ದರ್ಶನ್ ಅವರ ಮನವಿಯನ್ನು ಅಭಿಮಾನಿಗಳು ಮೀರೋದಿಲ್ಲ. ಆದರೂ.. ಕೆಲವರು ಇದ್ದೇ ಇರ್ತಾರೆ. ಅಂತಹವರಿಗಾಗಿ ದರ್ಶನ್ ಪ್ರತೀ ವರ್ಷ ಮನವಿ ಮಾಡ್ತಾ ಇರಬೇಕು. ಅಂದಹಾಗೆ.. ಫೆಬ್ರವರಿ 16ಕ್ಕೆ ದರ್ಶನ್ ಹುಟ್ಟುಹಬ್ಬ. ಈ ಬಾರಿಯ ಸೆಲಬ್ರೇಷನ್ ಇನ್ನೂ ಜೋರು. ಕಾಟೇರ ಅನ್ನೋ ಬಿಗ್ ಸಕ್ಸಸ್ ದರ್ಶನ್ ಹುಟ್ಟುಹಬ್ಬದ ಸಂಭ್ರಮವನ್ನು ಹೆಚ್ಚಿಸಿದೆ. ಹೀಗಿರುವಾಗಲೇ ದರ್ಶನ್ ತಿಂಗಳಿಗೂ ಮೊದಲೇ ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಬ್ಯಾನರ್, ಕೇಕ್ ಹಾಗೂ ಹಾರಗಳನ್ನು ದಯಮಾಡಿ ತರಬೇಡಿ. ಅದೇ ಹಣದಲ್ಲಿ ಈ ವರ್ಷವೂ ಸಹ ನಿಮ್ಮ ಕೈಲಾದ ಅಕ್ಕಿ, ಬೇಳೆ, ಸಕ್ಕರೆ ಹಾಗೂ ಇತರ ದವಸ ಧಾನ್ಯಗಳನ್ನು ದಾನ ನೀಡಿ. ಅದನ್ನು ಒಗ್ಗೂಡಿಸಿ ಸೇರಿಸಬೇಕಾದ ಅನಾಥಾಶ್ರಮ ವೃದ್ಧಾಶ್ರಮಗಳಿಗೆ ಪ್ರಾಮಾಣಿಕವಾಗಿ ತಲುಪಿಸುವ ಜವಾಬ್ದಾರಿ ನನ್ನದು ಎಂಬ ಫ್ಲೆಕ್ಸ್ ದರ್ಶನ್ ಅವರ ಮನೆ ಎದುರು ರಾರಾಜಿಸುತ್ತಿದೆ.
ಸಂಭ್ರಮಾಚರಣೆಯ ಸಂದರ್ಭದಲ್ಲಿ ನಮ್ಮ ಮನೆಯ ಅಕ್ಕ-ಪಕ್ಕದ ನಿವಾಸಿಗಳಿಗೆ ನಿಮ್ಮಿಂದ ತೊಂದರೆಯಾಗುವುದು, ಪಟಾಕಿ ಹೊಡೆಯುವುದು, ಕಾಂಪೌಂಡ್ ಹತ್ತುವುದು, ಹೂವು ಕುಂಡಗಳನ್ನು ಬೀಳಿಸುವುದು ಹಾಗೂ ಅವರ ಸ್ವತ್ತುಗಳಿಗೆ ಹಾನಿ ಮಾಡುವುದು ಇಂತಹ ಅನುಚಿತ ವರ್ತನೆ ನಡೆಯಬಾರದು. ನನ್ನ ಬಗ್ಗೆ ಇಷ್ಟೆಲ್ಲ ಪ್ರೀತಿ ಅಭಿಮಾನ ಇಟ್ಟಿರುವ ನೀವೆಲ್ಲ ಈ ನನ್ನ ಕೋರಿಕೆಯನ್ನು ನಡೆಸಿಕೊಡುವಿರಿ ಎಂದು ನಂಬಿರುತ್ತೇನೆ. ಸಂಘದ ಕಾರ್ಯಕರ್ತರು ಮತ್ತು ಪೊಲೀಸ್ ಸಿಬ್ಬಂದಿ ವರ್ಗದವರಿಗೆ ಸಹಕರಿಸಬೇಕೆಂದು ವಿನಂತಿಸುತ್ತೇನೆ ಎಂದು ದರ್ಶನ್ ಅವರು ಅಭಿಮಾನಿಗಳಿಗೆ ಕೇಳಿಕೊಂಡಿದ್ದಾರೆ.
ದರ್ಶನ್ ಹುಟ್ಟುಹಬ್ಬ ಎಂದ ಕೂಡಲೇ ಫ್ಯಾನ್ಸ್ ಹಬ್ಬವನ್ನೇ ಆಚರಣೆ ಮಾಡುತ್ತಾರೆ. ಫೆ.15ರ ರಾತ್ರಿಯೇ ಆರ್‌ಆರ್ ನಗರದ ದರ್ಶನ್ ಮನೆ ಎದುರು ಜಾತ್ರೆಯ ವಾತಾವರಣ ನಿರ್ಮಾಣವಾಗಿರುತ್ತದೆ. ಅಲ್ಲದೆ, ಹಾರ-ಕೇಕ್‌ಗಳಿಗೆಂದೇ ಫ್ಯಾನ್ಸ್ ಸಾಕಷ್ಟು ಹಣ ಖರ್ಚು ಮಾಡುತ್ತಾರೆ. ಆದರೆ ಅದನ್ನು ಕೇಕ್, ಹಾರಗಳ ಬದಲಾಗಿ ಸಮಾಜಮುಖಿ ಕೆಲಸಗಳಿಗೆ ಖರ್ಚು ಮಾಡಿಸುವ ಯೋಜನೆ ದರ್ಶನ್ ಅವರದ್ದು. ಅದನ್ನು ದರ್ಶನ್ ಹೇಳಿದ್ದಾರಷ್ಟೇ ಅಲ್ಲ, ಅಭಿಮಾನಿಗಳನ್ನು ಅದರಲ್ಲಿ ತೊಡಗಿಸುತ್ತಿದ್ಧಾರೆ.
ಈ ನಡುವೆ ದರ್ಶನ್ ಅವರ ಕಾಟೇರ ಸೂಪರ್ ಸಕ್ಸಸ್ ಕಂಡಿದೆ. 200 ಕೋಟಿಯ ಬಾರ್ಡರ್ ದಾಟಿದೆ. ಇದೇ ಸಂಭ್ರಮದಲ್ಲಿರೋ ದರ್ಶನ್ ಫ್ಯಾನ್ಸ್ ಹುಟ್ಟುಹಬ್ಬವನ್ನು ದೊಡ್ಡ ಹಬ್ಬ ಮಾಡ್ತಿದ್ದಾರೆ. ಆದರೆ ದರ್ಶನ್ ಅವರು ಕಳೆದ ಕೆಲವು ವರ್ಷಗಳಿಂದ ಅಭಿಮಾನಿಗಳ ಹಾರೈಕೆಯನ್ನೇ ಹಲವು ಅನಾಥಾಶ್ರಮ, ವೃದ್ಧಾಶ್ರಮಗಳ ಅನ್ನವನ್ನಾಗಿ ಪರಿವರ್ತಿಸುತ್ತಿದ್ದಾರೆ.



