ದರ್ಶನ್ & ಗ್ಯಾಂಗ್ ವಿರುದ್ಧದ ರೇಣುಕಾಸ್ವಾಮಿ ಕೊಲೆ ಕೇಸಿಗೆ ಸಂಬಂಧಪಟ್ಟಂತೆ ಕೋರ್ಟ್ ವಿಚಾರಣೆ ಈಗ ಶುರುವಾಗಿದೆ. ಚಾರ್ಜ್ ಶೀಟ್ ಏನೋ ಆಗಿತ್ತು. ಆದರೆ ಪ್ರಕರಣದ ವಿಚಾರಣೆಯೇ ಶುರುವಾಗಿರಲಿಲ್ಲ. ದರ್ಶನ್ & ಗ್ಯಾಂಗಿನ ಸದಸ್ಯರೇ ಪದೇ ಪದೇ ಆರೋಪಮುಕ್ತಗೊಳಿಸುವಂತೆ ಒಬ್ಬರ ನಂತರ ಒಬ್ಬರು ಅರ್ಜಿ ಹಾಕುತ್ತಲೇ ಇದ್ದರು. ಆ ಅರ್ಜಿಗಳೆಲ್ಲ ಕ್ಲಿಯರ್ ಆಗುವವರೆಗೆ ವಿಚಾರಣೆ ಶುರುವಾಗುವಂತಿಲ್ಲ. ಇದೀಗ ದೋಷಾರೋಪ ಪಟ್ಟಿಯನ್ನು ಕೋರ್ಟಿನಲ್ಲಿ ಹೇಳಲಾಗಿದೆ. ಇನ್ನು ಪ್ರಕರಣದ ಅಸಲಿ ವಿಚಾರಣೆ ಶುರುವಾಗಲಿದೆ. ಈ ವೇಳೆ ನಡೆದ ಘಟನೆ ಅಯ್ಯೋ ಪಾಪ ದರ್ಶನ್ ಎನ್ನುವಂತೆ ಮಾಡಿದೆ.
ದೋಷಾರೋಪವನ್ನು ಹೇಳುವುದಕ್ಕಾಗಿಯೇ ಎಲ್ಲ 17 ಆರೋಪಿಗಳನ್ನೂ ಕೋರ್ಟಿಗೆ ಕರೆತರಲಾಗಿತ್ತು. ಜೈಲಿನಲ್ಲಿ ಒದ್ದಾಡುತ್ತಿರುವ ದರ್ಶನ್ ಅವರಿಗೆ 81 ದಿನಗಳ ನಂತರ ಹೊರ ಜಗತ್ತಿನ ದರ್ಶನವಾಗಿದೆ. ಬೂದು ಬಣ್ಣದ ಪುಲ್‌ಓವರ್ ನೀಲಿ ಬಣ್ಣದ ಜೀನ್ಸ್ ತೊಟ್ಟು ದರ್ಶನ್ ಪೊಲೀಸ್ ವಾಹನದಲ್ಲಿ ಕೋರ್ಟ್‌ಗೆ ಆಗಮಿಸಿದ್ದರು. ಮುಖದಲ್ಲಿ ನಗುವೇನೋ ಇತ್ತು. ಆದರೆ.. ದರ್ಶನ್ ಉಪವಾಸ ಇದ್ದರು. ಊಟ ಮಾಡಿರಲಿಲ್ಲ. ರಾತ್ರಿಯಿಂದಲೂ ಏನನ್ನೂ ತಿಂದಿರಲಿಲ್ಲ.
ಚಾರ್ಜ್‌ಶೀಟ್ ಆತಂಕವೋ.. ಸೆಕ್ಷನ್ನುಗಳು, ಶಿಕ್ಷೆಯ ಭಯವೋ.. ದರ್ಶನ್ ಊಟ ಕೊಟ್ಟರೂ ಏನನ್ನೂ ತಿಂದಿರಲಿಲ್ಲ. ಉಪವಾಸ ಇದ್ದರಂತೆ. ಕೋರ್ಟಿಗೆ ಬಂದಾಗ ದರ್ಶನ್ ಹೊಟ್ಟೆಗೇನೂ ತಿಂದಿಲ್ಲ ಅನ್ನೋ ವಿಚಾರವನ್ನ ದರ್ಶನ್ ಪರ ಲಾಯರ್ಸ್ ಜಡ್ಜಿಗೆ ಹೇಳಿದ್ದಾರೆ. ಅವರಿನ್ನೂ ಊಟ ಮಾಡಿಲ್ಲವೇ ಎಂದು ಜಡ್ಜ್ ಅಧಿಕಾರಿಗಳನ್ನು ಪ್ರಶ್ನಿಸಿದಾಗ, ಬರುವ ವಾಹನದಲ್ಲಿ ಊಟ ಕೊಟ್ಟೆವು ಆದರೆ ತಿಂದಿಲ್ಲ ಎಂಬ ಉತ್ತರ ಬಂದಿದೆ. ಊಟ ಕೊಟ್ಟರೂ ತಿಂದಿಲ್ಲ ಎಂದು ಗೊತ್ತಾಗಿದೆ. ಆಗ ವಕೀಲರು ಹೆಂಡತಿ ಮನೆಯಿಂದ ಊಟ ತಂದಿದ್ದಾರೆ. ಕೊಡಬಹುದೇ ಎಂದಿದ್ದಾರೆ. ‘ಮನೆ ಊಟವನ್ನು ಪರಿಶೀಲನೆ ಮಾಡಿ ಕೊಡಿ’ ಎಂದು ಜೈಲಧಿಕಾರಿಗೆ ಜಡ್ಜ್ ಸೂಚನೆ ನೀಡಿ.. ಆನಂತರ ವಿಜಯಲಕ್ಷ್ಮಿ ಮನೆ ಊಟ ಕೊಟ್ಟಿದ್ದಾರೆ.
ಒಂದು ಟೈಮಿನಲ್ಲಿ ತನಗೆ ಬೇಕು ಎಂದ ಊಟವನ್ನು ಎಷ್ಟು ಖರ್ಚಾದರೂ ಸರಿ ತರಿಸಿಕೊಳ್ಳುತ್ತಿದ್ದ ದರ್ಶನ್ ಈಗ ಮನೆ ಊಟಕ್ಕೂ ಅಂಗಲಾಚುತ್ತಿದ್ದಾರೆ. ಇದಕ್ಕೇ ಜನ ಅಯ್ಯೋ ಪಾಪ ದರ್ಶನ್ ಎನ್ನುತ್ತಿದ್ದಾರೆ.
ಅಂದಹಾಗೆ ದರ್ಶನ್ & ಗ್ಯಾಂಗ್‌ನ್ನು ಕಟಕಟೆಗೆ ಕರೆತರುತ್ತಿರುವುದು ಮೊದಲೇ ಗೊತ್ತಾಗಿ ನೂರಾರು ಜನ ಕೋರ್ಟಿಗೆ ಬಂದಿದ್ದರು. ದರ್ಶನ್ ಫ್ಯಾನ್ಸ್, ವಕೀಲರು ಕಿಕ್ಕಿರಿದು ತುಂಬಿದ್ದರು. ಗಲಾಟೆಯ ನಡುವೆ ಏನೂ ಕೇಳದ ಪರಿಸ್ಥಿತಿ ಉದ್ಭವವಾಗಿ ಕೋರ್ಟಿನಲ್ಲಿ ವಕೀಲರು ಹಾಗೂ ಅರೋಪಿಗಳನ್ನು ಎಲ್ಲರನ್ನೂ ಹೊರಕಳಿಸಿ ವಿಚಾರಣೆ ಮಾಡಲಾಗಿದೆ. 81 ದಿನಗಳ ಬಳಿಕ ಕಾಣಿಸಿಕೊಂಡಿದ್ದ ದರ್ಶನ್ ಅವರು ಹೇಗಿರಬಹುದು..ಎಂಬ ಕುತೂಹಲ ಇತ್ತು. ನಗುನಗುತ್ತಲೇ ಕೋರ್ಟ್ ಹಾಲಿಗೆ ಬಂದ ದರ್ಶನ್ ಅವರ ದೇಹದಾರ್ಢ್ಯತೆ ಹಾಗೆಯೇ ಇದ್ದರೂ, ಸೊರಗಿರುವುದು ಕಾಣುತ್ತಿತ್ತು.
ಮೊದಲು ಜೈಲಿಗೆ ಹೋಗಿದ್ದಾಗ ದರ್ಬಾರ್ ನಡೆಸಿದ್ದ ಕಾರಣಕ್ಕೆ ಸುಪ್ರೀಂಕೋರ್ಟ್ ಕೆಂಗಣ್ಣಿಗೂ ಗುರಿಯಾಗಿರುವ ದರ್ಶನ್ ಅವರು ಸೊರಗಿದ್ದಾರೆ. ಮನೆ ಊಟಕ್ಕೆ ಹಪಹಪಿಸುವಂತಾಗಿದ. ಅಭಿಮಾನಿಗಳು.. ಈತನೇ ಅಲ್ವಾ.. ತನ್ನ ಹುಟ್ಟುಹಬ್ಬದ ದಿನ ಸಾವಿರಾರು ಜನರಿಗೆ ಊಟ ಹಾಕಿಸುತ್ತಿದ್ದುದು.. ಈತನೇ ಅಲ್ವಾ.. ತನ್ನ ಹೆಸರಿನಲ್ಲೇ ಸಾವಿರಾರು ಜನರ ಕುಟುಂಬಕ್ಕೆ ಅನ್ನದಾತನಾಗಿದ್ದುದು ಎಂದು ನೆನಪಿಸಿಕೊಳ್ಳುತ್ತಿದ್ದಾರೆ. ಕಾಲಾಯ ತಸ್ಮೈ ನಮಃ.. ಅಷ್ಟೇ.



