ಎರಡೂ ಬೇರೆ ಬೇರೆ. ಒಬ್ಬ ಉಗ್ರನನ್ನು ಅಪರಿಚಿತ ಬಂದೂಕುಧಾರಿಗಳು ಗುಂಡಿಟ್ಟು ಕೊಂದಿದ್ದಾರೆ. ಮತ್ತೊಬ್ಬ ಉಗ್ರನಿಗೆ ಜೈಲಲ್ಲಿ ಅದೂ ಪಾಕಿಸ್ತಾನದ ಜೈಲಿನಲ್ಲೇ ವಿಷಪ್ರಾಶನ ಮಾಡಲಾಗಿದೆ. ಬದುಕುವುದು ಅನುಮಾನ.
ಬೇಟೆ ನಂ.21 : ಭಯೋತ್ಪಾದಕ ಸಂಘಟನೆ ಜೈಷ್-ಎ-ಮೊಹಮ್ಮದ್ (ಜೆಇಎಂ) ಬೆಂಬಲಿಗ ಹಾಗೂ ವಿವಾದಾತ್ಮಕ ಇಸ್ಲಾಮಿಕ್ ಬೋಧಕ ಮೌಲಾನಾ ಶೇರ್ ಬಹದ್ದೂರ್ ಎಂಬಾತನನ್ನು ಅಪರಿಚಿತ ದುಷ್ಕರ್ಮಿಗಳು ಗುಂಡಿಕ್ಕಿ ಕೊಂದಿದ್ದಾರೆ. ಪೇಶಾವರದ ಖೈಬರ್ ಪಖ್ತುಂಖ್ವಾದಲ್ಲಿ ಈ ಘಟನೆ ನಡೆದಿದೆ . ಇದರಿಂದಾಗಿ ಭಾರತ ವಿರೋಧಿ ಉಗ್ರರು ಪಾಕಿಸ್ತಾನದಲ್ಲಿ ಹಾಗೂ ವಿದೇಶಗಳಲ್ಲಿ ನಿಗೂಢವಾಗಿ ಕೊಲೆಯಾಗುವ ಹಾಗೂ ಆಕಸ್ಮಿಕವಾಗಿ ಸಾವನ್ನಪ್ಪುವ ಸರಣಿ ಮುಂದುವರೆದಿದೆ. ಸಾವಿನ ಸಂಖ್ಯೆ 21ಕ್ಕೆ ಏರಿದೆ.
ಇನ್ನೊಂದು ಲೆಕ್ಕದ ಪ್ರಕಾರ ಸಾವಿನ ಲೆಕ್ಕ 21 ಅಲ್ಲ, 40ರ ಗಡಿಯನ್ನು ದಾಟಿದೆ. ಕೆಲವು ಉಗ್ರರನ್ನು ಅಂತಾರಾಷ್ಟ್ರೀಯ ಭಯೋತ್ಪಾದಕರ ಲಿಸ್ಟಿಗೆ ಸೇರಿಸಲು ಸಾಧ್ಯವಾಗಿಲ್ಲ. ಮೋಸ್ಟ್ ವಾಂಟೆಡ್ ಲಿಸ್ಟಿನಲ್ಲಿಲ್ಲ. ಅಂತಹವರೂ ಕೊಲೆಯಾಗಿದ್ಧಾರೆ. ನಿಗೂಢವಾಗಿ ಸತ್ತಿದ್ಧಾರೆ. ಆದರೆ ಕೆಲವು ಸುದ್ದಿಯಾಗಿಲ್ಲ ಎನ್ನುತ್ತಿವೆ ಕೆಲವು ವರದಿಗಳು.
ಈಗ ಮೃತಪಟ್ಟಿದ್ಧಾನೆ ಎನ್ನಲಾದ ಮೌಲಾನಾ ಶೇರ್ ಬಹದ್ದೂರ್‌ನನ್ನೇ ಹೋಲುವ ಮೃತ ದೇಹವನ್ನು ತೋರಿಸುವ ವಿಡಿಯೋ ಇಂಟರ್ನೆಟ್‌ನಲ್ಲಿ ಕಾಣಿಸಿಕೊಂಡಿದ್ದು, ಆತ ರಕ್ತಸಿಕ್ತ ಸ್ಥಿತಿಯಲ್ಲಿ ಹಾಸಿಗೆಯ ಮೇಲೆ ಮಲಗಿದ್ದಾನೆ. ಕೆಲವು ಪೊಲೀಸರು ಆತನ ಶವವನ್ನು ಎತ್ತುತ್ತಿರುವುದು ವಿಡಿಯೋದಲ್ಲಿ ಕಾಣುತ್ತದೆ. ಅಪರಿಚಿತರು ಪಾಯಿಂಟ್-ಬ್ಲಾಂಕ್ ರೇಂಜ್‌ನಲ್ಲಿ ಗುಂಡು ಹಾರಿಸಿದ್ದಾರೆ. ಇದರಿಂದಾಗಿ ತಕ್ಷಣದ ಸಾವು ಸಂಭವಿಸಿದೆ ಎಂದು ಆ ವರದಿಗಳು ಹೇಳಿವೆ.
ಮುಂಬೈ ದಾಳಿ ಸಂಚುಕೋರನಿಗೆ ಪಾಕ್ ಜೈಲಲ್ಲೇ ವಿಷಪ್ರಾಶನ : ಸಾಜಿದ್ ಮಿರ್. ಈತ 26/11 ಮುಂಬೈ ದಾಳಿಯ ಪ್ರಮುಖ ಸಂಚುಕೋರರಲ್ಲಿ ಒಬ್ಬ. ಸುಮಾರು 40ರ ಹರೆಯದ ಸಾಜಿದ್ ಮೀರ್ ಪಾಕಿಸ್ತಾನ ಮೂಲದ ಲಷ್ಕರ್-ಎ-ತೊಯ್ಬಾಉಗ್ರ ಸಂಘಟನೆಯ ಹಿರಿಯ ಸದಸ್ಯನಾಗಿದ್ದು, 2008ರ 26/11ಮುಂಬೈ ದಾಳಿಗೆ ಕುಮ್ಮಕ್ಕು ನೀಡಿದ್ದವನು. ಹಣಕಾಸಿನ ನೆರವು ಒದಗಿಸಿದ್ದವನು. ಅಮೆರಿಕ ಕೂಡ ಆತನ ತಲೆಗೆ 5.5 ದಶಲಕ್ಷ ಡಾಲರ್ ಬಹುಮಾನ ಘೋಷಿಸಿದೆ.
2022ರ ಜೂನ್‌ನಲ್ಲಿ, ಪಾಕಿಸ್ತಾನದ ಉಗ್ರ ನಿಗ್ರಹ ನ್ಯಾಯಾಲಯವು ಭಯೋತ್ಪಾದನೆಗೆ ಸಂಬಂಧಿಸಿದ ಹಣಕಾಸಿನ ಪ್ರಕರಣದಲ್ಲಿ ಮೀರ್‌ಗೆ 15 ವರ್ಷ ಜೈಲು ಶಿಕ್ಷೆ ವಿಧಿಸಿತ್ತು. ಅಂದಿನಿಂದ ಆತ ಜೈಲಿನಲ್ಲಿದ್ದಾನೆ. ಈ ವರ್ಷದ ಜೂನ್‌ನಲ್ಲಿ, ವಿಶ್ವಸಂಸ್ಥೆಯು ಮೀರ್‌ನನ್ನು ‘ಜಾಗತಿಕ ಭಯೋತ್ಪಾದಕʼ ಎಂದು ಘೋಷಿಸಲು ಮುಂದಾದಾಗ ಅದಕ್ಕೆ ಚೀನಾ ತಡೆ ಒಡ್ಡಿತ್ತು. ಅದಕ್ಕೆ ಭಾರತ ಅಸಮಾಧಾನ ವ್ಯಕ್ತಪಡಿಸಿತ್ತು. ಕೆಲವು ತಿಂಗಳ ಹಿಂದೆ ಮೀರ್‌ನನ್ನು ಲಾಹೋರ್ ಸೆಂಟ್ರಲ್ ಜೈಲಿನಿಂದ ಡೇರಾ ಘಾಜಿ ಖಾನ್‌ನ ಸೆಂಟ್ರಲ್ ಶಿಫ್ಟ್ ಮಾಡಲಾಗಿತ್ತು. ಅಲ್ಲಿಯೇ ಆತನಿಗೆ ವಿಷವುಣಿಸಲಾಗಿದೆ ಎನ್ನಲಾಗಿದೆ. ಪಾಕಿಸ್ತಾನಿ ಅಧಿಕಾರಿಗಳು ಈ ಹಿಂದೆ ಮೀರ್ ಸತ್ತಿದ್ದಾನೆ ಎಂದು ಹೇಳಿದ್ದರು.



