆ, ಪಾಕಿಸ್ತಾನದ ನೆಲದ ಮೇಲೇ ಕ್ಷಿಪಣಿ ದಾಳಿ ನಡೆಸಿ ಈ ಉಗ್ರ ಸಂಘಟನೆಯನ್ನು ನಾಮಾವಶೇಷ ಮಾಡಲು ಮುಂದಾಗಿದೆ.
ಇರಾನ್ ಬೆಂಬಲಕ್ಕೆ ನಿಂತ ಭಾರತ. ಪಾಕಿಸ್ತಾನದ ರಕ್ತ ಕಣ್ಣೀರು
ಇರಾನ್ ದಾಳಿ ಪಾಕಿಸ್ತಾನವನ್ನು ಕೆರಳಿಸಿದೆ. ಅತ್ತ ಅಫ್ಘಾನಿಸ್ತಾನವೂ ಹೊಡೆಯುತ್ತಿದೆ. ಇತ್ತ ಭಾರತವಂತೂ ನುಗ್ಗಿ ಹೊಡೆಯುತ್ತಿದೆ. ಹೀಗಿರುವಾಗ ಇರಾನ್ ಕೂಡಾ ಸರ್ಜಿಕಲ್ ಸ್ಟ್ರೈಕ್ ಮಾಡಿದರೆ.. ಈ ಘಟನೆ ಪಾಕಿಸ್ತಾನವನ್ನು ಕೆರಳಿಸಿದೆ. ತನ್ನ ವಾಯು ಪ್ರದೇಶವನ್ನು ಅಪ್ರಚೋದಿತ ಉಲ್ಲಂಘನೆ ಮಾಡಲಾಗಿದೆ ಎಂದು ಆರೋಪಿಸಿರುವ ಪಾಕ್ ವಿದೇಶಾಂಗ ಸಚಿವಾಲಯ, ದಾಳಿಯನ್ನು ಇಸ್ಲಾಮಾಬಾದ್ ಪ್ರಬಲವಾಗಿ ಖಂಡಿಸುತ್ತದೆ ಎಂದಿದೆ. ಇರಾನ್ ದಾಳಿಯನ್ನು ‘ಅಕ್ರಮ ಕೃತ್ಯ’ ಎಂದು ಖಂಡಿಸಿರುವ ಪಾಕಿಸ್ತಾನ, ಟೆಹರಾನ್‌ನಲ್ಲಿ ಇರಾನಿಯನ್ ವಿದೇಶಾಂಗ ಸಚಿವಾಲಯದ ಎದುರು ಪ್ರತಿಭಟನೆ ನಡೆಸಿದೆ. ಪಾಕಿಸ್ತಾನದ ಇರಾನ್ ರಾಯಭಾರಿಯನ್ನು ವಾಪಸ್ ಹೋಗುವಂತೆ ಸೂಚಿಸಿದೆ.



