ವಿನಯ್ ರಾಜಕುಮಾರ್ ಹಾಡುತ್ತಿದ್ದರೆ ಅದು ಯಾರಿಗೆ ಅನ್ನೋದೇ ಅರ್ಥವಾಗುವುದಿಲ್ಲ. ಕಾರಣ ಈ ಚಿತ್ರದಲ್ಲಿ ಇಬ್ಬರು ಸುಂದರಿಯರಿದ್ದಾರೆ. ಹಾಗಂತ ಗೊಂದಲವೇನಿಲ್ಲ. ರಾಧಾಕೃಷ್ಣ ಧಾರಾವಾಹಿ ಖ್ಯಾತಿಯ ಮಲ್ಲಿಕಾ ಸಿಂಗ್ ನಾಯಕಿ. ಇನ್ನೊಬ್ಬ ಸುಂದರಿ ಸ್ವಾತಿಷ್ಠ ಕೃಷ್ಣನ್. ಈ ಪ್ರೇಮಕಥೆಗೆ ಅಕ್ಷನ್ ಕಟ್ ಹೇಳಿರುವುದು ಸಿಂಪಲ್ ಸುನಿ. ಅಂದಹಾಗೆ ಹಾಡಿನ ವಿಡಿಯೋದಲ್ಲಿ ಆ ಸುಂದರಿ ಯಾರು ಅನ್ನೋದನ್ನೇ ಸುನಿ ತೋರಿಸುವುದಿಲ್ಲ.
ಚಿತ್ರದ ಮೊದಲ ಪ್ರೇಮಗೀತೆ ರಿಲೀಸ್ ಆಗಿದ್ದು, ಸಿದ್ದು ಕೋಡಿಪುರ ಹಾಗೂ ಸುನಿ ಸಾಹಿತ್ಯದ ಪ್ರೇಮಗೀತೆ ಪ್ರೇಮಿಯೊಬ್ಬನ ಭಾವುಕತೆಯನ್ನು ಹಿಡಿದಿಡುತ್ತದೆ. ಅರ್ಮಾನ್ ಮಲಿಕ್ ಹಾಡಿನ ಶಕ್ತಿಯನ್ನು ಹೆಚ್ಚಿಸಿದ್ದರೆ, ವೀರ ಸಮರ್ಥ್ ಮ್ಯೂಸಿಕ್ ನೀಡಿದ್ದಾರೆ.
ಇದೊಂದು ಮ್ಯೂಸಿಕಲ್ ಜರ್ನಿ ಸಿನಿಮಾ ಆಗಿದ್ದು, 11 ಹಾಡುಗಳಿವೆಯಂತೆ. ಅವುಗಳಲ್ಲಿ ಮೊದಲನೆಯ ಹಾಡು ಇದು. ನಟ ರಾಘವೇಂದ್ರ ರಾಜಕುಮಾರ್ ಕೂಡಾ ಚಿತ್ರದಲ್ಲೊಂದು ಪುಟ್ಟ ಪಾತ್ರ ಮಾಡುತ್ತಿದ್ದಾರೆ. ನೀನ್ಯಾರೆಲೆ.. ಹಾಡಿನ ಲಿರಿಕಲ್ ವಿಡಿಯೋದಲ್ಲಿ ಇಡೀ ದೊಡ್ಮನೆಯವರು ಕಂಡು ಬರುವುದು ವಿಶೇಷ. ರಾಜೇಶ್ ನಟರಂಗ, ಅರುಣಾ ಬಾಲರಾಜ್, ಸಾಧುಕೋಕಿಲ ಮುಂತಾದವರು ನಟಿಸಿರುವ ಚಿತ್ರದಲ್ಲಿ ವಿನಯ್, ಸಂಗೀತ ನಿರ್ದೇಶಕರಾಗಿಯೇ ನಟಿಸುತ್ತಿದ್ಧಾರೆ.



