ಒಡಿಶಾದ ಬಾಲಸೋರ್`ನಲ್ಲಿ ಸಂಭವಿಸಿದ ರೈಲು ಅಪಘಾತದಲ್ಲಿನ ಸಾವಿನ ಸಂಖ್ಯೆ ಏರುತ್ತಲೇ ಇದೆ. ಈಗಾಗಲೇ 230ರ ಗಡಿ ದಾಟಿದೆ ಸಾವಿನ ಸಂಖ್ಯೆ. 900 ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಇದು ಇತ್ತೀಚಿನ ದಿನಗಳಲ್ಲಿ ದೇಶದಲ್ಲಿ ನಡೆದ ಅತ್ಯಂತ ಮಾರಣಾಂತಿಕ ರೈಲು ಅಪಘಾತ.
ಹೌರಾದಿಂದ ಚೆನ್ನೈಗೆ ಬರುತ್ತಿದ್ದ ಕೋರಮಂಡಲ್ ಎಕ್ಸ್ಪ್ರೆಸ್ ರೈಲು ಬೆಂಗಳೂರಿನಿಂದ ಕೋಲ್ಕತ್ತಾಗೆ ಹೋಗುತ್ತಿದ್ದ ಮತ್ತೊಂದು ರೈಲಿನ ಹಳಿತಪ್ಪಿದ ಬೋಗಿಗಳಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಈ ಭೀಕರ ರೈಲು ದುರಂತ ಸಂಭವಿಸಿದೆ.
2016ರ ನಂತರ ನಡೆದ ಭೀಕರ ಅಪಘಾತ ಇದಾಗಿದೆ. 2016ರಲ್ಲಿ ಇಂದೋರ್-ಪಟನಾ ಎಕ್ಸ್ಪ್ರೆಸ್ ರೈಲು ಕಾನ್ಪುರ ಬಳಿ ಅಪಘಾತಕ್ಕೀಡಾಗಿ 150 ಮಂದಿ ಸಾವಿಗೀಡಾಗಿದ್ದರು. ಇದಾದ ಬಳಿಕ ಹಲವು ಅಪಘಾತಗಳು ಸಂಭವಿಸಿದ್ದರೂ, ಈ ಪ್ರಮಾಣ ಸಾವು ನೋವು ಸಂಭವಿಸಿರಲಿಲ್ಲ.
ಅಪಘಾತಕ್ಕೇನು ಕಾರಣ..?
ಘಟನಾ ಸ್ಥಳದಲ್ಲಿ 3 ರೈಲು ಮಾರ್ಗಗಳಿದ್ದವು. ಕೊಲ್ಕಾತ್ತದ ಶಾಲಿಮಾರ್ ರೈಲು ನಿಲ್ದಾಣದಿಂದ ಚೆನ್ನೈ ಗೆ ಮೇನ್ ಲೈನ್ ನಲ್ಲಿ ಸಂಜೆ ೭:೩೦ಕ್ಕೆ ಹೊರಟಿದ್ದ ಕೋರಮಂಡಲ್ ಎಕ್ಸ್ಪ್ರೆಸ್ (12841) ಒಡಿಶಾದ ಬಹನಗಾ ಬಜಾರ್ ಸ್ಟೇಷನ್ ಬಳಿ ಹಳಿ ತಪ್ಪಿ, ಹಳಿ ತಪ್ಪಿ ಪಕ್ಕದ ಹಳಿಯಲ್ಲಿ ನಿಂತಿದ್ದ ಗೂಡ್ಸ್ ರೈಲಿಗೆ ಮೊದಲು ಡಿಕ್ಕಿ ಹೊಡೆಯಿತು. ಇದರಿಂದ ಕೋರಮಂಡಲ್ ಎಕ್ಸ್ಪ್ರೆಸ್ ನ 12 ಬೋಗಿಗಳು ಹಳಿ ತಪ್ಪಿದವು. ಆ 12 ಬೋಗಿಗಳೂ ಮೂರನೇ ರೈಲು ಮಾರ್ಗದ ಮೇಲೆ ಬಿದ್ದವು. ಸ್ವಲ್ಪೇ ಸ್ವಲ್ಪ ಸಮಯದ ಅಂತರದಲ್ಲಿಯೇ ಇದೇ ಮಾರ್ಗವಾಗಿ ಇನ್ನೊಂದು ಹಳಿಯಲ್ಲಿ ವಿರುದ್ಧ ದಿಕ್ಕಿನಲ್ಲಿ ಬಂದ ಬೆಂಗಳೂರಿನ ಹೌರ ಎಕ್ಸ್ಪ್ರೆಸ್ ಅದಕ್ಕೆ ಡಿಕ್ಕಿ ಹೊಡೆಯಿತು. ಪರಿಣಾಮ ಇದರ ನಾಲ್ಕು ಬೋಗಿಗಳು ಸಹ ಹಳಿ ತಪ್ಪಿವೆ. ಹೀಗೆ ಒಂದಕ್ಕೊಂದು ಚೈನ್ ಲಿಂಕ್ ಅಪಘಾತ ಸಂಭವಿಸಿ, ಈ ದುರಂತ ನಡೆದಿದೆ.



