ಗೆಲುವು ಅಷ್ಟು ಸುಲಭವಾಗಿ ದಕ್ಕುವುದಿಲ್ಲ. ಅದಕ್ಕೆ ಶ್ರಮದ ಜೊತೆಗೆ ಅದೃಷ್ಟವೂ ಇರಬೇಕು. ನಟ ವಿನಯ್ ರಾಜಕುಮಾರ್ ಅವರಿಗೆ ಈ ಬಾರಿ ಗೆಲುವು ಸಿಕ್ಕುವ ಹಾದಿಯಲ್ಲಿದೆ. ಈ ಹಿಂದೆ ಹಲವು ಬಾರಿ ಮಿಸ್ ಆಗಿದ್ದ ಸಕ್ಸಸ್ ಈ ಬಾರಿ ಸಿಂಪಲ್ ಆಗಿ ದಕ್ಕುವ ಹಾದಿಯಲ್ಲಿದೆ. ಒಂದು ಸರಳ ಪ್ರೇಮ ಕಥೆ ಎರಡನೇ ವಾರವೂ ಯಶಸ್ವಿಯಾಗಿ ಪ್ರದರ್ಶನವಾಗುತ್ತಿದೆ. ಅಷ್ಟೇ ಅಲ್ಲ, ಮಧ್ಯಾಹ್ನದ ಶೋಗಳು ಹೌಸ್ ಫುಲ್ ಆಗುತ್ತಿವೆ. ಸಿಂಪಲ್ ಸುನಿ ನಿರ್ದೇಶನದ ಚಿತ್ರವಿದು.
ವಿನಯ್ ರಾಜಕುಮಾರ್ ಅವರ ಸಿನಿಮಾಗಳ ಕಂಟೆಂಟ್ ಚೆನ್ನಾಗಿದ್ದರೂ.. ಅದೇಕೋ ಏನೋ.. ದೊಡ್ಡ ಮಟ್ಟದ ಯಶಸ್ಸು ಸಿಕ್ಕಿರಲಿಲ್ಲ. ಜೊತೆಗೆ ಕೆಲವು ಚಿತ್ರಗಳು ಶುರುವಾಗಿ ಕುಂಟುತ್ತಿದ್ದವು. ಇದೆಲ್ಲದರ ನಡುವೆ ವಿನಯ್ ಅವರ ಒಂದು ಸರಳ ಪ್ರೇಮ ಕಥೆ ಪ್ರೇಕ್ಷಕರಿಗೆ ಇಷ್ಟವಾಗಿದೆ.
ಸಿಂಪಲ್ ಸುನಿ ಅವರ ಸಿನಿಮಾಗಳಲ್ಲಿ ತೆಳು ಹಾಸ್ಯ, ಒಂಚೂರು ಭಾವುಕತೆ, ಒನ್‌ಲೈನ್ ಪಂಚಿಂಗ್ ಡೈಲಾಗ್‌ಗಳು ಮತ್ತು ಮಧುರ ಹಾಡುಗಳು.. ಇವೆಲ್ಲವೂ ಹದವಾಗಿ ಬೆರೆತಿರುತ್ತವೆ. ಜೊತೆಗೆ ಸಿನಿಮಾ ಮುಗಿಯುವವರೆಗೂ ಪ್ರೇಕ್ಷಕರು ನಗುತ್ತಾ ನಗುತ್ತಾ.. ಭಾವುಕರಾಗುತ್ತಾ ಹೋಗುತ್ತಾರೆ. ವಿನಯ್ ಅತಿಶಯ್ ಪಾತ್ರದಲ್ಲಿ, ಅನುರಾಗ ಪಾತ್ರದಲ್ಲಿ ಸ್ವಾದಿಷ್ಟ ಹಾಗೂ ಮಲ್ಲಿಕಾ ಸಿಂಗ್ ಪಾತ್ರಗಳು ಜನರಿಗೆ ಇಷ್ಟವಾಗಿವೆ. ‘ಮೂಕನಾಗಬೇಕು ಜಗದೊಳು..’ ಹಾಡು ಮೆಲೋಡಿ ಹಿಟ್ ಎನಿಸಿಕೊಂಡಿದ್ದರೆ, ‘ನೀನ್ಯಾರೆಲೆ..’, ‘ಗುನುಗುನುಗೋ…’ ಹಾಡುಗಳು ಇಷ್ಟವಾಗಿವೆ. ಒಟ್ಟಿನಲ್ಲಿ ವಿನಯ್ ರಾಜಕುಮಾರ್ ಅವರಿಗೆ ಸಿಂಪಲ್ ಸುನಿ ಚಿತ್ರದ ಮೂಲಕ ಗೆಲುವಿನ ಸ್ಪರ್ಶ ಸಿಕ್ಕಿದೆ.
ಸಕ್ಸಸ್ ಎಂದು ಗೊತ್ತಾಗಿದ್ದು ಹೇಗೆ?
ರಾಘವೇಂದ್ರ ರಾಜ್ಕುಮಾರ್ ಅವರ ನಂಜುಂಡಿ ಕಲ್ಯಾಣ, ಶಿವರಾಜ್ ಕುಮಾರ್ ಅವರ ‘ಜನುಮದ ಜೋಡಿ’ ಇನ್ನಿತರೆ ಸಿನಿಮಾಗಳನ್ನು ನೋಡಲು ಜನರು ಟ್ರ್ಯಾಕ್ಟರ್ಗಳಲ್ಲಿ ಚಿತ್ರಮಂದಿರಕ್ಕೆ ಬಂದದ್ದನ್ನು ಜನ ನೋಡಿದ್ದಾರೆ. ರಾಜ್, ವಿಷ್ಣು ಚಿತ್ರಗಳಿಗೆ ಹಾಗೆ ಪ್ರೇಕ್ಷಕರನ್ನು ಕರೆದು ತರುವ ಶಕ್ತಿಯಿತ್ತು. ಇದೀಗ ಆ ಹಾದಿಯಲ್ಲಿ ವಿನಯ್ ರಾಜಕುಮಾರ್ ಅವರ ಒಂದು ಸರಳ ಪ್ರೇಮಕಥೆ ಇದೆ.
ವಿನಯ್ ರಾಜ್ಕುಮಾರ್ ನಟನೆಯ ‘ಒಂದು ಸರಳ ಪ್ರೇಮಕಥೆ’ ಸಿನಿಮಾವನ್ನು ನೋಡಲು ಜನ ಬಸ್ಸು ಮಾಡಿಕೊಂಡು ಮಾಲ್ಗೆ ಬಂದಿದ್ದಾರೆ. ಸಾಮಾನ್ಯ ಜನರು ಮಾತ್ರವಲ್ಲದೆ ಸಿನಿಮಾ ಮಂದಿ ಸಹ ‘ಒಂದು ಸರಳ ಪ್ರೇಮಕಥೆ’ ಸಿನಿಮಾ ನೋಡಿ ಮೆಚ್ಚಿಕೊಳ್ಳುತ್ತಿದ್ದಾರೆ. ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ, ನಟಿ ರಮ್ಯಾ ಮೊದಲಾದವರೆಲ್ಲ ಸಿನಿಮಾ ನೋಡಿ ವ್ಹಾವ್ ಎಂದಿದ್ದಾರೆ.



