ಬೆಂಗಳೂರಿನ ರಾಜಾರಾಜೇಶ್ವರಿ ನಗರ ಕ್ಷೇತ್ರದ ಶಾಸಕ. ಮಾಜಿ ಸಚಿವ. ಅಟ್ರಾಸಿಟಿ ಕೇಸಿನಲ್ಲಿ ಅರೆಸ್ಟ್ ಆಗಿ ಜೈಲು ಸೇರಿದ್ದ ಮುನಿರತ್ನ, ಅದಕ್ಕೆ ಜಾಮೀನು ಪಡೆದು ಹೊರಬಂದ ಬೆನ್ನಲ್ಲೇ ಅತ್ಯಾಚಾರ ಪ್ರಕರಣ ಅಟಕಾಯಿಸಿಕೊಂಡಿತು. ಅದೀಗ ಮುನಿರತ್ನ ಅವರ ಕುತ್ತಿಗೆಗೆ ಎಷ್ಟು ಬಲವಾಗಿ ಸುತ್ತಿಕೊಳ್ಳುತ್ತಿದೆ ಎಂದರೆ, ಮುನಿರತ್ನ ಇಷ್ಟು ವರ್ಷ ಬ್ಲಾಕ್ ಮೇಲ್ ರಾಜಕಾರಣ ಮಾಡಿದ್ದರಾ ಎಂಬ ಅನುಮಾನ ಹುಟ್ಟುವಂತೆ ಮಾಡಿದೆ.
ಎಸ್‌ಐಟಿ ಅಧಿಕಾರಿಗಳು ಅತ್ಯಾಚಾರ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಮುನಿರತ್ನ ಅವರ ಮನೆ ಮೇಲೆ ದಾಳಿ ನಡೆಸಿ ವಶಪಡಿಸಿಕೊಂಡಿದ್ದ ಲ್ಯಾಪ್‌ಟಾಪ್ ಮತ್ತು ಪೆನ್‌ಡ್ರೈವ್‌ಗಳಲ್ಲಿ ಬಿಜೆಪಿಯವರದ್ದಷ್ಟೇ ಅಲ್ಲ, ಎಲ್ಲ ಪಕ್ಷಗಳ ನಾಯಕರ ಅಶ್ಲೀಲ ವಿಡಿಯೋಗಳು ಸಿಕ್ಕಿವೆಯಂತೆ. ಅಲ್ಲದೆ ಹಿರಿಯ ಪೊಲೀಸ್ ಅಧಿಕಾರಿಗಳ ಪರ್ಸನಲ್ ವಿಡಿಯೋಗಳೂ ಇವೆಯಂತೆ. ಮುನಿರತ್ನ ವಿರುದ್ಧ ದೂರು ಕೊಟ್ಟಿರುವ ಮಹಿಳೆಯೇ ತನ್ನ ಮೇಲೆ ಅತ್ಯಾಚಾರ ನಡೆಸಿದ್ದಲ್ಲದೆ ಬ್ಲ್ಯಾಕ್‌ಮೇಲ್ ಮೂಲಕ ಕೆಲ ರಾಜಕಾರಣಿಗಳು, ಪೊಲೀಸ್ ಸೇರಿದಂತೆ ಕೆಲ ಅಧಿಕಾರಿಗಳನ್ನು ಮುನಿರತ್ನ ಹನಿಟ್ರ್ಯಾಪ್ ಮಾಡಿಸಿದ್ದರು ಎಂದು ಹೇಳಿಕೆ ನೀಡಿದ್ದಾರಂತೆ. ‘ನನ್ನ ಹಾಗೂ ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಹಾಕಿ ಹನಿಟ್ರ್ಯಾಪ್ ಕೃತ್ಯಕ್ಕೆ ಶಾಸಕರು ಬಳಸಿಕೊಂಡಿದ್ದಾರೆ. ಜೀವ ಭೀತಿಯಿಂದ ಅನಿರ್ವಾಯವಾಗಿ ಅವರು ಹೇಳಿದಂತೆ ಕೇಳಿದೆ. ನಾನಾಗಿಯೇ ನಾನು ತಪ್ಪು ಮಾಡಿಲ್ಲ’ ಎಂದಿರುವ ಸಂತ್ರಸ್ತೆ, ಕೆಲವು ರಾಜಕಾರಣಿಗಳು ಹಾಗೂ ಹಿರಿಯ ಅಧಿಕಾರಿಗಳು ಅಶ್ಲೀಲ ವಿಡಿಯೋಗಳನ್ನು ಎಸ್‌ಐಟಿಗೆ ಸಲ್ಲಿಸಿದ್ದಾರೆ ಎಂಬ ಮಾಹಿತಿಗಳು ಹೊರಬಿದ್ದಿವೆ.
ಯಾರದ್ದೆಲ್ಲ ವಿಡಿಯೋಗಳಿವೆ..?
ಸಂತ್ರಸ್ತೆ ಎನ್ನಲಾದ ಮಹಿಳೆ ಸಲ್ಲಿಸಿರುವ ವಿಡಿಯೋಗಳಲ್ಲಿ ಒಬ್ಬ ಮಾಜಿ ಶಾಸಕ, ಬಿಬಿಎಂಪಿ ಮಾಜಿ ಸದಸ್ಯೆಯೊಬ್ಬರ ಪತಿ ಹಾಗೂ ಮೂವರು ಪೊಲೀಸ್ ಇನ್ಸ್‌ಪೆಕ್ಟರ್‌ಗಳ ವಿಡಿಯೋಗಳಿವೆ ಎನ್ನಲಾಗಿದೆ.ಅಲ್ಲದೆ ವೈಯಾಲಿ ಕಾವಲ್‌ನಲ್ಲಿರುವ ಮುನಿರತ್ನರ ಮನೆಯಲ್ಲಿಶೋಧ ಕಾರ್ಯಾಚರಣೆ ವೇಳೆ ಸಿಕ್ಕ ಲ್ಯಾಪ್‌ಟಾಪ್ ಮತ್ತು ಪೆನ್‌ಡ್ರೈವ್‌ಗಳಲ್ಲಿ ಕೆಲ ರಾಜಕೀಯ ನಾಯಕರ ಹಾಗೂ ಸರಕಾರಿ ಅಧಿಕಾರಿಗಳ ಖಾಸಗಿ ವಿಡಿಯೋಗಳು ಪತ್ತೆಯಾಗಿವೆ. ಮಹಿಳೆಯರ ಅಶ್ಲೀಲ ದೃಶ್ಯಗಳು ವಿಡಿಯೊದಲ್ಲಿವೆ. ಮುನಿರತ್ನರ ಮೊಬೈಲ್‌ನಲ್ಲಿ ಹನಿಟ್ರ್ಯಾಪ್‌ನ ಸಾಕಷ್ಟು ವಿಡಿಯೋ ಮತ್ತು ಆಡಿಯೋಗಳು ಇರುವ ಬಗ್ಗೆ ಸುಳಿವು ಸಿಕ್ಕಿದೆ.
ಮೊಬೈಲ್ ಇಲ್ಲ.. ಕಳೆದುಹೋಗಿದೆ..!
ಈ ಎಲ್ಲ ವಿಡಿಯೋಗಳೂ ಸಿಕ್ಕಿರುವ ಕಾರಣ, ಮುನಿರತ್ನ ಅವರ ಮೊಬೈಲ್ ಪ್ರಕರಣದಲ್ಲಿ ಪ್ರಮುಖ ಸಾಕ್ಷಿಯಾಗಲಿದೆ. ಆದರೆ, ಆ ಮೊಬೈಲ್ ಕೋಲಾರದಲ್ಲಿ ಕಳೆದು ಹೋಗಿದೆ ಎಂದು ಮುನಿರತ್ನ ಹೇಳಿದ್ದಾರೆ. ಮೊಬೈಲ್‌ನ ಐಎಂಇಐ ನಂಬರ್ ವಿವರ ಆಧರಿಸಿ ಪತ್ತೆ ಕಾರ್ಯ ಮುಂದುವರಿಸಿದ್ದೇವೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಹನಿಟ್ರ್ಯಾಪ್ ಆರೋಪಕ್ಕೆ ಸಂಬಂಧಪಟ್ಟಂತೆ ವಿಡಿಯೋಗಳು ಪ್ರಮುಖ ಸಾಕ್ಷಿಗಳಾಗುತ್ತವೆ. ಲ್ಯಾಪ್‌ಟಾಪ್ ಮತ್ತು ಪೆನ್‌ಡ್ರೈವ್‌ಗಳಲ್ಲಿಸಿಕ್ಕಿರುವ ವಿಡಿಯೊಗಳು ಅಸಲಿಯೇ ಅಥವಾ ನಕಲಿಯೇ ಎಂಬ ಬಗ್ಗೆ ತನಿಖೆ ಮಾಡಲಾಗುತ್ತದೆ. ಮೊಬೈಲ್ ಕಳೆದುಹೋಗಿರೋದ್ರಿಂದ ಯಾವ ರೀತಿ ತನಿಖೆ ನಡೆಯಲಿದೆ ಎಂಬ ಕುತೂಹಲವಂತೂ ಇದೆ.
ನ್ಯೂಸ್ ಚಾನೆಲ್ ಪತ್ರಕರ್ತನೇ ಸಾಕ್ಷಿಯಂತೆ..!
ಶಾಸಕ ಮುನಿರತ್ನ ಅವರ ಈ ಎಲ್ಲ ವಿಡಿಯೋಗಳ ಹಿಂದೆ ಖಾಸಗಿ ಸುದ್ದಿ ವಾಹಿನಿ ಪತ್ರಕರ್ತರೊಬ್ಬರಿದ್ದಾರೆ ಎಂಬ ಮಾಹಿತಿ ಇದೆ. ಆ ಪತ್ರಕರ್ತ ಒಂದು ಕಾಲಕ್ಕೆ ಮುನಿರತ್ನ ಅವರ ಆಪ್ತನಾಗಿದ್ದವನು. ಈಗ ಮುನಿರತ್ನ ಹಾಗೂ ಆ ಪತ್ರಕರ್ತನ ಸಂಬಂಧ ಸ್ವಲ್ಪ ಹಳಸಿದೆ ಎನ್ನಲಾಗಿದೆ. ಆ ಪತ್ರಕರ್ತನ ಮೂಲಕವೇ ಕೆಲವು ರಾಜಕಾರಣಿಗಳ ವೈಯಕ್ತಿಕ, ಖಾಸಗಿ ಮಾಹಿತಿಗಳನ್ನು ಸಂಗ್ರಹಿಸಿದ್ದ ಮುನಿರತ್ನ, ಅದನ್ನೇ ತನ್ನ ಹನಿಟ್ರ್ಯಾಪ್ ಕಾರ್ಯಾಚರಣೆಗೆ ಬಳಸಿದ್ದರು ಎನ್ನಲಾಗಿದೆ. ಅಂದರೆ ಟಿವಿ ಚಾನೆಲ್ ಪತ್ರಕರ್ತ ಕೊಟ್ಟ ಮಾಹಿತಿಯ ಆಧಾರದ ಮೇಲೆಯೇ, ಮುನಿರತ್ನ ಶಾಸಕರು, ರಾಜಕಾರಣಿಗಳು, ಪೊಲೀಸ್ ಅಧಿಕಾರಿಗಳಿಗೆ ಬಲೆ ಬೀಸುತ್ತಿದ್ದರು ಎನ್ನಲಾಗಿದೆ. ಈಗ ಆ ಪತ್ರಕರ್ತ ಪ್ರಕರಣದ ಮತ್ತೊಬ್ಬ ಸಾಕ್ಷಿ ಆಗಿದ್ದಾರಂತೆ.



