ಹಿಂದೂ ದೇವಸ್ಥಾನಗಳಿಗೆ ಹಿಂದೂಗಳಿಗೆ ಮಾತ್ರ ಪ್ರವೇಶ ಇರಬೇಕು. ಇಂತಾದ್ದೊಂದು ಆದೇಶವನ್ನು ಉತ್ತರಾಖಂಡ ಸರ್ಕಾರ ತೆಗೆದುಕೊಂಡಿದೆ. ತಿರುಪತಿ ಮಾದರಿಯಲ್ಲಿ ಒಟ್ಟು 47 ದೇವಸ್ಥಾನಗಳಲ್ಲಿ ಈ ಆದೇಶ ಜಾರಿಯಾಗಿದೆ. ಪ್ರವೇಶ ದ್ವಾರಗಳ ಬಳಿ “ಹಿಂದೂಯೇತರರಿಗೆ ಪ್ರವೇಶವಿಲ್ಲ” ಎಂಬ ನಾಮಫಲಕಗಳನ್ನು ಅಳವಡಿಸಲಾಗುತ್ತಿದೆ. ಇದು ಸಾಧುವೇ.. ಸಾಧ್ಯವೇ.. ವಿವಾದವೇ.. ಅಲ್ಲವೇ.. ಕೆಲವು ಚರ್ಚೆಗಳಂತೂ ಶುರುವಾಗಿವೆ. ಆ ಚರ್ಚೆಗಳ ಪ್ರಕಾರ..
ಈ ನಿಯಮ ಬದರಿನಾಥ ಮತ್ತು ಕೇದಾರನಾಥಕ್ಕೆ ಮಾತ್ರ ಸೀಮಿತವಾಗದೆ, ಉತ್ತರಾಖಂಡದ ಇಡೀ ಚಾರ್ ಧಾಮ್ ಯಾತ್ರಾ ಮಾರ್ಗಕ್ಕೆ ಅನ್ವಯವಾಗುವ ಸಾಧ್ಯತೆಯಿದೆ. ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವಂತಹ ಅಧರ್ಮೀಯ ಕೃತ್ಯಗಳನ್ನು ತಡೆಯುವುದು ಈ ಬಿಗಿ ಕ್ರಮದ ಮುಖ್ಯ ಉದ್ದೇಶ. ಆದರೆ ದೇವಸ್ಥಾನಗಳಿಗೆ ನಡೆದುಕೊಳ್ಳುವ ಸಿಖ್ಖರು, ಜೈನರು, ಬೌದ್ಧರು ಏನು ಮಾಡಬೇಕು.. ಅಲ್ಲದೆ ಕುಂಭಮೇಳದಂತಹ ಉತ್ಸವಗಳು ನಡೆದಾಗ ಸಿಖ್ಖರ ತಂಡಗಳೂ ಇವೆ. ಇಲ್ಲಿ ಏನು ಮಾಡಬೇಕು. ಧರ್ಮಸ್ಥಳದಂತಹ ಹಿಂದೂ ದೇಗುಲಗಳನ್ನು ಜೈನರು ನಡೆಸುತ್ತಿದ್ದಾರೆ. ಇಂತಹ ಪ್ರದೇಶಗಳು ಅಲ್ಲಿಯೂ ಇರಬಹುದು. ಅವರು ಏನು ಮಾಡಬೇಕು.
ಇಂತಹ ಹಲವು ಪ್ರಶ್ನೆಗಳಂತೂ ಇವೆ. ಬದರಿನಾಥ-ಕೇದಾರನಾಥ ಧಾಮ ಸೇರಿದಂತೆ ಬದರಿನಾಥ-ಕೇದಾರನಾಥ ದೇವಾಲಯ ಸಮಿತಿ (BKTC) ನಿಯಂತ್ರಿಸುವ ಎಲ್ಲಾ ದೇವಾಲಯಗಳಿಗೆ ಹಿಂದೂಯೇತರರ ನಿಷೇಧವು ಅನ್ವಯಿಸುತ್ತದೆ ಎಂದು ದೇವಾಲಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ಕುರಿತು ಪ್ರಸ್ತಾವನೆಯನ್ನು ಮುಂಬರುವ ದೇವಾಲಯ ಸಮಿತಿ ಮಂಡಳಿ ಸಭೆಯಲ್ಲಿ ಅಂಗೀಕರಿಸಲಾಗುವು. ಗಂಗೋತ್ರಿ ಧಾಮದ ದ್ವಾರಗಳು ಪ್ರಸ್ತುತ ಭಕ್ತರಿಗೆ ಮುಚ್ಚಲ್ಪಟ್ಟಿವೆ. ಚಳಿಗಾಲದ ತಿಂಗಳುಗಳಲ್ಲಿ ಭಾರೀ ಹಿಮಪಾತ ಮತ್ತು ತೀವ್ರ ಶೀತದಿಂದಾಗಿ, ಎಲ್ಲಾ 4 ಚಾರ್ ಧಾಮಗಳ ದ್ವಾರಗಳನ್ನು ವಾರ್ಷಿಕವಾಗಿ ಅಕ್ಟೋಬರ್ ಮತ್ತು ನವೆಂಬರ್ ನಡುವೆ ಮುಚ್ಚಲಾಗುತ್ತದೆ. ಅವು ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ಮತ್ತೆ ತೆರೆಯುತ್ತವೆ. ಗಂಗೋತ್ರಿ ದೇವಾಲಯವು ಪ್ರವೇಶಿಸಲಾಗದ ಚಳಿಗಾಲದ 6 ತಿಂಗಳುಗಳಲ್ಲಿ ಭಕ್ತರು ಮುಖ್ಬಾ ಗ್ರಾಮದಲ್ಲಿರುವ ಗಂಗಾ ದೇವಿಯ ಚಳಿಗಾಲದ ವಾಸಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸುತ್ತಾರೆ.
ಈ ನಿರ್ಬಂಧವು ಗಂಗೋತ್ರಿ ಧಾಮಕ್ಕೆ ಮಾತ್ರ ಸೀಮಿತವಾಗಿರುವುದಿಲ್ಲ. ಇದು ಮಾ ಗಂಗೆಯ ಚಳಿಗಾಲದ ವಾಸಸ್ಥಾನ ಎಂದು ಕರೆಯಲ್ಪಡುವ ಮುಖ್ಬಾಕ್ಕೂ ಅನ್ವಯಿಸುತ್ತದೆ. ಶ್ರೀ ಗಂಗೋತ್ರಿ ದೇವಾಲಯ ಸಮಿತಿಯ ಅಧ್ಯಕ್ಷ ಸುರೇಶ್ ಸೆಮ್ವಾಲ್ ಅವರು, ಹಿಂದೂಯೇತರರು ಧಾಮಕ್ಕೆ ಪ್ರವೇಶಿಸುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲು ಸಮಿತಿ ನಿರ್ಧರಿಸಿದೆ ಎಂದು ಹೇಳಿದ್ದಾರೆ. ಚಳಿಗಾಲದ ತಿಂಗಳುಗಳಲ್ಲಿ ಮುಖ್ಬಾದಲ್ಲಿ ಅದೇ ನಿಯಮ ಜಾರಿಯಲ್ಲಿರುತ್ತದೆ ಎಂದು ಅವರು ದೃಢಪಡಿಸಿದ್ದಾರೆ.



