ಲೈಂಗಿಕ ಕಿರುಕುಳದ ಆರೋಪ ಎದುರಿಸುತ್ತಿರುವ ಹಾಸನ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಅವರ ಪಾಸ್ʻಪೋರ್ಟ್ ರದ್ದತಿಗೆ ಕೇಂದ್ರ ಸರ್ಕಾರ ವಿಳಂಬ ಮಾಡುತ್ತಿದೆ ಎನ್ನುವುದು ಕಾಂಗ್ರೆಸ್ ಆರೋಪ. ಆದರೆ.. ರಾಜ್ಯ ಸರ್ಕಾರ ಮಾಧ್ಯಮಗಳಲ್ಲಿ ಹೇಳಿಕೆ ಕೊಟ್ಟಂತೆಯೇ ವೇಗವಾಗಿ ಪ್ರಕ್ರಿಯೆ ಶುರು ಮಾಡಿದೆಯಾ.. ಇಲ್ಲ. ಕೇಂದ್ರ ವಿದೇಶಾಂಗ ಸಚಿವ ಜೈಶಂಕರ್ ಪ್ರಕಾರ ಪ್ರಕ್ರಿಯೆ ಶುರುವಾಗಿದ್ದೇ ಮೇ 21ರ ನಂತರ. ‘ವಾಸ್ತವವಾಗಿ ನಮಗೆ ಅಂಥ ಕೋರಿಕೆ ಬಂದಿದ್ದೇ ಮೇ 21ರಂದು. ಕೋರಿಕೆ ಬಂದಾಕ್ಷಣ ನಾವು ಆ ಸಂಬಂಧ ಪ್ರಕ್ರಿಯೆಗೆ ಚಾಲನೆ ನೀಡಿದ್ದೇವೆ. ಯಾವುದೇ ಪಾಸ್ಪೋರ್ಟ್ ರದ್ದತಿಗೆ ನಾವು ಪಾಸ್ಪೋರ್ಟ್ ಕಾಯ್ದೆ ಅನ್ವಯ ಕ್ರಮ ಕೈಗೊಳ್ಳಬೇಕು. ಇಂಥ ಕ್ರಮ ಕೈಗೊಳ್ಳಲು ನಮಗೆ ನ್ಯಾಯಾಲಯ ಅಥವಾ ಪೊಲೀಸರಿಂದ ಮನವಿ ಸಲ್ಲಿಕೆಯಾಗಬೇಕು. ಪ್ರಜ್ವಲ್ ರೇವಣ್ಣ ಕುರಿತು ಕರ್ನಾಟಕದಿಂದ ನಮಗೆ ಕೋರಿಕೆ ಬಂದಿದ್ದೇ ಮೇ 21ರಂದು ಎಂದು ಸ್ಪಷ್ಟಪಡಿಸಿದ್ದಾರೆ.
ಈ ಹಿನ್ನೆಲೆ ಈಗ ಪ್ರಜ್ವಲ್ ರೇವಣ್ಣ ಅವರಿಗೆ ನೋಟಿಸ್ ನೀಡಲಾಗಿದೆ. ತಾಂತ್ರಿಕವಾಗಿ ಆ ನೋಟಿಸ್ʻಗೆ ಉತ್ತರ ನೀಡುವುದಕ್ಕೆ ಪ್ರಜ್ವಲ್ ಅವರಿಗೆ 10 ದಿನಗಳ ಕಾಲಾವಕಾಶ ಇದೆ. ನೋಟಿಸ್ʻಗೆ ಪ್ರಜ್ವಲ್ ಕೊಡುವ ಉತ್ತರದ ಮೇಲೆ ವಿದೇಶಾಂಗ ಇಲಾಖೆ ನ್ಯಾಯಾಲಯದ ಅನುಮತಿ ಪಡೆದುಕೊಂಡು ಪಾಸ್ʻಪೋರ್ಟ್ ರದ್ದು ಮಾಡಬೇಕು. ಪಾಸ್ ಪೋರ್ಟ್ ರದ್ದು ಮಾಡುವ ಆದೇಶ ನ್ಯಾಯಾಲಯದಿಂದಲೇ ಬಾರದ ಹೊರತು.. ಕೇಂದ್ರ ಸರ್ಕಾರ ಸ್ವಯಂ ತೀರ್ಮಾನ ತೆಗೆದುಕೊಳ್ಳುವ ಅಧಿಕಾರ ಇಲ್ಲ. ಹೀಗಾಗಿ.. ನಾವು ಪತ್ರ ಬರೆದಿದ್ದೇವೆ.. ಕೇಂದ್ರ ಆಕ್ಷನ್ ತಗೊಳ್ತಿಲ್ಲ ಅನ್ನೋ ರಾಜ್ಯ ಸರ್ಕಾರ ಹಾಗೂ ನಾಯಕರ ಮಾತಿನಲ್ಲಿ ಯಾವುದೇ ಹುರುಳು ಇಲ್ಲ. ಆದರೆ.. ಕೇಂದ್ರ ಸರ್ಕಾರ ಅಥವಾ ವಿದೇಶಾಂಗ ಇಲಾಖೆ ಸ್ವಯಂ ಪ್ರೇರಿತವಾಗಿ ಕ್ರಮ ತೆಗೆದುಕೊಳ್ಳಬಹುದಿತ್ತು. ಆದರೆ.. ಆಗಲೂ ಕೂಡಾ ರಾಜ್ಯ ಪೊಲೀಸ್ ಇಲಾಖೆಯ ಸಹಯೋಗ ಇರಲೇಬೇಕಿತ್ತು. ಇನ್ನು ಕೋರ್ಟಿಗೂ ಅಷ್ಟೆ.. ಆರೋಪಿ ಪ್ರಜ್ವಲ್ ರೇವಣ್ಣ ಅವರ ವಿರುದ್ಧ ಮೇಲ್ನೋಟಕ್ಕೆ ಸತ್ಯ ಎನ್ನಬಹುದಾದ ಸಾಕ್ಷ್ಯಗಳಾದರೂ ಬೇಕು. ಸದ್ಯಕ್ಕೆ ರಾಜ್ಯ ಪೊಲೀಸರ ಬಳಿ ಸಂತ್ರಸ್ತೆ ಎನ್ನಲಾದವರ ಹೇಳಿಕೆ ಹೊರತು ಪಡಿಸಿ, ಬೇರಾವ ಸಾಕ್ಷಿಯೂ ಇದ್ದಂತೆ ಇಲ್ಲ. ಒಬ್ಬ ವ್ಯಕ್ತಿಯ ಪಾಸ್ ಪೋರ್ಟ್ ರದ್ದು ಮಾಡುವುದೆಂದರೆ.. ಸುಲಭದ ಮಾತಲ್ಲ.
ಏನಿದು ಶೆನ್ ಜೆನ್ ವೀಸಾ..?
ಇನ್ನು ಪ್ರಜ್ವಲ್ ಅವರ ಇರುವಿಕೆ ಎಸ್ʻಐಟಿಯವರಿಗೆ ಸಿಕ್ಕದೇ ಇರುವುದಕ್ಕೆ ಏನು ಕಾರಣ ಎಂಬ ಬಗ್ಗೆ ಹುಡುಕಾಟ ನಡೆಯುತ್ತಿದೆ. ಅದರ ಪ್ರಕಾರ ಪ್ರಜ್ವಲ್ ಶೆನ್ ಜೆನ್ ವೀಸಾ ಪಡೆದುಕೊಂಡಿರಬಹುದು ಎಂಬ ಮಾಹಿತಿ ಇದೆ. ಶೆನ್ ಜೆನ್ ವೀಸಾ ಎಂದರೆ..
ಯೂರೋಪ್ʻನ ರಾಷ್ಟ್ರಗಳಿಗೆ ಒಮ್ಮೆ ಹೋದವರು, ಪಡೆದುಕೊಳ್ಳಬೇಕಾದ ಮತ್ತೊಂದು ವೀಸಾ. ಈ ಶೆನ್ ಜೆನ್ ವೀಸಾ ಪಡೆದುಕೊಂಡರೆ.. ಯೂರೋಪಿನ ಎಲ್ಲ ರಾಷ್ಟ್ರಗಳಲ್ಲೂ ಅಂದ್ರೆ 21 ದೇಶಗಳಲ್ಲಿ ನಿರ್ಬಂಧ ಇಲ್ಲದೆ ಓಡಾಡಬಹುದು. ಮೂಲ ಪಾಸ್ ಪೋರ್ಟ್ʻನ್ನು ಒಂದು ದೇಶದಲ್ಲಿ ಕೊಟ್ಟಿದ್ದರೆ ಸಾಕು. ಬಹುಶಃ ಜರ್ಮನಿಯಿಂದ ಪ್ರಜ್ವಲ್ ಶೆನ್ ಜೆನ್ ವೀಸಾ ಪಡೆದುಕೊಂಡಿರಬಹುದು. ಹೀಗಾಗಿ ಪ್ರಜ್ವಲ್ ರೇವಣ್ಣ ಅವರನ್ನು ಟ್ರ್ಯಾಕ್ ಮಾಡೋಕೆ ಆಗ್ತಿಲ್ಲ ಎಂಬ ವಾದಗಳಿವೆ. ಸ್ವದೇಶಕ್ಕೆ ವಾಪಸ್ ಆಗುವಾಗ ಶೆನ್ ಜೆನ್ ವೀಸಾ ಕೊಟ್ಟು ಭಾರತೀಯ ಪಾಸ್ ಪೋರ್ಟ್ ಪಡೆದು ಬರಬಹುದು. ಆಗ ಪ್ರಜ್ವಲ್ ರೇವಣ್ಣ ಅವರನ್ನು ಟ್ರೇಸ್ ಮಾಡಬಹುದು ಎನ್ನುತ್ತಾರೆ ಪೊಲೀಸರು.
ರಾಜತಾಂತ್ರಿಕ ಪಾಸ್ ಪೋರ್ಟ್ ರದ್ದು ಹೇಗೆ..?
ಪ್ರಜ್ವಲ್ ಬಳಿ ಇರುವುದು ರೆಗ್ಯುಲರ್ ಪಾಸ್ ಪೋರ್ಟ್ ಅಲ್ಲ. ಸಂಸದನಾಗಿರುವ ಕಾರಣ ರಾಜತಾಂತ್ರಿಕ ಪಾಸ್ ಪೋರ್ಟ್ ಇದೆ. ಇದನ್ನು ಟೈಪ್ ಡಿ ಪಾಸ್ ಪೋರ್ಟ್ ಅಂತಾನೂ ಕರೀತಾರೆ. ಸಂಸದರಾಗಿವ ಅವಧಿಯವರೆಗೆ ಇದಕ್ಕೆ ಮಾನ್ಯತೆ ಇರುತ್ತದೆ. ಸಂಸದರು ಈ ಪಾಸ್ ಪೋರ್ಟ್ ಪಡೆಯುವುದು ಕಡ್ಡಾಯವೇನೂ ಅಲ್ಲ. ಇದನ್ನು ಪಡೆಯದ ಹಲವು ಸಂಸದರೂ ಇದ್ದಾರೆ.
ಈ ರಾಜತಾಂತ್ರಿಕ ಪಾಸ್ ಪೋರ್ಟ್ʻನ್ನೂ ಕೂಡಾ ಅಷ್ಟೆ. ಪಾಸ್ ಪೋರ್ಟ್ ಪ್ರಾಧಿಕಾರ ಮುಟ್ಟುಗೋಲು ಹಾಕಿಕೊಳ್ಳಬಹುದು ಅಥವಾ ರದ್ದು ಮಾಡಬಹುದು. ಇದೂ ಕೂಡಾ ನ್ಯಾಯಾಲಯದ ಆದೇಶದ ಮೂಲಕವೇ ಆಗಬೇಕು.
ಈ ಪಾಸ್ ಪೋರ್ಟ್ ಇರುವವರು ಭಾರತ ಒಪ್ಪಂದ ಮಾಡಿಕೊಂಡಿರುವ 34 ದೇಶಗಳಿಗೆ ಪ್ರತ್ಯೇಕ ವೀಸಾ ಪಡೆಯಬೇಕಾದ ಅಗತ್ಯ ಇಲ್ಲ. ಈ ಪಾಸ್ ಪೋರ್ಟ್ ಅಡಿಯಲ್ಲಿಯೇ ಗರಿಷ್ಠ 3 ತಿಂಗಳವರೆಗೆ ಪ್ರವಾಸ ಮಾಡುವ ಅವಕಾಶವೂ ಸಿಗುತ್ತದೆ. ಈಗ ಪ್ರಜ್ವಲ್ ಹೋಗಿದ್ದಾರೆ ಎನ್ನಲಾದ ಜರ್ಮನಿ ಜೊತೆಗೂ ವೀಸಾ ವಿನಾಯಿತಿ ಒಪ್ಪಂದ ಇದೆ.
ರಾಜತಾಂತ್ರಿಕ ಪಾಸ್ ಪೋರ್ಟ್ ಹೊಂದಿರುವವರು ಸಾಮಾನ್ಯವಾಗಿ ವಿದೇಶಗಳಿಗೆ ಹೋಗುವ ಕನಿಷ್ಠ 3ವಾರಗಳ ಮುಂಚೆ ಇಲಾಖೆಗೆ ಮಾಹಿತಿ ನೀಡಬೇಕು. ಆದರೆ ಇದು ವೀಸಾ ವಿನಾಯಿತಿ ಒಪ್ಪಂದ ಇರುವ ದೇಶಗಳಿಗೆ ಕಡ್ಡಾಯವೇನಲ್ಲ. ಹೀಗಾಗಿಯೇ.. ಪ್ರಜ್ವಲ್ ರೇವಣ್ಣ ಫಾರಿನ್ನಿಗೆ ಹೇಳದೆ ಕೇಳದೆ ಹೋಗಿದ್ಧಾರೆ.



