ಗೆದ್ದಿದ್ದು ನಾಸಿರ್ ಹುಸೇನ್. ಕಾಂಗ್ರೆಸ್ಸಿನ ರಾಜ್ಯಸಭಾ ಸದಸ್ಯ. ಕಾಂಗ್ರೆಸ್ಸಿನವರು ಕೊಟ್ಟ ವೋಟುಗಳಿಂದಲೇ ಗೆದ್ದ ನಾಸಿರ್ ಹುಸೇನ್ ಗೆಲುವಿನ ಸಂಭ್ರಮದಲ್ಲಿದ್ದರೆ, ಅತ್ತ ಅವನ ಬೆಂಬಲಿಗರು ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೂಗುತ್ತಿದ್ದರು. ಅಲ್ಲಿ ಗೆದ್ದಿದ್ದ ನಾಸಿರ್ ಹುಸೇನ್ ಅವರನ್ನ ಹೆಗಲ ಮೇಲೆ ಹೊತ್ತುಕೊಂಡು ಕುಣಿಯುತ್ತಿರೋವಾಗಲೇ, ಬೆಂಬಲಿಗನೊಬ್ಬ ಜಿಂದಾಬಾದ್ ಜಿಂದಾಬಾದ್ ಪಾಕಿಸ್ತಾನ್ ಜಿಂದಾಬಾದ್ ಎಂದು ಕೂಗಿದ್ದ.
ಇಷ್ಟಕ್ಕೂ ಆತ ಗೆದ್ದಿದ್ದು ಕರ್ನಾಟಕದಲ್ಲಿ. ಕರ್ನಾಟಕಕ್ಕೆ ಗೆಲುವಾಗಲಿ, ಸಂವಿಧಾನಕ್ಕೆ ಗೆಲುವಾಗಲಿ, ಕಾಂಗ್ರೆಸ್ ಜಿಂದಾಬಾದ್, ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ, ಡಿಕೆ ಶಿವಕುಮಾರ್.. ಹೀಗೆ ಯಾರ ಹೆಸರನ್ನಾದರೂ ಹೇಳಿ ಜಿಂದಾಬಾದ್ ಎಂದು ಕೂಗಿದ್ದರೆ, ಸಮಸ್ಯೆಯೇ ಇರುತ್ತಿರಲಿಲ್ಲ. ಆದರೆ ಕೂಗಿದ್ದು ಪಾಕಿಸ್ತಾನದ ಹೆಸರನ್ನ.
ನಾಸಿರ್ ಹುಸೇನ್ ಎಡಸೊಕ್ಕು :
ಕಾಂಗ್ರೆಸ್ ರಾಜ್ಯಸಭಾ ಸದಸ್ಯ. ಈತ ಇನ್ನೂ ಪ್ರಮಾಣ ವಚನ ಸ್ವೀಕರಿಸಿಲ್ಲ. ಹೀಗಿರುವಾಗ ಈಗಲೇ ಪ್ರಶ್ನೆ ಕೇಳಿದವರಿಗೆ ನಡೆಯೋ ಆಚೆ ಎಂದು ಏಕವಚನ ಬಳಸಿದ್ದಾನೆ. ಉತ್ತರ ಕರ್ನಾಟಕ ಭಾಷೆಯಲ್ಲಿ ಎಡಸೊಕ್ಕು ಅಂತಾ ಹೇಳ್ತಾರೆ. ಅಹಂಕರಾರ, ಮದ ತಲೆಗೇರಿದವರಿಗೆ ಬಳಸುವ ಪದ ಅದು.
ಯಾರು ಹೇಳ್ತೀರೋದು ಸತ್ಯ?
ಇತ್ತ ಕಾಂಗ್ರೆಸ್ಸಿನವರು, ಬೆಂಬಲಿಗರು ಅವರು ನಾಸಿರ್ ಹುಸೇನ್ ಸಾಬ್ ಜಿಂದಾಬಾದ್ ಎಂದು ಕೂಗಿದ್ರು ಅಂತಾ ಹೇಳ್ತಿದ್ದಾರೆ. ಅವರ ಪ್ರಕಾರ ಇದು ಬಿಜೆಪಿಯವರ ಚಿತಾವಣೆ. ಬಿಜೆಪಿಯವರು ಸೃಷ್ಟಿಸಿದ ಮೀಡಿಯಾ ಸುಳ್ಳು. ಆದರೆ ವಾಸ್ತವ ಏನೆಂದರೆ, ಈ ವಿಡಿಯೋ ಎಲ್ಲ ಟಿವಿ ಚಾನೆಲ್ಲುಗಳಲ್ಲೂ ಬಂದಿದೆ. ಎಲ್ಲ ಟಿವಿ ಚಾನೆಲ್ಲುಗಳ ಲೈವ್ ವಿಡಿಯೋಗಳಲ್ಲಿದೆ. ಲೈವ್ ವಿಡಿಯೋಗಳಲ್ಲಿ, ಅದೂ ಏಕಕಾಲಕ್ಕೆ ತಿರುಚಿದ ವಿಡಿಯೋ ಮಾಡುವ ಶಕ್ತಿ, ಟೆಕ್ನಾಲಜಿ ಬಹುಶಃ ಪಾಕಿಸ್ತಾನ್ ಜಿಂದಾಬಾದ್ ಎಂದು ಕೂಗುವವರಿಗೆ ಇದೆಯೇ ಹೊರತು, ಮತ್ಯಾರಿಗೂ ಇಲ್ಲ. ಕೊನೆಗೆ ನಂಬುವುದು ಅವರು ಮಾತ್ರ. ಅವರಷ್ಟೇ.
ಅಂದಹಾಗೆ ಈ ಪ್ರಕರಣದ ಬಗ್ಗೆ ಪೊಲೀಸರು ಮೊದಲು ಯಾರಾದರೂ ಕಂಪ್ಲೇಂಟ್ ಕೊಟ್ಟರೆ ಕೇಸ್ ದಾಖಲಿಸಿಕೊಳ್ತೇವೆ ಎಂದಿದ್ದರಂತೆ. ಆದರೆ, ಕೊನೆಗೆ ಅವರೇ ಸುಮಟೋ ಕೇಸ್ ದಾಖಲಿಸಿದ್ದಾರೆ. ಬಿಜೆಪಿಯವರೂ ದೂರು ಕೊಟ್ಟಿದ್ದಾರೆ. ವಿಧಾನಸೌಧ ಠಾಣೆ ಪೊಲೀಸರು ಘೋಷಣೆ ಕೂಗಿದ ಅಪರಿಚಿತ ವ್ಯಕ್ತಿ ವಿರುದ್ಧ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದ್ದಾರೆ. ಕರ್ತವ್ಯನಿರತ ಎಎಸ್ಐ ನೀಡಿದ ದೂರಿನ ಅನ್ವಯ ಸೆಕ್ಷನ್ 505(1)(ಬಿ), 153ಬಿ ಅಡಿಯಲ್ಲಿ ಕೇಸ್ ದಾಖಲಿಸಿದ್ದಾರೆ. ಈ ಘೋಷನೆಯನ್ನು ಯಾರು ಕೂಗಿದರು ಎಂಬುವುದು ಸ್ಪಷ್ಟವಾಗಿ ತಿಳಿದಿಲ್ಲ.
ಅಂದಹಾಗೆ ಇದನ್ನು ಸುಳ್ಳು ಎಂದು ನಿರೂಪಿಸೋಕೆ ಕಾಂಗ್ರೆಸ್ ಇನ್ನಿಲ್ಲದ ಪ್ರಯತ್ನ ಪಡ್ತಾ ಇದೆ. ವಾಟ್ಸಪ್ಪಿನ ಗ್ರೂಪುಗಳಲ್ಲಿ ಅವರು ಕೂಗಿದ್ದು ನಾಸಿರ್ ಸಾಬ್ ಜಿಂದಾಬಾದ್… ಎಂಬ ಘೋಷಣೆ ಕೂಗಲಾಗಿದೆಯೇ ಹೊರತು, ಪಾಕಿಸ್ತಾನ್ ಜಿಂದಾಬಾದ್..,” ಎಂದು ಅಲ್ಲ ಅನ್ನೋ ಉತ್ತರ ಕೊಡೋ ಪ್ರಯತ್ನ ಮಾಡಲಾಗ್ತಾ ಇದೆ.



