ನಟ ಅನಂತ್ ನಾಗ್ ಅವರಿಗೆ ಇತ್ತೀಚೆಗೆ ಕೇಂದ್ರ ಸರ್ಕಾರ ಪದ್ಮಭೂಷಣ ಪುರಸ್ಕಾರ ಘೋಷಿಸಿತ್ತು. ಕನ್ನಡ ಚಿತ್ರರಂಗ, ಲಕ್ಷಾಂತರ ಅಭಿಮಾನಿಗಳು ಸಂಭ್ರಮಿಸಿದ್ದರು. ಆದರೆ ಇತ್ತೀಚೆಗೆ ದೆಹಲಿಯ ರಾಷ್ಟ್ರಪತಿ ಭವನದಲ್ಲಿ ನಡೆದ ಪದ್ಮ ಪುರಸ್ಕಾರ ಕಾರ್ಯಕ್ರಮದಲ್ಲಿ ಅನಂತ್ ನಾಗ್ ಇರಲಿಲ್ಲ, ತೆಲುಗಿನ ಬಾಲಕೃಷ್ಣ, ತಮಿಳಿನ ಅಜಿತ್, ಕ್ರಿಕೆಟಿಗ ಅಶ್ವಿನ್, ಕನ್ನಡದವರೇ ಆದ ಡಾ.ವಿಜಯಲಕ್ಷ್ಮಿ ದೇಶಮಾನೆ, ಗೊಂಬೆಯಾಟದ ಭೀಮಮ್ಮ ದೊಡ್ಡಬಾಳಪ್ಪ ಶಿಳ್ಳೆಕ್ಯಾತರ, ಪೈಲ್ವಾನ್ ಹಾಸನ್ ರಘು ಅವರೆಲ್ಲ ಪದ್ಮ ಪುರಸ್ಕಾರ ಗೌರವ ಸ್ವೀಕರಿಸಿದ್ರು. ಆದರೆ, ಅಲ್ಲಿ ಅನಂತ ನಾಗ್ ಅವರೇ ಇರಲಿಲ್ಲ. ಏನಾಯ್ತು..?
ಇತ್ತೀಚೆಗೆ ದೆಹಲಿಯಲ್ಲಿ ಪದ್ಮ ಪುರಸ್ಕೃತರಿಗೆ ಪ್ರಶಸ್ತಿ ಪ್ರದಾನ ನಡೆದಿದ್ದು ಗೊತ್ತಿದ್ಯಷ್ಟೇ. ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ನರೇಂದ್ರ ಮೋದಿ ಅವರೆಲ್ಲ ಇದ್ದ ವೇದಿಕೆಯಲ್ಲಿ ತಮಿಳು ನಟ ಅಜಿತ್ ಕುಮಾರ್, ತೆಲುಗು ನಟ ಬಾಲಕೃಷ್ಣ, ಕರ್ನಾಟಕದವರೇ ಆದ ಡಾ.ವಿಜಯಲಕ್ಷ್ಮಿ ದೇಶಮಾನೆ, ಗೊಂಬೆಯಾಟದ ಭೀಮಮ್ಮ ದೊಡ್ಡಬಾಳಪ್ಪ ಶಿಳ್ಳೆಕ್ಯಾತರ, ಪೈಲ್ವಾನ್ ಹಾಸನ್ ರಘು ಅವರೆಲ್ಲ ಪದ್ಮ ಪುರಸ್ಕಾರ ಗೌರವ ಸ್ವೀಕರಿಸಿದ್ರು. ಆದರೆ, ಅಲ್ಲಿ ಅನಂತ ನಾಗ್ ಅವರೇ ಇರಲಿಲ್ಲ.
ಕನ್ನಡಿಗರು ಫುಲ್ ಶಾಕ್. ಏನಾಯ್ತು.. ಅಂತಾ. ಏಕೆಂದರೆ ಅನಂತ್ ನಾಗ್ ಅವರಿಗೆ ಪದ್ಮಭೂಷಣ ಪುರಸ್ಕಾರ ಘೋಷಣೆಯಾಗಿತ್ತು. ಕನ್ನಡ ಚಿತ್ರರಂಗದಲ್ಲಿ ಡಾ.ರಾಜ್ ಕುಮಾರ್ ಅವರನ್ನ ಬಿಟ್ಟರೆ, ಪದ್ಮಭೂಷಣ ಗೌರವಕ್ಕೆ ಪಾತ್ರರಾದ ಏಕೈಕ ನಟ ಅನಂತ್ ನಾಗ್ ಮಾತ್ರ.
ಹೀಗಿರುವಾಗ ಪ್ರಶಸ್ತಿಯನ್ನೇ ನೀಡಲಿಲ್ಲ, ಕೊನೆ ಕ್ಷಣದಲ್ಲಿ ಏನಾದರೂ ಬದಲಾವಣೆ ಆಯ್ತಾ..? ಪ್ರಶಸ್ತಿಯೇ ಕೈತಪ್ಪಿ ಹೋಯ್ತಾ.. ಎಂಬ ಅನುಮಾನ ಮೂಡಿದ್ದು ನಿಜ. ಕೆಲವರಂತೂ ಅನಂತ ನಾಗ್ ಅವರಿಗೆ ಪ್ರಶಸ್ತಿ ಕ್ಯಾನ್ಸಲ್ ಮಾಡಿದ್ದಾರಂತೆ ಅಂತಲೂ ಸುದ್ದಿ ಹಬ್ಬಿಸಿ ಖುಷಿ ಪಟ್ರು. ಆ ವಿಷಯ ಬಿಡಿ, ರಿಯಾಲಿಟಿ ಏನು ಅನ್ನೋದನ್ನ ಹುಡುಕಿ ಹೊರಟಾಗ.. ಗೊತ್ತಾಗಿದ್ದೇ ಬೇರೆ..
ಅನಂತ ನಾಗ್ ಅವರಿಗೆ ಪದ್ಮ ಪುರಸ್ಕಾರ ಸಿಗಲೇಬೇಕು ಎಂದು ದೊಡ್ಡ ಅಭಿಯಾನವೇ ನಡೆದಿತ್ತು. ದಿವಂಗತ ಪುನೀತ್ ರಾಜ್ ಕುಮಾರ್, ರಕ್ಷಿತ್ ಶೆಟ್ಟಿ, ರಿಷಬ್ ಶೆಟ್ಟಿ, ಕಿಚ್ಚ ಸುದೀಪ್, ರಾಜ್ ಬಿ ಶೆಟ್ಟಿ, ಶಿವರಾಜ್ ಕುಮಾರ್ ಸೇರಿದಂತೆ ಚಿತ್ರರಂಗದ ಅನೇಕ ದಿಗ್ಗಜರು ಆನ್ ಲೈನ್ ಅಭಿಯಾನವನ್ನೇ ನಡೆಸಿದ್ದರು. ಹೀಗಾಗಿ ಅನಂತ್ ನಾಗ್ ಅವರು ಪ್ರಶಸ್ತಿಯನ್ನೇಕೆ ಸ್ವೀಕರಿಸಲಿಲ್ಲ ಎಂದಾಗ ಒಂದು ಆತಂಕವಂತೂ ಶುರುವಾಗಿತ್ತು. ಅನಂತ್ ನಾಗ್ ಅವರ ಆರೋಗ್ಯಕ್ಕೆ ಏನಾಗಿದೆ.. ಎಂಬ ಚಿಂತೆ ಅದು. ಏಕೆಂದರೆ ಅನಾರೋಗ್ಯದ ಸಂದರ್ಭಗಳಲ್ಲಿ ರಾಷ್ಟ್ರಪತಿ ಭವನದ ಅಧಿಕಾರಿಗಳೇ ಮನೆಗೆ ಬರುತ್ತಾರೆ. ಬಿಡುವಿದ್ದರೆ ರಾಜ್ಯಪಾಲರು ಬಂದು, ರಾಷ್ಟ್ರಪತಿಗಳ ಪರವಾಗಿ ಪದಕ ಪ್ರದಾನ ಮಾಡ್ತಾರೆ. ನಿಮಗೆ ನೆನಪಿದ್ದರೆ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಭಾರತರತ್ನ ಕೊಟ್ಟಾಗ, ಪ್ರಣಬ್ ಮುಖರ್ಜಿಯವರೇ ಮನೆಗೆ ಹೋಗಿ ಪ್ರಶಸ್ತಿ ಪ್ರದಾನ ಮಾಡಿದ್ದರು. ಅನಾರೋಗ್ಯದಿಂದ ಕೃಶರಾಗಿದ್ದ ವಾಜಪೇಯಿ ಅವರ ಮುಖವನ್ನು ಮರೆಮಾಚಿ ಫೋಟೋ ತೆಗೆದು ಬಿಡುಗಡೆ ಮಾಡಲಾಗಿತ್ತು. ಆದರೆ ಅಂತಹ ಆತಂಕ ಅನಂತ್ ನಾಗ್ ವಿಷಯದಲ್ಲಿ ಆಗಿಲ್ಲ.
ಕಳೆದ ಕೆಲವು ವರ್ಷಗಳಿಂದ ಪದ್ಮ ಪುರಸ್ಕಾರವನ್ನ ಎರಡು ಕಂತುಗಳಲ್ಲಿ ಕೊಡಲಾಗ್ತಾ ಇದೆ. ನರೇಂದ್ರ ಮೋದಿ ಪ್ರಧಾನಿ ಆದ್ಮೇಲೆ ಪದ್ಮ ಪ್ರಶಸ್ತಿಗಳಿಗೆ ಹೊಸ ಕಳೆ, ಗೌರವ ಬಂದಿದೆ. ತೆರೆಮರೆಯ ಸಾಧಕರನ್ನು ಹುಡುಕಿ ಹುಡುಕಿ ಪ್ರಶಸ್ತಿ ನೀಡಲಾಗ್ತಾ ಇದೆ. ಹಾಗೆ ಬಂದವರಿಗೆ ಕೇವಲ ಪ್ರಶಸ್ತಿಯನ್ನಷ್ಟೇ ಅಲ್ಲ, ದೆಹಲಿ, ರಾಷ್ಟ್ರಪತಿ ಭವನದ ಅರಿವೇ ಇಲ್ಲದವರನ್ನು ಸತ್ಕರಿಸಿ, ಗೌರವದಿಂದ ನಡೆಸಿಕೊಳ್ಳಬೇಕು. ಹೀಗಾಗಿ ಪದ್ಮ ಪುರಸ್ಕಾರ ನೀಡುವುದುಕ್ಕೆ ಹೆಚ್ಚು ಜನ, ಸಮಯ ಬೇಡುತ್ತದೆ ಎನ್ನುವ ಕಾರಣಕ್ಕೆ ಪುರಸ್ಕಾರ ನೀಡುವ ಪ್ರಕ್ರಿಯೆಯನ್ನೇ ಎರಡು ಕಂತುಗಳಲ್ಲಿ ಮಾಡಲಾಗಿದೆ.
ಅನಂತ ನಾಗ್ ಅವರಿಗೆ ಪ್ರಶಸ್ತಿ ಸಿಗಲಿದೆ. ಅನಂತ್ ನಾಗ್ ಅವರಂತೆ ಪ್ರಶಸ್ತಿ ತಪ್ಪಿಸಿಕೊಂಡಿದ್ದ ಇನ್ನೂ ಕೆಲವರಿಗೆ ಎರಡನೇ ಕಂತಿನಲ್ಲಿ ಪ್ರಶಸ್ತಿ ಸಿಗಲಿದೆ. ಮೇ ತಿಂಗಳಲ್ಲಿ ಮತ್ತೊಮ್ಮೆ ಪದ್ಮ ಪುರಸ್ಕಾರ ಕಾರ್ಯಕ್ರಮ ನಡೆಯಲಿದ್ದು, ಆ ದಿನ ಅನಂತ್ ನಾಗ್ ಅವರೂ ಪ್ರಶಸ್ತಿ ಪಡೆಯಲಿದ್ದಾರೆ. ಕನ್ನಡದ ಸಹಜ ನಟ ಅಂತಾನೇ ಫೇಮಸ್ ಆಗಿರುವ ಅನಂತ ನಾಗ್ ಅವರಿಗೆ ಯಾವುದೇ ಬಿರುದು, ಬಾವಲಿಗಳಿಲ್ಲ. ಅಭಿಮಾನಿಗಳಿದ್ದಾರೆ. ಅಭಿಮಾನಿ ಸಂಘಗಳಿಲ್ಲ. ಈ ಪುರಸ್ಕಾರ ಸಿಕ್ಕ ಮೇಲೆ ಅನಂತ್ ನಾಗ್, ಪದ್ಮಭೂಷಣ ಅನಂತ್ ನಾಗ್ ಆಗಲಿದ್ದಾರೆ.