ಸಿಎಂ ಸಿದ್ದರಾಮಯ್ಯ ವಿರುದ್ಧ ಮುಡಾ (ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ)ದಿಂದ 14 ಸೈಟುಗಳನ್ನು ಪಡೆದಿರುವ ಆರೋಪ ಕೇಳಿ ಬಂದಿದೆ. ಯಾವಾಗ ಆರೋಪ ಕೇಳಿ ಬಂತೋ.. ಆಗ ನ್ಯಾಯಾಂಗ ತನಿಖೆಗೆ ಖುದ್ದು ಸಿಎಂ ಸಿದ್ದರಾಮಯ್ಯ ಆದೇಶ ಕೊಟ್ಟಿದ್ದಾರೆ. ಬಿಜೆಪಿ-ಜೆಡಿಎಸ್ ಜಂಟಿ ಪಾದಯಾತ್ರೆ ನಡೆಸುತ್ತಿದ್ದರೆ, ಕಾಂಗ್ರೆಸ್ ಪ್ರಶ್ನೆ ಕೇಳಿ ಅಭಿಯಾನ ನಡೆಸುತ್ತಿದೆ.
ಈ ನಡುವೆಯೇ ವಿಧಾನಪರಿಷತ್ ಸದಸ್ಯರೂ ಆಗಿರುವ ಯತೀಂದ್ರ ಸಿದ್ದರಾಮಯ್ಯ ʻಸದ್ಯದ ಮಟ್ಟಿಗೆ ಮುಡಾದಿಂದ ಪಡೆದಿರುವ 14 ಸೈಟುಗಳು ನಮ್ಮದಲ್ಲʼ ಎಂಬ ಹೇಳಿಕೆ ನೀಡಿದ್ದಾರೆ.
ಮುಡಾ ನಿವೇಶನ ಹಂಚಿಕೆ ಸಂಬಂಧ ನ್ಯಾಯಾಂಗ ತನಿಖೆ ಆಗುತ್ತಿದೆ. ಈಗಾಗಲೇ ಮುಡಾ ಸೈಟ್ ವಾಪಸ್ ಕೊಡುವ ಬಗ್ಗೆ ಹೇಳಾಗಿದೆ. 2005 ರಿಂದ ಯಾರಿಗೆಲ್ಲಾ ನಿವೇಶನ ಕೊಟ್ಟಿದ್ದಾರೆ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ. ಅದರ ಅರ್ಥ ನಮಗೆ ಕೊಟ್ಟಿರುವ ನಿವೇಶನವೂ ರದ್ದಾಗಿದೆ ಎಂಬುದು. ಈಗ ಆ ನಿವೇಶನಗಳು ನಮ್ಮ ಸುಪರ್ದಿಗೆ ಬರುವುದಿಲ್ಲ. ನ್ಯಾಯಾಂಗ ತನಿಖೆ ನಡೆದು ವರದಿ ಬರುವವರೆಗೂ ಸೈಟ್ ನಮ್ಮದಲ್ಲ. ತನಿಖೆ ಮಾಡಿ ನಮ್ಮದು ಎಂದರೆ ನಿವೇಶನ ನಮಗೆ ಕೊಡುತ್ತಾರೆ. ಇಲ್ಲದಿದ್ದರೆ ಕುಟುಂಬದವರು ನ್ಯಾಯಾಲಯದ ಮೊರೆ ಹೋಗುತ್ತೇವೆ. ನಮ್ಮ ತಂದೆ ಭ್ರಷ್ಟಾಚಾರ ಮಾಡಿದ್ದಾರೆಂದು ಬಿಂಬಿಸುವುದು ಸರಿಯಲ್ಲ ಎನ್ನುವುದು ಯತೀಂದ್ರ ಸಿದ್ಧರಾಮಯ್ಯ ವಾದ.
ಈ ಪ್ರಕರಣದಲ್ಲಿ ತಮ್ಮ ತಂದೆ ಹಾಗೂ ತಾಯಿ ಇಬ್ಬರಿಗೂ ನೋವಿದೆ. ರಾಜ್ಯಪಾಲರು ಅಸಾಂವಿಧಾನಿಕವಾಗಿ ನೋಟಿಸ್ ಕೊಟ್ಟ ಕಾರಣ ತಂದೆಯವರಿಗೆ ಬೇಸರವಾಗಿದೆ. ನಮಗೆ ನ್ಯಾಯವಾಗಿ ಬರಬೇಕಾದ ಪರಿಹಾರಕ್ಕೆ ಯಾಕೆ ಹೀಗೆ ಮಾಡ್ತಿದ್ದಾರೆ? ಎಂದು ನನ್ನ ತಾಯಿಗೂ ಬೇಜಾರಾಗಿದೆ. ನಾವು ಕೋರ್ಟ್‌ನಲ್ಲಿ ಹೋರಾಡಿ ಧಕ್ಕಿಸಿಕೊಳ್ಳೋಣ ಎಂದು ತಂದೆಯವರು ಹೇಳಿದ್ದಾರೆ. ಈಗಾಗಲೇ ನ್ಯಾಯಾಂಗ ತನಿಖೆಗೆ ಒಪ್ಪಿಸಿದ್ದೇವೆ. ಅಂದರೆ ಅದರ ಅರ್ಥ ಈಗ ಸೈಟ್ ಗಳು ನಮ್ಮ ಬಳಿಯಿಲ್ಲ, ನ್ಯಾಯಾಂಗ ತನಿಖೆ ಆರಂಭವಾಗಿರುವ ಹಿನ್ನೆಲೆಯಲ್ಲಿ ಸೈಟ್ ನಮ್ಮ ಮಾಲೀಕತ್ವದಲ್ಲಿ ಇರುವುದಿಲ್ಲ ಅದರಲ್ಲಿ ಕ್ಲೀನ್ ಚಿಟ್ ಬಂದರೆ ಮಾತ್ರ ನಮ್ಮದಾಗುತ್ತದೆ. ಅಕ್ರಮವಾಗಿದ್ದರೆ ಸೈಟ್ ಗಳನ್ನು ವಾಪಸ್ ತೆಗೆದುಕೊಳ್ಳಿ ಎಂದು ಸವಾಲು ಹಾಕಿದ್ದಾರೆ.
ಇತ್ತ ಸಿಎಂ ಸಿದ್ಧರಾಮಯ್ಯ ಕೂಡಾ ಪಬ್ಲಿಕ್ ಟಿವಿಗೆ ನೀಡಿರುವ ಸಂದರ್ಶನದಲ್ಲಿ ಇದೇ ಮಾತು ಹೇಳಿದ್ಧಾರೆ. ಪಬ್ಲಿಕ್ ಟಿವಿಯಲ್ಲಿ ರಂಗನಾಥ್ ಅವರ ಎದುರು ಮಾತನಾಡಿದ ಸಿದ್ಧರಾಮಯ್ಯ ಕೂಡಾ ನ್ಯಾಯಾಂಗ ತನಿಖೆ ನಡೆಯುತ್ತಿರುವುದರಿಂದ ತಮ್ಮ ಪತ್ನಿಗೆ ಬಂದಿರುವ 14 ಸೈಟುಗಳು ಈಗ ತಮ್ಮದ್ದಲ್ಲ. ನ್ಯಾಯಾಂಗ ತನಿಖೆ ಮುಗಿದ ಮೇಲೆ ತಾವು ನ್ಯಾಯವಾಗಿ ಸೈಟು ಪಡೆದಿದ್ದೇವೆಯೋ.. ಇಲ್ಲವೋ ಎಂಬುದು ನಿರ್ಧಾರವಾಗುತ್ತದೆ ಎಂದು ಹೇಳಿದ್ದಾರೆ.
ಅಂದಹಾಗೆ ಸಿದ್ಧರಾಮಯ್ಯ ಈಗ ಮೈಸೂರಿನಲ್ಲಿ ಒಂದು ಮನೆ ಕಟ್ಟಿಸುತ್ತಿದ್ಧಾರೆ. ಈ ಮೊದಲು ಒಂದು ಮನೆ ಕಟ್ಟಿಸಿದ್ದರು. ಆದರೆ ಹೋಮ್ ಲೋನ್ ತೀರಿಸೋಕೆ ಸಾಧ್ಯವಾಗದೆ ಮಾರಿದ್ದರು. ಈಗ ಮತ್ತೊಮ್ಮೆ ಮನೆ ಕಟ್ಟಿಸುತ್ತಿದ್ದಾರೆ.



