ಚೈತ್ರಾ ಕುಂದಾಪುರ (Chaithra Kundapura) ಪೊಲೀಸರ ವಶದಲ್ಲಿದ್ದಾಗಲೇ ಹೇಳಿದ್ದ ಮಾತು, ಸ್ವಾಮೀಜಿ ಸಿಕ್ಕಿ ಬೀಳ್ಲಿ, ಎಲ್ಲ ಹೊರಗೆ ಬರುತ್ತೆ. ಎಲ್ಲರ ವ್ಯವಹಾರನೂ ಹೊರಗೆ ಬರುತ್ತೆ. ಇದೆಲ್ಲ ಇಂದಿರಾ ಕ್ಯಾಂಟೀನ್ (Indira canteen) ಬಿಲ್ ತಗೊಳ್ಳೋಕೆ ಆಡ್ತಿರೋ ನಾಟಕ.. ಎಂದೆಲ್ಲ ಹೇಳಿದ್ದರು. ಇದೀಗ ಹಾಲಶ್ರೀ ಸ್ವಾಮಿಯೂ ಸಿಕ್ಕಿ ಬಿದ್ದಿದ್ದಾನೆ. ಸಿಕ್ಕಿ ಬೀಳ್ತಾನೆ ಅನ್ನೋದು ಗೊತ್ತಿತ್ತು. ಯಾಕಂದ್ರೆ ಕರ್ನಾಟಕ ಪೊಲೀಸರ ತಾಕತ್ತಿಗೆ ಇದೊಂದು ಆರ್ಡಿನರಿ ಕೇಸು. ಆದರೆ ಈ ಹಾದಿಯಲ್ಲಿ ಹಾಲಶ್ರೀ ಸ್ವಾಮೀಜಿ (Halashree Swamiji), 4 ಮೊಬೈಲು, 4 ಸಿಮ್ ಕಾರ್ಡು ತಗೊಂಡು, ದೇಶದ ಬೇರೆ ಬೇರೆ ಕಡೆ ಸುತ್ತಾಡಿ, ಪೊಲೀಸರನ್ನೇ ಯಾಮಾರಿಸಿ, ಕಾವಿ ಕಳಚಿಟ್ಟು, ಪ್ಯಾಂಟು ಶರಟು ಹಾಕ್ಕೊಂಡು ಆಡಿದ ನಾಟಕಗಳಿವೆಯಲ್ಲ.. ಅದು ರೋಚಕ.
ಎಸ್ಕೇಪ್ ಆಗಿದ್ದೇ ಮಿಂಚಿನ ಓಟ : ಉದ್ಯಮಿ ಗೋವಿಂದಬಾಬು ಪೂಜಾರಿ (Govinda babu Poojari) ತಮಗೆ 5 ಕೋಟಿ ರೂ. ವಂಚನೆ ಮಾಡಿದ್ದಾರೆ ಎಂದು 10 ಜನರ ವಿರುದ್ಧ ದೂರು ನೀಡಿದ ಬೆನ್ನಲ್ಲೇ ಚೈತ್ರಾ ಕುಂದಾಪುರ ಅವರನ್ನು ಬಂಧಿಸಲಾಗಿತ್ತು. ನಂತರ ಗ್ಯಾಂಗ್ನ 6 ಜನರನ್ನು ಬಂಧಿಸಿ ಜೈಲಿಗಟ್ಟಲಾಗಿತ್ತು. ಎ3 ಆರೋಪಿ ಆಗಿರುವ ಹಿರೇಹಡಗಲಿಯ ಅಭಿನವ ಹಾಲಶ್ರೀ ಶ್ವಾಮೀಜಿ ತಮ್ಮ ಕಾರಿನ ಚಾಲಕ ನಿಂಗರಾಜು ಜೊತೆಗೆ ಹಿರೇಹಡಗಲಿ ಮಠದಿಂದ ಪರಾರಿ ಆಗಿದ್ದರು. ಹಿರೇಹಡಗಲಿಯ ಹಾಲಶ್ರೀ ಮಠದಿಂದ ರಾತ್ರಿ 11 ಗಂಟೆ ವೇಳೆಗೆ ಮೈಸೂರಿಗೆ ತೆರಳಿದ್ದರು. ನಂತರ, ಸೆ.12ರಂದು ಮೈಸೂರಿನ ಹೆಚ್ಎಎಲ್ ವೀರಸ್ವಾಮಿ ಮಠದಲ್ಲಿ ಒಂದು ದಿನ ವಾಸವಾಗಿದ್ದರು. ಇದಾದ ನಂತರ ಸೆ.3ರಂದು ಬೆಳಗ್ಗೆ ಮೈಸೂರಿನ ಬಸ್ ನಿಲ್ದಾಣದ ಮುಂಭಾಗದಲ್ಲಿರುವ ಅಪೂರ್ವ ಮೊಬೈಲ್ ಸ್ಟೋರ್ಗೆ ತೆರಳಿದ್ದ ಸ್ವಾಮೀಜಿ 4 ಮೊಬೈಲ್ ಹಾಗೂ 4 ಸಿಮ್ ಖರೀದಿ ಮಾಡುತ್ತಾರೆ.
ಅಪೂರ್ವ ಮೊಬೈಲ್ ಸ್ಟೋರ್ನಲ್ಲಿ (Apoorva mobiles) ಖರೀದಿಸಿದ ಮೊಬೈಲ್ ಹಾಗೂ ಸಿಮ್ ಕಾರ್ಡ್ಗಳ ಪೈಕಿ 2 ಹೊಸ ಮೊಬೈಲ್ ಹಾಗೂ 2 ಹೊಸ ಸಿಮ್ ಕಾರ್ಡ್ಗಳನ್ನು ತೆಗೆದುಕೊಂಡು ತಾವು ಬಳಕೆ ಮಾಡಲು ನಿರ್ಧಸುತ್ತಾರೆ. ಅದೇ ದಿನ ಮಧ್ಯಾಹ್ನ ತಮ್ಮ ಕಾರಿನ ಚಾಲಕ ನಿಂಗರಾಜು ಅವರಿಂದ 50 ಲಕ್ಷ ರೂ.ಗಳನ್ನು ತಮ್ಮ ಖರ್ಚಿಗೆ ತರಿಸಿಕೊಳ್ಳುತ್ತಾರೆ. ಅಂದರೆ, ಅಭಿನವ ಹಾಲಶ್ರೀ ಸ್ವಾಮೀಜಿಯ ಆಪ್ತನಾಗಿದ್ದ ಪ್ರಣವ್ ಎನ್ನುವವರಿಗೆ 50 ಲಕ್ಷ ರೂ. ಹಣವನ್ನು ಇಟ್ಟುಕೊಳ್ಳುವಂತೆ ಕೊಟ್ಟಿದ್ದರು. ಈ ಹಣವನ್ನು ಸ್ವಾಮೀಜಿಯ ಚಾಲಕ ನಿಂಗರಾಜು ತೆಗೆದುಕೊಂಡು ಬಂದಿದ್ದರು. ಒಂದು ಕಡೆ ಜಾಮೀನಿಗೆ ಪ್ರಯತ್ನ ನಡೆಸುತ್ತಲೇ ಮತ್ತೊಂದು ಕಡೆ ಎಸ್ಕೇಪ್ ರೂಟ್‍ನ್ನು ಆಕ್ಟಿವ್ ಆಗಿಟ್ಟಿದ್ದರು ಹಾಲಶ್ರೀ. ತಮ್ಮ ಕಾರಿನ ನಂಬರ್ ಪ್ಲೇಟ್ ಅನ್ನು ತೆಗೆಸಿ ಪ್ರಣವ್ ಮನೆಯಲ್ಲಿ ಕಾರನ್ನು ನಿಲ್ಲಿಸಿ, ಅಲ್ಲಿಂದ ಬಸ್ನ ಮೂಲಕ ಸ್ವಾಮೀಜಿ ಪರಾರಿ ಆಗ್ತಾರೆ. ಮೈಸೂರಿನಿಂದ ಬಳ್ಳಾರಿ ಮಾರ್ಗವಾಗಿ ಕಾರಿನಲ್ಲಿ ಆಂಧ್ರಪ್ರದೇಶದ ಹೈದರಾಬಾದ್ (ಸಿಖಂದರಾಬಾದ್) ಗೆ ಅಲ್ಲಿಂದ ಶ್ರೀಶೈಲ ಕ್ಷೇತ್ರವನ್ನು (Shreeshaila) ಶ್ರೀ ತಲುಪಿದ್ದರು.
ಪೊಲೀಸರಿಗೆ ಸಿಕ್ಕಿಬಿದ್ದಿದ್ದ ಚಾಲಕ ನಿಂಗರಾಜು ಸ್ವಾಮೀಜಿ ಕಾವಿ ವೇಷ ಕಳಚಿಟ್ಟು ಪ್ಯಾಂಟು ಶರಟು ಹಾಕಿದ್ದಾರೆ ಎನ್ನುವುದನ್ನು ಬಾಯಿಬಿಟ್ಟಿದ್ದ. ಇನ್ನು ಸ್ವಾಮೀಜಿಯೂ ಅಷ್ಟೆ, ಶ್ರೀಶೈಲದಿಂದ ಒಡಿಶಾದ ಕಟಕ್‍ಗೆ ತೆರಳಿದ್ದರು. ಅಲ್ಲಿಂದ ಕಾಶಿಗೆ ತೆರಳುವ ಪ್ಲಾನ್ ಹಾಕಿದ್ದರು. ಇದರ ಮಧ್ಯೆ ಪೊಲೀಸರನ್ನು ದಿಕ್ಕು ತಪ್ಪಿಸುವುದಕ್ಕಾಗಿಯಯೇ ಫೇಕ್ ಬುಕ್ಕಿಂಗ್ ಮಾಡಿಸುತ್ತಿದ್ದರು. ಇನ್ನು ಪರಾರಿಯಾಗುವಾಗ ಮೈಸೂರಿನಲ್ಲಿ ಖರೀದಿಸಿದ್ದ 4 ಮೊಬೈಲ್ಗಳ ಪೈಕಿ 3 ಮೊಬೈಲ್ ಅನ್ನು ಹಾಲಶ್ರೀ ಬಳಸಿ ದಾರಿ ಮಧ್ಯೆ ಬಿಸಾಡಿದ್ದರು.
ಈಗ ಏನಾಗುತ್ತೆ?
ಚೈತ್ರಾ ಕುಂದಾಪುರ ಮತ್ತು ಹಾಲಶ್ರೀ ಸ್ವಾಮೀಜಿ ಇಬ್ಬರನ್ನೂ ಮುಖಾಮುಖಿ ಕೂರಿಸಿ ಪ್ರಶ್ನೆ ಮಾಡಲು ಸಿಸಿಬಿ ಪೊಲೀಸರು ನಿರ್ಧರಿಸಿದ್ದಾರಂತೆ. ಆದರೆ ಎಲ್ಲವನ್ನೂ ಬಹಿರಂಗವಾಗಿಯೇ ತೋರಿಸುತ್ತಿರುವಾಗ ಈ ನಡೆಯನ್ನೇಕೆ ಪೊಲೀಸರು ಗುಪ್ತವಾಗಿ ನಡೆಸುತ್ತಿದ್ದಾರೆ ಎನ್ನುವುದು ಹಾಲಶ್ರೀ ಸ್ವಾಮೀಜಿಯ ಮೇಲಿನ ಆರೋಪ ಒಂದೂವರೆ ಕೋಟಿಯಷ್ಟೇ ನಿಗೂಢ.



