ಅಣ್ಣ ತಂಗಿಯರ ಈ ಬಂಧ.. ಜನ್ಮ ಜನ್ಮಗಳ ಅನುಬಂಧ..
ರಕ್ಷಾಬಂಧನ..
ಈ ಹಾಡು ಇನ್ನೇನು ಕಿವಿಕಿವಿಗಳಲ್ಲಿ ಮನೆ ಮನೆಗಳಲ್ಲಿ ರಸ್ತೆ ರಸ್ತೆಗಳಲ್ಲಿ ಮೊಳಗುವ ಸಮಯ ಹತ್ತಿರವಾಗಿದೆ. ಅಣ್ಣ, ತಮ್ಮಂದಿರಿಗೆ ತಂಗಿ, ಅಕ್ಕಂದಿರು ರಾಖಿ ಕಟ್ಟುವ ಶುಭ ದಿನ. ಕರ್ನಾಟಕದಲ್ಲಿ ನಾಗರ ಪಂಚಮಿಯಂದು ಆಚರಣೆ ನಡೆಯುತ್ತದೆಯಾದರೂ.. ರಾಖಿ ಹಬ್ಬದ ದಿನದ ಸಂಭ್ರಮವೇ ಬೇರೆ. ಆದರೆ.. ಆ ದಿನ ಅಂದರೆ ಶ್ರಾವಣ ಮಾಸದ ಹುಣ್ಣಿಮೆ ದಿನ ಅದೊಂದು ಸಮಯ ಬೇಡ ಎನ್ನುತ್ತಿದೆ ಪಂಚಾಂಗ. ಆ ಒಂದು ಗಂಟೆ ಅವಧಿ ಬಿಟ್ಟು, ಬೇರಾವುದೇ ಸಮಯದಲ್ಲಿ ರಾಖಿ ಕಟ್ಟಿ, ರಕ್ಷಾಬಂಧನ ಆಚರಿಸಿ ಎನ್ನುತ್ತಿದ್ದಾರೆ ಪಂಚಾಂಗ ತಜ್ಞರು. ಅಂದಹಾಗೆ ಭದ್ರ, ಸೂರ್ಯ ಮತ್ತು ಛಾಯಾದೇವಿಯ ಮಗಳು. ಶನಿಯ ಸಹೋದರಿ.
ವಿಷ್ಠಿ ಅಥವಾ ಭದ್ರ ನೆರಳು : ನಂಬಿಕೆಗಳ ಪ್ರಕಾರ ಭದ್ರ ಕಾಲವನ್ನು ಅಶುಭವೆಂದು ಪರಿಗಣಿಸಲಾಗುತ್ತದೆ. ಏಕೆಂದರೆ ಈ ಸಮಯದಲ್ಲಿ ಮಾಡಿದ ಕೆಲಸವು ಯಶಸ್ವಿಯಾಗುವುದಿಲ್ಲ. ನಕಾರಾತ್ಮಕ ಫಲಿತಾಂಶಗಳನ್ನು ನೀಡುತ್ತದೆ. ಭದ್ರ ಕಾಲದಲ್ಲಿ ಭದ್ರನ ಪ್ರಭಾವ ತುಂಬಾ ಹೆಚ್ಚಿರುತ್ತದೆ. ಯಾವುದೇ ಶುಭ ಕಾರ್ಯದಲ್ಲಿ ಅಡೆತಡೆಗಳನ್ನು ಸೃಷ್ಟಿಸುತ್ತದೆ. ಆದ್ದರಿಂದ ಭದ್ರಾ ಕಾಲದಲ್ಲಿ ಮದುವೆ, ಪ್ರಯಾಣ ಮತ್ತು ಇತರ ಶುಭ ಕಾರ್ಯಗಳನ್ನು ನಿಷೇಧಿಸಲಾಗಿದೆ. ಸಹೋದರ ಸಹೋದರಿಯರ ನಡುವಿನ ಪ್ರೀತಿಯ ಸಂಕೇತ ಹಾಗೂ ತಮ್ಮ ಸಹೋದರಿಯರ ರಕ್ಷಣೆಗೆ ಸಹೋದರರು ಕಟ್ಟಿಸಿಕೊಳ್ಳುವ ರಕ್ಷಾಬಂಧನ, ಬದುಕಿನಲ್ಲಿ ಮರೆಯಲಾಗದ ಅನುಭವ.
ಈ ಬಾರಿಯ ರಾಖಿ ಹಬ್ಬದಂದು ಭದ್ರನ ನೆರಳು ಮಧ್ಯಾಹ್ನ 12.30ರ ವರೆಗೆ ಇದ್ದರೂ ಇದರ ಪರಿಣಾಮ ಮಧ್ಯಾಹ್ನ 1.30ರವರೆಗೆ ಇರುತ್ತದೆ. ಈ ಅವಧಿಯಲ್ಲಿ ರಕ್ಷಾಬಂಧನ ಹಬ್ಬವನ್ನು ಆಚರಿಸುವುದಿಲ್ಲ. ಇದೇ ಕಾರಣಕ್ಕೆ ಈ ಬಾರಿ ಮಧ್ಯಾಹ್ನದ ನಂತರ ರಾಖಿ ಹಬ್ಬ ನಡೆಯಲಿದೆ.
ಜ್ಯೋತಿಷ್ಯದ ಪ್ರಕಾರ ಭದ್ರ ನೆರಳು ವಿಶೇಷ ಸಮಯ. ಈ ಸಮಯದಲ್ಲಿ ಯಾವುದೇ ಶುಭ ಅಥವಾ ಅಶುಭ ಕಾರ್ಯಗಳು ಯಾವುದೂ ನಡೆಯುವುದಿಲ್ಲ. ಭದ್ರಾ ಕಾಲವನ್ನು ವಿಷ್ಟಿ ಕರಣ ಎನ್ನುತ್ತಾರೆ. ಭದ್ರಾ ಕಾಲದಲ್ಲಿ ಮಾಡುವ ಕೆಲಸಗಳು ಅಶುಭ ಫಲ ನೀಡುತ್ತವೆ ಎಂದು ನಂಬಲಾಗಿದೆ.
ಏನಿದು ಪೌರಾಣಿಕ ಕಥೆ : ಭದ್ರನ ನೆರಳಿನ ಬಗ್ಗೆ ಪೌರಾಣಿಕ ಕಥೆಯಿದೆ. ಇದಕ್ಕೆ ಕಾರಣವನ್ನು ಕೆಲವು ಪುರಾಣಗಳಲ್ಲಿ ವಿವರಿಸಲಾಗಿದೆ. ಪುರಾಣಗಳ ಪ್ರಕಾರ, ಭದ್ರನು ಸೂರ್ಯನ ಹೆಂಡತಿಯಾದ ಛಾಯಾಳ ಮಗಳು. ಶನಿಯ ಸಹೋದರಿ. ಛಾಯಾದೇವಿಯು ಶಿವಭಕ್ತೆ. ಭಗವಾನ್ ಶಿವನ ಕೃಪೆಗಾಗಿ ತಪಸ್ಸು ಮಾಡಿ ಜನಿಸಿದವಳು ಭದ್ರ. ಭದ್ರಾ ಹುಟ್ಟುತ್ತಲೇ ವಿಶಿಷ್ಟ ಶಕ್ತಿಗಳ ಒಡತಿ. ಹೀಗಾಗಿಯೇ ಇದಕ್ಕೆ ವಿಷ್ಟಿ ಎಂದೂ ಹೆಸರಿದೆ.
ಭದ್ರನ ಸ್ವಭಾವ ಹುಟ್ಟಿನಿಂದಲೇ ಕ್ರೂರ/ಕಠಿಣ. ಇದರಿಂದಾಗಿ ಭದ್ರ ತನ್ನ ಪ್ರಭಾವದಿಂದ ಯಾರಿಗಾದರೂ ಹಾನಿ ಮಾಡುವುದರಲ್ಲಿ ಸಂಭ್ರಮ ಪಡುತ್ತಿದ್ದಳು. ಭದ್ರನ ದುಷ್ಟ ಸ್ವಭಾವದಿಂದಾಗಿ ಸೂರ್ಯದೇವನು ಅವಳ ಮದುವೆಯ ಬಗ್ಗೆ ಚಿಂತಿಸತೊಡಗಿದನು. ಒಂದು ದಿನ ಸೂರ್ಯದೇವನು ತನ್ನ ಕಳವಳವನ್ನು ವ್ಯಕ್ತಪಡಿಸಲು ಬ್ರಹ್ಮದೇವನ ಬಳಿಗೆ ಹೋದನು.
ಬ್ರಹ್ಮದೇವನು ಭದ್ರನನ್ನು ಆಕಾಶದಲ್ಲಿಯೇ ಇರುವಂತೆ ಆಜ್ಞಾಪಿಸಿದನು. ಹೀಗೆ ಮಾಡುವುದರಿಂದ ಭೂಮಿಯ ಮೇಲೆ ಭದ್ರಾ ಪ್ರಭಾವ ಕಡಿಮೆ. ಭದ್ರಾಗೆ ಒಂದು ನಿರ್ದಿಷ್ಟ ಸಮಯದಲ್ಲಿ ಮಾತ್ರ ಭೂಮಿಗೆ ಬರಲು ಅವಕಾಶವಿದೆ. ಆದ್ದರಿಂದಲೇ ಭದ್ರಾ ಭೂಮಿಗೆ ಬರುವ ಕಾಲವನ್ನು ಭದ್ರಾ ನೆರಳು ಎಂದು ಕರೆಯುತ್ತಾರೆ. ಮೇಲಾಗಿ ಭದ್ರನ ನೆರಳು ಭೂಮಿಯ ಮೇಲೆ ಬೀಳುವ ಸಮಯದಲ್ಲಿ ಯಾರಾದರೂ ಮನೆಗೆ ಬಂದರೆ ಅಥವಾ ಇತರ ಶುಭ ಕಾರ್ಯಗಳು ಮತ್ತು ಪೂಜೆಗಳನ್ನು ಮಾಡಿದರೆ ಅವರಲ್ಲಿ ಅಡೆತಡೆಗಳು ಉಂಟಾಗಬಹುದು. ಈ ಸಮಯದಲ್ಲಿ ಕೈಗೊಂಡ ಕೆಲಸಗಳಲ್ಲಿ ಅಡೆತಡೆಗಳು ಉಂಟಾಗಬಹುದು. ಅಂದಿನಿಂದ ಭದ್ರನು ತನ್ನ ಕಾಲದಲ್ಲಿ ಭೂಮಿಯ ಮೇಲಿನ ಎಲ್ಲಾ ಜೀವಿಗಳಿಗೆ ತೊಂದರೆಯನ್ನುಂಟುಮಾಡಲು ಪ್ರಾರಂಭಿಸಿದನು ಎಂದು ನಂಬಲಾಗಿದೆ. ಹೀಗೆ ಭದ್ರ ನೆರಳು ಹುಟ್ಟಿತು.
ವಿಷ್ಟಿ ಕರಣದ ಸಮಯದಲ್ಲಿ ಯಾವುದೇ ಶುಭ ಕಾರ್ಯಗಳು ನಡೆಯುವುದಿಲ್ಲ. ಎಲ್ಲ ಕೆಲಸಗಳನ್ನು ಮುಂದೂಡುವಂತೆ ಸೂಚಿಸಲಾಗುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಭದ್ರನು ಮೂರು ಲೋಕಗಳಲ್ಲಿ ಸಂಚರಿಸುತ್ತಾನೆ. ರಾಖಿ ಹಬ್ಬದ ದಿನ ಭದ್ರಾ ಮೃತ್ಯುಲೋಕದಲ್ಲಿ ನೆರಳಿನ ರೂಪದಲ್ಲಿರುತ್ತಾಳೆ. ಹೀಗಾಗಿ ಆ ಸಮಯ ಬೇಡ ಎನ್ನುತ್ತಾರೆ ಪಂಚಾಂಗ ಪಂಡಿತರು.



