ಜಮೀರ್ ಅಹ್ಮದ್ ಅವರು ಕುಮಾರಸ್ವಾಮಿ ಅವರನ್ನು ಟೀಕಿಸುವ ಭರದಲ್ಲಿ ಕರಿಯಾ ಎಂದು ಕರೆದಿರುವುದು ಈಗ ರಾಜ್ಯಾದ್ಯಂತ ಭಾರಿ ಚರ್ಚೆ ಹುಟ್ಟುಹಾಕಿದೆ. ರಾಜಕೀಯ ನಾಯಕರಷ್ಟೇ ಅಲ್ಲ, ಒಕ್ಕಲಿಗರ ಮಹಾಸಭಾ ಕೂಡಾ ಜಮೀರ್ ವಿರುದ್ಧ ತಿರುಗಿಬಿದ್ದಿದೆ. ಪೊಲೀಸ್ ದೂರು ಕೂಡಾ ದಾಖಲಾಗಿದೆ. ರಾಜ್ಯಪಾಲರಿಗೂ ದೂರು ಕೊಡಲಾಗಿದೆ.
ಒಕ್ಕಲುತನಕ್ಕೆ ಹೆಸರಾದ ಒಕ್ಕಲಿಗರ ವರ್ಣ ನಿಂದನೆ ಮಾಡಿ ದ್ರಾವಿಡ ಕುಲಕ್ಕೆ ಅಪಮಾನ ಮಾಡಿದ ಸಚಿವ ಜಮೀರ್ ಅಹಮದ್ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ರಾಜ್ಯಪಾಲರಿಗೆ ಅಖಿಲ ಭಾರತ ಒಕ್ಕಲಿಗರ ಮಹಾಸಭಾ ಆಗ್ರಹ ಮಾಡಿದೆ.ಈ ಬಗ್ಗೆ ರಾಜ್ಯಪಾಲರಿಗೆ ಪತ್ರ ಬರೆದಿರುವ ಒಕ್ಕಲಿಗರ ಮಹಾಸಭಾ, ” ಒಕ್ಕಲುತನದ ಒಕ್ಕಲಿಗರ ವರ್ಣವನ್ನು ನಿಂದಿಸಿ, ದ್ರಾವಿಡ ಶೂದ್ರ ಕುಲಕ್ಕೆ ಸಚಿವ ಅವಮಾನ ಮಾಡಿದ್ದಾರೆ ” ಎಂದು ಬೇಸರವ್ಯಕ್ತಪಡಿಸಿದೆ.
ಸಂವಿಧಾನದ ಪ್ರಕಾರ ಅಪರಾಧ : ಶೂದ್ರ ಒಕ್ಕಲಿಗ ಕುಲದ ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿಯವರನ್ನು ‘ ಕರಿಯಾ ‘ ಎಂದು ನಿಂದಿಸಿರುವುದು, ವೈಯಕ್ತಿಕ ಚಾರಿತ್ಯದೊಂದಿಗೆ ಭೇದ ಭಾವ ಮಾಡಿರುವುದು ಭಾರತದ ಸಂವಿಧಾನದ 14, 15, 16, 17, 38 ಮತ್ತು 46 ವಿಧಿಗಳ ಪ್ರಕಾರ ಅವಮಾನಕಾರಕ, ಪ್ರಚೋದನೆಯು ಶಾಂತಿಭಂಗ ಎಸಗುವಿಕೆಯ ಅಪರಾಧವಾಗಿರುವುದರಿಂದ ಐ ಪಿ ಸಿ ಸೆಕ್ಷನ್ ( 504) ರನ್ವಯ ತಪ್ಪಿತಸ್ಥರನ್ನು ಶಿಕ್ಷೆಗೆ ಒಳಪಡಿಸಬೇಕಿದೆ ಎಂದು ಮಹಾಸಭಾದ ಡಾ ವಿ ಅಂಜನಪ್ಪ ಆಗ್ರಹಿಸಿದ್ದಾರೆ. ಹಾಗೆಯೇ ಜಮೀರ್ ಅಹ್ಮದ್‌ರವರು ಸಾರ್ವಜನಿಕವಾಗಿ ಮಾತನಾಡಿರುವಂತೆ ಮುಸ್ಲಿಮರು ಒಂದೊಂದು ಪೈಸೆ ಸೇರಿಸಿ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರ ಕುಟುಂಬವನ್ನೇ ಖರೀದಿಸಬಲ್ಲರು ಎಂದು ಹೇಳಿರುವುದು ಶೂದ್ರ ಒಕ್ಕಲಿಗ ಜನರ ಮನಸ್ಸಿನಲ್ಲಿ ದಿಗಿಲು ಇಲ್ಲವೇ ಭಯವನ್ನು ಹುಟ್ಟಿಸಿ, ಉಗ್ರವಾದ ಹಾಗೂ ಭಯೋತ್ಪಾದನೆಗೆ ಕಾರಣವಾಗಿರುತ್ತದೆ. ಮಂತ್ರಿಯಾಗಿ ಪ್ರತಿಜ್ಞಾವಿಧಿಗೆ ವಿರುದ್ಧವಾಗಿ ನಡೆದುಕೊಂಡಿರುವ ಸಚಿವ ಜಮೀರ್ ಅಹ್ಮದ್ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ, ಮಂತ್ರಿ ಪದವಿಯಿಂದ ವಜಾ ಗೊಳಿಸುವಂತೆ ಮಾನ್ಯ ಮುಖ್ಯಮಂತ್ರಿಗಳಿಗೆ ಸೂಚನೆ ನೀಡಬೇಕಾಗಿ ಪ್ರಾರ್ಥಿಸುತ್ತೇನೆ ಎಂದು ಪತ್ರದಲ್ಲಿ ಒತ್ತಾಯಿಸಿದ್ದಾರೆ.
ಪೊಲೀಸ್ ಕಂಪ್ಲೇಂಟ್ : ಚಿಕ್ಕಮಗಳೂರು ಜಿಲ್ಲೆಯ ಕೊಪ್ಪದ ಹರಿಹರಪುರ ಪೊಲೀಸ್ ಠಾಣೆಯಲ್ಲಿ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ನಾಗೇಂದ್ರ ದೂರು ನೀಡಿದ್ದಾರೆ.
ಸಮರ್ಥನೆಯ ಚಿತ್ರ ವಿಚಿತ್ರ ವಾದಗಳು : ಜಮೀರ್ ಅವರ ಹೇಳಿಕೆಯನ್ನು ಸಮರ್ಥನೆ ಮಾಡಿಕೊಳ್ಳುವವರ ಚಿತ್ರ ವಿಚಿತ್ರ ವಾದಗಳಿಗೇನೂ ಕೊರತೆ ಇಲ್ಲ. ಒಬ್ಬೊಬ್ಬರ ಹೇಳಿಕೆಯನ್ನೇ ನೋಡಿ.
ರಮೇಶ್ ಬಂಡಿಸಿದ್ದೇಗೌಡ, ಶಾಸಕ : ಜಮೀರ್ ಮತ್ತು ಕುಮಾರಣ್ಣ ಇಬ್ಬರೂ ಗಳಸ್ಯ ಕಂಠಸ್ಯ. ನಿಖಿಲ್ ಈಗಾಗಲೇ ಎರಡು ಬಾರಿ ಸೋತಿದ್ದರು. ಹೀಗಾಗಿ ಅವರನ್ನು ಗೆಲ್ಲಿಸುವ ಸಲುವಾಗಿ ತಮ್ಮ ಗೆಳೆಯ ಜಮೀರ್ ಅವರಿಂದ ಕುಮಾರಸ್ವಾಮಿ ಅವರೇ ಈ ಮಾತು ಹೇಳಿಸಿರಬಹುದು.
ಡಿಕೆ ಸುರೇಶ್ : ಜಮೀರ್ ಅವರ ವಿವಾದಾತ್ಮಕ ಹೇಳಿಕೆಗಳು ಹೊಸದೇನೂ ಅಲ್ಲ. ಆದರೆ ಮಾಧ್ಯಮಗಳ ಮೂಲಕ ಹೆಚ್ಚು ಹೆಚ್ಚು ತೋರಿಸಿ ಪ್ರಚಾರ ಮಾಡಲಾಗಿದೆ. ಜನರ ಮೇಲೆ ಪ್ರಭಾವ ಬೀರಬೇಕು ಎಂಬ ಕಾರರಣಕ್ಕೇ ಪ್ರಚಾರ ಮಾಡಲಾಗಿದೆ. ಅಡ್ಡ ಹೆಸರಿಟ್ಟು ಕರೆದಿದ್ದಾರೆ, ಅದರಲ್ಲೇನು ತಪ್ಪಿದೆ..?
ಪರಮೇಶ್ವರ್, ಗೃಹ ಸಚಿವ : ಕುಮಾರಸ್ವಾಮಿ ಮತ್ತು ಜಮೀರ್ ನಡುವೆ ವಿಶೇಷ ಪ್ರೀತಿ ಸಂಬಂಧ ಇದೆ. ಅವರವರ ಮಾತಿಗೆ ನೋ ರಿಯಾಕ್ಷನ್.
ಸಿದ್ದರಾಮಯ್ಯ, ಮುಖ್ಯಮಂತ್ರಿ : ಸಿದ್ದರಾಮಯ್ಯ ಸಮರ್ಥನೆ ಮಾಡಿಕೊಂಡಿಲ್ಲ. ಉತ್ತರವನ್ನೂ ಕೊಟ್ಟಿಲ್ಲ. ಪ್ರಶ್ನೆಗೆ ಪ್ರಶ್ನೆ ಹಾಕದ್ದಾರೆ. ಅವರು ಸೊಕ್ಕು ಮುರೀತೀನಿ ಅಂದಿದ್ದು ಸರೀನಾ ಎಂದು ಪ್ರಶ್ನೆ ಮಾಡಿದ್ದಾರೆ.
ಒಟ್ಟಿನಲ್ಲಿ ಕರಿಯಾ ವರ್ಸಸ್ ಕುಳ್ಳ ವಿವಾದ ಯಾರ ಬುಡಕ್ಕೆ ಬೆಂಕಿ ಇಟ್ಟಿದೆಯೋ.. ಗೊತ್ತಿಲ್ಲ. ಆದರೆ ಒಂದಂತೂ ಸತ್ಯ. ಜಮೀರ್ ಅಹ್ಮದ್ ಅವರ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳುವ ಸ್ಥಿತಿಯಲ್ಲಿ ಕಾಂಗ್ರೆಸ್ ಇಲ್ಲ.



