ಪ್ರಜ್ವಲ್ ರೇವಣ್ಣ ಕೊನೆಗೂ ವಿಡಿಯೋಗಳಲ್ಲಿ ಪ್ರತ್ಯಕ್ಷವಾಗಿದ್ದಾನೆ. ಮೇ 31ಕ್ಕೆ ಬರೋದಾಗಿ ಹೇಳಿದ್ಧಾನೆ. ದೇವೇಗೌಡರ ಬಹಿರಂಗ ಪತ್ರ, ಕುಟುಂಬದಿಂದ ಬಹಿಷ್ಕಾರದ ಎಚ್ಚರಿಕೆ, ಕುಮಾರಸ್ವಾಮಿಯವರ ಮನವಿಯ ಜೊತೆ.. ರಿಯಲ್ ಕಾರಣ ಏನು ಗೊತ್ತೇ.. ಮೇ 31ಕ್ಕೆ ರಾಜತಾಂತ್ರಿಕ ವೀಸಾಗೆ ಇರುವ ಸವಲತ್ತುಗಳು ಶಕ್ತಿ ಕಳೆದುಕೊಳ್ಳುತ್ತವೆ. ರಾಜತಾಂತ್ರಿಕ ವೀಸಾ ಅವಧಿ ಇನ್ನೂ 6 ತಿಂಗಳು ಇದೆಯಾದರೂ.. ಕೊನೆಯ 6 ತಿಂಗಳು ಸರ್ಕಾರದ ಪೂರ್ವಾನುಮತಿ ಪಡೆದೇ ವಿದೇಶಗಳಿಗೆ ಹೋಗಬೇಕು. ಅದೂ ಕೂಡಾ ಅನಿವಾರ್ಯ ಸಂದರ್ಭಗಳಲ್ಲಿ ಮಾತ್ರ. ಮೇ 31ರ ನಂತರವೂ ವಿದೇಶದಲ್ಲಿಯೇ ಇದ್ದರೆ.. ಅದೇ ರಾಜತಾಂತ್ರಿಕ ವೀಸಾ ಶಾಪವಾಗಿ ಕಾಡಲಿದೆ. ಇದರ ನಡುವೆ ಪ್ರಜ್ವಲ್ ರೇವಣ್ಣ ಅವರ ತಾಯಿಗೂ ಬಂಧನದ ಭೀತಿ ಎದುರಾಗಿದೆ.
ಸಂಸದ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋದ ಸಂತ್ರಸ್ತೆ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಶಾಸಕ ಹಾಗೂ ಜೆಡಿಎಸ್ ಶಾಸಕ ಎಚ್.ಡಿ.ರೇವಣ್ಣ ಅವರ ಪತ್ನಿ ಭವಾನಿ ರೇವಣ್ಣ ಅವರಿಗೆ ಬಂಧನ ಭೀತಿ ಎದುರಾಗಿರುವ ಹಿನ್ನೆಲೆಯಲ್ಲಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ್ದಾರೆ.
ಎಚ್.ಡಿ.ರೇವಣ್ಣ ಅವರಿಗೆ ಜಾಮೀನು ಸಿಕ್ಕ ಬೆನ್ನಲ್ಲೇ ಭವಾನಿ ರೇವಣ್ಣ ಅವರಿಗೂ ಸಂಕಷ್ಟ ಎದುರಾಗಿದೆ. ಎಸ್‌ಐಟಿ ಅಧಿಕಾರಿಗಳು ವಿಚಾರಣೆಗೆ ಹಾಜರಾಗುವಂತೆ ನೊಟೀಸ್ ಜಾರಿ ಮಾಡಿರುವ ಹಿನ್ನೆಲೆಯಲ್ಲಿ ಭವಾನಿ ರೇವಣ್ಣ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆಯನ್ನು ನ್ಯಾಯಾಲಯವು ಮಂಗಳವಾರಕ್ಕೆ ಮುಂದೂಡಿದೆ.
ಪ್ರಕರಣದಲ್ಲಿ ಎಚ್.ಡಿ.ರೇವಣ್ಣ ಮತ್ತು ಸತೀಶ್ ಬಾಬು ಆರೋಪಿಗಳಾಗಿದ್ದಾರೆ. ರೇವಣ್ಣ ಜಾಮೀನು ಪಡೆದುಕೊಂಡರೆ, ಸತೀಶ್ ಬಾಬು ಇನ್ನೂ ಬಂಧನದಲ್ಲಿದ್ದಾರೆ. ಸತೀಶ್ ಬಾಬು ತಮ್ಮ ವಿಚಾರಣೆ ವೇಳೆ ಭವಾನಿ ರೇವಣ್ಣ ಹೆಸರು ಪ್ರಸ್ತಾಪಿಸಿದ್ದಾರೆ ಎಂದು ಹೇಳಲಾಗಿದೆ. ಅಲ್ಲದೇ, ಆತನ ಮೊಬೈಲ್ ವಶಕ್ಕೆ ಪಡೆದು ಕಾಲ್ ಡೀಟೆಲ್ಸ್ ಪರಿಶೀಲನೆ ನಡೆಸಿದಾಗ ಕೆಲವೊಂದು ಮಾಹಿತಿ ಲಭ್ಯವಾಗಿದೆ. ಈ ಹಿನ್ನೆಲೆಯಲ್ಲಿ ಹೆಚ್ಚಿನ ಮಾಹಿತಿಗಾಗಿ ಭವಾನಿ ರೇವಣ್ಣ ಅವರನ್ನು ವಿಚಾರಣೆಗೊಳಪಡಿಸಲು ನೋಟಿಸ್ ನೀಡಲಾಗಿದೆ. ವಿಚಾರಣೆ ವೇಳೆ ಬಂಧಿಸುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಭವಾನಿ ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ್ದಾರೆ.
ಇದರ ನಡುವೆ ಪ್ರಕರಣ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ಭವಾನಿ ರೇವಣ್ಣ ಅವರ ಕಾರು ಚಾಲಕ ಅಜಿತ್‌ಗೆ ಎರಡು ಬಾರಿ ಎಸ್‌ಐಟಿ ನೋಟಿಸ್ ಜಾರಿಗೊಳಿಸಿತ್ತು. ಆದರೆ ಈ ನೋಟಿಸ್‌ಗೆ ಪ್ರತಿಕ್ರಿಯಿಸದೆ ನಾಪತ್ತೆಯಾಗಿರುವ ಅಜಿತ್ ಪತ್ತೆಗೆ ಹಾಸನ, ಮಂಡ್ಯ ಹಾಗೂ ಮೈಸೂರು ಸೇರಿದಂತೆ ಇತರೆಡೆ ಎಸ್‌ಐಟಿ ಹುಡುಕಾಟ ನಡೆಸಿದೆ.
ಮೈಸೂರು ಜಿಲ್ಲೆ ಕೆ.ಆರ್.ನಗರ ತಾಲೂಕಿನ ಸಂತ್ರಸ್ತೆ ಅಪಹರಣ ಪ್ರಕರಣದಲ್ಲಿ ಅಜಿತ್ ಪಾತ್ರವಹಿಸಿರುವ ಆರೋಪ ಕೇಳಿ ಬಂದಿದೆ. ಇದೇ ಪ್ರಕರಣದಲ್ಲಿ ಮಾಜಿ ಸಚಿವ ರೇವಣ್ಣ ಬಂಧನದ ಬಳಿಕ ಅಜಿತ್ ತಲೆಮರೆಸಿಕೊಂಡಿದ್ದಾರೆ ಎನ್ನಲಾಗಿದೆ. ಹೀಗಾಗಿ ವಿಚಾರಣೆಗೆ ಬರುವಂತೆ ಹೊಳೆನರಸೀಪುರ ತಾಲೂಕಿನಲ್ಲಿರುವ ಅಜಿತ್ ಮನೆಗೆ ತೆರಳಿ ಎಸ್‌ಐಟಿ ಅಧಿಕಾರಿಗಳು ನೋಟಿಸ್ ಅಂಟಿಸಿದ್ದರು. ಆದರೆ ವಿಚಾರಣೆಗೆ ಮಾತ್ರ ಕಾರು ಚಾಲಕ ಆಗಮಿಸದೆ ನಾಪತ್ತೆಯಾಗಿದ್ದಾರೆ.
ಇದಕ್ಕೂ ಮುನ್ನ ಅಪಹರಣ ಪ್ರಕರಣ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ಎಸ್‌ಐಟಿ ನೀಡಿದ್ದ ನೋಟಿಸ್‌ಗಳಿಗೆ ಭವಾನಿ ರೇವಣ್ಣರವರು ಸಹ ಉತ್ತರಿಸಿರಲಿಲ್ಲ. ಅಪಹರಣ ಪ್ರಕರಣದ ಎಫ್‌ಐಆರ್‌ನಲ್ಲಿ ಭವಾನಿ ರೇವಣ್ಣರವರ ಹೆಸರು ಕೂಡಾ ಉಲ್ಲೇಖವಾಗಿತ್ತು. ಈ ಹಿನ್ನಲೆಯಲ್ಲಿ ವಿಚಾರಣೆಗೆ ಹಾಜರಾಗುವಂತೆ ಹೊಳೇನರಸೀಪುರದಲ್ಲಿ ಮನೆಗೆ ತೆರಳಿ ಭವಾನಿ ಅವರಿಗೆ ಎರಡು ಬಾರಿ ಅಧಿಕಾರಿಗಳು ನೋಟಿಸ್ ನೀಡಿದ್ದರು. ಈಗ ಭವಾನಿ ರೇವಣ್ಣ ಅವರು ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ಧಾರೆ. ನಿರೀಕ್ಷಣಾ ಜಾಮೀನು ಸಿಕ್ಕದೇ ಹೋದರೆ.. ಎಸ್ʻಐಟಿಯವರು ಅರೆಸ್ಟ್ ಮಾಡಿ ವಿಚಾರಣೆ ಮಾಡಬಹುದು ಅಥವಾ ಅರೆಸ್ಟ್ ಮಾಡದೆಯೂ ವಿಚಾರಣೆ ಮಾಡಬಹುದು.



