ನಾವು ನಮ್ಮ ಜಮೀನಿನ ಮಾಲೀಕರು ನಾವೇನಾ ಎಂದು ಪರೀಕ್ಷೆ ಮಾಡಿಸಿಕೊಳ್ಳಬೇಕಾದ ಸಮಯ ಬಂದಿದೆ. ದಿನಕ್ಕೊಮ್ಮೆ ಪರಿಶೀಲನೆ ಮಾಡಬೇಕು. ಖರ್ಚಾಗುವುದು ಒಂದಿಷ್ಟು ಇಂಟರ್ ನೆಟ್, ಅಷ್ಟೇ. ಅದಕ್ಕೂ ಜುಗ್ಗತನ ತೋರಿಸಿದರೆ ಯಾವಾಗ ಯಾವ ಕ್ಷಣದಲ್ಲಿ ರೈತರ ಜಮೀನುಗಳಲ್ಲಿ ವಕ್ಫ್ ಬೋರ್ಡ್ ಹೆಸರು ಕಾಣಿಸಿಕೊಳ್ಳುತ್ತೋ.. ಗೊತ್ತಿಲ್ಲ. ದಯವಿಟ್ಟು ನಿಮ್ಮ ನಿಮ್ಮ ಆಸ್ತಿಗಳ ವಾರಸುದಾರರು ನೀವೇನಾ ಎಂದು ಪರಿಶೀಲಿಸಿಕೊಳ್ಳಿ. ಇಂಥಾದ್ದೊಂದು ಮಾತು ಹೇಳ್ತಿರೋದು ಬೇರಾರೋ ಅಲ್ಲ, ಜನರೇ. ಪ್ರತಿದಿನವೂ ತಮ್ಮ ಪಹಣಿ ಪರಿಶೀಲನೆ ಮಾಡಿಸಿಕೊಳ್ತಿದ್ದಾರೆ. ಏಕೆಂದರೆ,, ರೈತರ ಪಹಣಿಯಲ್ಲಿ ದಿಢೀರ್ ಎಂದು ವಕ್ಫ್ ಬೋರ್ಡ್ ಮಾಲೀಕತ್ವ ಪ್ರತ್ಯಕ್ಷವಾಗಿರೋದು ವಿಜಯಪುರದ ಹೊನವಾಡು ಗ್ರಾಮದಲ್ಲಷ್ಟೇ ಅಲ್ಲ, ಧಾರವಾಡದ ಉಪ್ಪಿನಗೇರಿಯಲ್ಲೂ ಹೀಗಾಗಿದೆ. ಯಾದಗಿರಿಯಲ್ಲೂ ಹೀಗಾಗಿದೆ.
ಧಾರವಾಡದ ಉಪ್ಪಿನಗೇರಿಯಲ್ಲಿ..
ಧಾರವಾಡದ ಉಪ್ಪಿನಬೆಟಗೇರಿ ಗ್ರಾಮದ ಐದಾರು ರೈತರ ಜಮೀನು ಪಹಣಿ ಪತ್ರ ಕಾಲಂ 11ರಲ್ಲೂ ವಕ್ಫ್ ಮಂಡಳಿ ಹೆಸರು ಬಂದಿದೆ. ವಿಜಯಪುರ ಗದ್ದಲದ ಬಳಿಕ ಪರೀಕ್ಷೆ ಮಾಡಿದವರಿಗೆ ತಮ್ಮ ಜಮೀನಿನ ಪಹಣಿಯಲ್ಲಿಯೂ ಇದ್ದಕ್ಕಿದ್ದಂತೆ ವಕ್ಫ್ ಬೋರ್ಡ್ ಹೆಸರು ಇರೋದು ನೋಡಿ ರೈತರು ಆಘಾತಗೊಂಡಿದ್ದಾರೆ. 2021, 2022 ಹಾಗೂ 2023ರಲ್ಲಿ ರೈತರ ಜಮೀನುಗಳಲ್ಲಿ ವಕ್ಫ್ ಆಸ್ತಿ ಎಂದು ನಮೂದಾಗಿದೆ. ಆದರೆ, 2018-2019ರ ಪಹಣಿ ಪತ್ರಿಕೆಯಲ್ಲಿ ವಕ್ಫ್ ಹೆಸರು ಉಲ್ಲೇಖವಿಲ್ಲ. ಇದು 2021, 2022ರಲ್ಲಿಯೇ ಆಗಿದೆಯಾ.. ಅಥವಾ ಇತ್ತೀಚೆಗೆ ಆಗಿದೆಯಾ ಎಂಬ ಬಗ್ಗೆಯೂ ಮಾಹಿತಿ ಇಲ್ಲ. ಏಕೆಂದರೆ ಎರಡು ವರ್ಷಗಳಲ್ಲಿ ಅವರು ಪಹಣಿ ತೆಗೆದುಕೊಂಡಿಲ್ಲ. ಪರಿಶೀಲನೆ ಕೂಡ ಮಾಡಿಲ್ಲ.
ಇದು ಪೂರ್ವಜರಿಂದ ಬಂದ ಆಸ್ತಿ. ಏಕಾಏಕಿ ವಕ್ಫ್ ಆಸ್ತಿ ಎಂದು ನಮೂದಿಸಿದ್ದ ಹೇಗೆ? ಇದು ಜಮೀನು ಕಬಳಿಸುವ ಹುನ್ನಾರ ನಡೆದಿದೆ ಎನ್ನುವುದು ಗ್ರಾಮಸ್ಥರ ಆರೋಪ. ಉಪ್ಪಿನಬೆಟಗೇರಿಯ ಸುಮಾರು 20 ಎಕರೆ ಹಾಗೂ ಜಿಲ್ಲೆಯ 1,500 ಜಮೀನಿನಲ್ಲಿ ವಕ್ಫ್ ಬೋರ್ಡ್ ಎಂದು ದಾಖಲಾಗಿದೆ ಎನ್ನಲಾಗುತ್ತಿದೆ.
ಯಾದಗಿರಿಯಲ್ಲಿ..
ಯಾದಗಿರಿ ಜಿಲ್ಲೆಯಲ್ಲಿ 1,440 ರೈತರ ಜಮೀನುಗಳ ಪಹಣಿ ಕಾಲಂ 11ರಲ್ಲಿ ದಿಢೀರ್ ಆಗಿ ‘ವಕ್ಫ್ ಮಂಡಳಿ ಬೆಂಗಳೂರು’ ಎಂದು ನಮೂದಿಸಲಾಗಿದೆ. ರೈಲ್ವೆ ಯೋಜನೆಗಾಗಿ, ಹೆದ್ದಾರಿ ಹಾಗೂ ಕೈಗಾರಿಕಾ ಪ್ರದೇಶಕ್ಕೆಂದು ಭೂಮಿ ಸ್ವಾಧೀನ ಮಾಡಿಕೊಂಡ ಈ ಜಾಗದ ಮಾಲೀಕರಿಗೆ ಪರಿಹಾರ ನೀಡುವಾಗ ‘ವಕ್ಫ್ ಆಸ್ತಿ’ ಎಂದು ಪಹಣಿಯಲ್ಲಿ ನಮೂದಾಗಿರುವುದು ಗೊತ್ತಾಗಿದೆ. ರೈತರು ಗದಗ-ವಾಡಿ ರೈಲ್ವೆ ಯೋಜನೆಗೆಂದು ಜಮೀನು ಬಿಟ್ಟುಕೊಟ್ಟಿದ್ದಾರೆ. ಆದರೆ ವಕ್ಫ್ ಬೋರ್ಡ್ ಮಂಡಳಿ ಅಧಿಕಾರಿಗಳು ಇದು ತಮ್ಮ ಆಸ್ತಿ ಎಂದು ವಿಶೇಷ ಭೂಸ್ವಾಧೀನ ಅಧಿಕಾರಿಗಳಿಗೆ, ಬ್ಯಾಂಕುಗಳಿಗೆ ಪತ್ರ ಬರೆದು ರೈತರಿಗೆ ನೀಡಬೇಕಿರುವ ಪರಿಹಾರಕ್ಕೆ ಅಡ್ಡಿ ಮಾಡಿದ್ದಾರೆ. ಇದು ರಾಜ್ಯ ರೈತ ಸಂಘ ಹಾಗೂ ರೈತ ಸೇನೆ ರಾಜ್ಯ ಉಪಾಧ್ಯಕ್ಷ ಲಕ್ಷ್ಮಿಕಾಂತ ಎ. ಪಾಟೀಲ್ ಮದ್ದರಕಿ ಆರೋಪ.
ಅದೇ ರೀತಿ ಸೂರತ್-ಚೆನ್ನೈ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ವೇಳೆ ಭೂಸ್ವಾಧೀನಗೊಂಡ ನೂರಾರು ಎಕರೆ ಜಮೀನಿಗೆ ಪರಿಹಾರ ಕೊಡದಂತೆ ವಕ್ಫ್ ಮಂಡಳಿ ಭೂಸ್ವಾಧೀನಾಧಿಕಾರಿಗಳಿಗೆ ಪತ್ರ ಬರೆದಿದೆ. ಕಡೇಚೂರು ಬಾಡಿಯಾಳ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ಭೂಸ್ವಾಧೀನ ಮಾಡಿಕೊಂಡ ಕೆಲ ರೈತರ ಜಮೀನಿಗೆ ನೀಡಬೇಕಿದ್ದ ಪರಿಹಾರದ ವಿಚಾರದಲ್ಲೂ ಇದೇ ರೀತಿ ವಕ್ಫ್ ಮಂಡಳಿ ಮಧ್ಯಪ್ರವೇಶಿಸಿದೆ. ಹೀಗೆ ಯಾದಗಿರಿ ಜಿಲ್ಲೆಯೊಂದರಲ್ಲೇ ಒಟ್ಟು 1,440 ಆಸ್ತಿಗಳಲ್ಲಿ ‘ವಕ್ಫ್ ಬೋರ್ಡ್ ಬೆಂಗಳೂರು’ ಎಂದು ಪಹಣಿಯ ಕಲಂ ನಂ.11ರಲ್ಲಿ ದಿಢೀರ್ ಆಗಿ ನಮೂದಾಗಿದೆ. ಹೀಗಾಗಿ ಸರ್ಕಾರಕ್ಕೆ ಭೂಮಿ ಕೊಟ್ಟ ರೈತರಿಗೆ ಪರಿಹಾರ ದೊರಕುತ್ತಿಲ್ಲ. ಯಾವುದೇ ರೀತಿಯ ಸಾಲ-ಸೌಲಭ್ಯಗಳು ಸಿಗುತ್ತಿಲ್ಲ. ಜಮೀನು ಮಾರಾಟ ಮಾಡುವುದಂತೂ ದೂರದ ಮಾತು.
ವಿಜಯಪುರದಲ್ಲಿ..
ಸುಮಾರು 12 ಸಾವಿರ ಎಕರೆ ಭೂಮಿಯನ್ನು ವಕ್ಫ್ ತನ್ನದು ಎಂದು ಆಕ್ರಮಿಸಿಕೊಳ್ಳುತ್ತಿದೆ ಎನ್ನುವುದು ರೈತರು ಹಾಗೂ ಬಿಜೆಪಿಯವರ ಆರೋಪ. ಇಲ್ಲ.. ಇಲ್ಲ.. ಹೊನವಾಡ ಗ್ರಾಮದಲ್ಲಿರೋ 10 ಎಕರೆಯಷ್ಟೇ ವಕ್ಫ್ ಮಂಡಳಿಗೆ ಸೇರಿದೆ. ಬಿಜೆಪಿಯವರು ಸುಳ್ಳು ಹೇಳ್ತಿದ್ದಾರೆ ಅಂತಿದ್ದಾರೆ ಸಚಿವ ಎಂಬಿ ಪಾಟೀಲ್, ಕೃಷ್ಣ ಭೈರೇಗೌಡ ಮತ್ತು ಜಮೀರ್ ಅಹ್ಮದ್.
ಪ್ರಶ್ನೆ ಏನು..? ಪರಿಹಾರ ಏನು..?
ರಾಜ್ಯ ಸರ್ಕಾರದ ಪ್ರಕಾರ ಇದು 1974ರಲ್ಲಿ ಗೆಜಟ್ ಆಗಿರುವ ಪ್ರಕಾರ ವಕ್ಫ್ ಮಂಡಳಿಗೆ ಸೇರಿರುವ ಭೂಮಿ. ವಕ್ಫ್ ಕಾನೂನು ಪ್ರಕಾರ ವಕ್ಫ್ ಆಸ್ತಿ ಎಂದು ಘೋಷಿಸಿಕೊಂಡ ಒಂದು ವರ್ಷದ ಒಳಗೆ ಕಾನೂನು ಪ್ರಕಾರ ಪ್ರಶ್ನೆ ಮಾಡಬಹುದು. ಆದರೆ ಈಗ ಅದು ಸಾಧ್ಯ ಇಲ್ಲ. ಆದರೆ ವಕ್ಫ್ ಮಂಡಳಿಗೆ ಭೂಮಿ ಕೊಟ್ಟವರು ಯಾರು? ಈ ಬಗ್ಗೆ ವಕ್ಫ್ ಮಂಡಳಿಯಲ್ಲಿ ದಾಖಲೆ ಇವೆಯೇ.. ಎಂಬ ಬಗ್ಗೆ ವಕ್ಫ್ ಮಂಡಳಿ ಉತ್ತರ ಕೊಡುತ್ತಿಲ್ಲ. ವಕ್ಫ್ ಕೂಡಾ ಕಾನೂನು ಪ್ರಕಾರ ದಾಖಲೆ ಕೊಟ್ಟರೆ, ಆಗ ನಿಜವಾದ ಸಮಸ್ಯೆ ಯಾವುದು ಎಂದು ಅರ್ಥವಾಗುತ್ತದೆ. ಕೇವಲ ಹೇಳಿಕೆಗಳಿಂದ ಪ್ರಯೋಜನ ಇಲ್ಲ. ನೋಟಿಸ್ ಪಡೆದ ರೈತರಿಗೆ ಮಾಧ್ಯಮಗಳಲ್ಲಿ ಕೊಡುವ ಹೇಳಿಕೆಗಳು ನೆಮ್ಮದಿ ಕೊಡುವುದಿಲ್ಲ. ಏಕೆಂದರೆ ಅವರಿಗೆ ಜಮೀನು ತನ್ನದು ಎನ್ನುವುದಕ್ಕೆ ಅವಕಾಶವೇ ಇಲ್ಲದಂತಾಗಿದೆ.



