ಬಿಜೆಪಿಯಲ್ಲೀಗ ರೆಬಲ್ ಸ್ಟಾರ್`ಗಳದ್ದೇ ದರ್ಬಾರ್. ಅದರಲ್ಲಿಯೂ ರೇಣುಕಾಚಾರ್ಯ. ರಣರಣರಣರಂಗವನ್ನೇ ಸೃಷ್ಟಿಸಿದ್ದಾರೆ. ಅವರು ಪ್ರಶ್ನಿಸಿರುವುದು ಒಬ್ಬಿಬ್ಬರನ್ನಲ್ಲ. ಪಕ್ಷದ ಅತಿರಥ ನಾಯಕರು, ಅಧ್ಯಕ್ಷರು, ಪ್ರಣಾಳಿಕೆ ಸಮಿತಿ, ಕಟೀಲ್, ಎಲೆಕ್ಷನ್ನಿಗೇ ನಿಂತು ಗೊತ್ತಿಲ್ಲದವರು ಎಲೆಕ್ಷನ್ ತಂತ್ರಗಾರಿಕೆ ರೂಪಿಸಿದ್ದು, ಸುಧಾಕರ್.. ಹೀಗೆ ಎಲ್ಲರನ್ನೂ ತರಾಟೆಗೆ ತೆಗೆದುಕೊಂಡಿದ್ದಾರೆ. ಗ್ರಾಮ ಪಂಚಾಯಿತಿ ಚುನಾವಣೆ ಗೆಲ್ಲದವರು ನಮಗೆ ಪಾಠ ಮಾಡ್ತಾರೆ. ತಮಿಳುನಾಡಿನಿಂದ ಅಣ್ಣಾಮಲೈ ಬಂದು ನಮಗೆ ಮಾರ್ಗದರ್ಶನ ಕೊಡ್ತಾರೆ. ಏನು ಅಣ್ಣಾಮಲೈ ದೊಡ್ಡ ಹೀರೋನಾ? ಪ್ರಧಾನಿ ನರೇಂದ್ರ ಮೋದಿ ಬಂದು ಹೋದ ಮೇಲೆ ಅದನ್ನು ಮತಗಳಾಗಿ ಪರಿವರ್ತನೆ ಮಾಡುವ ಮುಖಗಳು ಬೇಕಲ್ವಾ?
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಬಗ್ಗೆ ಗೌರವ ಇದೆ. ಅವರು ಪ್ರವಾಸ ಮಾಡಿದ್ದಾರೆ ನಿಜ. ಆದರೆ, ಅದು ಮತಗಳಾಗಿ ಪರಿವರ್ತನೆ ಆಗಲಿಲ್ಲ. ಸೋಲಿನ ಬಳಿಕ ರಾಜ್ಯಾಧ್ಯಕ್ಷರು ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಡಬೇಕಿತ್ತು. ವ್ಯವಸ್ಥೆ ಸರಿಪಡಿಸಿಕೊಳ್ಳಿ, ಅವಲೋಕನ ಮಾಡಿಕೊಳ್ಳಿ. ಕಾರ್ಯಕರ್ತರನ್ನು ಬೆದರಿಸುವುದು ಬಿಡಿ ಎಂದು ನಳಿನ್ ಕುಮಾರ್ ಕಟೀಲ್ ಅವರಿಗೆ ಎಂಪಿ ರೇಣುಕಾಚಾರ್ಯ ಸಲಹೆ ನೀಡಿದ್ದಾರೆ. ಈ ಮೂಲಕ ಬಿಜೆಪಿಯ ಅಂತರ್ಯುದ್ಧವನ್ನು ಮತ್ತೊಂದು ಹಂತಕ್ಕೆ ಹೊನ್ನಾಳಿಯ ಶಾಸಕ ತೆಗೆದುಕೊಂಡು ಹೋಗಿದ್ದಾರೆ.
ಬಸವರಾಜ ಬೊಮ್ಮಾಯಿಯವರು ಎಲೆಕ್ಷನ್ ಸೋತ ನಂತರ ಸುಧಾಕರ್ ಮನೆಗೇ ಹೋದರು. ನನ್ನಂತಹವರು ಕಾಣಲೇ ಇಲ್ಲ ಎನ್ನುವ ಮೂಲಕ ಬೊಮ್ಮಾಯಿಯವರನ್ನೂ ತರಾಟೆಗೆ ತೆಗೆದುಕೊಂಡಿದ್ದಾರೆ. ವಿಜಯೇಂದ್ರ ಯಡಿಯೂರಪ್ಪ ರಾಜ್ಯಾಧ್ಯಕ್ಷರಾಗಲು ಉತ್ತಮ ಅಭ್ಯರ್ಥಿ ಎನ್ನುವ ಸಂದೇಶವನ್ನೂ ಕೊಟ್ಟಿದ್ದಾರೆ. ಕಾರ್ಯಕರ್ತರನ್ನು ಬೆದರಿಸುವ ಕೆಲಸ ಮಾಡಬೇಡಿ ಎಂದು ಕಟೀಲ್ ಅವರಿಗೆ ಹೇಳಿದರು. ಸುದ್ದಿಗೋಷ್ಠಿ ಮುಗಿಯುವ ಹೊತ್ತಿಗೆ ರೇಣುಕಾಚಾರ್ಯ ಅವರಿಗೆ ನೋಟಿಸ್ ತಲುಪಿದೆ.
ಇದೆಲ್ಲ ಆದ ಮೇಲೆ ಕಾರ್ಯಕರ್ತರು ಕೇಳುತ್ತಿರುವ ಪ್ರಶ್ನೆ. ಬಿಜೆಪಿಯಲ್ಲಿ ನೋಟಿಸ್ ಕೊಡುವುದು ಯಡಿಯೂರಪ್ಪ ಪರ ಇರುವವರಿಗೆ ಮಾತ್ರವಾ ಎನ್ನುವುದು. ಏಕೆಂದರೆ ಈ ಹಿಂದೆ ಬಸನಗೌಡ ಪಾಟೀಲ್ ಯತ್ನಾಳ್ ಬಾಯಿಗೆ ಬಂದಂತೆ ಟೀಕಿಸಿದ್ದರು. ಅವರಿಗೆ ನೋಟಿಸ್ ಕೊಡಲಿಲ್ಲ. ನೋಟಿಸ್ ಕೊಟ್ಟಿದ್ದೇವೆ ಎಂದು ಬಿಜೆಪಿ ಅಧ್ಯಕ್ಷರೂ, ನಂಗ್ ನೋಟೀಸ್ ಕೊಡೋ ಮಗಾ ಯಾವನಂವಾ ಎಂಬ ಯತ್ನಾಳ್ ಉತ್ತರವೂ ಸೇರಿತ್ತು. ಕೊನೆಗೂ ನೋಟಿಸ್ ರಹಸ್ಯ ಗೊತ್ತಾಗಲೇ ಇಲ್ಲ. ಸಿಟಿ ರವಿ, ಪ್ರತಾಪ್ ಸಿಂಹ, ನಿರಾಣಿ, ವಿ ಸೋಮಣ್ಣ.. ಎಲ್ಲರಿಗೂ ನೋಟೀಸ್ ಕೊಟ್ಟಿದ್ದಾರಂತೆ. ಆದರೆ, ರೇಣುಕಾಚಾರ್ಯ ನೋಟಿಸ್ ಮಾತ್ರ ಮಾಧ್ಯಮಗಳಿಗೆ ಲಭ್ಯವಿದೆ. ಉಳಿದವರು ಎಂದಿನಂತೆ ನಂಗೆ ನೋಟಿಸ್ ಕೊಡೋವ್ರು ಯಾರಿದ್ದಾರೆ ಎನ್ನುತ್ತಿದ್ದಾರೆ. ಇಷ್ಟೆಲ್ಲ ಆದ ಮೇಲೆ ಕಟ್ಟಕಡೆಗೆ ಉಳಿಯುವ ಪ್ರಶ್ನೆ.. ಹೀಗೂ ಉಂಟೆ.. ಬಿಜೆಪಿಯಲ್ಲಿನ ಉತ್ತರ ಹೀಗೂ ಉಂಟು.



