ನಟ ದರ್ಶನ್ ಅವರಿಗೆ ವಿವಾದಗಳು ಹೊಸದೇನಲ್ಲ. ಕ್ರಾಂತಿ ಸೋತ ಮೇಲೆ ಒಂದಿಷ್ಟು ತಣ್ಣಗಾದಂತೆ ಕಂಡಿದ್ದ ದರ್ಶನ್, ಕಾಟೇರ ಯಶಸ್ಸಿನಿಂದ ಮತ್ತೆ ಹಳೆಯ ಫಾರ್ಮಿಗೆ ಬಂದಿದ್ದಾರೆ. ಹೀಗಾಗಿ ಕಾಂಟ್ರವರ್ಸಿಗಳನ್ನು ಹುಡುಕಿಕೊಂಡು ಹೋಗಿ ಕೆಣಕುತ್ತಿದ್ದಾರೆ. ಈ ಬಾರಿಯೂ ಅಷ್ಟೆ ದರ್ಶನ್ ಅವರ ಎರಡು ಹೇಳಿಕೆಗಳು ಮತ್ತು ಎರಡು ವಿವಾದಗಳನ್ನೂ ಹುಟ್ಟುಹಾಕಿದೆ. ಜೊತೆಗೆ ಒಕ್ಕಲಿಗರು ಮತ್ತು ಗೌಡತಿಯರು ಪ್ರತ್ಯೇಕವಾಗಿ ಸಿಡಿದು ಬಿದ್ದಿದ್ದಾರೆ್
ದರ್ಶನ್ ವಿರುದ್ಧ ಗೌಡತಿಯರ ಸೇನೆ : ನಟ ದರ್ಶನ್ ಅವರು ಇತ್ತೀಚೆಗೆ ಮಂಡ್ಯದಲ್ಲಿ ನಡೆದ ಬೆಳ್ಳಿ ಪರ್ವ ೨೫ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಇವತ್ತು ಇವಳು ಇರ್ತಾಳೆ, ನಾಳೆ ಅವಳು ಇರ್ತಾಳೆ ಎಂಬ ಡೈಲಾಗ್ ಹೊಡೆದಿದ್ದರು. ತುಂಬಿದ ವೇದಿಕೆಯ ಮೇಲೆ ಮಾತನಾಡಿದ್ದ ದರ್ಶನ್ ಅವರ ಹೇಳಿಕೆ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿತ್ತು. ಇದೀಗ ಅದೇ ಹೇಳಿಕೆ ವಿರುದ್ಧ ಮಹಿಳಾ ಆಯೋಗಕ್ಕೆ ದೂರು ಹೋಗಿದೆ. ದೂರು ಕೊಟ್ಟಿರುವುದು ಗೌಡತಿಯರ ಸೇನೆ.
ಯುವಜರಿಗೆ ಮಾದರಿಯಾಗ ಬೇಕಾಗಿದ್ದ ಒಬ್ಬ ನಾಯಕ ನಟ ಇಂತಹ ಹೇಳಿಕೆ ನೀಡುತ್ತಿದ್ದಾರೆ. ಶ್ರೀರಂಗಪಟ್ಟಣದ 25 ನೇ ವರ್ಷದ ವಾರ್ಷಿಕೋತ್ಸವದಲ್ಲಿ ಸಾರ್ವಜನಿಕ ವೇದಿಕೆಯಲ್ಲಿ ಹೆಣ್ಣುಮಕ್ಕಳ ಬಗ್ಗೆ ಕೀಳು ಮಟ್ದಲ್ಲಿ ಮಾತನಾಡಿರುತ್ತಾರೆ. ಒಬ್ಬಳು ಹೋಗುತ್ತಾಳೆ, ಒಬ್ಬಳು ಬರುತ್ತಾಳೆ, ಅವಳ ಅಜ್ಜಿನಾ ಬಡಿಯ… ಅಂತಾ ಹೇಳಿರುತ್ತಾರೆ. ಈ ಸಭೆಯಲ್ಲಿ ಆದಿ ಚು೦ಚನಗಿರಿ ಗುರುಗಳು, ಸಂಸದೆ ಸುಮಲತಾ ಹಾಗೂ ಹಲವಾರು ಗಣ್ಯಾತಿಗಣ್ಯರು, ಸಾವಿರಾರು ಅಭಿಮಾನಿಗಳಿದ್ದರು. ನಟನೊಬ್ಬ ಸಮಾಜಕ್ಕೆ ಮಾದರಿ ಆಗಿರಬೇಕು. ಈ ರೀತಿ ಮಾತನಾಡಿರುವ ದರ್ಶನ್ ಅವರಿಂದ ವಿವರಣೆ ಪಡೆದುಕೊಳ್ಳಿ ಎನ್ನುವುದು ಗೌಡತಿಯರ ಸೇನೆಯ ದೂರು.
ಅಲ್ಲದೆ ದರ್ಶನ್ ಅವರ ಈ ಹಿಂದಿನ ಪ್ರಕರಣಗಳನ್ನೂ ಗೌಡತಿಯರ ಸೇನೆ ನೆನಪು ಮಾಡಿದೆ. ದರ್ಶನ್ ಅವರು ಈ ಹಿಂದೆ ಹೆಂಡತಿಯನ್ನು ಸಿಗರೇಟಿನಿಂದ ಸುಟ್ಟ ಆರೋಪದಲ್ಲಿ ಜೈಲಿಗೆ ಹೋಗಿದ್ದವರು. ಅದೃಷ್ಟ ದೇವತೆ ನಿಮ್ಮ ಮನೆಗೆ ಬಂದರೆ ಬಟ್ಟೆ ಬಿಚ್ಚಿ ರೂಮಿನಲ್ಲಿ ಕೂಡಿಹಾಕಿ ಎಂದು ಹೇಳಿಕೆ ಕೊಟ್ಟಿದ್ದವರು. ನಾಯಕ ನಟನೊಬ್ಬ ಮಾಡೆಲ್ ಆಗಿರಬೇಕು. ಹೆಣ್ಣು ಮಕ್ಕಳನ್ನು ತೆರೆಯ ಮೇಲೆ ಗೌರವಿಸುವಂತೆ, ತೆರೆಯ ಹಿಂದೆಯೂ ಗೌರವಿಸುವುದನ್ನು ಕಲಿಯಬೇಕು ಎಂದು ಗೌಡತಿಯರ ಸೇನೆ ಒತ್ತಾಯಿಸಿದೆ.
ದರ್ಶನ್ʻಗೆ ಒಕ್ಕಲಿಗರ ಸಂಘ ಬುದ್ದಿವಾದ : ನಿರ್ಮಾಪಕ ಉಮಾಪತಿ ಶ್ರೀನಿವಾಸ ಗೌಡ, ಒಕ್ಕಲಿಗರ ಸಂಘದ ನಿರ್ದೇಶಕರೂ ಹೌದು. ಇತ್ತೀಚೆಗೆ ನಟ ದರ್ಶನ್ ಉಮಾಪತಿಯವರ ಬಗ್ಗೆ ತಗಡು, ಗುಮ್ಮಿಸ್ಕೊಳ್ತೀಯಾ ಎಂಬ ಪದಗಳನ್ನು ಬಳಸಿದ್ದು ವಿವಾದಕ್ಕೆ ಕಾರಣವಾಗಿತ್ತು. ಇದಕ್ಕೆ ಸ್ವಲ್ಪ ತಾಳ್ಮೆಯಿಂದ, ಸ್ವಲ್ಪ ಆಕ್ರೋಶದಿಂದ ಉತ್ತರ ಕೊಟ್ಟಿದ್ದ ಉಮಾಪತಿ, ಹಣ ಹಾಕಿ ಸಿನಿಮಾ ಮಾಡುವಾಗ ನಿರ್ಮಾಪಕರು. ಮುಗಿದ ಮೇಲೆ ತಗಡುಗಳಾ.. ಇದೇ ದರ್ಶನ್ ಅವರ ರಾಬರ್ಟ್ ಸಿನಿಮಾಗೆ ಹಣ ಹಾಕಿದ್ದು ಇದೇ ತಗಡು ಎಂದಿದ್ದರಷ್ಟೇ ಅಲ್ಲ, ನಾಲಗೆ ಮೇಲೆ ಹಿಡಿತವಿರಲಿ ಎಂದು ಎಚ್ಚರಿಕೆಯನ್ನೂ ಕೊಟ್ಟಿದ್ದರು. ಇದೀಗ ಈ ವಿವಾದಕ್ಕೆ ಒಕ್ಕಲಿಗರ ಸಂಘ ಎಂಟ್ರಿ ಕೊಟ್ಟಿದೆ.
ಒಕ್ಕಲಿಗರ ಸಂಘದ ನಿರ್ದೇಶಕರು ಮತ್ತು ಸಿನಿಮಾ ನಿರ್ಮಾಪಕರೂ ಆಗಿರುವ ಉಮಾಪತಿ ಶ್ರೀನಿವಾಸ್ ಗೌಡ ಅವರಿಗೆ ಖ್ಯಾತ ನಟರಾದ ದರ್ಶನ್ ಅವರು ಮಾತನಾಡಿದ ರೀತಿ ಸರಿಯಿಲ್ಲ. ಸುಮಾರು ಚಿತ್ರಗಳಿಗೆ ಬಂಡವಾಳ ಹೂಡಿ, ಕಲಾವಿದರಿಗೆ ಪ್ರೋತ್ಸಾಹ ನೀಡುತ್ತಾ ಬಂದಿರುವ ಉಮಾಪತಿ ಅವರಿಗೆ ತಗಡು ಎಂದು ಅವಹೇಳನಕಾರಿ ಮಾತುಗಳನ್ನು ಮಾಧ್ಯಮದ ಮುಂದೆ ಹೇಳಿದ್ದು ಸರಿಯಲ್ಲ ಎಂದು ಒಕ್ಕಲಿಗರ ಸಂಘ ಅಭಿಪ್ರಾಯಪಟ್ಟಿದೆ.
ನಟ ಹಾಗೂ ನಿರ್ಮಾಪಕ ಜೊತೆಯಾಗಿದ್ದರಷ್ಟೇ ಚಿತ್ರರಂಗ ಬೆಳೆಯಲು ಸಾಧ್ಯ. ಇಲ್ಲದಿದ್ದರೆ ಕಷ್ಟ. ಇಬ್ಬರೂ ಮಾತುಕತೆಯಿಂದ ವಿವಾದ ಬಗೆಹರಿಸಿಕೊಂಡು ಮುಂದುವರೆಯಲಿ ಎಂದು ಬುದ್ದಿವಾದ ಹೇಳಿದೆ.



