ರಾಜ್ ಬಿ ಶೆಟ್ಟಿ ಅವರನ್ನು ಒಂದ್ಸಲ ಕುಂಗ್ ಫೂ.. ಕರಾಟೆ ಸ್ಟೈಲಿನಲ್ಲಿ ಕಲ್ಪನೆ ಮಾಡಿಕೊಳ್ಳಿ.. ನಗು ಬರುತ್ತಾ.. ಬರಲ್ವಾ.. ಅಂಥಾದ್ದೊಂದು ನಗು ಹುಟ್ಟಿಸುವಂತೆ ಒಂದು ಟೀಸರ್ ಹೊರ ಬಿದ್ದಿದೆ 45 ಚಿತ್ರದ್ದು. ‘ಕರಾಟೆ ಪಟು ಬರ್ತಿದ್ದಾರೆ ಎಲ್ಲರು ಹುಷಾರು’ ಎಂದು ಎಚ್ಚರಿಕೆ ಕೊಟ್ಟೇ ಟೀಸರ್ ಬಿಟ್ಟಿದ್ದಾರೆ ಡೈರೆಕ್ಟರ್ ಅರ್ಜುನ್ ಜನ್ಯ. 45, ಇದು ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ನಿರ್ದೇಶಿಸಿರುವ ಮೊದಲ ಚಿತ್ರವೂ ಹೌದು.
ಚಿತ್ರದ ಪ್ರಚಾರಕ್ಕೆ ಧುಮುಕಿರುವ 45 ಟೀಂ ರಾಜ್ ಬಿ ಶೆಟ್ಟಿ ಅವರ ಪಾತ್ರ ಪರಿಚಯ ಮಾಡಿಸುವ ಹೊಸ ಟೀಸರ್ ರಿಲೀಸ್ ಮಾಡಿದೆ. ಇದು ರಾಜ್ ಬಿ ಶೆಟ್ಟಿ ಅವರ ಕ್ಯಾರೆಕ್ಟರ್ ಟೀಸರ್. ಶುರುವಾಗುವುದು ಬ್ಲಾಕ್ ಆಂಡ್ ವೈಟ್ನಲ್ಲಿ. ರಾಜ್ ಬಿ ಅದರಲ್ಲಿ ಶೆಟ್ಟಿಯನ್ನು ಇಬ್ಬರು ರೌಡಿಗಳು ಅಡ್ಡಗಟ್ಟಿದ್ದಾರೆ. ಅವರೊಟ್ಟಿಗೆ ತಮಾಷೆಯ ದನಿಯಲ್ಲಿ ಮಂಗಳೂರು ಶೈಲಿಯ ಕನ್ನಡದಲ್ಲಿ ಮಾತನಾಡುತ್ತಾರೆ ರಾಜ್ ಬಿ ಶೆಟ್ಟಿ. ರೌಡಿಗಳು ಚಾಕು ತೆಗೆದು ಹೆದರಿಸಲು ಪ್ರಯತ್ನಿಸುತ್ತಾರೆ. ‘ನನ್ನ ಮೈಮುಟ್ಟುವ ಪ್ರಯತ್ನ ಮಾಡಬೇಡಿ, ನಮ್ಮಣ್ಣ ನಾನು ಚಿಕ್ಕವನಿದ್ದಾಗ ಕರಾಟೆ ಕ್ಲಾಸ್ಗೆ ಕಳಿಸಿದ್ದ’ ಎನ್ನುತ್ತಾ ಕರಾಟೆ ಪ್ರತಿಭೆ ಪ್ರದರ್ಶಿಸಲು ಮುಂದಾಗುತ್ತಾರೆ. ಟೀಸರ್ ಇಷ್ಟೇ..
ಟೀಸರ್ನಲ್ಲಿ ರಾಜ್ ಬಿ ಶೆಟ್ಟಿಯನ್ನು ಎದುರಾಗಿ ಚಾಕು ತೋರಿಸಿ ಹೆದರಿಸಲು ಯತ್ನಿಸಿರುವ ಇಬ್ಬರು ಶಿವರಾಜ್ ಕುಮಾರ್ ಹಾಗೂ ಉಪೇಂದ್ರ ಅವರಾ.. ಟೀಸರ್ ನೋಡಿದವರಿಗೆ ಈ ಡೌಟೂ ಉದ್ಭವವಾದರೆ ಆಶ್ಚರ್ಯವೇನಿಲ್ಲ. ಏಕೆಂದರೆ ಅವರ ಒಬ್ಬರ ಚಾಕುವಿಗೆ ‘ಓಂ’ ಹೆಸರಿನ ಚೈನ್ ಇದ್ದರೆ ಇನ್ನೊಬ್ಬರ ಚಾಕುವಿಗೆ ತ್ರಿಶೂಲವಿದೆ. ಓಂ ಮೂಲಕ ಶಿವಣ್ಣ ಮತ್ತು ತ್ರಿಶೂಲದ ಮೂಲಕ ಉಪ್ಪಿ ಅವರನ್ನ ರೆಪ್ರೆಸೆಂಟ್ ಮಾಡಿರಬಹುದಾ.. ಡೈರೆಕ್ಟರ್ ಅಜುನ್ ಜನ್ಯ..? ಕುತೂಹಲವಷ್ಟೇ.
ಚಿತ್ರಕ್ಕೆ ಅರ್ಜುನ್ ಜನ್ಯ ಅವರೇ ಮ್ಯೂಸಿಕ್ ಡೈರೆಕ್ಟರ್. ಈಗಾಗಲೇ ಅರ್ಜುನ್ ಜನ್ಯ ಅವರ ಹೆಸರಿನ ಮೇಲೆ ಚಿತ್ರದ ಮ್ಯೂಸಿಕ್ ರೈಟ್ಸ್ ಎರಡೂವರೆ ಕೋಟಿಗೆ ಸೇಲ್ ಆಗಿದ್ಯಂತೆ.
ಕನ್ನಡ ಚಿತ್ರರಂಗದಲ್ಲಿ ಕರಾಟೆ ಕಿಂಗ್ ಎಂದು ಕರೆಸಿಕೊಳ್ಳುತ್ತಿದ್ದವರು ದಿ.ಶಂಕರ್ ನಾಗ್. ಆದರೆ ವಾಸ್ತವದಲ್ಲಿ ಶಂಕರ್ ನಾಗ್ ಅವರಿಗೆ ಕರಾಟೆ ಬರುತ್ತಿರಲಿಲ್ಲ. ನಟನೆಗಾಗಿ ಹೂಹಾ.. ಎನ್ನುತ್ತಿದ್ದರಷ್ಟೇ. ಆದರೆ ಆ ನಟನೆ ಎಷ್ಟು ಪರ್ಫೆಕ್ಟ್ ಆಗಿತ್ತೆಂದರೆ.. ಕರಾಟೆ ಪಟುಗಳು ಕೂಡಾ ಈತ ಖಂಡಿತಾ ಬ್ಲಾಕ್ ಬೆಲ್ಟ್ ಪಡೆದಿದ್ದಾರೆ ಎಂದು ನಂಬುವಷ್ಟು. ಈಗ ರಾಜ್ ಬಿ ಶೆಟ್ಟಿ ಕರಾಟೆ ಕಿಂಗ್ ಆಗಿದ್ದಾರೆ. ಇದು ೪೫ ಸಿನಿಮಾಗಾಗಿ.
ಶಿವರಾಜ್ ಕುಮಾರ್, ಉಪೇಂದ್ರ ಮತ್ತು ರಾಜ್ ಬಿ ಶೆಟ್ಟಿ ಪ್ರಮುಖ ಪಾತ್ರದಲ್ಲಿ ನಟಿಸಿರುವ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಬಿರುಸಿನಿಂದ ನಡೆಯುತ್ತಿವೆ. ರಮೇಶ್ ರೆಡ್ಡಿ ಅವರು ಸೃಜಾ ಪ್ರೊಡಕ್ಷನ್ ಹೌಸ್ನಿಂದ ನಿರ್ಮಾಣ ಮಾಡುತ್ತಿದ್ದಾರೆ. ಕೆಲವೇ ದಿನಗಳಲ್ಲಿ ಶಿವರಾಜ್ ಕುಮಾರ್ ನಟನೆಯ ‘ಭೈರತಿ ರಣಗಲ್’ ಸಿನಿಮಾ ಬಿಡುಗಡೆ ಆಗಲಿದ್ದು, ಆ ಸಿನಿಮಾದ ಬಿಡುಗಡೆ ಬಳಿಕ ಶಿವಣ್ಣನ ಹೊಸ ಸಿನಿಮಾ ಬಿಡುಗಡೆ ಆಗಲಿದೆ.



