ಹಿರಿಯ ನಟಿ ಲೀಲಾವತಿ ನಿಧನರಾಗಿದ್ದಾರೆ. ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಲೀಲಾವತಿ, ವಯೋಸಹಜ ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದರು. ಲೀಲಾವತಿ ಅವರಿಗೆ 86 ವರ್ಷ ವಯಸ್ಸಾಗಿತ್ತು. ತೀವ್ರ ಉಸಿರಾಟ ತೊಂದರೆಯಿಂದ ಬಳಲುತ್ತಿದ್ದರು. ಮನೆಯಲ್ಲಿಯೇ ಕೊನೆಯ ಕ್ಷಣಗಳನ್ನು ಕಳೆಯಬೇಕು ಎಂದು ಆಸೆ ಪಟ್ಟಿದ್ದ ಲೀಲಾವತಿ ಅವರನ್ನು ಮನೆಯಲ್ಲೇ ಇಟ್ಟುಕೊಂಡು ಆರೈಕೆ ಮಾಡುತ್ತಿದ್ದರು ಮಗ ವಿನೋದ್ ರಾಜ್. ಅವರನ್ನು ಕಡೆಯ ಕ್ಷಣದಲ್ಲಿ ನೆಲಮಂಗಲದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ನಟಿ ಲೀಲಾವತಿ 1937 ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯವರು. ತಂದೆ ತಾಯಿ ಇಟ್ಟಿದ್ದ ಹೆಸರು ಲೀಲಾ ಕಿರಣ್. ಚಿತ್ರರಂಗಕ್ಕೆ ಬಂದ ನಂತರ ಲೀಲಾವತಿ ಆದರು. ತಂದೆ ರಂಗ ರಾವ್ ತಾಯಿ ಕಾವೇರಿ ಬಾಯಿ ..ಡಾ ಲೀಲಾವತಿ ಕನ್ನಡ, ತಮಿಳು, ತುಳು, ಮಲೆಯಾಳಂ ಹಾಗೂ ತೆಲುಗಿನಲ್ಲಿ ಅಭಿನಯಿಸಿದ್ದು, 600ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದರು. ಕನ್ನಡದಲ್ಲಿಯೇ 400 ಕ್ಕೂ ಹೆಚ್ಚು ಸಿನಿಮಾದಲ್ಲಿ ಅಭಿನಯಿಸಿದ್ದರು.
ಲೀಲಾವತಿ ನಟಿಸಿದ ಮೊದಲ ಸಿನಿಮಾ ನಾಗ ಕನ್ನಿಕಾ. ರಂಗಭೂಮಿಯಲ್ಲೂ ಸಕ್ರಿಯರಾಗಿದ್ದ ಲೀಲಾವತಿ, ಮಹಾಲಿಂಗ ಭಾಗವತರ್ ಅವರ ಶ್ರೀ ಸಾಹಿತ್ಯ ಸಾಮ್ರಾಜ್ಯ ನಾಟಕ ತಂಡ ಸೇರಿದರು. ಅದಾದ ಮೇಲೆ ಸುಬ್ಬಯ್ಯ ನಾಯ್ಡು ಅವರ ಭಕ್ತ ಪ್ರಹ್ಲಾದ ಚಿತ್ರದಲ್ಲಿ ನಟಿಸಿದರು. ನಾಯಕಿಯಾದರು. ಆಮೇಲೆ ಬಹು ಬೇಡಿಕೆಯ ನಟಿಯಾದರು.
ಸಂತ ತುಕಾರಂ, ಕಣ್ತೆರೆದು ನೋಡು, ಕೈವಾರ ಮಹಾತ್ಮೆ, ಗಾಳಿ ಗೋಪುರ, ಕನ್ಯಾರತ್ನ, ಕುಲವಧು, ವೀರ ಕೇಸರಿ, ಮನ ಮೆಚ್ಚಿದ ಮಡದಿ, ಭಕ್ತ ಕುಂಭಾರ ಮೊದಲಾ ಚಿತ್ರಗಳಲ್ಲಿ ಮಿಂಚಿದರು. ರಾಜ್ ಕುಮಾರ್ ಲೀಲಾವತಿ ಜೋಡಿ ರಾಜ್ ಲೀಲಾ ಜೋಡಿಯೆಂದೇ ಪ್ರಸಿದ್ಧಿಯಾಗಿತ್ತು. ತಾಯಿಯ ಪಾತ್ರಗಳನ್ನು ಮಾಡಲು ಶುರುವಾದ ಮೇಲೆ ರಾಜ್ ಕುಮಾರ್ ಅವರಿಗೆ ಅತ್ತೆಯಾಗಿ ನಟಿಸಿದರು.
ವಿಷ್ಣುವರ್ಧನ್ , ಎಂ ಜಿ ರಾಮಚಂದ್ರನ್ , ಎನ್ ಟಿ ರಾಮ ರಾವ್ , ಶಿವಾಜಿ ಗಣೇಶನ್ , ಜಿಮಿನಿ ಗಣೇಶನ್ , ಶಂಕರ್ , ಕಮಲ್ ಹಾಸನ್ , ರಜಿನಿಕಾಂತ್ , ಚಿರಂಜೀವಿ, ಅಂಬರೀಷ್, ರವಿಚಂದ್ರನ್, ಅನಂತನಾಗ್, ಶಂಕರ್ ನಾಗ್, ಶ್ರೀನಾಥ್, ಸುದೀಪ್ ಹೀಗೆ ಎಲ್ಲಾ ಸೂಪರ್ ಸ್ಟಾರ್ ಗಳ ಜೊತೆ ಅಭಿನಯ ಮಾಡಿದ್ದಾರೆ.
ಲೀಲಾವತಿ ಅವರಿಗೆ ಸಂತ ತುಕಾರಾಮ್ ಹಾಗೂ ಮದುವೆ ಮಾಡಿ ನೋಡು ಚಿತ್ರಕ್ಕೆ ರಾಷ್ಟ್ರಪ್ರಶಸ್ತಿಗಳು ಲಭಿಸಿವೆ. ತುಮಕೂರು ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ನೀಡಿ ಗೌರವಿಸಲಾಗಿದೆ
ನಿರ್ಮಾಪಕಿಯಾಗಿ ತಮ್ಮ ಪುತ್ರ ವಿನೋದ್ ರಾಜ್ ಗಾಗಿ ಕಾಲೇಜ್ ಹೀರೋ , ಕನ್ನಡದ ಕಂದ , ಯಾರದು , ನಂಜುಂಡ , ಶುಕ್ರ ಸಿನಿಮಾಗಳನ್ನ ನಿರ್ಮಾಣ ಮಾಡಿದ್ದಾರೆ. ಕನ್ನಡ ಚಿತ್ರರಂಗವನ್ನು ಕರ್ನಾಟಕಕ್ಕೆ ಕರೆತಂದ ಹೆಮ್ಮೆಯಾದ ರಣಧೀರ ಕಂಠೀರವದ ನಿರ್ಮಾಪಕರಲ್ಲಿ ಲೀಲಾವತಿಯೂ ಒಬ್ಬರು.



