ಉಗ್ರಂ. ಕನ್ನಡದ ವಿಶೇಷ ಸಿನಿಮಾ. ಆಗಿನ ಕಾಲಕ್ಕೆ ದೊಡ್ಡ ಹಿಟ್ ಎನಿಸಿಕೊಂಡಿದ್ದ ಸಿನಿಮಾ, ಶ್ರೀಮುರಳಿಗೆ ಮತ್ತೆ ಸ್ಟಾರ್ ಪಟ್ಟ ತಂದುಕೊಟ್ಟಿತ್ತು. ಚಂದ್ರಚಕೋರಿ ಮತ್ತು ಕಂಠಿ ಎಂಬ ಎರಡು ಹಿಟ್ ಚಿತ್ರಗಳೊಂದಿಗೆ ಬೆಳ್ಳಿತೆರೆಗೆ ಬಂದಿದ್ದ ಶ್ರೀಮುರಳಿ, ಆನಂತರ ಸತತವಾಗಿ 10ಕ್ಕೂ ಹೆಚ್ಚು ಫ್ಲಾಪ್ ಚಿತ್ರಗಳನ್ನು ಕೊಟ್ಟಿದ್ದವರು. ಅಂತಹ ಶ್ರೀಮುರಳಿಗೆ ಮತ್ತೆ ಸ್ಟಾರ್ ಲೈಫ್ ಕೊಟ್ಟಿದ್ದು ಪ್ರಶಾಂತ್ ನೀಲ್.
ಪ್ರಶಾಂತ್ ನೀಲ್ ಅನ್ನೋ ಡೈರೆಕ್ಟರ್ʻನನ್ನು ಕನ್ನಡ ಬೆಳ್ಳಿತೆರೆಗೆ ಪರಿಚಯಿಸಿದ ಸಿನಿಮಾ ಈ ಉಗ್ರಂ. ಉಗ್ರಂಗೆ ಅವರು ನಿರ್ದೇಶಕರಷ್ಟೇ ಅಲ್ಲ, ನಿರ್ಮಾಪಕರೂ ಹೌದು. ಆಗಿನ ಕಾಲಕ್ಕೆ ಅದು ಹೊಸತೆಂದರೆ ಹೊಸತು. ಆ ರೀತಿಯ ನಿರೂಪಣೆಯನ್ನಾಗಲೀ, ಟೇಕಿಂಗ್ಸ್‌ನ್ನಾಗಲೀ, ಕಥೆ ಹೇಳುವ ಶೈಲಿಯಾಗಲಿ.. ಎಲ್ಲವೂ ಹೊಸದು. ಡೈಲಾಗ್ ಡೆಲಿವರಿ, ಹಾಡು, ಚಿತ್ರಕಥೆ.. ಎಲ್ಲವೂ.. ಈಗ ಅದೇ ಪ್ರಶಾಂತ್ ನೀಲ್ ಭಾರತದ ಸೂಪರ್ ಸ್ಟಾರ್ ನಿರ್ದೇಶಕರಲ್ಲಿ ಒಬ್ಬರು. ಈಗ ಅವರ ಸಲಾರ್ ತೆರೆಯಲ್ಲಿದೆ. ಈ ಹೊತ್ತಿನಲ್ಲಿ ಪ್ರಶಾಂತ್ ನೀಲ್ ತಮ್ಮ ಹಳೆಯ ಉಗ್ರಂ ದಿನಗಳನ್ನು ನೆನಪಿಸಿಕೊಂಡಿದ್ದಾರೆ.
ನಾನು ಅಂದು ‘ಉಗ್ರಂ’ ಸಿನಿಮಾ ಮಾಡೋದಕ್ಕೆ ಕೆಲವು ಕಾರಣಗಳಿದ್ದವು. ಶ್ರೀಮುರಳಿಗೆ ನಾನು ಒಂದು ಸಿನಿಮಾ ಮಾಡಬೇಕು ಎಂದುಕೊಂಡಿದ್ದೆ. ಆಗ ಶ್ರೀಮುರಳಿ ಸಿನಿಮಾಗಳು ದೊಡ್ಡ ಹಿಟ್ ಆಗುತ್ತಿರಲಿಇಲ್ಲ. ಹಾಲಿವುಡ್ ಸಿನಿಮಾಗಳನ್ನು ಜಾಸ್ತಿ ನೋಡ್ತಾ ಇದ್ದೆ. ಸಿನಿಮಾ ಮಾಡೋದೇನ್ ಮಹಾ.. ದೊಡ್ಡ ವಿಷ್ಯ ಅನ್ನೋ ಭಂಡತನದ ಧೈರ್ಯವೂ ಇತ್ತು. ತಮಿಳು, ತೆಲುಗಿನಲ್ಲಿ ಎಷ್ಟೆಲ್ಲ ಒಳ್ಳೆ ಸಿನಿಮಾ ಮಾಡ್ತಿದ್ದಾರೆ. ದೊಡ್ಡ ಬಜೆಟ್ ಸಿನಿಮಾ ಮಾಡ್ತಿದ್ಧಾರೆ ಅನ್ನೋದನ್ನೆಲ್ಲ ಗಮನದಲ್ಲಿಟ್ಟುಕೊಂಡೇ ಉಗ್ರಂಗೆ ಕೈಹಾಕಿದೆ.. ಎನ್ನುತ್ತಾರೆ ಪ್ರಶಾಂತ್ ನೀಲ್.
ಪ್ರಶಾಂತ್ ನೀಲ್ ಅವರ ತಂಗಿಯನ್ನೇ ಶ್ರೀಮುರಳಿ ಮದುವೆಯಾಗಿರೋದು. ಶ್ರೀಮುರಳಿಯವರ ಬಾವ ಪ್ರಶಾಂತ್ ನೀಲ್. ಸಿನಿಮಾ ಬಗ್ಗೆ ಕೇವಲ ಪ್ಯಾಷನ್ ಇದ್ದ ಪ್ರಶಾಂತ್ ಅವರು ಚಿತ್ರ ಹಾಗೂ ಚಿತ್ರರಂಗದ ಬಗ್ಗೆ ಯೋಚನೆ ಮಾಡಲಿಲ್ಲವಂತೆ. ದೊಡ್ಡ ಕ್ಯಾಮೆರಾಮನ್, ದೊಡ್ಡ ಕಲಾ ನಿರ್ದೇಶಕರನ್ನು ಆಯ್ಕೆ ಮಾಡಿದೆ. ಹೊಸ ನಿರ್ದೇಶಕರ ಮಾರ್ಕೆಟ್ ಏನಿದೆ ಅನ್ನೋದಾಗಲೀ, ಶ್ರೀಮುರಳಿಯ ಮಾರ್ಕೆಟ್ ಏನಿದೆ ಅನ್ನೋದಾಗಲಿ ಗೊತ್ತಿರಲಿಲ್ಲ ಎನ್ನುವ ಪ್ರಶಾಂತ್, ಉಗ್ರಂನ್ನು ಎರಡನೇ ಬಾರಿ ಕಂಪ್ಲೀಟ್ ರೀಶೂಟ್ ಮಾಡಿದವರು.
ಸಿನಿಮಾ ಆರಂಭವಾಗಿ, ತೆರೆಗೆ ಬರುವ ವೇಳೆಗೆ ನಾಲ್ಕು ವರ್ಷ ಆಗಿತ್ತು. ದಿ ಬೆಸ್ಟ್ ಸಿನಿಮಾ ಕೊಡಬೇಕು ಎಂದು ರೀ-ಶೂಟ್ ಮಾಡಿದ್ವಿ. ಆದರೆ ಚಿತ್ರಕ್ಕೆ ವಿತರಕರೇ ಇರಲಿಲ್ಲ ಎನ್ನುವ ಪ್ರಶಾಂತ್ ನೀಲ್ ಇವತ್ತಿಗೂ ನೆನಪಿಸಿಕೊಳ್ಳೋದು ದರ್ಶನ್ ಮತ್ತು ದಿನಕರ್ ತೂಗುದೀಪ ಅವರನ್ನ. ಏಕೆಂದರೆ ಚಿತ್ರ ರಿಲೀಸ್ ಆಗುವ ಹೊತ್ತಿಗೆ ಪ್ರಶಾಂತ್ ನೀಲ್ ಮನೆಯನ್ನೂ ಮಾರಿಕೊಂಡಾಗಿತ್ತು.
ದರ್ಶನ್ ಸರ್, ದಿನಕರ್ ಸರ್ ಬಂದಿದ್ದರಿಂದ ‘ಉಗ್ರಂ’ ಸಿನಿಮಾ ರಿಲೀಸ್ ಆಯ್ತು. ಉತ್ತಮ ಪ್ರತಿಕ್ರಿಯೆ ಬಂತು. ಆದರೆ ಇಪ್ಪತ್ತೇ ದಿನಕ್ಕೆ ನನ್ನ ಸಿನಿಮಾ ಪೈರಸಿ ಆಯ್ತು. 99% ಜನ ಅದನ್ನು ಮೊಬೈಲ್ ಅಥವಾ ಯೂಟ್ಯೂಬ್ ಅಲ್ಲಿ ನೋಡಿದ್ದರು. ನನ್ನ ಮೊದಲ ಸಿನಿಮಾದಲ್ಲೇ ನಾನು ಸಿನಿಮಾ ಜೊತೆಗೆ ಬದುಕಿನ ಬಗ್ಗೆಯೂ ಚೆನ್ನಾಗಿ ಕಲಿತುಕೊಂಡೆ. ಆನಂತರ ನಾನು ಏನೇ ಮಾಡಿದರೂ, ಮೊದಲು ಫ್ಯಾಮಿಲಿ ಖುಷಿಯಾಗಿರುವಂತೆ ಮಾಡಬೇಕು, ಮಿಕ್ಕಿದ್ದೆಲ್ಲ ಆಮೇಲೆ ಅನ್ನೋ ನಿರ್ಧಾರಕ್ಕೆ ಬಂದೆ. ಇವತ್ತು ನಾನು 10 ಮನೆ ಖರೀದಿ ಮಾಡಬಹುದು. ಆದರೆ ಅಂದು.. ಎನ್ನುವ ಪ್ರಶಾಂತ್ ನೀಲ್ ಅವರು ಏನೇ ಮಾಡಿದರೂ ಮೊದಲು ಕುಟುಂಬವನ್ನು ಖುಷಿಯಾಗಿರುವಂತೆ ನೋಡಿಕೊಳ್ತಾರೆ.
ಕೆಜಿಎಫ್ ನಂತರ ಪ್ರಶಾಂತ್ ನೀಲ್ ಸ್ಟಾರ್ʻಡಂ ಚೇಂಜ್ ಆಯ್ತು. ಯಶ್ ಅವರಷ್ಟೇ ಅಲ್ಲ, ನಿರ್ದೇಶಕರಾಗಿ ಪ್ರಶಾಂತ್ ಅವರ ಲೆವೆಲ್ಲೂ ಚೇಂಜ್ ಆಯ್ತು. ಈಗ ಪ್ರಭಾಸ್ ಜೊತೆಗಿನ ಸಲಾರ್ ಚಿತ್ರಮಂದಿರಗಳಲ್ಲಿದೆ.
ಅಂದಹಾಗೆ ಉಗ್ರಂ ಚಿತ್ರವನ್ನು ಬಿಡುಗಡೆ ಮಾಡುವುದಕ್ಕೆ ಯಾರೂ ಮುಂದೆ ಬಂದಿರಲಿಲ್ಲ. ಆಗ ಆ ಚಿತ್ರವನ್ನು ನೋಡಿದವರು ದಿನಕರ್. ಸಿನಿಮಾ ಹೊಸದಾಗಿದೆ ಎಂದು ಚಿತ್ರವನ್ನು ವಿತರಣೆಗೆ ತೆಗೆದುಕೊಂಡರು. ತಮ್ಮನ ಮಾತಿಗೆ ಜೈ ಎಂದು ಜೊತೆಯಿರುತ್ತಿದ್ದ ದರ್ಶನ್ ಕೂಡಾ ಉಗ್ರಂಗೆ ಬೆಂಬಲವಾಗಿ ನಿಂತರು. ಮುಂದೆ ಆಗಿದ್ದು ಇತಿಹಾಸ.



