ಜೆಡಿಎಸ್ ರಾಜ್ಯಾಧ್ಯಕ್ಷರೂ ಆಗಿರುವ ಕುಮಾರಸ್ವಾಮಿ ಅವರಿಗೆ ದೊಡ್ಡ ತಲೆನೋವಾಗಿರುವುದು ಅವರದ್ದೇ ಪಕ್ಷದ ನಾಯಕ ಜಿಟಿ ದೇವೇಗೌಡ. ಮೈಸೂರು ಭಾಗದಲ್ಲಿ ಜಿಟಿ ದೇವೇಗೌಡರ ಶಕ್ತಿಯ ಪರಿಚಯ ಕುಮಾರಸ್ವಾಮಿ ಅವರಿಗೆ ಇದೆ. ಕಳೆದ ಚುನಾವಣೆಯಲ್ಲಿ ಸಿದ್ದರಾಮಯ್ಯ ಅವರನ್ನು ಸೋಲಿಸಿದ್ದ ಜಿಟಿ ದೇವೇಗೌಡರ ತಾಕತ್ತು ಸಿದ್ದರಾಮಯ್ಯ ಅವರಿಗೂ ಗೊತ್ತಿದೆ. ಆದರೆ ಜೆಡಿಎಸ್ ಪಕ್ಷದ ಶಕ್ತಿಯಾಗಬೇಕಿದ್ದ ಜಿಟಿಡಿ, ಕುಮಾರಸ್ವಾಮಿಗೆ ತಲೆನೋವಾಗಿದ್ದಾರೆ. ಹಾಗಂತ ಇದಕ್ಕೆಲ್ಲ ಜಿಟಿ ದೇವೇಗೌಡರೇ ಕಾರಣ ಎಂದು ಹೇಳುವುದಕ್ಕೆ ಆಗುವುದಿಲ್ಲ. ಕುಮಾರಸ್ವಾಮಿ ಅವರು ಮಾಡಿಕೊಂಡ ತಪ್ಪುಗಳೂ ಇವೆ.
ಕುಮಾರಸ್ವಾಮಿ ಆಪ್ತ ಸಾರಾ ಮಹೇಶ್ ಜಿಟಿಡಿ ವಿರುದ್ಧ ಗುಡುಗು : ಜೆಡಿಎಸ್ ನಾಯಕರಾದ ಜಿಟಿ ದೇವೇಗೌಡ ಮತ್ತು ಸಾ.ರಾ ಮಹೇಶ್ ನಡುವಿನ ವಾಕ್ಸಮರ ಹೊಸದೇನಲ್ಲ. ಈ ಹಿಂದೆಯೂ ಒಮ್ಮೆ ಆಗಿತ್ತು. ಇದೀಗ ಜಿಟಿ ದೇವೇಗೌಡ, ಎಚ್.ಡಿ.ದೇವೆಗೌಡರು ನನ್ನನ್ನು ಉಪಚುನಾವಣೆ ಪ್ರಚಾರಕ್ಕೆ ಕರೆದಿದ್ದೇನೆ ಎಂದು ಹೇಳಲಿ. ನಾನು ಅಂದೆ ರಾಜಕಾರಣವನ್ನ ಬಿಟ್ಟುಬಿಡುತ್ತೇನೆ. ಸಾ.ರಾ.ಮಹೇಶ್ ಸುಮ್ಮನೆ ಸುಳ್ಳು ಹೇಳುವುದನ್ನು ನಿಲ್ಲಿಸಬೇಕು. ಸುಳ್ಳು ಹೇಳಿಕೊಂಡು ಚಾಮುಂಡಿಬೆಟ್ಟಕ್ಕೆ ಬಾ ಅಲ್ಲಿಗೆ ಬಾ ಅಂದರೆ ಹೋಗಲು ಆಗುತ್ತದ. ಈ ಹಿಂದೆ ವಿಶ್ವನಾಥ್ ಜೊತೆ ಚಾಮುಂಡಿಬೆಟ್ಟಕ್ಕೆ ಹೋಗಿ ಅವರ ಕಥೆ ಏನಾಯಿತು. ಆ ಕಥೆ ನನಗು ಆಗಬೇಕಾ ಎಂದು ಖಾರವಾಗಿ ಮಾತನಾಡಿದ್ದಾರೆ.
ಕುಮಾರಸ್ವಾಮಿ ಮಾಡಿದ ತಪ್ಪೇನು..?
ಸಾರಾ ಮಹೇಶ್-ಜಿಟಿ ದೇವೇಗೌಡ ವಿಚಾರದಲ್ಲಿ ಕುಮಾರಸ್ವಾಮಿ ಎಲ್ಲ ಸರಿ ಹೋಗುತ್ತೆ ಬಿಡು ಎಂಬಂತೆ ಮೌನವಾಗಿದ್ದರು. ಸ್ವಲ್ಪ ಅಡ್ಜಸ್ಟ್ ಮಾಡ್ಕೊಂಡು ಹೋಗಿ ಬ್ರದರ್ ಎನ್ನುತ್ತಿದ್ದರೇ ಹೊರತು, ಸಾರಾ ಮಹೇಶ್ ಅವರಿಗೆ ಬುದ್ದಿ ಹೇಳುವ ಪ್ರಯತ್ನ ಮಾಡಲಿಲ್ಲ. ಜಿಟಿ ದೇವೇಗೌಡ ಅವರು ಜೆಡಿಎಸ್ಸಿನಲ್ಲಿ ಕುಮಾರಸ್ವಾಮಿ ಅವರಿಗಿಂತಲೂ ಹಿರಿಯ ನಾಯಕ ಎನ್ನುವುದನ್ನು ಅರ್ಥ ಮಾಡಿಕೊಳ್ಳಲಿಲ್ಲ. ಸಾರಾ ಮಹೇಶ್ ಅವರನ್ನು ಕುಮಾರಸ್ವಾಮಿ ತಮ್ಮ ಮಾತು ಕೇಳದವರನ್ನು ಹಣಿಯಲು ಬಳಸುತ್ತಿದ್ದಾರೆ ಎಂಬ ಮಾತುಗಳಿವೆ.
ಬಿಜೆಪಿ-ಜೆಡಿಎಸ್ ಮೈತ್ರಿಯಲ್ಲಿ ಜಿಟಿಡಿ ಸೈಡಿಗೆ ಹೋಗಿದ್ದು : ಇದು ಜಿಟಿ ದೇವೇಗೌಡರು ಆಕ್ರೋಶಗೊಳ್ಳಲು ಪ್ರಮುಖ ಕಾರಣ ಎನ್ನಲಾಗುತ್ತಿದೆ. ಏಕೆಂದರೆ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಾಗ ಕುಮಾರಸ್ವಾಮಿ, ಈ ಹಾದಿಯಲ್ಲಿ ಮೋದಿ, ಅಮಿತ್ ಶಾ, ಜೆಪಿ ನಡ್ಡಾ ಮೊದಲಾದವರನ್ನು ಭೇಟಿಯಾದಾಗ ಜೊತೆಯಲ್ಲಿ ಕರೆದುಕೊಂಡು ಹೋಗಿದ್ದು ಮಗ ನಿಖಿಲ್ ಕುಮಾರಸ್ವಾಮಿ ಅವರನ್ನ. ಆಗ ಮತ್ತು ಈಗಲೂ ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷರಾಗಿರುವ ಜಿಟಿ ದೇವೇಗೌಡರನ್ನು ಬಿಜೆಪಿಯ ಪ್ರಮುಖ ನಾಯಕರಿಂದ ದೂರವೇ ಇಟ್ಟರು ಕುಮಾರಸ್ವಾಮಿ. ದೆಹಲಿಯಲ್ಲಿಯೇ ಇದ್ದರೂ, ಜೊತೆಯಲ್ಲಿಯೇ ಇದ್ದರೂ ನಿಖಿಲ್ ಅವರಿಗೆ ಪ್ರಾಮುಖ್ಯತೆ ಕೊಟ್ಟರೇ ಹೊರತು, ತಮಗೆ ಕೊಡಲಿಲ್ಲ ಎಂಬ ನೋವು ಜಿಟಿಡಿ ಅವರಿಗೆ ಇದೆ.
ಇನ್ನು ಮುಡಾ ಹಗರಣದಲ್ಲಿ ಎಲ್ಲರೂ ತಪ್ಪು ಮಾಡ್ತಾರೆ, ಕುಮಾರಸ್ವಾಮಿ ವಿರುದ್ಧವೂ ಕೇಸ್ ಇವೆ. ನನ್ನ ವಿರುದ್ಧಾನೂ ಇದೆ. ಎಲ್ಲರೂ ರಾಜೀನಾಮೆ ಕೊಡುವುದಕ್ಕೆ ಆಗಲ್ಲ ಎಂಬ ಮಾತಿಗೆ ಕುಮಾರಸ್ವಾಮಿ, ಮಾಧ್ಯಮಗಳ ಮೂಲಕವೇ ಉತ್ತರ ಕೊಟ್ಟರು.ರಾಜ್ಯಾಧ್ಯಕ್ಷರಾಗಿ, ಹಿಂದೆ ಮಾಡಿದ್ದ ತಪ್ಪುಗಳು ಗೊತ್ತಿದ್ದೂ, ಕುಮಾರಸ್ವಾಮಿ ವೈಯಕ್ತಿಕವಾಗಿ ಮಾತನಾಡಲಿಲ್ಲ. ಬದಲಿಗೆ ಸಣ್ಣ ಬೆಂಕಿಯನ್ನು ಧಗಧಗಿಸುವಂತ ಮಾಡಿಕೊಂಡರು.
ಇನ್ನು ಜೆಡಿಎಸ್‌ನ ಕೆಲವು ಶಾಸಕರು ಕಾಂಗ್ರೆಸ್ಸಿಗೆ ಹೋಗಲು ಸಿದ್ದರಿದ್ದಾರೆ. ವಿಶೇಷವೇನು ಗೊತ್ತೇ.. ಜೆಡಿಎಸ್‌ನಿಂದ ಕಾಂಗ್ರೆಸ್ಸಿಗೆ ಹೋಗಿರುವ ಶಾಸಕರ ಸಂಖ್ಯೆ ೪೦ರ ಗಡಿ ದಾಟಿದೆ. ಆ ಎಲ್ಲರೂ ಜೆಡಿಎಸ್‌ನಲ್ಲಿಯೇ ಇದ್ದರೆ, ಇಷ್ಟು ಹೊತ್ತಿಗೆ ಸ್ವತಂತ್ರವಾಗಿ ಜೆಡಿಎಸ್ ರಾಜ್ಯದಲ್ಲಿ ಸರ್ಕಾರ ರಚನೆ ಮಾಡಬಹುದಿತ್ತು.



