ಶಿವಣ್ಣ.. ನೀವು ಕನ್ನಡ ಚಿತ್ರರಂಗದ ನಾಯಕತ್ವ ವಹಿಸಿಕೊಳ್ಳಿ.. ಇಂತಾದ್ದೊಂದು ಬೇಡಿಕೆ ಶಿವಣ್ಣಗೆ ಬರುತ್ತಾ ಇದ್ದದ್ದು ಈಗಲ್ಲ. ಡಾ.ರಾಜ್ ಕುಮಾರ್, ಪಾರ್ವತಮ್ಮ ನಿಧನರಾದಾಗ.. ಸಹಜವಾಗಿಯೇ ಅಂಬರೀಷ್ ಅವರಿಗೆ ನಾಯಕತ್ವ ಪಟ್ಟ ಸಿಕ್ಕಿತ್ತು. ಅಂಬಿ ಅವರಿಗಿಂತ ಹಿರಿಯರಾಗಿ ವಿಷ್ಣುವರ್ಧನ್ ಇದ್ದರೂ, ಗಲಾಟೆ, ಗದ್ದಲಗಳಿಂದ ದೂರ ಇರುತ್ತಿದ್ದ ವಿಷ್ಣು, ಈ ಗೊಡವೆಗೇ ಬರುತ್ತಿರಲಿಲ್ಲ. ಇನ್ನು ಪಾರ್ವತಮ್ಮ ಇದ್ದಾಗಲೂ ಅಂಬರೀಷ್, ಸಮಸ್ಯೆಗಳನ್ನು ನಿಭಾಯಿಸುತ್ತಿದ್ದ ಕಾರಣ, ಇಂಡಸ್ಟ್ರಿಯಲ್ಲಿ ಪ್ರಾಬ್ಲಂ ಇರಲಿಲ್ಲ.
ಆದರೆ ಅಂಬರೀಷ್ ಹೋದ ಮೇಲೆ ಒಂದು ಶೂನ್ಯ ಆವರಿಸಿಕೊಂಡಿದ್ದಂತೂ ನಿಜ. ಶಿವಣ್ಣ ಇದ್ದಾರೆ, ಒಪ್ಪಿಕೊಳ್ಳಲ್ಲ. ರವಿಚಂದ್ರನ್ ಕೇಳಿದರೆ.. ಅವರೂ ಶಿವಣ್ಣನೇ ಬೆಸ್ಟ್ ಚಾಯ್ಸ್ ಅಂತಾರೆ. ತೀರಾ ಬಲವಂತವಾಗಿ ಹೋದರೆ ಮಾತ್ರ, ಪರ್ಸನಲ್ ಆಗಿ ಹ್ಯಾಂಡಲ್ ಮಾಡ್ತಾರೆ. ಆದರೆ.. ಇಡೀ ಚಿತ್ರರಂಗದ ನಾಯಕತ್ವಕ್ಕೆ ಒಲ್ಲೆ ಅಂತಾರೆ. ಹಾಗಾದರೆ.. ಕನ್ನಡ ಚಿತ್ರರಂಗದ ನೇತೃತ್ವ ವಹಿಸಿಕೊಳ್ಳೋವ್ರು ಯಾರು..? ನೇತೃತ್ವ ಯಾರದು ಅನ್ನೋ ಪ್ರಶ್ನೆಗೆ ಎಲ್ಲರೂ ಹೇಳುತ್ತಿದ್ದ ಹೆಸರು ಶಿವರಾಜ್ ಕುಮಾರ್ ಅವರದ್ದೇ ಆದರೂ, ಶಿವಣ್ಣ ರೆಡಿ ಇರಲಿಲ್ಲ. ಒಟ್ಟಿಗೇ ಹೋಗೋಣ.. ಎನ್ನುತ್ತಿದ್ದ ಶಿವಣ್ಣ, ಲೀಡರ್ ಎನ್ನುವುದನ್ನು ಮಾತ್ರ ಒಪ್ಪಿಕೊಳ್ತಾ ಇರಲಿಲ್ಲ. ಆದರೆ.. ಬದಲಾದ ಪರಿಸ್ಥಿತಿಯಲ್ಲಿ ಶಿವಣ್ಣ ನೇತೃತ್ವ ವಹಿಸಿಕೊಂಡಂತೆ ಕಾಣುತ್ತಿದೆ. ಶಿವಣ್ಣ ಮನೆಯಲ್ಲಿ ಚಿತ್ರರಂಗದ ಹಿರಿಯರೆಲ್ಲ ಮೀಟಿಂಗ್ ಮಾಡಿದ್ದಾರೆ.
ಶಿವಣ್ಣ ಮನೆಯಲ್ಲಿ ಮೀಟಿಂಗ್.. ಯಾರೆಲ್ಲ ಬಂದಿದ್ದರು..?
ಪ್ರದರ್ಶಕರ ವಲಯದಿಂದ ಕೆವಿ ಚಂದ್ರಶೇಖರ್, ನಿರ್ಮಾಪಕರ ವಲಯದಿಂದ ಜಯಣ್ಣ, ಕೆಪಿ ಶ್ರೀಕಾಂತ್ ಸೇರಿದಂತೆ ಹಲವರು ಸಭೆ ನಡೆಸಿದ್ದಾರೆ. ಸಭೆಯ ಅಂತಿಮ ಕ್ಷಣದಲ್ಲಿ ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷ ಸಾರಾ ಗೋವಿಂದು, ಹಾಲಿ ಅಧ್ಯಕ್ಷ ನರಸಿಂಹುಲು, ನಟರಾದ ಶ್ರೀಮುರಳಿ, ಗಣೇಶ್, ಧ್ರುವ ಸರ್ಜಾ ಕೂಡಾ ಸೇರಿದ್ದಾರೆ.
ಶಿವಣ್ಣನ ಎದುರು ಇಟ್ಟ ಬೇಡಿಕೆಗಳೇನು..?
ಚಿತ್ರಮಂದಿರಗಳ ಮೇಲಿನ ಹೊರೆ ಇಳಿಸುವುದು, ಟಿಕೆಟ್ ದರ ಇಳಿಕೆ, ಸ್ಟಾರ್ ಹೀರೋಗಳು ವರ್ಷಕ್ಕೆ ಎರಡು ಸಿನಿಮಾ ಮಾಡುವುದೂ ಸೇರಿದಂತೆ ಸೇರಿದಂತೆ ಹಲವು ವಿಷಯಗಳು ಚರ್ಚೆಯಾಗಿವೆ. ಸಭೆಯ ನಂತರ ಚಿತ್ರಮಂದಿರದ ನಿಯೋಗವೊಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಲಿದೆ.
ಸ್ಟಾರ್ ಹೀರೋಗಳು ವರ್ಷಕ್ಕೆ ಎರಡು ಸಿನಿಮಾ ಮಾಡುವ ವಿಚಾರ. ಶಿವಣ್ಣ ಮತ್ತು ಪ್ರಜ್ವಲ್ ದೇವರಾಜ್ ಬಿಟ್ಟರೆ ಬೇರೆ ಯಾವ ನಟರದ್ದೂ ವರ್ಷಕ್ಕೆ ಎರಡು ಸಿನಿಮಾ ಬರುತ್ತಿಲ್ಲ. ಯಶ್ 5 ವರ್ಷಕ್ಕೊಮ್ಮೆ ಸಿನಿಮಾ ಮಾಡಿದ್ರೆ, ಧ್ರುವ ಮತ್ತು ಶ್ರೀಮುರಳಿ 3 ವರ್ಷಕ್ಕೊಮ್ಮೆ, ಸುದೀಪ್ 3-4 ವರ್ಷಕ್ಕೊಮ್ಮೆ ಸಿನಿಮಾ ಮಾಡ್ತಾರೆ. ಗಣೇಶ್, ದುನಿಯಾ ವಿಜಯ್, ಉಪೇಂದ್ರ ಕೂಡಾ ರೆಗ್ಯುಲರ್ ಆಗಿ ಸಿನಿಮಾ ಮಾಡುವವರಲ್ಲ. ಹೀಗೆ ಬಹುತೇಕ ಸ್ಟಾರ್ ನಟರು ವರ್ಷಕ್ಕೆ ಒಂದು ಸಿನಿಮಾವನ್ನೂ ಮಾಡ್ತಿಲ್ಲ. ಇವರೆಲ್ಲ ಶಿವಣ್ಣ ಮನೆಯಲ್ಲಿ ಮಾಡಿಕೊಂಡ ನಿರ್ಧಾರವನ್ನು ಒಪ್ಪಿಕೊಳ್ತಾರಾ..?
ಒಟ್ಟಿನಲ್ಲಿ ಚಿತ್ರರಂಗದ ನೇತೃತ್ವವನ್ನ ಶಿವಣ್ಣ ವಹಿಸಿಕೊಂಡಿರುವುದೇನೋ ಖಚಿತ.
ಈ ವರ್ಷ ‘ಕಾಂತಾರ-1, ‘ಎಕ್ಕ’, ‘ಕೆಡಿ’ ಹಾಗೂ ’45’ ಬಿಟ್ಟರೆ ಯಾವುದೇ ಸಿನಿಮಾ ನಿರೀಕ್ಷೆ ಗುಟ್ಟಾಕ್ಕಿಲ್ಲ. ಸದ್ಯ ಐಪಿಎಲ್ ಫೀವರ್ ಮುಗಿದಿಲ್ಲ. ಹಾಗಾಗಿ ಇನ್ನು ಒಂದು ತಿಂಗಳು ಯಾವುದೇ ದೊಡ್ಡ ಸಿನಿಮಾ ಬರಲ್ಲ. ಅಂದರೆ ವರ್ಷದ ಆರೇಳು ತಿಂಗಳು ದೊಡ್ಡ ಸಿನಿಮಾಗಳಿಲ್ಲದೇ ಚಿತ್ರತಂಡ ಬಡವಾಗುತ್ತಿದೆ. ಕಳೆದ ವರ್ಷ ಕೂಡ ಇದೇ ಪರಿಸ್ಥಿತಿ ಇತ್ತು. ಆದರೆ ‘ಕೃಷ್ಣಂ ಪ್ರಣಯ ಸಖಿ’, ‘ಭೀಮ’, ‘ಭಗೀರ’, ‘ಭೈರತಿ ರಣಗಲ್’, ‘ಮ್ಯಾಕ್ಸ್’ ಚಿತ್ರಗಳು ಬಳಿಕ ಸದ್ದು ಮಾಡಿದ್ದವು.
ಈ ವರ್ಷ ಯಾವುದೇ ಸಿನಿಮಾ ಸದ್ಯಕ್ಕೆ ತೆರೆಗೆ ಬಂದು ದೊಡ್ಡದಾಗಿ ಸದ್ದು ಮಾಡುವ ಸುಳಿವು ಸಿಗುತ್ತಿಲ್ಲ. ‘ಎಕ್ಕ’ ಸಿನಿಮಾ ರಿಲೀಸ್ ಡೇಟ್ ಮುಂದೂಡುವ ಸಾಧ್ಯತೆಯಿದೆ. ವರಲಕ್ಷ್ಮಿ ಹಬ್ಬಕ್ಕೆ ‘ಕೆಡಿ’ ಸಿನಿಮಾ ಬರುವ ಸಾಧ್ಯತೆಯಿದೆ. ’45’ ಆಗಸ್ಟ್ 15ಕ್ಕೆ ತೆರೆಗೆ ಬರಬೇಕಿದೆ. ‘ಕಾಂತಾರ-1’ ಅಕ್ಟೋಬರ್ ಮೊದಲ ವಾರ ಬಿಡುಗಡೆ ಆಗಲಿದೆ. ಹಾಗಾಗಿ ಸದ್ಯಕ್ಕೆ ಚಿತ್ರರಂಗ ಸಂಕಷ್ಟಕ್ಕೆ ಸಿಲುಕುವಂತಾಗಿದೆ.
ಈ ಎಲ್ಲ ಸಂಕಷ್ಟಗಳಿಗೂ ಶಿವಣ್ಣ ನಾಯಕತ್ವ ಉತ್ತರ ಕೊಡುತ್ತಾ.. ನೋಡೋಣ



