ಮೈಸೂರಿನ ಮುಡಾ ಹಗರಣವನ್ನು ತಾರಕಕ್ಕೆ ಕೊಂಡೊಯ್ಯುತ್ತಿದೆ ಬಿಜೆಪಿ. ಸಿದ್ದರಾಮಯ್ಯ ಹುಟ್ಟುಹಬ್ಬದ ದಿನವೇ ಬಿಜೆಪಿ ಮುಡಾ ಹಗರಣ ವಿರೋಧಿಸಿ ಬೆಂಗಳೂರು ಟು ಮೈಸೂರು ಪಾದಯಾತ್ರೆ ಹೊರಟಿದೆ. ವಿಶೇಷ ಎಂದರೆ.. ಈ ಪಾದಯಾತ್ರೆಯಲ್ಲಿ ಎಲ್ಲರ ಟಾರ್ಗೆಟ್ ಆಗಿರುವುದು ವಿಜಯೇಂದ್ರ ಯಡಿಯೂರಪ್ಪ. ಇದು ಅಚ್ಚರಿ ಎನಿಸಿದರೂ ಸತ್ಯ. ರಾಜಕೀಯದಲ್ಲಿ ಹೀಗಾಗುವುದು ಅಪರೂಪ. ಶತ್ರುಗಳನ್ನು ಮೊದಲು ಹೊಡೆಯೋಣ, ಆಮೇಲೆ ನಮ್ಮ ನಮ್ಮೊಳಗೆ ಏನೇ ನಡೆಯುತ್ತಿದ್ದರೂ ಸರಿಪಡಿಸಿಕೊಳ್ಳೋಣ ಎನ್ನುವುದು ರಾಜಕೀಯದಲ್ಲಿ ತಲೆತಲಾಂತರದಿಂದ ಬಂದಿರುವ ಸಂಪ್ರದಾಯ. ಆದರೆ ವಿಚಿತ್ರವೆಂದರೆ, ಹೋರಾಟವನ್ನು ಒಂದೆಡೆ ತಾರಕಕ್ಕೆ ಕೊಂಡೊಯ್ಯುತ್ತಿರುವಾಗಲೇ ಅತ್ತ ಕಾಂಗ್ರೆಸ್ಸಿಗರಿಂದ, ಇತ್ತ ತನ್ನದೇ ಪಕ್ಷದ ಹಿರಿಯ ನಾಯಕರಿಂದ ಹಾಗೂ ಮಿತ್ರ ಪಕ್ಷದಿಂದಲೂ ಟೀಕೆಗೆ ಗುರಿಯಾಗುತ್ತಿರುವುದು ವಿಜಯೇಂದ್ರ ಯಡಿಯೂರಪ್ಪ.
ಬಿಜೆಪಿಯಲ್ಲಿ ವಿಜಯೇಂದ್ರ ವಿರುದ್ಧ ನಿಂತಿರುವವರಲ್ಲಿ ಬಹಿರಂಗವಾಗಿ ಕಾಣಿಸಿಕೊಳ್ಳುವುದು ಬಸನಗೌಡ ಪಾಟೀಲ ಯತ್ನಾಳ್ ಮತ್ತು ರಮೇಶ್ ಜಾರಕಿಹೊಳಿ, ಕುಮಾರ್ ಬಂಗಾರಪ್ಪ ಹಾಗೂ ಪ್ರತಾಪ್ ಸಿಂಹ ಬೆಂಗಳೂರಿನ ಖಾಸಗಿ ಹೋಟೆಲ್ಲಿನಲ್ಲಿ ಸಭೆ ಮಾಡಿದ್ದಾರೆ. ಅದು ಸುದ್ದಿಯಾಗುತ್ತಿದ್ದಂತೆಯೇ ʻನಮ್ಮದು ಸಮಾನ ಮನಸ್ಕರ ಸಭೆ. ಭಿನ್ನಮತೀಯರ ಸಭೆ ಅಲ್ಲʼ ಎಂದು ಮೀಡಿಯಾಗಳಿಗೆ ವ್ಯಂಗ್ಯವಾಗಿಯೇ ಉತ್ತರ ಕೊಟ್ಟಿದ್ದಾರೆ ಪ್ರತಾಪ್ ಸಿಂಹ. ಹಾಗೆ ಹೇಳುವಾಗಲೆಲ್ಲ ವಿಜಯೇಂದ್ರ ಅವರನ್ನು ಪ್ರತಾಪ್ ಸಿಂಹ ಬಹಿರಂಗವಾಗಿ ತರಾಟೆಗೆ ತೆಗೆದುಕೊಂಡ ದೃಶ್ಯಗಳೇ ನೆನಪಾಗುತ್ತಿದ್ದರೆ ಆಶ್ಚರ್ಯವಿಲ್ಲ.
ಅಲ್ಲದೆ ಯತ್ನಾಳ್, ಜಾರಕಿಹೊಳಿ ತಾವೇ ʻಪ್ರತ್ಯೇಕವಾಗಿ ಉತ್ತರ ಕರ್ನಾಟಕದಲ್ಲಿ ಪಾದಯಾತ್ರೆʼ ಮಾಡುವುದಾಗಿ ಘೋಷಣೆಯನ್ನೂ ಮಾಡಿದ್ದಾರೆ. ಅದು ಆಗುವುದಕ್ಕೆ ಸಾಧ್ಯ ಇದೆಯಾ.. ಇಲ್ಲವಾ.. ಆ ಪ್ರಶ್ನೆಯನ್ನು ಬದಿಗಿಟ್ಟರೆ ಟಾರ್ಗೆಟ್ ವಿಜಯೇಂದ್ರ ಎನ್ನುವುದನ್ನು ಬಿಡಿಸಿ ಹೇಳಬೇಕಿಲ್ಲ.
ಇನ್ನು ಬಿಜೆಪಿಯಲ್ಲಿಯೇ ಇರುವ ವಿಧಾನಸಭೆ ಪ್ರತಿಪಕ್ಷ ನಾಯಕರೂ ಆಗಿರುವ ಆರ್.ಅಶೋಕ್, ಅಶ್ವತ್ಥ್ ನಾರಾಯಣ್ ಅವರಿಗೆ ಮೈಸೂರು ಭಾಗದಲ್ಲಿ ವಿಜಯೇಂದ್ರ ಪ್ರಬಲರಾಗಿಬಿಟ್ಟರೆ, ಬಿಜೆಪಿಯಲ್ಲಿ ಇರುವ ಒಕ್ಕಲಿಗ ಲೀಡರ್ ಪಟ್ಟ ಎಲ್ಲಿ ತಪ್ಪಿ ಹೋಗುತ್ತದೋ ಎಂಬ ಚಿಂತೆ.
ಮಿತ್ರ ಪಕ್ಷ ಜೆಡಿಎಸ್ಸಿನಲ್ಲಿ..
ಇಡೀ ಮುಡಾ ವಿರೋಧಿ ಪಾದಯಾತ್ರೆ ನಡೆಯುವುದು ʻಜೆಡಿಎಸ್ ಬೆಲ್ಟ್ʼನಲ್ಲಿ. ಅಂದರೆ ಬೆಂಗಳೂರಿನ ಕೆಂಗೇರಿಯಿಂದ ಮೈಸೂರುವರೆಗೆ ಎಲ್ಲೆಲ್ಲಿ ಪಾದಯಾತ್ರೆ ಹೋಗುತ್ತದೋ.. ಅಲ್ಲೆಲ್ಲ ಇರುವುದು ಜೆಡಿಎಸ್ ಪ್ರಾಬಲ್ಯ. ಬಿಜೆಪಿಯದ್ದ ಸಹ ಆಟಗಾರನ ಪಾತ್ರ. ಆದರೆ, ಪಾದಯಾತ್ರೆಯಲ್ಲಿ ಕುಮಾರಸ್ವಾಮಿ ಇರುವುದಕ್ಕೆ ಆಗಲ್ಲ. ನಿಖಿಲ್ ಇದ್ದರೂ ವಿಜಯೇಂದ್ರ ಇದ್ದರೆ ಸಹಜವಾಗಿಯೇ ಎಲ್ಲರ ಕಣ್ಣು ವಿಜಯೇಂದ್ರ ಮೇಲಿರುತ್ತೆ. ಮೊದ ಮೊದಲು ಅರ್ಥವಾಗಿದ್ದರೂ, ಅಂತಿಮ ಹಂತದಲ್ಲಿ ಇದು ಅರ್ಥವಾಗುತ್ತಿದ್ದಂತೆಯೇ ಕುಮಾರಸ್ವಾಮಿ ಪ್ರೀತಂ ಗೌಡ ಇದ್ದ ಕಾರಣವನ್ನು ಹೇಳಿ, ಪ್ರವಾಹದ ನೆಪ ಹೇಳಿ ಹಿಂದೆ ಸರಿಯುವ ಪ್ರಯತ್ನ ಮಾಡಿದ್ದೂ ಆಯಿತು. ಕೊನೆಗೆ ಹೈಕಮಾಂಡ್ ಮಧ್ಯ ಪ್ರವೇಶದೊಂದಿಗೆ ಪಾದಯಾತ್ರೆ ನಡೆಯುತ್ತಿದೆ. ಪ್ರೀತಂಗೌಡ ಪಾದಯಾತ್ರೆಯಿಂದ ಹೊರಬಿದ್ದಾಗಿದೆ. ಒನ್ಸ್ ಎಗೇನ್ ಇಲ್ಲಿಯೂ ಟಾರ್ಗೆಟ್ ಆಗಿರುವುದು ವಿಜಯೇಂದ್ರ.
ಕಾಂಗ್ರೆಸ್ಸಿಗರಿಗೂ ವಿಜಯೇಂದ್ರ ಟಾರ್ಗೆಟ್
ವಿಜಯೇಂದ್ರ ತಾಕತ್ ಇದ್ದರೆ ಭ್ರಷ್ಟಾಚಾರದ ಪಿತಾಮಹ ಅಂತ ಅಂದ್ರೆ ಏನೆಂದು ಹೇಳಲಿ, ಅವನಿಗೆ ಗೌರವ ಕೊಡುತ್ತೇನೆ. ಆದರೆ, ಯಾವ ಭ್ರಷ್ಟಾಚಾರ, ಏನು ತನಿಖೆಯಾಗಿದೆ ಎಂದು ಹೇಳಬೇಕು. ಆಗ ಆತನನ್ನು ಪಾರ್ಟಿ ಅಧ್ಯಕ್ಷ ಎಂದು ಒಪ್ಪಿಕೊಳ್ಳುತ್ತೇನೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸವಾಲು ಹಾಕಿದ್ದಾರೆ ಡಿಕೆ ಶಿವಕುಮಾರ್. ಬಹಿರಂಗವಾಗಿಯೇ ವಿಜಯೇಂದ್ರ ಅವರನ್ನು ತಡವಿಕೊಂಡಿದ್ದಾರೆ. ಯತ್ನಾಳ್ ಪ್ರಕಾರ ಡಿಕೆಶಿ ಮತ್ತು ವಿಜಯೇಂದ್ರ ಮಧ್ಯೆ ಅಡ್ಜಸ್ಟ್ ಮೆಂಟ್ ನಡೆಯುತ್ತಿದೆ ಎನ್ನುತ್ತಿರುವಾಗಲೇ ಡಿಕೆಶಿ ಅಟ್ಯಾಕ್ ಮಾಡುತ್ತಿರುವುದು ವಿಜಯೇಂದ್ರ ಅವರನ್ನೇ. ವಿಜಯೇಂದ್ರ ಕೂಡಾ ಸಿದ್ದರಾಮಯ್ಯ, ಡಿಕೆ ಇಬ್ಬರ ವಿರುದ್ಧವೂ ಗುಡುಗುತ್ತಿದ್ಧಾರೆ.
ಏಕಕಾಲಕ್ಕೆ ಎಲ್ಲರ ವಿರೋಧ ಕಟ್ಟಿಕೊಳ್ಳುವುದು ಸಾಧುವೇ.. ಸಮ್ಮತವೇ.. ಎಂದು ಯೋಚಿಸಿದರೆ.. ಉದಯೋನ್ಮುಖ ರಾಜಕಾರಣಿಗೆ ಅದು ಲಾಭವೂ ಆಗುವ ಸಾಧ್ಯತೆ ಹೆಚ್ಚು.



